CONNECT WITH US  

ಭಾರತಕ್ಕಿದೆ ಮಾಲ್ಡೀವ್ಸ್‌ ಸವಾಲು

ಹಿಂದೂ ಮಹಾಸಾಗರದ ವ್ಯಾಪ್ತಿಯಲ್ಲಿರುವ ಪುಟ್ಟ ದೇಶ ಮಾಲ್ಡೀವ್ಸ್‌. ಸೋಮವಾರ ಎರಡು ಪ್ರಮುಖ ಬೆಳವಣಿಗೆಗಳು ನಡೆದಿವೆ. ಹಾಲಿ ಅಧ್ಯಕ್ಷ ಅಬ್ದುಲ್ಲ ಯಮೀನ್‌ 15 ದಿನಗಳ ಕಾಲ ತುರ್ತು ಪರಿಸ್ಥಿತಿ ಹೇರಿಕೆ ಮಾಡಿದ್ದರೆ, ತಡರಾತ್ರಿ ನಡೆದ ಬೆಳವಣಿಗೆಯಲ್ಲಿ ಮಾಜಿ ಅಧ್ಯಕ್ಷ ಅಬ್ದುಲ್‌ ಗಯೂಮ್‌ರನ್ನು ಬಂಧಿಸಲಾಗಿದೆ. ಹಾಗಿದ್ದರೆ ಭಾರತದ ಪ್ರಮುಖ ನೆರೆಯ ರಾಷ್ಟ್ರದಲ್ಲಿ ನಡೆಯುತ್ತಿ ರುವ ಬೆಳವಣಿಗೆ ಬಗ್ಗೆ ಪಕ್ಷಿ ನೋಟ ಇಲ್ಲಿದೆ.

ಸದ್ಯದ ಬೆಳವಣಿಗೆ ಏನು?
* ಫೆ.1ರಂದು ಅಲ್ಲಿನ ಸುಪ್ರೀಂಕೋರ್ಟಲ್ಲಿ ನಡೆದಿದ್ದ ವಿಚಾರಣೆಯಲ್ಲಿ ಮಾಜಿ ಅಧ್ಯಕ್ಷ ಮೊಹಮ್ಮದ್‌ ನಶೀದ್‌ ವಿರುದ್ಧ 2012ರಲ್ಲಿ  ದಾಖಲಾಗಿದ್ದ ಕೇಸುಗಳು ಅಸಾಂವಿಧಾನಿಕ ಎಂದು ಹೇಳಿ ತೀರ್ಪು ನೀಡಿತ್ತು. ಸದ್ಯ ಅವರು ಸ್ವಯಂ ಪ್ರೇರಿತ ಗಡಿಪಾರು ಮೂಲಕ ಶ್ರೀಲಂಕಾದಲ್ಲಿದ್ದಾರೆ.

*  ಬಂಧನದಲ್ಲಿರುವ ಪ್ರತಿಪಕ್ಷ ನಾಯಕರನ್ನು ಬಿಡುಗಡೆ ಮಾಡಬೇಕು, ಅಧ್ಯಕ್ಷ ಅಬ್ದುಲ್ಲ ಯಮೀನ್‌ರ ಪಕ್ಷದ ವಿಪ್‌ ಉಲ್ಲಂ ಸಿದ್ದಕ್ಕಾಗಿ ವಜಾಗೊಂಡ 12 ಮಂದಿ ನಾಯಕರನ್ನು ಮತ್ತೆ ಸಂಸತ್‌ಗೆ ಮರು ನೇಮಕ ಮಾಡಿಕೊಳ್ಳಬೇಕು ಎಂದು ಆದೇಶಿಸಿತ್ತು.
* ಅದನ್ನು ಹಾಲಿ ಸರ್ಕಾರ ಒಪ್ಪಿಕೊಳ್ಳದೆ ಫೆ.3ರಂದು ಸಂಸತ್‌ ಅನ್ನು ಅಮಾನತಿನಲ್ಲಿ ಇರಿಸಲು ತೀರ್ಮಾನಿಸಿತ್ತು. ಜತೆಗೆ ಅಟಾರ್ನಿ ಜನರಲ್‌ ಹಾಲಿ ಅಧ್ಯಕ್ಷ ಅಬ್ದುಲ್ಲ ಯಮೀನ್‌ರನ್ನು ವಾಗ್ಧಂಡನೆಗೆ ಗುರಿಪಡಿಸುವ ಮತ್ತು ಕಾನೂನಿನ ಅನ್ವಯ ಕೈಗೊಳ್ಳುವ ಕ್ರಮ ಅಸಾಂವಿಧಾನಿಕ ಎಂದು ಎಚ್ಚರಿಸಿದ್ದರು. 

ಸರ್ಕಾರಕ್ಕೇನು ತೊಂದರೆ?
* ಮಾಜಿ ಅಧ್ಯಕ್ಷ ಮೊಹಮ್ಮದ್‌ ನಶೀದ್‌ ವಿರುದ್ಧ ದೇಶದ್ರೋಹ, ಭಯೋತ್ಪಾದನೆ, ಭ್ರಷ್ಟಾಚಾರದ ಮೊಕದ್ದಮೆಗಳನ್ನು ಹೂಡಲಾಗಿದೆ. ಈ ಪ್ರಕರಣಗಳೇ ರಾಜಕೀಯ ಪ್ರೇರಿತವೆಂದು ಸುಪ್ರೀಂಕೋರ್ಟ್‌ ಆದೇಶ
* ಆದೇಶದ ಪ್ರಕಾರ ಪ್ರತಿಪಕ್ಷಗಳ ಸದಸ್ಯರನ್ನು ಮತ್ತೆ ನೇಮಕ ಮಾಡಿಕೊಂಡರೆ ಹಾಲಿ ಅಧ್ಯಕ್ಷರ ಆಡಳಿತಾರೂಡ ಪ್ರೊಗ್ರೇಸಿವ್‌ ಪಾರ್ಟಿ ಆಫ್ ಮಾಲ್ಡೀವ್ಸ್‌ ಅಲ್ಪಮತಕ್ಕೆ ಇಳಿಯುತ್ತದೆ. ಪ್ರತಿಕ್ಷಗಳಿಗೆ ಬಹುಮತ ಬಂದು, ಸ್ಪೀಕರ್‌ರನ್ನು ಪದಚ್ಯುತಗೊಳಿಸಿ ಸರ್ಕಾರದ ವಿರುದ್ಧ ಅವಿಶ್ವಾಸಮತ ಗೊತ್ತುವಳಿ ಅಂಗೀಕರಿಸಲು ಸಾಧ್ಯವಾಗುತ್ತದೆ.

ಈ ಬೆಳವಣಿಗೆಗೆ ಕಾರಣರು ಯಾರು?
*  2008ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಮೊಹಮ್ಮದ್‌ ನಶೀದ್‌ ಜಯಗಳಿಸಿದ್ದರು. 2012ರಲ್ಲಿ ಆ ದೇಶದ ಪ್ರಮುಖ ಮತ್ತು ಹಿರಿಯ ನ್ಯಾಯಮೂರ್ತಿ ಅಬ್ದುಲ್ಲಾ ಮೊಹಮ್ಮದರನ್ನು ಭ್ರಷ್ಟಾಚಾರದ ಆರೋಪಗಳ
ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು.
*  2013ರಲ್ಲಿ ನಡೆದಿದ್ದ ಚುನಾಣೆಯಲ್ಲಿ ನಶೀದ್‌ ಹಾಲಿ ಅಧ್ಯಕ್ಷರ ಎದುರು ಸೋತರು. ಹಿರಿಯ ನ್ಯಾಯಮೂರ್ತಿ ಬಂಧನಕ್ಕೆ ಸಂಬಂಧಿಸಿದಂತೆ ನಶೀದ್‌ ವಿಚಾರಣೆ ನಡೆದು 13 ವರ್ಷ ಜೈಲು ಶಿಕ್ಷೆ ಘೋಷಣೆಯಾಯಿತು.
* ಈ ವರ್ಷದ ಅಕ್ಟೋಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಅಬ್ದುಲ್ಲ ಯಮೀನ್‌ರನ್ನು ಎದುರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಬ್ರಿಟನ್‌ನ ಲಿವರ್‌ಪೂಲ್‌
ವಿವಿಯಲ್ಲಿ ಅಧ್ಯಯನ ನಡೆಸಿರುವ ನಶೀದ್‌ಗೆ ಬ್ರಿಟನ್‌ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಉತ್ತಮ ಬೆಂಬಲವಿದೆ.
* ಯಮೀನ್‌ ಅವಧಿಯಲ್ಲಿ ಮಾಲ್ಡೀವ್ಸ್‌ನಲ್ಲಿ ಉಂಟಾಗಿರುವ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಖ್ಯಾತ ವಕೀಲ ಅಮಲ್‌ ಕ್ಲೂನಿ ಮೂಲಕ ಮಾಹಿತಿ ಪಡೆದು ಹೋರಾಟ ನಡೆಸುತ್ತಿದ್ದಾರೆ.

ಸರ್ಕಾರದ ಕ್ರಮಗಳೇನು?
*  ಫೆ.5ರಂದು ಮಾಜಿ ಅಧ್ಯಕ್ಷ ಅಬ್ದುಲ್‌ ಗಯೂಮ್‌ ಜತೆಗೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮತ್ತು ಮತ್ತೂಬ್ಬ ನ್ಯಾಯಮೂರ್ತಿಗಳ ಬಂಧನ.
* ಸುಪ್ರೀಕೋರ್ಟ್‌ ಆದೇಶವನ್ನು ಪಾಲಿಸುವುದಾಗಿ ಹೇಳಿದ ಇಬ್ಬರು ಹಿರಿಯ ಪೊಲೀಸ್‌ ಅಧಿಕಾರಿಗಳ ವಜಾ
* ಫೆ.4ರಂದು ನ್ಯಾಯಾಂಗ ವಿಚಾರಣಾ ವಿಭಾಗದ ಮುಖ್ಯಸ್ಥ ಹಸನ್‌ ಸಯೀದ್‌ ನಿವಾಸಕ್ಕೆ ದಾಳಿ ನಡೆಸಲಾಗಿತ್ತು. ಸುಪ್ರೀಂಕೋರ್ಟ್‌ ಅದನ್ನು ಕಾನೂನು ಬಾಹಿರ ಎಂದು ಸಾರಿತು

ಭಾರತಕ್ಕೆ ಯಾಕೆ ಸವಾಲು?
*  ಸಾರ್ಕ್‌ ಸದಸ್ಯ ರಾಷ್ಟ್ರವಾಗಿರುವ ಮಾಲ್ಡೀವ್ಸ್‌ ಲಕ್ಷದ್ವೀಪದಿಂದ ಕೇವಲ 700 ಕಿಮೀ ದೂರದಲ್ಲಿದೆ ಮತ್ತು ಮುಖ್ಯ ಭೂಪ್ರದೇಶದಿಂದ 1,200 ಕಿಮೀ ದೂರದಲ್ಲಿದೆ. ಅಲ್ಲಿಯ ಸರ್ಕಾರಿ ವ್ಯವಸ್ಥೆ ದುರ್ಬಲವಾದರೆ ಧಾರ್ಮಿಕ ಮೂಲಭೂತವಾದ, ಪೈರಸಿ, ಕಳ್ಳಸಾಗಣೆ ಮತ್ತು ಡ್ರಗ್ಸ್‌ ಮಾಫಿಯಾ ಸೇರಿದಂತೆ ಹಲವು ರೀತಿಯ ಭದ್ರತಾ ಕಳವಳಕ್ಕೆ ಕಾರಣವಾಗುತ್ತದೆ. 1965ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ಸ್ವತಂತ್ರ ದೇಶವಾದರೂ ಅಲ್ಲಿ ರಾಜಕೀಯ ಅಸ್ಥಿರತೆ ಕಾಡುತ್ತಿದೆ. 2009ರಲ್ಲಿ ಮೊದಲ ಬಾರಿಗೆ ಸ್ವತಂತ್ರವಾಗಿ ಬಹುಪಕ್ಷಗಳು ಸ್ಪರ್ಧಿಸಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು.
*  ಹಿಂದೂ ಮಹಾಸಾಗರ ಪ್ರದೇಶವಾಗಿರುವುದರಿಂದ ಮತ್ತೂಂದು ಸವಾಲು. ಸುಮಾರು 40 ಸಣ್ಣ - ದೊಡ್ಡ ರಾಷ್ಟ್ರಗಳಿವೆ. ಆಸ್ಟ್ರೇಲಿಯಾ, ಆಗ್ನೇಯ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಶೇ.97ರಷ್ಟು ಭಾರತದ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಈ ಪ್ರದೇಶದ ಸಮುದ್ರ ವ್ಯಾಪ್ತಿ ಅತ್ಯಂತ ಸುರಕ್ಷಿತ ಎಂಬ ಹೆಗ್ಗಳಿಕೆ ಇದೆ.
*ಚೀನಾ ಪ್ರಭಾವ ಮತ್ತೂಂದು ಸವಾಲು. 2011ರಲ್ಲಿ ದ್ವೀಪ ರಾಷ್ಟ್ರದಲ್ಲಿ ಅದು ತನ್ನ ರಾಯಭಾರಿ ಕಚೇರಿಯನ್ನು ತೆರೆದಿದೆ. ಇಷ್ಟು ಮಾತ್ರವಲ್ಲದೆ ಎರಡೂ ರಾಷ್ಟ್ರಗಳು ಡಿ.7ರಂದು ಮುಕ್ತ ವ್ಯಾಪಾರ ವಹಿವಾಟಿಗೆ ಸಹಿ ಹಾಕಿವೆ. ಇದರಿಂದಾಗಿ ಶೇ.95ರಷ್ಟು ಸರಕುಗಳು ಸೊನ್ನೆ ತೆರಿಗೆಯಲ್ಲಿ ಮಾರಾಟವಾಗಲಿವೆ. ಚೀನಾದ "ಒನ್‌ ಬ್ರಿಕ್‌; ಒನ್‌ ರೋಡ್‌' ಭಾಗವಾಗಿರುವ "ಸಿಲ್ಕ್ ರೂಟ್‌'ನ ಭಾಗವೂ ಆಗಿದೆ. ಈ ದೇಶಕ್ಕೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಇದುವರೆಗೆ ಭೇಟಿ ನೀಡಿಲ್ಲ. 2017ರ ಆಗಸ್ಟ್‌ನಲ್ಲಿ ಮಾಲೆಯಲ್ಲಿ ಚೀನಾದ ಹಡಗುಗಳ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು.

ಉಗ್ರರ ಲಿಂಕ್‌ ಉಂಟಾ?
*ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್‌-ಎ-ತೊಯ್ಬಾ ತನ್ನ ಸಹ ಉಗ್ರ ಸಂಘಟನೆ ಇದರಾ ಖೀದ್ಮತ್‌-ಇ-ಖಾಕ್‌ ದಕ್ಷಿಣ ಮಾಲ್ಡೀವ್ಸ್‌ನಲ್ಲಿ ನೆಲೆಯೂರಿಸಿದೆ. 2004ರಲ್ಲಿ ಸಂಭವಿಸಿದ ಸುನಾಮಿಗೆ ಪರಿಹಾರ ನೀಡುವ ನೆಪದಲ್ಲಿ ಅದು ಅಲ್ಲಿ ಕಾರ್ಯಚಟುವಟಿಕೆ ಆರಂಭಿಸಿತ್ತು.
*ಮಾಜಿ ಅಧ್ಯಕ್ಷ ಹಿಂದೊಮ್ಮೆ ಹೇಳಿದ್ದ ಪ್ರಕಾರ 200ಕ್ಕೂ ಹೆಚ್ಚು ಮಂದಿ ಮಾಲ್ಡೀವ್ಸ್‌ ಪ್ರಜೆಗಳು ಸಿರಿಯಾಕ್ಕೆ ಮತ್ತು ಇರಾಕ್‌ಗೆ ತೆರಳಿ ಉಗ್ರ ಸಂಘಟನೆ ಐಸಿಸ್‌ ಪರವಾಗಿ ಹೋರಾಟ ನಡೆಸಿದ್ದರು.

ಮಾಲ್ಡೀವ್ಸ್‌-ಭಾರತ
22,000 ಅಲ್ಲಿರುವ ಭಾರತೀಯರು

25%ಕ್ಕೂ ಅಧಿಕ ಮಂದಿ ಭಾರತೀಯ ಅಧ್ಯಾಪಕರು

400ಕ್ಕೂಅಧಿಕ ವೈದ್ಯರ ಪೈಕಿ 125ಕ್ಕೂ ಹೆಚ್ಚು ಮಂದಿ ಭಾರತೀಯರು

1,200 ಕಿ.ಮೀ. ಭಾರತದ ಮುಖ್ಯ ಭೂಪ್ರದೇಶ
ದಿಂದ ಮಾಲ್ಡೀವ್ಸ್‌ಗೆ ಇರುವ ದೂರ

700ಕಿ.ಮೀ ಲಕ್ಷದ್ವೀಪದಿಂದ ದೂರ.

*ಸದಾಶಿವ ಕೆ.

Trending videos

Back to Top