CONNECT WITH US  

ಸುದ್ದಿಕೋಶ: ವಿಮಾನಯಾನ ಇನ್ನು ಆಗಲಿದೆ ಪ್ರಯಾಣಿಕ ಸ್ನೇಹಿ

ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನಯಾನದ ನಿಯಮಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂಥ ಹೊಸ ನೀತಿಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ಕುರಿತ ಕರಡನ್ನು ನಾಗರಿಕ ವಿಮಾನಯಾನ ಸಹಾಯಕ ಸಚಿವ ಜಯಂತ್‌ ಸಿನ್ಹಾ ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಏನೇನಿದೆ ಎಂಬ ಮಾಹಿತಿ.

ವಿಮಾನ ತಡವಾದರೆ
ನಿಗದಿತ ಸಮಯಕ್ಕಿಂತ 3 ಗಂಟೆಗೂ ಮಿಗಿಲಾಗಿ ವಿಮಾನ ಪ್ರಯಾಣ ತಡವಾದರೆ ಪ್ರತಿ ಪ್ರಯಾಣಿಕನಿಗೆ 5,000 ರೂ. ಪರಿಹಾರ. 4-12 ಗಂಟೆ ತಡವಾ ದರೆ 10,000- 20,000 ರೂ.ವರೆಗೆ ಪರಿಹಾರ. 

ಸಂಪರ್ಕ ವಿಮಾನ ತಪ್ಪಿದರೆ
ಪ್ರಯಾಣ ವಿಳಂಬದಿಂದಾಗಿ, ಪ್ರಯಾಣಿಕ ತಲುಪುವ ನಗರದಿಂದ ಮತ್ತೂಂದು ನಗರಕ್ಕೆ ಹೊರಡಬೇಕಿದ್ದ ಸಂಪರ್ಕ ವಿಮಾನ ಪ್ರಯಾಣಿಕರ ಕೈತಪ್ಪಿದರೆ ಪರಿಹಾರ. ಸಂಪರ್ಕ ವಿಮಾನ ಹೊರಡುವ ಸಮಯಕ್ಕಿಂತ 3 ಗಂಟೆಗಳ ವಿಳಂಬಕ್ಕೆ 5,000 ರೂ., 4ರಿಂದ 12 ಗಂಟೆ ಹಾಗೂ 12 ಗಂಟೆಗಳಿಗೂ ಹೆಚ್ಚಿನ ವಿಳಂಬಕ್ಕೆ 10,000ರಿಂದ 20,000 ರೂ.ಗಳವರೆಗೆ ಪರಿಹಾರ. 

ಟಿಕೆಟ್‌ ರದ್ದು, ಹಣ ವಾಪಸ್‌
ಮುಂಗಡ ಟಿಕೆಟ್‌ ಕಾಯ್ದಿರಿಸಿದ 24 ಗಂಟೆ ನಂತರ, ವಿಮಾನ ಹೊರಡುವ 96 ಗಂಟೆ ಗೂ ಮೊದಲು ಪ್ರಯಾಣಿಕ ಟಿಕೆಟ್‌ ರದ್ದುಗೊಳಿಸಿದರೆ, ಅವರಿಗೆ ಟಿಕೆಟ್‌ನ ಹಣ ಸಂಪೂರ್ಣ ಮರುಪಾವತಿ. ಟಿಕೆಟ್‌ ಕ್ಯಾನ್ಸಲೇಷನ್‌ ದಂಡ ಪಾವತಿಸುವ ಹಾಗಿಲ್ಲ.

ರದ್ದತಿ ಶುಲ್ಕ ಮುದ್ರಣ
ಟಿಕೆಟ್‌ಗಳ ಮೇಲೆ ರದ್ದತಿ ದಂಡಗಳ ಮುದ್ರಣ ಕಡ್ಡಾಯ. ವಿಮಾನ ಸೇವಾ ಸಂಸ್ಥೆ ಹಾಗೂ ಟಿಕೆಟ್‌ ಏಜೆಂಟರು ಜಂಟಿಯಾಗಿ ಹಾಕುವ ಈ ದಂಡವು ಪ್ರಯಾಣದ ಮೂಲ ಬೆಲೆ ಮತ್ತು ಇಂಧನ ಸರ್‌ ಚಾರ್ಜ್‌ಗಳ ಒಟ್ಟು ಮೊತ್ತವನ್ನು ದಾಟುವಂತಿಲ್ಲ. 

ವೈಫೈ ಅನುಕೂಲ
ವಿಮಾನ ಪ್ರಯಾಣ ಆರಂಭಿಸಿದ ಮರು ಕ್ಷಣವೇ ವಿಮಾನದಲ್ಲಿ ವೈಫೈ ಸೌಲಭ್ಯ. ವಿಮಾನ 3,000 ಮೀಟರ್‌ (9842 ಅಡಿ) ಎತ್ತರ ತಲುಪಿದಾಗ ಮೊಬೈಲ್‌ ಬಳಸಲು ಪ್ರಯಾಣಿಕರಿಗೆ ಅನುಮತಿ. 

ವಿಮಾನ ರದ್ದಾದಲ್ಲಿ ಹಣ ಮರುಪಾವತಿ
ನಿಗದಿತ ವಿಮಾನ ರದ್ದಾಗಿರುವ ಬಗ್ಗೆ 2 ವಾರ ಮೊದಲೇ ಅಥವಾ 24 ಗಂಟೆಗಳಿಗೂ ಮುನ್ನವೇ ಪ್ರಕಟಿಸಲ್ಪಟ್ಟರೆ, ಸಂಬಂಧಪಟ್ಟ ವಿಮಾನ ಸೇವಾ ಸಂಸ್ಥೆಯಿಂದ ಪ್ರಯಾಣಿಕರ ಟಿಕೆಟ್‌ ಹಣ ಸಂಪೂರ್ಣ ಮರುಪಾವತಿ. ಪ್ರಯಾಣಿಕರು ಇಚ್ಛಿಸಿದಲ್ಲಿ, ರದ್ದಾದ ವಿಮಾನದ ಪ್ರಯಾಣ ಅವಧಿಯಿಂದ 2 ಗಂಟೆಯೊಳಗೆ ಬದಲಿ ವಿಮಾನ ವ್ಯವಸ್ಥೆ.  

ಇ- ಸೇವೆ
ಏರ್‌ ಸೇವಾ ಮೊಬೈಲ್‌ ಅಪ್ಲಿಕೇಷನ್‌ ಪುನರುತ್ಥಾನಕ್ಕೆ ಚಿಂತನೆ. 

Trending videos

Back to Top