CONNECT WITH US  

ಮನೆಯ ಚಾವಡಿಯಲ್ಲಿನ ರಸದೌತಣ “ಚಿಕ್ಕಮೇಳ” ಎಂಬ ಯಕ್ಷಗಾನ ಸೇವೆ; watch

ಮಳೆಗಾಲ ಹೊರತುಪಡಿಸಿ ವರ್ಷದ ಉಳಿದೆಲ್ಲಾ ಸಮಯದಲ್ಲಿ ಯಕ್ಷಗಾನ ಪ್ರದರ್ಶನವಾಗುತ್ತಿರುತ್ತದೆ. ಮಳೆಗಾಲದಲ್ಲಿಯೂ ಬೆಂಗಳೂರು, ಮುಂಬೈಯಂತಹ ಮಹಾನಗರಗಳಲ್ಲಿ  ಸ್ಟಾರ್ ಕಲಾವಿದರನ್ನು ಆಹ್ವಾನಿಸಿ ಯಕ್ಷಗಾನ, ತಾಳಮದ್ದಳೆ ಪ್ರದರ್ಶನದ ವ್ಯವಸ್ಥೆ ಮಾಡುತ್ತಾರೆ. ಮಳೆಗಾಲದಲ್ಲಿ ಬಯಲಾಟ ಹಾಗೂ ಟೆಂಟ್ ಯಕ್ಷಗಾನದ ತಿರುಗಾಟಕ್ಕೆ ತೆರೆಬಿದ್ದಿರುತ್ತದೆ, ಇಂತಹ ಸಂದರ್ಭದಲ್ಲಿ ಕರಾವಳಿ ಸೇರಿದಂತೆ ಕೆಲವೆಡೆ ಜೂನ್ ನಿಂದ ದೀಪಾವಳಿಯವರೆಗೆ ಮನೆ, ಮನೆಗೆ ತೆರಳಿ ಹಿಮ್ಮೇಳ, ವೇಷ ಭೂಷಣದೊಂದಿಗೆ ಪ್ರದರ್ಶನ ನೀಡುತ್ತಾರೆ..ಇದನ್ನು ಚಿಕ್ಕಮೇಳ ಎಂದು ಕರೆಯುತ್ತಾರೆ.

ಏನಿದು ಚಿಕ್ಕಮೇಳ?:

ಪ್ರಸಿದ್ಧ ಕಲಾವಿದರು ತಂಡ ಕಟ್ಟಿಕೊಂಡು ಮಳೆಗಾಲದ ತಿರುಗಾಟವಾಗಿ ಮುಂಬಯಿ, ಬೆಂಗಳೂರು, ಹುಬ್ಬಳ್ಳಿ, ಹೈದರಾಬಾದ್ ಮುಂತಾದ ಮಹಾನಗರಗಳಿಗೆ ತೆರಳಿ ಪ್ರದರ್ಶನ ನೀಡುವ ಪರಿಪಾಠ ಮುಂದುವರಿದಿದೆ. ಮತ್ತೊಂದೆಡೆ ಉದಯೋನ್ಮುಖ ಕಲಾವಿದರು ಚಿಕ್ಕಮೇಳವನ್ನು ಕಟ್ಟಿಕೊಂಡು ಊರಿನಲ್ಲಿ ತಿರುಗಾಟ ಮಾಡುತ್ತ, ಕಲಾಸಕ್ತರ ಮನೆಯ ಅಂಗಳ, ಚಾವಡಿಯಲ್ಲಿ ಆಟದ ಪ್ರದರ್ಶನ ನೀಡುತ್ತಾರೆ. ಸ್ತ್ರೀ ಮತ್ತು ಪುರುಷ ಪಾತ್ರಧಾರಿ ಹಾಗೂ ಹಿಮ್ಮೇಳ ಚಿಕ್ಕಮೇಳದ ತಂಡದಲ್ಲಿ ಇರುತ್ತಾರೆ.

ಸಂಜೆ ಆರು ಗಂಟೆಗೆ ಆರಂಭವಾಗಿ ರಾತ್ರಿ 10ಗಂಟೆ ಹೊತ್ತಿಗೆ ಚಿಕ್ಕಮೇಳದ ದಿನದ ತಿರುಗಾಟ ಸಮಾಪನಗೊಳ್ಳುತ್ತದೆ. ಚಿಕ್ಕಮೇಳದ ತಂಡ ಒಂದು ಮನೆಯಲ್ಲಿ 5ರಿಂದ 10 ನಿಮಿಷಗಳ ಸಮಯದ ಪ್ರದರ್ಶನ ನೀಡುತ್ತದೆ.ಈ ಚಿಕ್ಕಮೇಳ ತಂಡ ಸಂಜೆಯ ತಿರುಗಾಟಕ್ಕೆ ಹೊರಡುವ ಮೊದಲು ತಂಡದ ಸದಸ್ಯರು ಊರಿನ ಮನೆ, ಮನೆಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿ ಚಿಕ್ಕಮೇಳ ಪ್ರದರ್ಶನದ ಸಂಪ್ರದಾಯ ಮತ್ತು ನಿಯಮಾವಳಿಯ ಕರಪತ್ರ ಹಂಚುತ್ತಾರೆ. ಮೇಳ ಬರುವ ನಿಗದಿತ ಸಮಯ ಹಾಗೂ ಹೆಸರನ್ನು ಉಲ್ಲೇಖಿಸಿ ಬರುತ್ತಾರೆ.

ಮನೆ ಮಂದಿ ಚಿಕ್ಕಮೇಳದ ಗಣಪತಿ ದೇವರಿಗೆ ಅಕ್ಕಿ, ತೆಂಗಿನ ಕಾಯಿಯನ್ನು ಸಮರ್ಪಿಸಲು ತಯಾರು ಮಾಡಿ, ದೀಪ ಹಚ್ಚಿ ಇಡಬೇಕು. ಬಳಿಕ ಚಿಕ್ಕಮೇಳದ ಸದಸ್ಯರು ಆಗಮಿಸಿ ಮನೆಯ ಒಳಗೆ ಅಥವಾ ಚಾವಡಿಯಲ್ಲಿಯೇ ಕಿರು ಪ್ರದರ್ಶನ ನೀಡುತ್ತಾರೆ. ಇಲ್ಲಿ ಮನೆ ಮಂದಿಯೇ ಪ್ರೇಕ್ಷಕರಾಗಿ ಯಕ್ಷಗಾನ ಕಲೆಯ ಸವಿಯನ್ನು ಸವಿಯುತ್ತಾರೆ. ಪ್ರದರ್ಶನ ಮುಗಿದ ಕೂಡಲೇ ಮನೆಯ ಯಜಮಾನರು ಕೊಡುವ ಕಾಣಿಕೆ ಪಡೆದು ಮತ್ತೊಂದು ಮನೆಯತ್ತ ತೆರಳುತ್ತಾರೆ.

Trending videos

Back to Top