CONNECT WITH US  

ಕೈಯಲ್ಲಿದ್ದದ್ದು ಕೇವಲ 12 ರೂ. ಆದ್ರೆ ಈಕೆಯ ಸಾಧನೆಗೊಂದು ಸಲಾಂ...

ಸಾಧಿಸುವ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಈ ಮಹಿಳೆಯೇ ಸಾಕ್ಷಿ..ಹೌದು ವಿಶ್ವ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಇಂತಹ ಸಾಧಕಿಯರ ಬಗ್ಗೆ ಹೇಳಲೇಬೇಕು..ಇವರು ಇತರರಿಗೂ ಮಾದರಿ. ಪುಣೆಯ ಪರ್ಭಾನಿ ಜಿಲ್ಲೆಯ ಯುವತಿ ತನ್ನ 18ನೇ ವಯಸ್ಸಿನಲ್ಲಿಯೇ ಮನೆ ತೊರೆಯಲು ನಿರ್ಧರಿಸಿದ್ದಳು. ಆಗ ಆಕೆಯ ಕೈಯಲ್ಲಿದ್ದದ್ದು ಬರೇ 12 ರೂಪಾಯಿ ಮಾತ್ರ, ಆದರೆ ಯುವತಿಯ ಕಣ್ಣುಗಳಲ್ಲಿ ಬೆಟ್ಟದಷ್ಟು ಆಸೆ ಮತ್ತು ಸಾಧಿಸುತ್ತೇನೆ ಎಂಬ ಛಲ ಅಗಾಧವಾಗಿತ್ತು. ಈ ಸಾಧಕಿಯ ಹೆಸರು ಶೀಲಾ ದಾವ್ರೆ..

ಶೀಲಾ ದಾವ್ರೆ ಭಾರತದ ಮೊತ್ತ ಮೊದಲ ಆಟೋ ರಿಕ್ಷಾ ಚಾಲಕಿ. 1988ರ ಹೊತ್ತಿಗೆ ಖಾಕಿ ಬಟ್ಟೆ ತೊಟ್ಟು ಪುರುಷರಿಗೆ ಸೆಡ್ಡು ಹೊಡೆದು ರಿಕ್ಷಾ ಓಡಿಸಲು ಶುರು ಮಾಡಿದ್ದರು. ಮನೆ ಕೆಲಸ ಮಾಡಿಕೊಂಡೊ, ಗೃಹಿಣಿಯಾಗಿಯೋ ಇರಬೇಕಾಗಿದ್ದ ಯುವತಿಯೊಬ್ಬಳು ಆಟೋ ರಿಕ್ಷಾ ಓಡಿಸುವ ಧೈರ್ಯ ತೋರಿದ್ದು ಸಾಮಾನ್ಯ ವಿಚಾರವಲ್ಲ. ಯಾಕೆಂದರೆ 1980ರ ದಶಕದಲ್ಲಿ ಡ್ರೈವಿಂಗ್ ಮಹಿಳೆಯರ ಉದ್ಯೋಗವಾಗಿರಲಿಲ್ಲವಾಗಿತ್ತು!

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ತನ್ನ ಕನಸು ನನಸಾಗುತ್ತಾ ಎಂಬ ಅಳುಕು ಇದ್ದರೂ ಕೂಡಾ ಹಠ ಬಿಡದೆ ಶೀಲಾ ದಾವ್ರೆ ಆಟೋ ರಿಕ್ಷಾ ಚಾಲಕಿಯಾಗಿ ಸೇವೆ ಸಲ್ಲಿಸಲು ಆರಂಭಿಸಿದ್ದರು. ಅಷ್ಟೇ ಅಲ್ಲ ಲಿಮ್ಕಾ ಬುಕ್ ಆಫ್ ನಲ್ಲಿ ವಿಶ್ವ ದಾಖಲೆಯಾಗಿ ಸೇರ್ಪಡೆಗೊಂಡಿರುವ ಹೆಗ್ಗಳಿಕೆ ಅವರದ್ದು.

ತಾನು ಚಾಲಕಿಯಾಗಬೇಕೆಂಬ ಕನಸನ್ನು ನನಸು ಮಾಡಿಕೊಳ್ಳಲು ಶೀಲಾ ಕೆಲಕಾಲ ಮದುವೆಯನ್ನೂ ನಿರಾಕರಿಸಿದ್ದರು. ಆರಂಭದಲ್ಲಿ ತಂದೆ,ತಾಯಿಯೂ ಮಗಳ ಆಸೆಗೆ ಆಕ್ಷೇಪ ವ್ಯಕ್ತಪಡಿಸಿದ್ದರಂತೆ. ಆದರೆ ಈಗ ನಾನು ಯಾರು ಎಂಬುದು ಅವರಿಗೆ ಗೊತ್ತಾಗಿದೆ. ನನ್ನ ಹಾಗೂ ನನ್ನ ಉದ್ಯೋಗವನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಖುಷಿಯಿಂದಲೇ ಹೇಳಿಕೊಂಡಿದ್ದಾರೆ.

ಶೀಲಾ ಸಾಕಷ್ಟು ನೋವು, ಒತ್ತಡಗಳನ್ನು ಅನುಭವಿಸಿದ್ದರು. ಒಂದು ಬಾರಿ ಟ್ರಾಫಿಕ್ ಕಾನ್ಸ್ ಟೇಬಲ್ ಒಬ್ಬರ ಜತೆ ವಾಗ್ವಾದ ನಡೆದಾಗ ಆತ ಆಕೆ ಮೇಲೆ ಹಲ್ಲೆ ನಡೆಸಿದ್ದ. ಆಕೆಯೂ ಸಿಟ್ಟಿಗೆದ್ದು ಕಾನ್ಸ್ ಟೇಬಲ್ ಗೂ ಹೊಡೆದಿದ್ದರು. ಬಳಿಕ ತನ್ನ ಮೇಲೆ ನಡೆದ ಹಲ್ಲೆ ಬಗ್ಗೆ ಆಟೋ ರಿಕ್ಷಾ ಯೂನಿಯನ್ ಜತೆ ಸೇರಿ ಪ್ರತಿಭಟನೆ ನಡೆಸಿದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.

ಸುಮಾರು 13 ವರ್ಷಗಳ ಕಾಲ ಆಟೋ ರಿಕ್ಷಾ, ಮೆಟಾಡೋರ್, ಶಾಲಾ ವಾಹನಗಳ ಚಾಲಕಿಯಾಗಿ ಕಾರ್ಯನಿರ್ವಹಿಸಿದ್ದರು. 1988ರಿಂದ 2001ರವರೆಗೆ ತದನಂತರ ಶೀಲಾ ಅನಾರೋಗ್ಯದ ಕಾರಣದಿಂದ ಚಾಲಕಿ ವೃತ್ತಿಗೆ ತಿಲಾಂಜಲಿ ಇಟ್ಟಿದ್ದರು.

ಇಷ್ಟಾದರೂ ಶೀಲಾ ದಾವ್ರೆ ತನ್ನ ಪತಿ ಶಿರಿಷ್ ಕಾಂಬ್ಳೆ ಜತೆಗೂಡಿ ಸ್ವಂತ ಟ್ರಾವೆಲ್ ಕಂಪನಿಯೊಂದನ್ನು ಆರಂಭಿಸಿದ್ದರು. ಶೀಲಾ, ಶಿರಿಷ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪತ್ನಿಯ ಎಲ್ಲಾ ಕೆಲಸಗಳಿಗೂ ಒತ್ತಾಸೆಯಾಗಿರುವ ಪತಿ ಕಾಂಬ್ಳೆ, ಮಹಿಳೆಯರ ಬಗ್ಗೆ ಪುರುಷರಿಗಿರುವ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವ ನಿಟ್ಟಿನಲ್ಲಿ ಜನರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

Back to Top