CONNECT WITH US  

ಲಕ್ಷದೀಪೋತ್ಸವ; ಲಲಿತಕಲಾಗೋಷ್ಠಿಯಲ್ಲಿ ಭಕ್ತಿಗೀತೆಗಳ ವರ್ಷಧಾರೆ

ಗೋವಿಂದ ಗೋಪಾಲ ಹರಿ ನಾರಾಯಣ ಹಾಡಿನೊಂದಿಗೆ ಗಾಯಕಿ

ಉಜಿರೆ: ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಕು. ಅದಿತಿ. ಬಿ. ಪ್ರಹ್ಲಾದ್ ಅವರಿಂದ ನಡೆದ ಸುಗಮ ಸಂಗೀತ ಕಾರ್ಯಕ್ರಮ ನೆರೆದವರನ್ನು ಭಕ್ತಿ ಭಾವ ಪರವಶರನ್ನಾಗಿಸಿತು. ಗಣೇಶ ಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದ ಅದಿತಿ, ಕಾರ್ಯಕ್ರಮದ ಉದ್ದಕ್ಕೂ ಪ್ರೇಕ್ಷಕರನ್ನು ಸಂಗೀತ ಕಡಲಲ್ಲಿ ತೇಲಿಸಿದರು.

'ಶ್ರೀ ಮಂಜುನಾಥ' ಚಿತ್ರದ ಶಂಕರ ಮಹದೇವನ್ ಗಾಯನದ ' ಮಹಾಪ್ರಾಣ ದೀಪಂ' ಹಾಡು ಅದಿತಿ ಕಂಠದಲ್ಲಿ ಅದ್ಭುತವಾಗಿ ಹೊರಹೊಮ್ಮಿತು.

'ಶಂಭೋ ಶಿವ ಸ್ವಯಂಭೋ' ಎಂಬ ಶಿವಭಕ್ತಿಯ ಹಾಡು ಪ್ರಸ್ತುತಪಡಿಸಲ್ಪಟ್ಟಾಗ ಅಲ್ಲಿದ್ದವರು ಭಕ್ತಿ ಪರವಶರಾಗಿ ಗಾಯಕಿಯನ್ನು ಕೊಂಡಾಡಿದರು. ಗೋವಿಂದ ಗೋಪಾಲ ಹರಿ ನಾರಾಯಣ ಹಾಡಿನೊಂದಿಗೆ ಗಾಯಕಿ ಅದಿತಿ ಸರಿಗಮ ವರ್ಷಧಾರೆಯನ್ನೇ ಸುರಿಸಿದರು.ಶ್ರೀ ವಾದಿ ರಿದಮ್ ಪ್ಯಾಡ್ನಲ್ಲಿ, ತಬಲಾದಲ್ಲಿ ಕಾರ್ತಿಕ್ ಭಟ್, ಕೀಬೋರ್ಡ್ ವಾದಕರಾಗಿ ವಸಂತಕುಮಾರ್ ಕುಂಬ್ಳೆ ಸಹಕರಿಸಿದರು.

ಸನ್ಮಾನ

ನಂತರ ಲಲಿತಕಲಾಗೋಷ್ಠಿಯ ಅಂಗವಾಗಿ ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು. ಸಂಗೀತ ಕ್ಷೇತ್ರದಲ್ಲಿನ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಅಣ್ಣು ದೇವಾಡಿಗ ಅವರನ್ನು ಡಾ.ಡಿ ವೀರೇಂದ್ರ ಹೆಗ್ಗಡೆಯವರು ಸನ್ಮಾನಿಸಿದರು.

ನೃತ್ಯ ಕಾರ್ಯಕ್ರಮ

ಡಾ.ರಕ್ಷಾ, ಕು. ಆನಂದಿತಾ ರೆಡ್ಡಿ, ಕು. ಹಶ್ಮಿತಾ ಅವರ ಭರತನಾಟ್ಯ ಪ್ರಸ್ತುತಿ ಗಮನ ಸೆಳೆಯಿತು. 'ನಾಗೇಂದ್ರ ಹಾರಾಯ' 'ಮಾಮವತು ಶ್ರೀ ಸರಸ್ವತಿ' 'ಕಂಡೆ ಕರುಣಾನಿಧಿಯ' ಮೊದಲಾದ ಹಾಡಿಗೆ ಭಾವಪೂರ್ಣ ಅಭಿನಯದೊಂದಿಗೆ ನೃತ್ಯ ಪ್ರಸ್ತುತಪಡಿಸಿದರು.

ಭಾನುಮತಿ ಮತ್ತು ಭರತಾಂಜಲಿ ನೃತ್ಯ ತಂಡದವರ ಸಮೂಹ ಭರತನಾಟ್ಯಕ್ಕೆ ಅಮೃತವರ್ಷಿಣಿ ವೇದಿಕೆ ಸಾಕ್ಷಿಯಾಯಿತು. ವೇಷಭೂಷಣ, ಹಾಡು, ವಿವಿಧ ಶೈಲಿಗಳು, ಭಾವನೆ ಅಭಿನಯ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು.

ವರದಿ ಮತ್ತು ಚಿತ್ರ:ಅಂಬಿಕಾ ಕೈಲಾಸ

ಅಂತಿಮ ವರ್ಷ; ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ


Trending videos

Back to Top