CONNECT WITH US  

"ಟೊಮಾಹಾಕ್‌'

ವಿಶ್ವದ ಅತಿ ಹೆಚ್ಚು ವೇಗವಾಗಿ ಓಡಬಲ್ಲ ಬೈಕ್‌ ಎಂದರೆ ಟೊಮೆಹಾಕ್‌. ಅಮೆರಿಕದ ಡಾಡ್ಜ್ ಕಂಪನಿಯ ಉತ್ಪನ್ನವಾಗಿರುವ ಈ ಬೈಕ್‌, 10 ಸಿಲಿಂಡರ್‌ನ ಎಂಜಿನ್‌ ಹೊಂದಿದೆ. 

- ವೇಗಕ್ಕೆ ಸರಿಸಾಟಿ ಮತ್ತೂಂದಿಲ್ಲ
- ವಿಶ್ವದ ಹೈಸ್ಪೀಡ್‌, ಹೈಟೆಕ್‌ ಬೈಕ್‌

ಲಕ್ಸುರಿ ಕಾರುಗಳಲ್ಲಿ ಓಡಾಡಬೇಕು. ಆಯಾ ಕಾಲಘಟ್ಟದಲ್ಲಿ ಪರಿಚಯಿಸಲ್ಪಡುವ ಆಟೋಮೊಬೈಲ್‌ ತಂತ್ರಜ್ಞಾನಗಳನ್ನು ಗೊತ್ತುಮಾಡಿಕೊಳ್ಳಬೇಕು. ಕಾರೋ, ಬೈಕೋ ಯಾವುದನ್ನೇ ಖರೀದಿಸಿದರೂ ಅದು ಲಕ್ಸುರಿಯಾಗಿರಬೇಕು. ಆರಾಮದಾಯಕ ಪ್ರಯಾಣ ನಮ್ಮದಾಗಿರಬೇಕು. ಹೀಗೆ ಬಗೆ ಬಗೆಯ ಕನಸುಗಳೊಂದಿಗೆ ನಾನಾ ರೀತಿಯಾಗಿಯೋಚಿಸುವ ವರ್ಗವೇ ಒಂದಿದೆ. ಅವರೆಲ್ಲಾ ಕ್ರೇಜಿಗಳಿಗಿಂತ ಇನ್ನೊಂದು ಹೆಜ್ಜೆ ಜಾಸ್ತಿಯಾಗಿಯೇ ಐಷಾರಾಮಿತನಕ್ಕಾಗಿಯೋ, ಪ್ರತಿಷ್ಠೆಗಾಗಿಯೋ ಅಥವಾ ಶೋಕಿಗಾಗಿಯೋ ಹಣವೆಷ್ಟು ಎನ್ನುವುದನ್ನೂ ಲೆಕ್ಕಿಸದೇ ಎಂಜಾಯ್‌ ಮಾಡುವ ಖಯಾಲಿ ಬೆಳೆಸಿಕೊಂಡಿರುತ್ತಾರೆ.

ಅದ್ಯಾವಮಟ್ಟಕ್ಕೆ ಇಂಥ ಖಯಾಲಿಗೆ ಅಂಟಿಕೊಂಡಿರುತ್ತಾರೆ ಎಂದರೆ, ಕಂಪನಿ ಯಾವುದೇ ಆಗಿದ್ದರೂ ಪರವಾಗಿಲ್ಲ, ಹೊಸದೊಂದು ಲಗುÕರಿ ಬೈಕ್‌, ಕಾರು ಮಾರುಕಟ್ಟೆಗೆ ಬಂತೆಂದರೆ ಅದನ್ನು ಕೊಂಡು ಓಡಿಸಲೇಬೇಕೆನ್ನುವಷ್ಟು. ಇಂಥ ಸಿರಿವಂತ ಹಿನ್ನೆಲೆಯ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡ ಭಲೇ ಬೈಕ್‌ಗಳು ರಸ್ತೆಗಿಳಿದಿರುವುದು. ಎಲ್ಲೆಂದರಲ್ಲಿ ಓಡಿಸಲು ಸಾಧ್ಯವಾಗದೇ ಇದ್ದರೂ, ಅದಕ್ಕೆಂದೇ ಹೊಸದೊಂದು ಟ್ರಾಕ್‌ ನಿರ್ಮಿಸಿ ಓಡಿಸುವವರೂ ಇದ್ದಾರೆ. ಕೆಲವು ಬೈಕ್‌ಗಳಂತೂ ರೇಸ್‌ ಟ್ರಾಕ್‌ಗಳಲ್ಲಷ್ಟೇ ಓಡಿಸಲು ಸಾಧ್ಯ.

ಈ ಸಾಲಿಗೆ ಸೇರುವ ಬೈಕ್‌ ಡಾಡ್ಜ್ ಟೊಮಾಹಾಕ್‌. ವಿಶ್ವದಲ್ಲಿ ಅತಿ ವೇಗವಾಗಿ ಓಡಬಲ್ಲ ಬೈಕ್‌ ಎನ್ನುವ ಹೆಗ್ಗಳಿಕೆ ಈ ಬೈಕ್‌ನದ್ದು!
ಹೌದು, ಮೇಲ್ನೋಟಕ್ಕೆ ಹೆಚ್ಚು ಕಡಿಮೆ ಕಾರಿನಂತೆ ಇದೆಯಲ್ಲ ಸ್ವಾಮಿ... ಎಂದು ಹುಬ್ಬೇರಿಸಬೇಡಿ. ಇದು ಕಾರಲ್ಲ, ಪಕ್ಕಾ ಬೈಕ್‌. ರೆಗ್ಯುಲರ್‌ ಕಾನ್ಸೆಪ್ಟ್ನ ಬೈಕ್‌ ಇದಲ್ಲ. ನಾನ್‌-ಸ್ಟ್ರೀಟ್‌ ಕಾನ್ಸೆಪ್ಟ್ಗಳ ಸಾಲಿಗೆ ಸೇರಿದ ದ್ವಿಚಕ್ರವಾಹನ. ಅಮೆರಿಕದ ಡಾಡ್ಜ್ ಕಂಪನಿ 2003ರಲ್ಲಿ ಮೊದಲ ಬಾರಿಗೆ ಉತ್ತರ ಅಮೆರಿಕದ ಅಂತಾರಾಷ್ಟ್ರೀಯ ಆಟೋ ಶೋನಲ್ಲಿ ಈ ಬೈಕನ್ನು  ಪರಿಚಯಿಸಿತು. 2003ರಿಂದ 2006ರ ಅವಧಿಯಲ್ಲಿ 9 ಯೂನಿಟ್‌ಗಳನ್ನು ತಯಾರಿಸಿದೆಯಷ್ಟೆ. ಅಷ್ಟಕ್ಕೂ ಈ ಕಾನ್ಸೆಪ್ಟ್ ಬೈಕ್‌, ಬಯಸಿದವರೆಲ್ಲ ಕೊಂಡುಕೊಳ್ಳುವ ರೆಗ್ಯೂಲರ್‌ ಬೈಕ್‌ ಕೂಡ ಅಲ್ಲ ಬಿಡಿ.

ಅಸಾಮಾನ್ಯ ಸಾಮರ್ಥ್ಯ
ಹೌದು, ಟೊಮಾಹಾಕ್‌ ಬೈಕ್‌ನ ಸಾಮರ್ಥ್ಯ ಅಸಾಮಾನ್ಯ. ಈಗಲೂ ವಿಶ್ವದ ಅತಿ ವೇಗವಾಗಿ ಓಡಸಬಲ್ಲ ಬೈಕ್‌ಗಳ ಸಾಲಿನಲ್ಲಿ ಟೊಮಾಹಾಕ್‌ ಟಾಪ್‌-1ನಲ್ಲಿದೆ. 10 ಸಿಲಿಂಡರ್‌ನಿಂದ ಕೂಡಿರುವ ಇಂಜಿನ್‌ ಹೊಂದಿರುವ ಟೊಮಾಹಾಕ್‌, ಒಂದಕ್ಕೊಂದು ಜೋಡಿಸಲ್ಪಟ್ಟ ನಾಲ್ಕು ವೀಲ್‌ಗ‌ಳನ್ನು ಹೊಂದಿದೆ. ಮುಂಭಾಗದಲ್ಲಿ ಎರಡು, ಹಿಂಭಾಗದಲ್ಲಿ ಎರಡು ವೀಲ್‌ಗ‌ಳು ಹೊಂದಿಕೊಂಡಂತೆ ಇರುತ್ತದೆ. ಕಂಪನಿಯೇ ಹೇಳಿಕೊಂಡಂತೆ 500 ಕುದುರೆಗಳ ಸಾಮರ್ಥ್ಯ ಈ ಬೈಕ್‌ನಲ್ಲಿದೆ. 8.3ಲೀ.ನ ವಿ10 ಎಸ್‌ಆರ್‌ಟಿ 10 ಇಂಜಿನ್‌ ಬಳಸಿಕೊಳ್ಳಲಾಗಿದೆ. ಡಾಡ್ಜ್ ವಿಪರ್‌ ಕಾರಿನಲ್ಲಿರುವ ಸಾಮರ್ಥ್ಯ ಇಂಜಿನ್‌ ಇದಾಗಿದೆ. 499.93 ಬಿಎಚ್‌ಪಿ ಹಾಗೂ 712ಎನ್‌ಎಂನೊಂದಿಗೆ 8277 ಸಿಸಿ ಪವರ್‌ ಹೊಂದಿದೆ. ಇನ್ನೊಂದು ಅಚ್ಚರಿಯ ಸಂಗತಿ ಏನೆಂದರೆ ಈ ಬೈಕ್‌ನ ಕರ್ಬ್ ವೇಟ್‌ ಬರೋಬ್ಬರಿ 680.4 ಕಿಲೋ ಗ್ರಾಂ.

ಗಂಟೆಗೆ 300-420 ಮೈಲು ವೇಗ
ಥಟ್ಟನೆ ಒಪ್ಪಿಕೊಳ್ಳುವುದೇ ಕಷ್ಟ. ಆದರೆ, ಇದು ಸುಳ್ಳಲ್ಲ. ಈ ಬೈಕನ್ನು ಪ್ರತಿ ಗಂಟೆಗೆ 300ರಿಂದ 420 ಮೈಲು ವೇಗದಲ್ಲಿ ಓಡಿಸಿ ದಾಖಲೆ ಸೃಷ್ಟಿಸಿದ್ದಾರೆ. ಅಂದರೆ, ಗರಿಷ್ಠ 680 ಕಿಲೋ ಮೀಟರ್‌ ವೇಗದಲ್ಲಿ ಓಡಿಸುವ ಭಲೇ ಸಾಮರ್ಥ್ಯದ ಅಸಾಮಾನ್ಯ ಬೈಕ್‌ ಎನ್ನುವುದು ಆಟೋಮೊಬೈಲ್‌ ಕ್ಷೇತ್ರದ ತಜ್ಞರೇ ಅಭಿಪ್ರಾಯಪಟ್ಟಿದ್ದಾರೆ.

ಭಾರತಕ್ಕೆ ತರಲು ತಗಲುವ ವೆಚ್ಚ: 3.39 ಕೋಟಿ ರೂ.ನಿಂದ 4.74 ಕೋಟಿ ರೂ.

ಹೈಲೈಟ್ಸ್‌
- 1930ಮಿ.ಮೀ ಉದ್ದ, 737ಮಿ.ಮೀ. ಎತ್ತರ
- ಕರ್ಬ್ ವೇಟ್‌ 680.4 ಕಿಲೋ ಗ್ರಾಂ.
- 2 ಸ್ಪೀಡ್‌ ಮ್ಯಾನ್ಯುವಲ್‌ ಗೇರ್‌ ಬಾಕ್ಸ್‌
- ಹಾರಿಜಾಂಟಲ್‌ ಡಬಲ್‌ ಫೋರ್ಕ್‌ ಸಸ್ಪೆನÒನ್‌
- ಮುಂಭಾಗದಲ್ಲಿ 2ಗಿ16 ಪಿಸ್ಟನ್‌ ಡಿಸ್ಕ್ ಬ್ರೇಕ್‌, ಹಿಂಭಾಗದಲ್ಲಿ 8ಪಿಸ್ಟನ್‌ ಡಿಸ್ಕ್ ಬ್ರೇಕ್‌
- ಮಾರ್ಕ್‌ ವಾಲ್ಟರ್ನಿಂದ ಬೈಕ್‌ನ ವಿನ್ಯಾಸ

ಡಾಡ್ಜ್ ಬಗ್ಗೆ ಸಂಕ್ಷಿಪ್ತ ಮಾಹಿತಿ
ಅಮೆರಿಕದ ಆಟೋಮೊಬೈಲ್‌ ಕ್ಷೇತ್ರದಲ್ಲಿ ವಿಶೇಷ ಇತಿಹಾಸ ಹೊಂದಿರುವ ಕಂಪನಿ ಡಾಡ್ಜ್. 1900ರಲ್ಲಿ ಸ್ಥಾಪನೆಗೊಂಡ ಈ ಕಂಪನಿ 118 ವರ್ಷಗಳ ಇತಿಹಾಸ ಹೊಂದಿದೆ. ಜಾನ್‌ ಫ್ರಾನ್ಸಿಸ್‌ ಡಾಡ್ಜ್ ಮತ್ತು ಹಾರೆಸ್‌ ಎಲಿYನ್‌ ಡಾಡ್ಜ್ ಸೋದರರು ಸಂಸ್ಥೆಯ ಸಂಸ್ಥಾಪಕರು. ಬೈಕ್‌ಗಳಿಗಿಂತ ಕಾರು, ಟ್ರಕ್‌, ವ್ಯಾನ್‌, ಎಸ್‌ಯುವಿ ವಾಹನಗಳ ತಯಾರಿಕೆಯಲ್ಲಿ ಈ ಕಂಪೆನಿ ದೊಡ್ಡ ಹೆಸರು ಮಾಡಿದೆ. 

- ಗಣಪತಿ ಅಗ್ನಿಹೋತ್ರಿ


Trending videos

Back to Top