CONNECT WITH US  

ಧರ್ಮಸ್ಥಳ ಲಕ್ಷದೀಪೋತ್ಸವ; ಜನಸಾಗರದ ನಡುವೆಯೂ “ಸ್ವಚ್ಛತೆಯ ಪ್ರಜ್ಞೆ”

ಸ್ವಚ್ಛ ಧರ್ಮಸ್ಥಳ  ಎಂದೇ ಕರೆಸಿಕೊಂಡಿರುವ ಶ್ರೀ ಕ್ಷೇತ್ರ ಅದೇ ಸ್ವಚ್ಛತೆ...

ಉಜಿರೆ: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸಂಭ್ರಮ .ಎಲ್ಲೆಲ್ಲೂ ದೀಪಗಳ ಅಲಂಕಾರ ಎಲ್ಲಿ ನೋಡಿದರೂ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಕೊಳ್ಳಲು ಆಗಮಿಸಿದ ಭಕ್ತ ಸಮೂಹ.  ನಾಡಿನ ನಾನಾ ಕಡೆಗಳಿಂದ ಬಂದ ಜನಸಾಗರ. ಇದರ ಮಧ್ಯೆಯೂ ಸ್ವಚ್ಛ ಧರ್ಮಸ್ಥಳ  ಎಂದೇ ಕರೆಸಿಕೊಂಡಿರುವ ಶ್ರೀ ಕ್ಷೇತ್ರ ಅದೇ ಸ್ವಚ್ಛತೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ದೀಪೋತ್ಸವಕ್ಕೆಂದು ಪಾದಯಾತ್ರೆ ಹೊರಟ ಸಾವಿರಾರು ಭಕ್ತರಲ್ಲಿ ರಸ್ತೆ ಬದಿಯಲ್ಲಿ ಸ್ವಚ್ಛತೆಯ ಸಂದೇಶ ಹೊತ್ತ ಫಲಕಗಳು ಸ್ವಚ್ಛಪ್ರಜ್ಞೆ ಮೂಡಿಸಿದವು. ನಮ್ಮ ಪರಿಸರ ಸ್ವಚ್ಛವಾಗಿಡೋಣ ನಮ್ಮ ದೇಶದ ಗೌರವವನ್ನು ಹೆಚ್ಚಿಸೋಣ,  ರಸ್ತೆಯ ಮೇಲೆ ಕಸ ಚೆಲ್ಲಬೇಡಿ ,ಕಸವನ್ನು ತೊಟ್ಟಿಯಲ್ಲಿ ಹಾಕಿ ಎನ್ನುವ ಸೂಚನಾ ಫಲಕಗಳನ್ನು ಹಾಕುವ ಮೂಲಕ ಭಕ್ತಾದಿಗಳಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲಾಯಿತು

ಪಾದಯಾತ್ರೆಯ ಹಾದಿ ಮಧ್ಯೆ ಬಾಯಾರಿಕೆ ನೀಗಿಸುವ ಉದ್ದೇಶದಿಂದ ನೀರು, ತಂಪು ಪಾನೀಯಗಳನ್ನು ಕೊಡುವ ಜಾಗದಲ್ಲಿಯೂ ಪ್ಲಾಸ್ಟಿಕ್ ಲೋಟಗಳನ್ನು ಬಳಸದೆ ಅದರ ಬದಲಾಗಿ ಸ್ಟೀಲ್ ಲೋಟಗಳನ್ನು ಬಳಸಲಾಗುತ್ತಿತ್ತು.

ಇನ್ನು ಧರ್ಮಸ್ಥಳದ ರಸ್ತೆ ಬದಿಯಲ್ಲಿ ಕೂಡ ಹಲವಾರು ಕಸದ ತೊಟ್ಟಿಗಳನ್ನು ಇಡಲಾಗಿದೆ. ಅಲ್ಲದೇ ಉಪಾಹಾರ ನೀಡುವ ಕಡೆಗಳಲ್ಲಿ ತಟ್ಟೆಗಳನ್ನು ಎಸೆಯಲು ವ್ಯವಸ್ಥಿತವಾದ ಕಸದ ತೊಟ್ಟಿಗಳನ್ನು ಇಡಲಾಗಿದೆ. ಇನ್ನು ಸ್ವಯಂಸೇವಕರು ಎಲ್ಲಿಯೂ ಸ್ವಚ್ಛತೆಗೆ ಸ್ವಲ್ಪವೂ ಕುಂದು ಉಂಟಾಗದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.

ಲಕ್ಷದೀಪೋತ್ಸವದ ಪ್ರಯುಕ್ತ ಏರ್ಪಾಡಾಗಿರುವ ವಸ್ತುಪ್ರದರ್ಶನ ಮಳಿಗೆಯಲ್ಲಿಯೂ ಪ್ರತಿ ಅಂಗಡಿಗಳ ಎದುರು ಕಸ ಎಸೆಯಲು ವ್ಯವಸ್ಥೆಗೊಳಿಸಲಾಗಿದೆ. ಶ್ರೀ ಧರ್ಮಸ್ಥಳ ಪಾಲಿಟೆಕ್ನಿಕ್ ಸಂಸ್ಥೆಯವರು ತಯಾರಿಸಿರುವ ಒಣ ಮತ್ತು ಹಸಿ ಕಸವನ್ನು ವಿಭಾಗ ಮಾಡಿ ಎಸೆಯುವ ವ್ಯವಸ್ಥೆ ಇರುವ ಕಸದ ತೊಟ್ಟಿಯಿಂದ ಬಳಸಿಕೊಳ್ಳಲಾಗಿತ್ತು.

ವರದಿ: ಆದರ್ಶ ಕೆ.ಜಿ

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ

Trending videos

Back to Top