CONNECT WITH US  

30 ವರ್ಷದಲ್ಲಿ 1 ಲಕ್ಷ ಶೇರು ಹೂಡಿಕೆ 53 ಪಟ್ಟು ಬೆಳೆಯುತ್ತೆ ಗೊತ್ತಾ?

ಹಣ ಹೂಡುವ ಆಕರ್ಷಕ ಮತ್ತು ಅತ್ಯಧಿಕ ಇಳುವರಿ ನೀಡುವ ಮಾಧ್ಯಮವಾಗಿ ಈಕ್ವಿಟಿ ಶೇರುಗಳು ಅಗ್ರ ಸ್ಥಾನದಲ್ಲಿರುವುದನ್ನು ಹಲವರಿಗೆ ಅಚ್ಚರಿಯಾಗುವುದು ಸಹಜ. ಏಕೆಂದರೆ ಶೇರು ಹೂಡಿಕೆ ಎನ್ನುವುದು ಸಟ್ಟಾ ವ್ಯವಹಾರ ಎಂಬ ತಪ್ಪು ಅಭಿಪ್ರಾಯ ಹಲವರಲ್ಲಿದೆ. ಶೇರುಗಳಲ್ಲಿ ಹೂಡುವ ಹಣ ಕನ್ನಡಿಯೊಳಗಿನ ಗಂಟು ಎಂದು ಭಾವಿಸುವವರೂ ಅಧಿಕ. ಶೇರು ಎಂದರೆ ಬೆಂಕಿಯೊಡನೆ ಆಟ ಎಂದು ಭಾವಿಸುವವರೂ ಹಲವರು. ಶೇರಿಗೆ ಹಾಕಿದ ಹಣ ಮತ್ತೆ ನಮ್ಮ ಕೈವಶವಾಗುವುದಿಲ್ಲ ಎಂದು ತಿಳಿದಿರುವವರೇ ಹೆಚ್ಚು.

ಈ ಬಗೆಯ ಅಭಿಪ್ರಾಯಗಳೆಲ್ಲವೂ ಮೇಲ್ನೋಟದ್ದು. ಶೇರುಗಳಿರುವುದು ಆಡುವುದಕ್ಕಲ್ಲ; ಹೂಡಿಕೆ ಮಾಡಲು ಎಂಬುದನ್ನು ತಿಳಿದವರಿಗೆ ಶೇರು ಹೂಡಿಕೆಯಿಂದ ಅತ್ಯಧಿಕ ಲಾಭವಿದೆ ಎಂದು ಅನುಭವದಿಂದ ತಿಳಿದಿರುತ್ತದೆ. ಶೇರು ಹೂಡಿಕೆಯಿಂದ ನಿಜಕ್ಕೂ ಲಾಭ ಮಾಡಬೇಕೆಂದರೆ ಅದರಲ್ಲಿ ಹೂಡಿಕೆ ಮಾಡುವವರಿಗೆ ಅಪರಿಮಿತ ಸಹನೆ, ತಾಳ್ಮೆ ಇರುವುದು ಅಗತ್ಯ. 

ಶೇರು ಮಾರುಕಟ್ಟೆಯಲ್ಲಿ ಗೂಳಿ ಪ್ರತಾಪ ಇರುತ್ತದೆ; ಕರಡಿ ಪ್ರತಾಪವೂ ಇರುತ್ತದೆ. ಆದುದರಿಂದ ಹೂಡಿಕೆದಾರರು ಕೆಲವು ಸಂದರ್ಭಗಳಲ್ಲಿ ಗೂಳಿಗಳಾಗಬೇಕಾಗುತ್ತದೆ; ಕೆಲವು ಸಂದರ್ಭಗಳಲ್ಲಿ ಕರಡಿಗಳಾಗಬೇಕಾಗುತ್ತದೆ. ಇವೆರಡೂ ಆಗದವರು ಶೇರುಗಳಲ್ಲಿ ಹಣ ಕಳೆದುಕೊಳ್ಳುತ್ತಾರೆ.

ಇದನ್ನೇ ಇಂಗ್ಲಿಷಿನಲ್ಲಿ ಹೀಗೆ ಹೇಳುತ್ತಾರೆ: ಇನ್  ಶೇರ್ ಮಾರ್ಕೆಟ್ ಬುಲ್ಸ್ ಮೇಕ್ ಮನಿ, ಬೇರ್ ಆಲ್ಸೊà ಮೇಕ್ ಮನಿ; ಬಟ್ ಪಿಗ್ಸ್ ಲೂಸ್ ಮನಿ ! ಒಟ್ಟಿನಲ್ಲಿ ಶೇರು ಹೂಡಿಕೆದಾರರಾಗ ಬಯಸುವವರು ನಿಧಾನವೇ ಪ್ರಧಾನ ಎಂಬ ನೆಲೆಯಲ್ಲಿ ಯಾವುದೇ ಆತುರ, ಆತಂಕಗಳಿಗೆ ಗುರಿಯಾಗದೆ ಸಮಾಧಾನದಿಂದ ವರ್ತಿಸುವುದು ಬಹಳ ಮುಖ್ಯ ಎನ್ನದೇ ವಿಧಿಯಿಲ್ಲ.

ಶೇರುಗಳಲ್ಲಿ ಹಣ ಹೂಡಿ ಕಳೆದುಕೊಳ್ಳುವುದಕ್ಕಿಂತ ಬ್ಯಾಂಕುಗಳ ನಿರಖು ಠೇವಣಿಗಳಲ್ಲೇ (FD) ಹಣ ಇಡುವುದು ಅನುಕೂಲಕರ, ಭದ್ರ ಎಂಬ ಅಭಿಪ್ರಾಯ ಹಲವರಲ್ಲಿ ಇರುವುದು ಸಹಜವೇ.ಆದರೆ ಮಾರುಕಟ್ಟೆ ವಿಶ್ಲೇಷಕರು ಜನಸಾಮಾನ್ಯರ ಈ ನಂಬಿಕೆಯನ್ನು ಅಂಕಿ ಅಂಶಗಳೊಂದಿಗೆ ಬುಡಮೇಲು ಮಾಡುತ್ತಾರೆ. ಅವರು ಕೊಡುವ ಸಣ್ಣದೊಂದು ಉದಾಹರಣೆ ಹೀಗಿದೆ :

30 ವರ್ಷಗಳ ಹಿಂದೆ ನೀವು ಒಂದು ಲಕ್ಷ ರೂಪಾಯಿಯನ್ನು ಬ್ಯಾಂಕ್ನಲ್ಲಿ  ಎಫ್ಡಿ ಇರಿಸಿದ್ದೀರಿ ಎಂದಿಟ್ಟುಕೊಳ್ಳಿ. ಈ ಅವಧಿಯಲ್ಲಿ ನೀವು ಅಸಲಿನೊಂದಿಗೆ ಬಡ್ಡಿಯನ್ನು ಸೇರಿಸಿ ನವೀಕರಿಸುತ್ತಾ ಬಂದಿರುವಿರಿ. ಹಾಗೆ ಮಾಡಿದ ಫಲವಾಗಿ ನಿಮ್ಮ ಒಂದು ಲಕ್ಷ ರೂ. ಠೇವಣಿ 30 ವರ್ಷಗಳ ಅವಧಿಯಲ್ಲಿ 13 ಪಟ್ಟು ಬೆಳೆದಿರುತ್ತದೆ. ಆದರೆ ಅದೇ ಒಂದು ಲಕ್ಷ ರೂಪಾಯಿಯನ್ನು ನೀವು 30 ವರ್ಷಗಳ ಹಿಂದೆ  ಮುಂಚೂಣಿ ಕಂಪೆನಿಯ ಶೇರಿನಲ್ಲಿ ತೊಡಗಿಸಿದ್ದೀರಿ ಎಂದಿಟ್ಟುಕೊಳ್ಳೋಣ. ವರ್ಷಂಪ್ರತಿ ಸಿಗುವ ಡಿವಿಡೆಂಡನ್ನು (ಲಾಭಾಂಶ) ಆನಂದಿಸುತ್ತಾ 30 ವರ್ಷಗಳ ಕಾಲ ನೀವು ಆ ಶೇರನ್ನು ಮಾರದೇ ನಿಮ್ಮಲ್ಲೇ ಉಳಿಸಿಕೊಂಡಿದ್ದ ಪಕ್ಷದಲ್ಲಿ ಆ ಒಂದು ಲಕ್ಷ ರೂ. ಹೂಡಿಕೆಯು 53 ಪಟ್ಟು ಬೆಳೆದಿರುತ್ತದೆ ! 

ಮೇಲಿನ ಉದಾಹರಣೆಯನ್ನು ಕೇಳುವಾಗ ಕಿವಿಗೆ ಬಹಳ ಇಂಪೆನಿಸುತ್ತದೆ. ಆದರೆ ಶೇರು ಹೂಡಿಕೆ ಅಷ್ಟು ಸುಲಭವಲ್ಲ. ಬ್ಯಾಂಕಿನಲ್ಲಿ ನಿಮಗೆ ಬೇಕೆಂದಾಗ ಹೋಗಿ ಠೇವಣಿ ಇಟ್ಟ ಹಾಗಲ್ಲ. ಶೇರುಗಳಲ್ಲಿ  ನಾವೇ ಖುದ್ದಾಗಿ ಹಣ ಹೂಡುವಾಗ ಅನೇಕ ವಿಷಯಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಯಾವ ಕಂಪೆನಿಯ ಶೇರನ್ನು ಖರೀದಿಸಬೇಕು? ಯಾವಾಗ ಖರೀದಿಸಬೇಕು ? ಎಷ್ಟು ಖರೀದಿಸಬೇಕು ? ಎಷ್ಟು ಕಾಲ ಅದನ್ನು ಇಟ್ಟು ಕೊಳ್ಳಬೇಕು ?

ಖರೀದಿ ಮಾಡಿದ ಕಂಪೆನಿಯ ಹಣಕಾಸು ವಹಿವಾಟು ನಿರಂತರ ಬೆಳವಣಿಗೆಯ ಪಥದಲ್ಲಿ ಇದೆಯಾ ? ಕಂಪೆನಿಗೆ ಉತ್ತಮ ಭವಿಷ್ಯ ಇದೆಯಾ ? ಕಂಪೆನಿಯ ಆಡಳಿತೆ ಸುಲಲಿತವಾಗಿ ಇದೆಯಾ ? ಡಿವಿಡೆಂಡ್, ಬೋನಸ್, ಹಕ್ಕಿನ, ಆದ್ಯತೆಯ ಶೇರುಗಳನ್ನು ಕೊಟ್ಟ ಕಂಪೆನಿಯ ಇತಿಹಾಸ ಚೆನ್ನಾಗಿದೆಯಾ ? ಹೀಗೆ ನಾವು ಶೇರು ಖರೀದಿಸುವ ಕಂಪೆನಿಯ ಜಾತಕವನ್ನು ನಾವು ಚೆನ್ನಾಗಿ ತಿಳಿದಿರುವುದು ಅಗತ್ಯವಾಗುತ್ತದೆ. 

ಪಿ. ಸತೀಶ್‌ ಮಲ್ಯ 

Back to Top