CONNECT WITH US  

ರಿಯೋ ಒಲಿಂಪಿಕ್ಸ್‌ 16 ದಿನ ಬಾಕಿ

ಥಳಕು ಬಳುಕಿನ ಸಾಂಬಾ ನೃತ್ಯ, ಶ್ರೇಷ್ಠ ಫ‌ುಟ್ಬಾಲಿಗರ ತವರೂರು, ಕಾಫೀ ನಾಡು ಬ್ರಜಿಲ್‌ ಇದೀಗ ಒಲಿಂಪಿಕ್ಸ್‌ ಸಂಭ್ರಮಕ್ಕೆ ಸಜ್ಜಾಗಿದೆ. ಆ. 5ರಿಂದ 21ರ ವರೆಗೆ ಬ್ರಝಿಲ್‌ನ ರಿಯೋ ಡಿ ಜನೈರೋದಲ್ಲಿ 31ನೇ ಒಲಿಂಪಿಕ್ಸ್‌ ಕ್ರೀಡಾಕೂಟ ನಡೆಯಲಿದೆ. ವಿಶ್ವದ 200ಕ್ಕೂ ಹೆಚ್ಚು ರಾಷ್ಟ್ರಗಳ 10500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿರುವ ಕ್ರೀಡಾಕೂಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಂಥೆಯೇ ಜಗತ್ತಿನೆಲ್ಲೆಡೆ ಒಲಿಂಪಿಕ್ಸ್‌ನ ಕಾವು ಶುರುವಿಟ್ಟುಕೊಂಡಿದೆ. 3 ಸಾವಿರ ವರ್ಷಗಳ ಹಿಂದೆ ಗ್ರೀಸ್‌ ದೇಶದ ಮೂಲೆಯಲ್ಲಿ ರಸ್ತೆ ಓಟದ ಸ್ಪರ್ಧೆಯ ಮೂಲಕ ಆರಂಭವಾದ ಈ ಕ್ರೀಡಾಕೂಟ ಇಂದು ಜಗತ್ತಿನ ಹೆಮ್ಮೆ. ಇಡೀ ವಿಶ್ವವನ್ನೇ ಒಂದು ತಿಂಗಳ ಕಾಲ ತನ್ನತ್ತ ಸೆಳೆಯಲಿರುವ ಈ ಕ್ರೀಡಾಕೂಟದ ಕುರಿತು ಇಲ್ಲಿ ಸರಣಿ ರೂಪದ ಮಾಹಿತಿ ಮೂಡಿಬರಲಿದೆ. ಮೊದಲ ದಿನ ಪ್ರಾಚೀನ ಮತ್ತು ಆಧುನಿಕ ಒಲಿಂಪಿಕ್ಸ್‌ನ ಕುರಿತ ಮಾಹಿತಿ ಇಲ್ಲಿದೆ...

ಅಪ್ಪ-ಮಗನ ಜಗಳದಲಿ ಜನ್ಮತಾಳಿತು ಒಲಿಂಪಿಕ್ಸ್‌
ಗ್ರೀಕರ ದೇವತೆಯಾದ ಜೀಅಸ್‌, ವಿಶ್ವದ ಮೇಲಿನ ಅಧಿಪತ್ಯದ ವಿಷಯದಲ್ಲಿ ತಂದೆಯ ಜತೆಗೇ ಕಾಳಗವಾಡಿ ಗೆಲ್ಲುತ್ತಾನೆ. ಈ ಹಿನ್ನೆಲೆಯಲ್ಲಿ ಒಲಿಂಪಿಯಾ ಎಂಬ ನಗರದಲ್ಲಿ ಜನರು ಜೀಅಸ್‌ನ ದೊಡ್ಡ ಪ್ರತಿಮೆ ಮತ್ತು ದೇಗುಲ ಸ್ಥಾಪಿಸಿ ಆತನನ್ನು ಆರಾಧಿಸುತ್ತಾರೆ. ಮುಂದೆ ಜೀಅಸ್‌ನ ಪ್ರಾರ್ಥಿಸುವ ಧಾರ್ಮಿಕ ಆಚರಣೆ, ಹಬ್ಬಗಳು ಪ್ರಾರಂಭವಾಗುತ್ತದೆ. ಹೀಗೆ ಹಬ್ಬಗಳ ವೇಳೆ ನಡೆದ ಸ್ಪರ್ಧೆಯೇ ಮುಂದೆ ಒಲಿಂಪಿಕ್ಸ್‌ ಎಂದು ಕರೆಸಿಕೊಳ್ಳುತ್ತದೆ ಎಂಬುದು ಒಂದು ಕತೆ ಆದರೆ ಒಲಿಂಪಿಕ್ಸ್‌ ಜನ್ಮತಾಳಿದ ಕುರಿತು ಇನ್ನೂ ಹಲವು ಕತೆಗಳಿವೆ.

ಅಡುಗೆ ಭಟ್ಟನೇ ಮೊದಲ ವಿಜೇತ!
ಒಲಿಂಪಿಕ್ಸ್‌ನ ತವರೂರು ಗ್ರೀಸ್‌ ದೇಶ. ಮೊದಲ ಕ್ರೀಡಾಕೂಟ ನಡೆದಿದ್ದು ಕ್ರಿಸ್ತಪೂರ್ವ 776ರಲ್ಲಿ. ಮೊದಲ ಕ್ರೀಡಾಕೂಟದಲ್ಲಿ ಇದ್ದಿದ್ದು ಒಂದೇ ಸ್ಪರ್ಧೆ. ಅದು 192 ಮೀಟರ್‌ ಓಟ. ಮೊದಲ ಒಲಿಂಪಿಕ್ಸ್‌ನ ಮೊದಲ ಸ್ಪರ್ಧೆ ಗೆದ್ದಿದ್ದು ಕೊರೊಬಸ್‌ ಎಂಬ ಅಡುಗೆ ಭಟ್ಟ. ಆಗ ಪ್ರತಿ 4 ವರ್ಷಗಳಿಗೊಮ್ಮೆ ಕ್ರೀಡಾಕೂಟ ನಡೆಯುತ್ತಿತ್ತು. ಮೊದಲ 13 ಒಲಿಂಪಿಕ್ಸ್‌ಗಳಲ್ಲೂ ಕೇವಲ ಒಂದು ಸ್ಪರ್ಧೆ ಮಾತ್ರ ಇತ್ತು. ಹಲವು ಶತಮಾನಗಳ ಕಾಲ ಗ್ರೀಸರಿಗೆ ಮಾತ್ರ ಕ್ರೀಡೆಯಲ್ಲಿ ಭಾಗಿಯಾಗುವ ಅವಕಾಶ ಇತ್ತು. ಮಹಿಳೆಯರು ಭಾಗವಹಿಸುವುದಿರಲಿ, ನೋಡಿದರೂ, ಗಲ್ಲು ಶಿಕ್ಷೆ ವಿಧಿಸಲಾಗುತ್ತಿತ್ತು.

 ವಿಜೇತರಿಗೆ ಆಲಿವ್‌ ಎಲೆಯ ಕಿರೀಟ
ಒಲಿಂಪಿಕ್ಸ್‌ನಲ್ಲಿ ವಿಜೇತರಾದವರಿಗೆ ಹಲವು ಶತಮಾನಗಳ ಕಾಲ, ಜೀಅಸ್‌ ದೇಗುಲದ ಹಿಂಬದಿಯಲ್ಲೇ ಬೆಳೆದ ಆಲಿವ್‌ ಮರದ ಎಲೆಗಳಿಂದ ಮಾಡಿದ ಕಿರೀಟವನ್ನು ಬಹುಮಾನವಾಗಿ ವಿಜೇತರಿಗೆ ತೊಡಿಸಲಾಗುತ್ತಿತ್ತು. ಸ್ಪರ್ಧೆ ಗ್ರೀಕರ ಜೀವನದ ಅವಿಭಾಜ್ಯ ಅಂಗವಾಗಿತ್ತು.

 ಪ್ರಾಚೀನ ಒಲಿಂಪಿಕ್ಸ್‌ನ ಅವನತಿ
ಕ್ರಿಸ್ತಪೂರ್ವ 100ರಲ್ಲಿ ರೋಮನ್ನರು ಗ್ರೀಸ್‌ ಮೇಲೆ ದಾಳಿ ಮಾಡಿದ ಬಳಿಕ ಒಲಿಂಪಿಕ್ಸ್‌ ಅವನತಿ ಹಾದಿ ಹಿಡಿಯಿತು. ಕ್ರೀಡಾಕೂಟದಲ್ಲಿ ವಿಜೇತರಾಗಲು ಮೋಸ, ವಂಚನೆ ಪ್ರಾರಂಭವಾಯಿತು. ಒಲಿಂಪಿಯಾದಲ್ಲಿ ಇದ್ದ ಗ್ರೀಕರ ಆರಾಧ್ಯ ದೇವತೆ ಜೀಸ್‌ನ ಪ್ರತಿಮೆ ಬದಲಾಗಿ ಕಾನ್ಸ್‌ಟಾಂಟಿನೋಪೆಲ್‌ನ ಪ್ರತಿಮೆ ಸ್ಥಾಪನೆ ಆಯಿತು. 426ರಲ್ಲಿ ರೋಮನ್‌ ದೊರೆ ಥಿಯೋಡೋಸಿಸ್‌ ಜೀಅಸ್‌ ದೇಗುಲ ಧ್ವಂಸಗೊಳಿಸಿದ. ಅನಂತರ ಬಂದ ಭಾರೀ ಪ್ರವಾಹ ಒಲಿಂಪಿಯಾ ನಗರವನ್ನೇ ಸಮಾಧಿ ಮಾಡಿತು. ಹೀಗೆ ಸತತ 12 ಶತಮಾನಗಳ ಕಾಲ ನಡೆದ ಪ್ರಾಚೀನ ಒಲಿಂಪಿಕ್ಸ್‌ ಅವನತಿ ಕಂಡಿತು.

ಆಧುನಿಕ ಒಲಿಂಪಿಕ್ಸ್‌ ಉಗಮ
1896ರಲ್ಲಿ ಗ್ರೀಕ್‌ನ ಅಥೆನ್ಸ್‌ನಲ್ಲಿ ಆಧುನಿಕ ಒಲಿಂಪಿಕ್ಸ್‌ ಜನ್ಮತಾಳಿತು. ಇದರಲ್ಲಿ 14 ರಾಷ್ಟ್ರಗಳ 241 ಕ್ರೀಡಾಪಟುಗಳು 43 ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದರು. 1994ರ ಬಳಿಕ ಬೇಸಗೆ ಮತ್ತು ಚಳಿಗಾಲದ ಒಲಿಂಪಿಕ್ಸ್‌ ಪ್ರತ್ಯೇಕವಾಗಿ ನಡೆಯಲು ಆರಂಭವಾಯಿತು. ಇದಲ್ಲದೆ ಇತ್ತೀಚಿನ ದಶಕಗಳಲ್ಲಿ ಪ್ಯಾರಾ ಒಲಿಂಪಿಕ್ಸ್‌ ಮತ್ತು ಯುವ ಒಲಿಂಪಿಕ್ಸ್‌ ಕೂಡ ನಡೆಯುತ್ತಿದೆ. ಆಧುನಿಕ ಒಲಿಂಪಿಕ್ಸ್‌ ಇದುವರೆಗೆ 23 ದೇಶಗಳ 44 ನಗರಗಳಲ್ಲಿ ನಡೆದಿದೆ. ಅಮೆರಿಕ ಅತಿ ಹೆಚ್ಚು 8 ಬಾರಿ ಆತಿಥ್ಯ ವಹಿಸಿದೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ 207 ದೇಶಗಳ 10,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕೊಸವೋ ಮತ್ತು ದಕ್ಷಿಣ ಸೂಡಾನ್‌ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಪ್ರವೇಶ ಪಡೆದಿವೆ.

5 ರಾಷ್ಟ್ರಗಳ ಹಿರಿಮೆ
ಗ್ರೀಸ್‌, ಆಸ್ಟ್ರೇಲಿಯ, ಫ್ರಾನ್ಸ್‌, ಬ್ರಿಟನ್‌ ಮತ್ತು ಸ್ವಿಟ್ಸರ್‌ಲ್ಯಾಂಡ್‌ ದೇಶಗಳು ಮಾತ್ರವೇ ಆಧುನಿಕ ಒಲಿಂಪಿಕ್ಸ್‌ ಆರಂಭದ ಬಳಿಕ ಪ್ರತಿ ಬಾರಿಯೂ ಭಾಗವಹಿಸಿದ ಹಿರಿಮೆ ಹೊಂದಿವೆ. ಉಳಿದೆಲ್ಲಾ ದೇಶಗಳು ಒಂದಲ್ಲಾ ಒಂದು ಕಾರಣದಿಂದ ಒಂದಲ್ಲಾ ಒಂದು ಬಾರಿ ಭಾಗವಹಿಸುವಿಕೆಯಿಂದ ತಪ್ಪಿಸಿಕೊಂಡಿವೆ.

 ಒಲಿಂಪಿಕ್ಸ್‌ ಮತ್ತು ಭಾರತ
1900ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತ ಮೊದಲ ಬಾರಿ ಸ್ಪರ್ಧಿಸಿತ್ತು. ನಾರ್ಮನ್‌ ಪ್ರಿಟ್‌ಚಾರ್ಡ್‌ ಆ್ಯತ್ಲೆಟಿಕ್ಸ್‌ನಲ್ಲಿ ಭಾಗವಹಿಸಿ 2 ಬೆಳ್ಳಿ ಪದಕ ಗೆದ್ದಿದ್ದರು. ಅವರು ಭಾರತ ಮಾತ್ರವಲ್ಲ, ಪದಕ ಗೆದ್ದ ಮೊದಲ ಏಶ್ಯ ಮೂಲದ ವ್ಯಕ್ತಿ ಎಂಬ ಹಿರಿಮೆ ಕೂಡ ಹೊಂದಿದ್ದಾರೆ. ಭಾರತ ಇದುವರೆಗೆ ಒಲಿಂಪಿಕ್ಸ್‌ನಲ್ಲಿ 26 ಪದಕ ಗೆದ್ದಿದೆ, ಇದರಲ್ಲಿ 9 ಚಿನ್ನ ಸೇರಿದೆ.

Trending videos

Back to Top