CONNECT WITH US  

ಸುದ್ದಿ ಕೋಶ: ಡಾಲರ್‌ ವಿರುದ್ಧ ಮತ್ತೆ ಕುಸಿದ ರುಪಾಯಿ

ಷೇರು ಮಾರುಕಟ್ಟೆಯ ರಣಾಂಗಣದಲ್ಲಿ, ಡಾಲರ್‌ ವಿರುದ್ಧ ರೂಪಾಯಿ ಮೌಲ್ಯ 67ರ ಗಡಿಯನ್ನು ಸಮೀಪಿಸುವಷ್ಟು ಕುಸಿತ ಕಂಡಿದೆ. ಸೋಮವಾರ ದಿನಾಂತ್ಯಕ್ಕೆ ಡಾಲರ್‌ ವಿರುದ್ಧದ ರೂಪಾಯಿ ಮೌಲ್ಯ 67.18 ಗಳಷ್ಟಿತ್ತು. ಇದು, ಕಳೆದೊಂದು ವರ್ಷದಿಂದೀಚೆಗೆ ಡಾಲರ್‌ ವಿರುದ್ಧ ರುಪಾಯಿಯದ್ದು ಅತಿ ಕನಿಷ್ಠ ಕುಸಿತ. 2017ರ ಫೆಬ್ರವರಿ 8ರಂದು ಇದರ ಮೌಲ್ಯ 67.13ಕ್ಕೆ ಇಳಿದಿತ್ತು. 

ಕರ್ನಾಟಕ ಚುನಾವಣೆ ಪರಿಣಾಮ ಬೀರುತ್ತಾ? 
ಇಡೀ ದೇಶದ ಗಮನ ಸೆಳೆದಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಫ‌ಲಿತಾಂಶ ಮೇ 15ರಂದು ಹೊರಬೀಳಲಿದೆ. ಇಲ್ಲಿ ಪ್ರಭಾವಿ ಪಕ್ಷಗಳು ಗಳಿಸುವ ಸ್ಥಾನಮಾನಗಳೂ ದೇಶೀಯ ಷೇರು ಮಾರುಕಟ್ಟೆಯ ಮೇಲೆ ಅಲ್ಪ ಪ್ರಮಾಣದ ಪರಿಣಾಮ ಬೀರಲಿದೆ ಎನ್ನುತ್ತಾರೆ ಕೆಲ ಷೇರು ತಜ್ಞರು. 

ಸುಧಾರಣೆ ಯಾವಾಗ? 
ಷೇರು ವಹಿವಾಟುಗಳಿಗೆ ಸಂಬಂಧಿಸಿದ "ಕೇರ್‌ ರೇಟಿಂಗ್‌' ಸಂಸ್ಥೆ ಪ್ರಕಾರ, ಸದ್ಯದ ಮಟ್ಟಿಗೆ ಡಾಲರ್‌ ವಿರುದ್ಧ ರೂಪಾಯಿಯ ಚೇತರಿಕೆ ಸಾಧ್ಯವಾಗದು. ಏಕೆಂದರೆ, ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರುವಿಕೆ ಬಿಸಿ ಕನಿಷ್ಠ ಇನ್ನೊಂದು ತಿಂಗಳಾದರೂ ಇರಲಿದೆ. ಅತ್ತ, ಅಮೆರಿಕದಲ್ಲಿ ಬ್ಯಾಂಕ್‌ ಬಡ್ಡಿ ದರದ ಪ್ರಮಾಣ ಸದ್ಯಕ್ಕಂತೂ ಇಳಿಕೆಯಾಗುವ ಲಕ್ಷಣಗಳಿಲ್ಲ. ಇತ್ತ, ದೇಶೀಯ ಮಟ್ಟದಲ್ಲಿ ರೂಪಾಯಿ ಮೌಲ್ಯ ವೃದ್ಧಿಗೆ ಆರ್‌ಬಿಐ ಏನಾದರೂ ಕ್ರಮ ಕೈಗೊಳ್ಳಬೇಕು. ಆದರೆ, ಇವ್ಯಾವೂ ಸದ್ಯಕ್ಕಂತೂ ಆಗುವ ಹಾಗಿಲ್ಲ. ಹಾಗಾಗಿ, ರೂಪಾಯಿ ಮೌಲ್ಯದ ಕುಸಿತ ಯಥಾಸ್ಥಿತಿಯಲ್ಲಿ ಕನಿಷ್ಠ ಇನ್ನೊಂದು ತಿಂಗಳಾದರೂ ಮುಂದುವರಿಯುತ್ತದೆ. 

ಆರ್‌ಬಿಐ ನಿರ್ಧಾರವೂ ಕಾರಣ?
ಕಳೆದ ವಾರವಷ್ಟೇ, ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿನ ಸುಮಾರು 10,000 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಓಪನ್‌ ಮಾರ್ಕೆಟ್‌ ಆಪರೇ ಷನ್‌ (ಓಎಂಓ) ಮೂಲಕ ಖರೀದಿಸು ವುದಾಗಿ ಪ್ರಕಟಿಸಿದೆ. ಇದು, ವಿದೇಶಿ ನೇರ ಹೂಡಿಕೆ ಮೇಲೆ ಪರಿಣಾಮ ಬೀರಿದ್ದು, ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎಂದು ವಿದೇಶಿ ಹೂಡಿಕೆ ಸಲಹಾ ಸಂಸ್ಥೆಯಾದ ಐಎಫ್ಎ ಗ್ಲೋಬಲ್‌ ತಿಳಿಸಿದೆ. 

ಕಾರಣಗಳು
ಜಾಗತಿಕ ಮಟ್ಟದಲ್ಲಿ ಡಾಲರ್‌ ಬಲಿಷ್ಠಗೊಂಡಿರುವುದು. 
ಯೂರೋ ಕೂಡಾ ಡಾಲರ್‌ ವಿರುದ್ಧ ಮುಗ್ಗರಿಸಿರುವುದು. 
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಾದ ಆರ್ಥಿಕ ಏರಿಳಿತ. 
ಕಚ್ಚಾ ತೈಲದ ಜಾಗತಿಕ ಬೆಲೆಗಳಲ್ಲಿ ಅಗಾಧ ಹೆಚ್ಚಳ. 

Trending videos

Back to Top