CONNECT WITH US  

ಇದು ಅವಿಸ್ಮರಣೀಯ ಗಳಿಗೆ: ಕುಕ್‌

ಚೆಸ್ಟರ್‌ ಲೀ ಸ್ಟ್ರೀಟ್‌: 'ಇದು ನನ್ನ ಕ್ರಿಕೆಟ್‌ ಬದುಕಿನ ಅವಿಸ್ಮರಣೀಯ ಗಳಿಗೆ. ಆದರೆ ನನಗೆ ವೈಯಕ್ತಿಕ ದಾಖಲೆಗಳಿಗಿಂತ ಮಿಗಿಲಾದುದು ತಂಡದ ಗೆಲುವು...' ಎಂಬುದಾಗಿ ಇಂಗ್ಲೆಂಡ್‌ ನಾಯಕ ಅಲಸ್ಟೇರ್‌ ಕುಕ್‌ ಹೇಳಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಗಳಿಸಿದ ಮೊದಲ ಇಂಗ್ಲೆಂಡ್‌ ಆಟಗಾರ ಹಾಗೂ ಈ ಸಾಧನೆಗೈದ ಅತೀ ಕಿರಿಯ ಕ್ರಿಕೆಟಿಗನಾಗಿ ಇತಿಹಾಸ ನಿರ್ಮಿಸಿದ ಬಳಿಕ ಕುಕ್‌ ಬಿಬಿಸಿ ರೇಡಿಯೋದ 'ಟೆಸ್ಟ್‌ ಮ್ಯಾಚ್‌ ಸ್ಪೆಷಲ್‌' ಕಾರ್ಯಕ್ರಮದಲ್ಲಿ ಮಾತಾಡುತ್ತಿದ್ದರು. ಇದಕ್ಕೂ ಮುನ್ನ ಇಂಗ್ಲೆಂಡ್‌ ಪರ 9 ಸಾವಿರ ರನ್‌ ಗಳಿಸಿದ ಪ್ರಥಮ ಹಾಗೂ ಏಕೈಕ ಸಾಧಕನೆಂಬ ಹೆಗ್ಗಳಿಕೆಯೂ ಕುಕ್‌ ಅವರದಾಗಿತ್ತು. ಪ್ರಸಕ್ತ ಇಂಗ್ಲೆಂಡ್‌ ತಂಡದ ಮೆಂಟರ್‌ ಆಗಿರುವ, ಮಾಜಿ ಓಪನರ್‌ ಗ್ರಹಾಂ ಗೂಚ್‌ 8,900 ರನ್‌ ಗಳಿಸಿದ್ದು ಇಂಗ್ಲೆಂಡ್‌ ಕ್ರಿಕೆಟಿಗನೋರ್ವನ ಸರ್ವಾಧಿಕ ಗಳಿಕೆಯಾಗಿತ್ತು. 

'ನೀವು ಎಷ್ಟು ರನ್‌ ಗಳಿಸಿದ್ದೀರಿ ಎಂಬುದು ಮುಖ್ಯವಲ್ಲ, ನೀವು ಎಷ್ಟು ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದ್ದೀರಿ ಎಂಬುದು ಮುಖ್ಯ...' ಎಂದು ಕುಕ್‌ ಅಭಿಪ್ರಾಯಪಟ್ಟರು. ಈ ಗೆಲುವಿನ ಸಾಧನೆಯನ್ನು ಅವಲೋಕಿಸುವಾಗಲೂ ಕಳೆದೊಂದು ದಶಕದಿಂದ ಕುಕ್‌ ಮುಂಚೂಣಿಯಲ್ಲಿರುವುದನ್ನು ಗಮನಿಸಬಹುದು.

ಮುಂದೊಂದು ದಿನ ಸಚಿನ್‌ ತೆಂಡುಲ್ಕರ್‌ ಅವರ ಗರಿಷ್ಠ ರನ್‌ ದಾಖಲೆಯನ್ನು ಮುರಿಯುವ ಸಾಧ್ಯತೆ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಕ್‌, 'ಯಾರಿಗೆ ಗೊತ್ತು? ನಾನು 10 ಸಾವಿರ ರನ್‌ ಗಳಿಸಬಲ್ಲೆನೆಂಬ ಯೋಚನೆಯಲ್ಲೇ ಇರಲಿಲಲ್ಲ. ಈಗ ಇದು ಸಾಧ್ಯವಾಗಿದೆ. ಮುಂದೇನೋ ಗೊತ್ತಿಲ್ಲ. ನಾನು ವೈಯಕ್ತಿಕವಾಗಿ ಯೋಚಿಸುವುದನ್ನು ಬಿಟ್ಟು ಬೇರೆಡೆ ಗಮನ ನೀಡಬಯಸುತ್ತೇನೆ...' ಎಂದರು.

ನಾಯಕನಾಗಿ ಮಿಶ್ರಫ‌ಲ
ನಾಯಕನಾಗಿ ಅಲಸ್ಟೇರ್‌ ಕುಕ್‌ ಅವರಿಗೆ ಲಭಿಸಿದ್ದು ಮಿಶ್ರಫ‌ಲ. 2 ರ್ವಗಳ ಹಿಂದೆ ಕಾಂಗರೂ ನಾಡಿನ ಆ್ಯಶಸ್‌ ಸರಣಿಯಲ್ಲಿ 5-0 ವೈಟ್‌ವಾಶ್‌ ಅನುಭವಿಸಿದ್ದು ಕಹಿ ನೆನಪು. 2014ರಲ್ಲಿ ಶ್ರೀಲಂಕಾ ವಿರುದ್ಧ ತವರಿನಲ್ಲೇ ಎಡವಿದ್ದು ಇನ್ನೊಂದು ಮಾಸದ ಗಾಯ. ಆಗ ಕುಕ್‌ ನಾಯಕತ್ವ ತ್ಯಜಿಸಿ ಕೇವಲ ಬ್ಯಾಟಿಂಗಿಗೆ ತಮ್ಮನ್ನು ಮೀಸಲಿರಿಸಿದರೆ ಸಾಕು ಎಂದು ಇಂಗ್ಲೆಂಡಿನ ಮಾಜಿಗಳೇ ಅಭಿಪ್ರಾಯಪಟ್ಟಿದ್ದರು. ಆದರೆ ಕುಕ್‌ ಇಂಗಿತವೇ ಬೇರೆ ಇತ್ತು. ಜನರ ಅಭಿಪ್ರಾಯ ತಪ್ಪು ಎಂದು ಸಾಧಿಸಿ ತೋರಿಸಲು ಗಟ್ಟಿ ಮನಸ್ಸು ಮಾಡಿದರು. ಆ್ಯಶಸ್‌ ಮರಳಿ ತಂದರು, ದಕ್ಷಿಣ ಆಫ್ರಿಕಾವನ್ನು ಅವರದೇ ನೆಲದಲ್ಲಿ ಮಣಿಸಿದರು, ಈಗ ಶ್ರೀಲಂಕಾ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ! ಈ ಸಾಧನೆಯ ವೇಳೆ ಕುಕ್‌ ಇನ್ನೊಂದು ದಾಖಲೆಯನ್ನೂ ನಿರ್ಮಿಸಿದ್ದಾರೆ. ನಾಯಕನಾಗಿ ಅತೀ ಹೆಚ್ಚು ರನ್‌ ಗಳಿಸಿದ (3,829) ಇಂಗ್ಲೆಂಡಿನ ಮೈಕ್‌ ಆಥರ್ಟನ್‌ ದಾಖಲೆಯನ್ನು ಮುರಿದಿದ್ದಾರೆ.

ಸುನೀಲ್‌ ಗಾವಸ್ಕರ್‌ ಮೊದಲ ಹೀರೋ
1987, ಮಾರ್ಚ್‌ 7. ಟೆಸ್ಟ್‌ ಕ್ರಿಕೆಟಿಗೆ ಹಾಗೂ ಭಾರತದ ದಾಖಲೆಗಳ ವೀರ ಸುನೀಲ್‌ ಗಾವಸ್ಕರ್‌ ಪಾಲಿಗೆ ಇದು ಸ್ಮರಣೀಯ ದಿನ. ಪ್ರವಾಸಿ ಪಾಕಿಸ್ಥಾನ ವಿರುದ್ಧದ ಅಹ್ಮದಾಬಾದ್‌ ಟೆಸ್ಟ್‌ ಪಂದ್ಯದಲ್ಲಿ ಪಾಕ್‌ ಬೌಲರ್‌ ಇಜಾಜ್‌ ಫ‌ಖೀ ಅವರ ಎಸೆತಕ್ಕೆ ಒಂಟಿ ರನ್‌ ತೆಗೆದುಕೊಂಡ ಗಾವಸ್ಕರ್‌ ತಮ್ಮ ಗಳಿಕೆಯನ್ನು 57ರಿಂದ 58ಕ್ಕೆ ಏರಿಸಿಕೊಳ್ಳುತ್ತಾರೆ. ಈ ಒಂದು ರನ್‌ ನೂತನ ಇತಿಹಾಸವೊಂದಕ್ಕೆ ಕಾರಣವಾಗುತ್ತದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಪೂರ್ತಿಗೊಳಿಸಿದ ವಿಶ್ವದ ಪ್ರಪ್ರಥಮ ಆಟಗಾರನೆಂಬ ಹೆಗ್ಗಳಿಕೆಗೆ ಗಾವಸ್ಕರ್‌ ಪಾತ್ರರಾಗುತ್ತಾರೆ!

ಗಾವಸ್ಕರ್‌ ಈ ಮೈಲುಗಲ್ಲು ನೆಟ್ಟು 3 ದಶಕವೇ ಪೂರ್ತಿಯಾಗುತ್ತ ಬಂದಿದೆ. ಆ ಕಾಲಕ್ಕೆ ಇದೊಂದು ಮಹಾನ್‌ ಸಾಧನೆಯಾಗಿತ್ತು. ಇದನ್ನು ಮುರಿಯುವುದು ಸುಲಭವಲ್ಲ ಎಂಬುದು ಅಂದಿನ ನಂಬಿಕೆಯಾಗಿತ್ತು. ಆದರೆ ಈಗ 10 ಸಾವಿರ ರನ್‌ ಸಾಧಕರ ಸಂಖ್ಯೆ 12ಕ್ಕೆ ಏರಿದೆ. ಅಲಸ್ಟೇರ್‌ ಕುಕ್‌ ಈ ಯಾದಿಗೆ ಸೇರ್ಪಡೆಗೊಂಡ ಇತ್ತೀಚಿನ ಆಟಗಾರ. ಅಂದಹಾಗೆ ಈ ಯಾದಿಯಲ್ಲಿ ಗಾವಸ್ಕರ್‌ಗೆ 11ನೇ ಸ್ಥಾನ! 

1974ರಲ್ಲಿ ವೆಸ್ಟ್‌ ಇಂಡೀಸಿನ ಸರ್‌ ಗ್ಯಾರಿ ಸೋಬರ್ಸ್ ನಿವೃತ್ತರಾಗುವಾಗ 8,032 ರನ್‌ ಪೇರಿಸಿದ್ದು ವಿಶ್ವದಾಖಲೆಯಾಗಿತ್ತು. 1982ರಲ್ಲಿ ಭಾರತದೆದುರಿನ ಸರಣಿಯಲ್ಲಿ ಇಂಗ್ಲೆಂಡಿನ ಜೆಫ್ ಬಾಯ್ಕಟ್‌ ಇದನ್ನು ಹಿಂದಿಕ್ಕಿದರು. ಮರು ವರ್ಷವೇ ಗಾವಸ್ಕರ್‌ ರನ್ನಿನ ಎವರೆಸ್ಟ್‌ ಏರಿದರು. 1987ರಲ್ಲಿ 10 ಸಾವಿರ ರನ್‌ ಪೂರ್ತಿಗೊಳಿಸಿದರು. ಅನಂತರ ಗಾವಸ್ಕರ್‌ ಆಡಿದ್ದು ಒಂದು ಟೆಸ್ಟ್‌ ಮಾತ್ರ. 10 ಸಾವಿರ ರನ್‌ ಸಾಧಕರ ಯಾದಿಯಲ್ಲೀಗ ಗಾವಸ್ಕರ್‌ ಒಳಗೊಂಡಂತೆ ಭಾರತದ ಮೂವರಿದ್ದಾರೆ. ಸಚಿನ್‌ ತೆಂಡುಲ್ಕರ್‌ ಸರ್ವಾಧಿಕ 15,921 ರನ್‌ ಬಾರಿಸಿ ವಿಶ್ವದಾಖಲೆಯ ಸರದಾರನೆನಿಸಿದ್ದಾರೆ. ರಾಹುಲ್‌ ದ್ರಾವಿಡ್‌ 13,288 ರನ್ನಿನೊಂದಿಗೆ 4ನೇ ಸ್ಥಾನ ಅಲಂಕರಿಸಿದ್ದಾರೆ.


Trending videos

Back to Top