CONNECT WITH US  

ಬರಲಿದೆ ಚೆಂದದ ಚೇತಕ್‌

ಹಳೇ ಬ್ರಾಂಡ್‌, ಹೊಸ ಟ್ರೆಂಡ್‌

ಅದೆಷ್ಟೋ ಬ್ರಾಂಡ್‌ಗಳು ಸಮೂಹ ಸನ್ನಿ ಎಂಬಂತೆ ಇಡೀ ಕ್ಷೇತ್ರವನ್ನೇ ಆವರಿಸಿಕೊಂಡಿರುತ್ತವೆ. ಭಾರತದಲ್ಲಿ ಇಂಥ ಅನೇಕ ಉದಾಹರಣೆಗಳು ಸಿಗುತ್ತವೆ.

 ಕೋಲ್ಗೇಟ್‌ ಮಾರುಕಟ್ಟೆ ಪ್ರವೇಶಿಸಿ ಕೆಲ ವರ್ಷಗಳ ಬಳಿಕ, ಟೂತ್‌ಪೇಸ್ಟ್‌ ಎಂದರೆ ಕೋಲ್ಗೇಟ್‌ ಎನ್ನುವ ಮಟ್ಟಕ್ಕೆ ಬ್ರಾಂಡ್‌ ಆಗಿತ್ತು. ಹಾಗೇ, ಮಕ್ಕಳಿಗೆ ಬಣ್ಣ ಕೊಡಿಸಬೇಕಾಗಿ ಬಂದಾಗ, ಕ್ಯಾಮಿನ್‌ ಸಂಸ್ಥೆಯನ್ನು ಬಿಟ್ಟರೆ ಮತ್ತಿನ್ನಾವುದೂ ನೆನಪಿಗೆ ಬರುತ್ತಿರಲಿಲ್ಲ. ಗೊದ್ರೇಜ್‌ ಕೂಡ ಇದೇ ಮಟ್ಟಕ್ಕೆ ತನ್ನ ಬ್ರಾಂಡ್‌ ಕ್ರಿಯೇಟ್‌ ಮಾಡಿಕೊಂಡಿತ್ತು.

ಆಟೋಮೊಬೈಲ್‌ ಕ್ಷೇತ್ರದಲ್ಲಿಯೂ ಇಂಥದೇ ಒಂದಿಷ್ಟು ಉದಾಹರಣೆಗಳು ಸಿಗುತ್ತವೆ. ಅದಕ್ಕೊಂದು ಅತ್ಯುತ್ತಮ ಉದಾಹರಣೆ ಸ್ಕೂಟರ್‌ ಬಜಾಜ್‌ ಚೇತಕ್‌. 80, 90ರ ದಶಕದಲ್ಲಿ ಸ್ಕೂಟರ್‌ ಎಂದರೆ ಬಜಾಜ್‌ ಚೇತಕ್‌.

ಮತ್ತಿನ್ನಾವುದನ್ನೂ ನೆನಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಅಷ್ಟರ ಮಟ್ಟಿಗೆ ಬಜಾಜ್‌ ಸಂಸ್ಥೆಯ ಸ್ಕೂಟರ್‌ ಚೇತಕ್‌ ಭಲೇ ಫೇಮಸ್‌ ಆಗಿತ್ತು. ಜನಮಾನಸದಿಂದ ಎಂದೆಂದೂ ಮರೆಯಲಾಗದ ದೃಶ್ಯಾವಳಿಗಳನ್ನು ಬಜಾಜ್‌ ಚೇತಕ್‌ ಕೊಟ್ಟಿದ್ದರಿಂದಲೇ ಆ ಮಟ್ಟಿಗಿನ ಬ್ರಾಂಡ್‌ಗೆ ಸಾಧ್ಯವಾಗಿದ್ದು ಎನ್ನುವುದೂ ಅಷ್ಟೇ ಸ್ಪಷ್ಟ.

 ಈಗ್ಯಾಕೆ ಇವೆಲ್ಲ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಸುಖಾಸುಮ್ಮನೆ ಇವನ್ನೆಲ್ಲ ಮತ್ತೆ ನೆನಪಿಸುತ್ತಿಲ್ಲ. ಅದಕ್ಕೂ ಒಂದು ಬಲವಾದ ಕಾರಣವಿದೆ. ಮತ್ತೇನಿಲ್ಲ, ಒಂದು ಕಾಲದಲ್ಲಿ ಡಾ.ರಾಜ್‌ಕುಮಾರ್‌, ಡಾ. ವಿಷ್ಣುವರ್ಧನ್‌ ಅವರಂಥ ಸ್ಯಾಂಡಲ್‌ವುಡ್‌ ನಟರ ಫೇವರಿಟ್‌ ಸ್ಕೂಟರ್‌ ಎನಿಸಿಕೊಂಡಿದ್ದ ಬಜಾಜ್‌ ಚೇತಕ್‌ ಸ್ಕೂಟರನ್ನು ಮತ್ತೆ ಮಾರುಕಟ್ಟೆಗೆ ಪರಿಚಯಿಸಲು ಬಜಾಜ್‌ ಸಂಸ್ಥೆ ತಯಾರಿ ನಡೆಸಿದೆ.

ಹಮಾರಾ ಬಜಾಜ್‌ ಹಮಾರಾ ಚೇತಕ್‌
 1972ರಿಂದ ಹೆಚ್ಚು ಕಡಿಮೆ ಎರಡೂವರೆ ದಶಕಗಳ ಕಾಲ ಬಜಾಜ್‌ ಚೇತಕ್‌ ಸ್ಕೂಟರ್‌ಗೆ ವಾಹನ ಸವಾರರಿಂದ ಸಿಕ್ಕಿದ್ದು ಮನೆ ಮಕ್ಕಳ ಮೇಲಿರುವಷ್ಟೇ ಪ್ರೀತಿ. ಅದೆಷ್ಟೋ ಕುಟುಂಬಗಳ ಜನ, ಮಿಲೇನಿಯಂ ವರ್ಷಾರಂಭದಲ್ಲೂ, ಅಷ್ಟೇ ಏಕೆ ಇಂದಿಗೂ ಓಡಿಸುತ್ತಿದ್ದಾರೆ. ಸ್ಕೂಟರ್‌ ಹಳೆಯದಾಗಿದ್ದರೂ ಅದೆಷ್ಟೋ ಕುಟುಂಬಗಳು ಭಾವನಾತ್ಮಕವಾಗಿ ಕಾಪಾಡಿಕೊಂಡು ಬಂದಿವೆ. ಜನಸಾಮಾನ್ಯನೂ ಮಹತ್ವಾಕಾಂಕ್ಷೆಯಿಂದ ಚೇತಕ್‌ ಖರೀದಿಸಬುದು ಎನ್ನುವುದನ್ನು ಪ್ರಾಕ್ಟಿಕಲ್‌ ಆಗಿ ತೋರಿಸಿಕೊಟ್ಟಿರುವ ಹೆಗ್ಗಳಿಕೆಯನ್ನು ದೇಶಿ ಸಂಸ್ಥೆ ಬಜಾಜ್‌ ಹೊಂದಿದೆ. ಅಚ್ಚರಿ ಪಡಬಹುದಾದ ಇನ್ನೊಂದು ವಿಚಾರ ಏನೆಂದರೆ, ಚೇತಕ್‌ ಸ್ಕೂಟರ್‌ ಹಾಟ್‌ ಕೇಕ್‌ ಆಗಿ ಮಾರಾಟವಾಗುತ್ತಿದ್ದ ದಿನದಲ್ಲಿ ಬಜಾಜ್‌ ಸಂಸ್ಥೆ ಮಾರುಕಟ್ಟೆಯ ಅರ್ಧಕ್ಕರ್ಧ ಪಾಲುದಾರಿಕೆಯನ್ನು ತನ್ನದಾಗಿಸಿಕೊಂಡಿತ್ತು. ಆದರೆ ಈ ಸ್ಕೂಟರಿನ ಉತ್ಪಾದನೆಯನ್ನು 2007ರಲ್ಲಿ ಸ್ಥಗಿತಗೊಳಿಸಲಾಯಿತು. 2009ರ ನಂತರದ ಕಾಲಘಟ್ಟದಲ್ಲಿ ಬೇಡಿಕೆ ಇಳಿಮುಖ ಆಗುತ್ತಿದ್ದ ಹಿನ್ನೆಲೆಯಲ್ಲಿ ಮಾರುಕಟ್ಟೆ ಪಾಲುದಾರಿಕೆಯೂ ಕುಸಿಯಿತು. ಸ್ಪರ್ಧಾತ್ಮಕ ಯುಗವಾದ ಇಂದು ಅಂದಿನ ಪಾಲುದಾರಿಕೆಯ ಅರ್ಧದಷ್ಟೂ ಇಲ್ಲ. ಅಷ್ಟರ ಮಟ್ಟಿಗೆ ಕಡಿಮೆಯಾಗಿದೆ. ಆದರೆ ಅಷ್ಟೇ ಬಲವಾದ ಜಾಗವನ್ನು ಇಂದು ಪಲ್ಸರ್‌ ಆವರಿಸಿಕೊಳ್ಳುತ್ತಿದೆ. ಆದರೆ ಸ್ಕೂಟರ್‌ ಎಂದರೆ ಚೇತಕ್‌ ಎನ್ನುವಂತಿದ್ದ ದಿನದಲ್ಲಿ ವರ್ಷಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಸ್ಕೂಟರ್‌ಗಳನ್ನು ಮಾರಾಟ ಮಾಡಿರುವ ಹೆಗ್ಗಳಿಕೆ ಬಜಾಜ್‌ ಸಂಸ್ಥೆಯದ್ದು.

ವಿನ್ಯಾಸ ಹಾಗೇ ಇರುತ್ತಾ?
ಚೇತಕ್‌ ಎಂದಾಕ್ಷಣ ನಮ್ಮ ಕಣ್ಮುಂದೆ ಕಾಣಿಸುವುದು ಸ್ಕೂಟರ್‌ನ ವಿನ್ಯಾಸ. ಆದರೆ ಮುಂಬರುವ ದಿನಗಳಲ್ಲಿ ಚೇತಕ್‌ ಅದೇ ವಿನ್ಯಾಸದಿಂದ ಕೂಡಿರುವುದಿಲ್ಲ. ವಿನ್ಯಾಸದಲ್ಲಿ ಹೆಚ್ಚು ಕಡಿಮೆ ಹೋಂಡಾ ಆಕ್ಟೀವಾ ಮಾದರಿಯಲ್ಲೇ ಚೇತಕ್‌ ಸ್ಕೂಟರ್‌ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. 2019ರ ಜೂನ್‌ ವೇಳೆಗೆ ನ್ಯೂ ಚೇತಕ್‌ ಮಾರುಕಟ್ಟೆ ಪ್ರವೇಶಿಸಲಿದೆ. ಜೊತೆಗೆ 2020ರ ವೇಳೆಗೆ ಚೇತಕ್‌ ಚಿಕ್‌ ಹೆಸರಿನ ಎಲೆಕ್ಟ್ರಿಕ್‌ ವರ್ಷನ್‌ ಅನ್ನೂ ಪರಿಚಯಿಸಲು ಬಜಾಜ್‌ ಸಂಸ್ಥೆ ಸಿದ್ಧತೆ ಮಾಡಿಕೊಂಡಿದೆ.

ಆಧುನಿಕ ತಂತ್ರಜಾnನ ಅಳವಡಿಕೆ
ಸ್ಕೂಟರ್‌ಗೆ ಅಗತ್ಯವಿರುವ ಆಧುನಿಕ ತಂತ್ರಜಾnನಗಳ ಅಳವಡಿಕೆಯೊಂದಿಗೆ ಚೇತಕ್‌ ಪರಿಚಯಗೊಳ್ಳಲಿದೆ. ಮೊಬೈಲ್‌ ಚಾರ್ಜ್‌ ಮಾಡಿಕೊಳ್ಳಲು ಹಾಗೂ ಬ್ಲೂ$Âಟೂತ್‌ ಕನೆಕ್ಟ್ ಮಾಡಿಕೊಳ್ಳುವ ಅವಕಾಶಗಳನ್ನು ಹೊಸ ಚೇತಕ್‌ ಹೊಂದಿರಲಿದೆ.

ಸುರಕ್ಷತೆಗೆ ಒತ್ತು
ಈ ಹಿಂದೆ ಚೇತಕ್‌ ಹೊಂದಿದ್ದ ರೋಡ್‌ ಗ್ರಿಪ್‌ ಅನ್ನು ಇನ್ನಷ್ಟು ಉತ್ತಮಗೊಳಿಸಿರುವುದಾಗಿ ಬಜಾಜ್‌ ಸಂಸ್ಥೆ ಹೇಳಿಕೊಂಡಿದೆ. ಸಿಬಿಎಸ್‌ ಬ್ರೇಕ್‌ ವ್ಯವಸ್ಥೆ ಅಳವಡಿಸಲಾಗಿದೆ. ಜೊತೆಗೆ ಇಂಧನ ಶೇಖರಣಾ ಸಾಮರ್ಥ್ಯವನ್ನೂ ಹೆಚ್ಚಿಸಲಾಗಿದೆ. ಮೊಟ್ಟೆಯಾಕಾರದ ಹೆಡ್‌ಲ್ಯಾಂಪನ್ನು ರೈಡರ್‌ ಸ್ನೇಹಿಯಾಗಿರುವಂತೆ ಜೋಡಿಸಲಾಗಿದೆ.

ಎಂಜಿನ್‌ ಸಾಮರ್ಥ್ಯ
ಲಭ್ಯವಿರುವ ಮಾಹಿತಿಯಂತೆ 10ಬಿಎಚ್‌ ಮತ್ತು 9ಎನ್‌ಎಂ ಟಾಕ್‌ ಶಕ್ತಿ ಉತ್ಪಾದಿಸುವ 125ಸಿಸಿ ಸಾಮರ್ಥ್ಯದ ಎಂಜಿನ್‌ ಇರುತ್ತದೆ. ಸಿಟಿ ಗೇರ್‌ಬಾಕ್ಸ್‌ ಜೋಡಿಸಲಾಗಿದೆ ಎಂದು ವಿಶ್ಲೇಸಲಾಗುತ್ತಿದೆ. 

ನಿರೀಕ್ಷಿತ ಎಕ್ಸ್‌ ಶೋ ರೂಂ ಬೆಲೆ: 70,000

- ಗಣಪತಿ ಅಗ್ನಿಹೋತ್ರಿ   


Trending videos

Back to Top