CONNECT WITH US  

ಭಕ್ತರ ಹೂವಿನ ಸೇವೆಯಿಂದ ಕಂಗೊಳಿಸುತ್ತಿದೆ “ಧರ್ಮಸ್ಥಳ ಲಕ್ಷದೀಪೋತ್ಸವ”

ಬೆಂಗಳೂರಿನ ಮಂಜು ಎಂಬವರ ನೇತೃತ್ವದಲ್ಲಿ ಹಲವು ಹೂವಿನ ತಂಡ..

ಧರ್ಮಸ್ಥಳ: ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಲಕ್ಷದೀಪೋತ್ಸವ ಸಂಭ್ರಮಾಚರಣೆ ನಡೆಯುತ್ತಿದ್ದು, ದೇವಾಲಯವು ವಿಶೇಷ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರದ ವಿವಿಧ ಭಕ್ತರ ತಂಡಗಳು ಸೇವಾರೂಪದಲ್ಲಿ ಹೂವಿನಾಲಂಕಾರ ಮಾಡಿದ್ದು ಜನರ ಆಕರ್ಷಣೆಗೆ ಕಾರಣವಾಗಿದೆ.

ಭಾರತೀಯ ಆರಾಧನೆಯಲ್ಲಿ ಹೂವಿನ ಅಲಂಕಾರಕ್ಕೆ ವಿಶೇಷ ಸ್ಥಾನ. ಹಬ್ಬ ಹರಿದಿನಗಳಲ್ಲಿ ದೇವರನ್ನೂ ದೇವಾಲಯವನ್ನೂ ಹೂವಿನಿಂದ ಸಿಂಗರಿಸಿ ಭಕ್ತರು ಸಂಭ್ರಮ ಪಡುತ್ತಾರೆ. ಬೆಂಗಳೂರಿನ ಮಂಜು ಎಂಬವರ ನೇತೃತ್ವದಲ್ಲಿ ಹಲವು ಹೂವಿನ ತಂಡಗಳು ಸೇರಿಕೊಂಡು ಮಂಜುನಾಥನ ಸನ್ನಿಧಿಯನ್ನು ಸಿಂಗರಿಸಿವೆ. ಸುಮಾರು ಹತ್ತು ತಂಡಗಳ ಅಂದಾಜು ಮುನ್ನೂರು ಸದಸ್ಯರು ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ಅಲಂಕಾರಕ್ಕೆ ಮೂರು ಕ್ಯಾಂಟರ್ ಹೂಗಳು ಬಂದಿದ್ದು ಗುಲಾಬಿ, ಸೇವಂತಿಗೆ, ಕಾರ್ನಿಶ್, ಅಂಥೋರಿಯಂ, ವಿಲಿಯಮ್ಸ್ ಮುಂತಾದ ಅಲಂಕಾರಿಕ ಪುಷ್ಪಗಳು ಜನರ ಕಣ್ಮನ ಸೆಳೆಯುತ್ತಿವೆ. ಸೇವಾಕರ್ತರು ದೇವಾಲಯ ಸಿಂಗರಿಸಲು ಹನ್ನೆರಡಕ್ಕೂ ಹೆಚ್ಚು ಗಂಟೆಗಳ  ಕಾಲ ಶ್ರಮಿಸಿದ್ದಾರೆ. ಭಕ್ತರಿಗೆ ತೊಂದರೆಯಾಗದಂತೆ ತಡರಾತ್ರಿಯೂ ಕೆಲಸ ಮಾಡಿದ್ದು ದೇವಾಲಯದ ಮುಖ್ಯ ದ್ವಾರ, ಮುಂಭಾಗ, ಒಳಾಂಗಣ, ಭೋಜನ ಶಾಲೆ ಎಲ್ಲೆಡೆಯೂ ಹೂಗಳು ಕಂಗೊಳಿಸುತ್ತಿವೆ.

ಬಣ್ಣಬಣ್ಣದ ಹೂಗಳನ್ನು ಮಕ್ಕಳು, ಮಹಿಳೆಯರು ಆಸೆ ಕಂಗಳಿಂದ ನೋಡುತ್ತಾ ಫೋಟೊ ತೆಗೆದು ಸಂಭ್ರಮ ಪಡುತ್ತಿರುವ ದೃಶ್ಯಗಳು ಕಂಡುಬಂದವು.

"ಸುಮಾರು ಹತ್ತು ವರ್ಷಗಳಿಂದ ಶ್ರೀ ಕ್ಷೇತ್ರಕ್ಕೆ ಬಂದು ಈ ಸೇವೆ ಮಾಡುತ್ತಿದ್ದೇವೆ, ನಾವು ಭಕ್ತಿ, ಆಸಕ್ತಿಯಿಂದ ಬಂದು ಮಾಡುವ ಕೆಲಸದಲ್ಲಿ ತೃಪ್ತಿ ಪಡುತ್ತೇವೆ. ಇಲ್ಲಿ ಬರುವ ಭಕ್ತರು ಅಲಂಕಾರ ನೋಡಿ ಖುಷಿ ಪಟ್ಟರೆ ನಮಗದೇ ಸಂತೋಷ" ಎಂದು ಹೊಸಕೋಟೆಯ ಮನು ಫ್ಲವರ್ ಆರ್ಟ್ಸ್ ನ ಚಂದ್ರಕುಮಾರ್ ಅವರು ತಿಳಿಸಿದರು.

*ಗಣಪತಿ ದಿವಾಣ

Trending videos

Back to Top