CONNECT WITH US  

ಒಲಿಂಪಿಕ್ಸ್‌  ಹಿನ್ನೋಟ

ಪ್ರತಿಜ್ಞಾ ವಿಧಿ ಶುರುವಾಗಿದ್ದು ಈ ಒಲಿಂಪಿಕ್ಸ್‌ನಿಂದ
-7ನೇ ಒಲಿಂಪಿಕ್ಸ್‌.......1920
-ಆತಿಥೇಯ ರಾಷ್ಟ್ರ......ಆಂಟ್‌ವರ್ಪ್‌, ಬೆಲ್ಜಿಯಂ
-ಗರಿಷ್ಠ ಪದಕ ಪಡೆದ ದೇಶ.......ಅಮೆರಿಕ
1ನೇ ವಿಶ್ವ ಮಹಾಯುದ್ಧದ ನಂತರ ನಡೆದ ಒಲಿಂಪಿಕ್ಸ್‌ ಇದಾಗಿರುವುದರಿಂದ ಯುದ್ಧದ ಕರಿ ನೆರಳು ಒಲಿಂಪಿಕ್ಸ್‌ ಕೂಟದ ಮೇಲೆ ಬಿದ್ದಿತ್ತು. ಜರ್ಮನಿ, ಆಸ್ಟ್ರೇಲಿಯಾ, ಹಂಗೇರಿ, ಬೆಲ್ಜಿಯಂ, ಟರ್ಕಿ ಸೇರಿ ಹಲವು ರಾಷ್ಟ್ರಗಳ ಮೇಲೆ ನಿಷೇಧ ಹೇರಲಾಗಿತ್ತು. ಹೀಗಾಗಿ ಕೂಟದಲ್ಲಿ ಕೇವಲ 29 ರಾಷ್ಟ್ರಗಳು ಮಾತ್ರ ಪಾಲ್ಗೊಂಡಿದ್ದವು. ಆ.14ರಿಂದ ಸೆ.12ರವರೆಗೆ ವಿವಿಧ ಕ್ರೀಡೆಗಳು ನಡೆದವು. 2026 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಅಮೆರಿಕಾ, ಸ್ವೀಡನ್‌, ಇಂಗ್ಲೆಂಡ್‌ ರಾಷ್ಟ್ರಗಳು ಹೆಚ್ಚಿನ ಪದಕ ಪಡೆದವು.

ವೈಶಿಷ್ಯ:
ಮೊದಲನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕ್ರೀಡಾಪಟುಗಳು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು. ಇಲ್ಲಿಂದ ನಂತರ ಎಲ್ಲಾ ಒಲಿಂಪಿಕ್ಸ್‌ನಲ್ಲೂ ಪ್ರತಿಜ್ಞಾನಿಧಿಯನ್ನು ಬೋಧಿಸಲಾಗುತ್ತಿದೆ.

ಭಾರತದ ಸಾಧನೆ:
ಮೂರು ಅಥ್ಲೀಟ್‌ಗಳು ಮತ್ತು ಇಬ್ಬರು ಕುಸ್ತಿಪಟುಗಳು ಪಾಲ್ಗೊಂಡಿದ್ದರು. ಪದಕ ಪಡೆಯುವಲ್ಲಿ ಭಾರತ ವಿಫ‌ಲವಾಯಿತು.

ಕೂಟ ಯಶಸ್ವಿಯಾದರೂ ಫ್ರಾನ್ಸ್‌ಗೆ ಆರ್ಥಿಕ ನಷ್ಟ
-8ನೇ ಒಲಿಂಪಿಕ್ಸ್‌.......1924
-ಆತಿಥೇಯ ರಾಷ್ಟ್ರ.......ಪ್ಯಾರಿಸ್‌, ಫ್ರಾನ್ಸ್‌
-ಗರಿಷ್ಠ ಪದಕ ಪಡೆದ ರಾಷ್ಟ್ರ.....ಅಮೆರಿಕ
ಮೇ 4ರಿಂದ ಜುಲೈ 27ರವರೆಗೆ ನಡೆದ ಒಲಿಂಪಿಕ್ಸ್‌ಗೆ ಫ್ರಾನ್ಸ್‌ ಆತಿಥ್ಯ ವಹಿಸಿತ್ತು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ವೀಕ್ಷಿಸಿದರು. 17 ಕ್ರೀಡೆಗಳು ನಡೆದವು. ಅಮೆರಿಕ 45 ಚಿನ್ನ, 27 ಬೆಳ್ಳಿ, 27 ಕಂಚಿನ ಪದಕ ಪಡೆದು ಪದಕಗಳಿಕೆಯಲ್ಲಿ ಮೊದಲನೇ ಸ್ಥಾನ ಪಡೆಯಿತು. ಫಿನ್ಲಂಡ್‌, ಫ್ರಾನ್ಸ್‌ ರಾಷ್ಟ್ರಗಳು ಪದಕಗಳಿಕೆಯಲ್ಲಿ ನಂತರದ ಸ್ಥಾನ ಪಡೆದವು. ಒಟ್ಟು 44 ರಾಷ್ಟ್ರಗಳಿಂದ 135 ಮಹಿಳಾ ಕ್ರೀಡಾಪಟುಗಳು ಸೇರಿದಂತೆ 3089 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ಭಾರತದ ಸಾಧನೆ-
ಭಾರತದಿಂದ 7 ಅಥ್ಲೀಟ್‌ಗಳು, ಎರಡು ಮಹಿಳಾ ಆಟಗಾರರು ಸೇರಿದಂತೆ 8 ಟೆನಿಸ್‌ ಆಟಗಾರರು ಪಾಲ್ಗೊಂಡಿದ್ದರು. ಪದಕ ಪಡೆಯುವಲ್ಲಿ ವಿಫ‌ಲವಾಗಿದೆ.

ವೈಶಿಷ್ಯ-
ಇದು ಪ್ಯಾರಿಸ್‌ಗೆ ಎರಡನೇ ಒಲಿಂಪಿಕ್ಸ್‌ ಆತಿಥ್ಯವಾಗಿತ್ತು. 60 ಸಾವಿರಕ್ಕೂ ಅಧಿಕಮಂದಿ ಬಂದು ವೀಕ್ಷಿಸಿದ್ದು ದಾಖಲೆಯಾಗಿತ್ತು. ಆದರೂ ಶೇ.50ಕ್ಕೂ ಅಧಿಕ ಆರ್ಥಿಕ ನಷ್ಟ ಅನುಭವಿಸಿತ್ತು.

ಭಾರತಕ್ಕೆ ಹಾಕಿ ಮೂಲಕ ಸಿಕ್ಕಿತು ಮೊದಲ ಚಿನ್ನ
9ನೇ ಒಲಿಂಪಿಕ್ಸ್‌......1928
ಆತಿಥೇಯ ರಾಷ್ಟ್ರ......ಆಮ್‌ಸ್ಟರ್‌ಡಾಂ, ಹಾಲೆಂಡ್‌
ಗರಿಷ್ಠ ಪದಕ ಪಡೆದ ರಾಷ್ಟ್ರ......ಅಮೆರಿಕ
ಜುಲೈ 8ರಿಂದ ಆಗಸ್ಟ್‌ 12ರವರೆಗೆ ವಿವಿಧ ಕ್ರೀಡೆಗಳು ನಡೆದವು. ಮಾಲ್ಟಾ, ಮನಾಮಾ ಮತ್ತು ಜಿಂಬಾಬ್ವೆ ರಾಷ್ಟ್ರಗಳು ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡವು. ಜರ್ಮನಿ, ಆಸ್ಟ್ರೇಲಿಯಾ, ಹಂಗೇರಿ, ಬೆಲ್ಜಿಯಂ, ಟರ್ಕಿ ರಾಷ್ಟ್ರಗಳ ಮೇಲೆ ಹಾಕಿರುವ ನಿಷೇಧವನ್ನು ಹಿಂದಕ್ಕೆ ಪಡೆಯಲಾಗಿತ್ತು. ಹೀಗಾಗಿ ಈ ರಾಷ್ಟ್ರಗಳು ಪಾಲ್ಗೊಂಡಿದ್ದವು. ಒಟ್ಟು 46 ರಾಷ್ಟ್ರಗಳಿಂದ 2883 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಅಮೆರಿಕಾ, ಜರ್ಮನಿ, ಫಿನ್ಲಂಡ್‌ ಹೆಚ್ಚಿನ ಪದಕ ಪಡೆದವು.

ಭಾರತದ ಸಾಧನೆ: ಒಲಿಂಪಿಕ್ಸ್‌ ಇತಿಹಾಸದಲ್ಲಿಯೇ ಮೊದಲ ಬಾರಿ ಭಾರತ ಹಾಕಿ ತಂಡ ಚಿನ್ನದ ಪದಕ ಪಡೆಯಿತು. ಇದು ಭಾರತಕ್ಕೆ ಸಿಕ್ಕ ಮೊದಲ ಚಿನ್ನದ ಪದಕವಾಗಿದೆ.

ವೈಶಿಷ್ಟé:  ಮಹಿಳೆಯರ ಅಥ್ಲೆಟಿಕ್ಸ್‌ ಮತ್ತು ಮಹಿಳೆಯರ ಜಿಮ್ನಾಸ್ಟಿಕ್‌ಗೆ ಮೊದಲ ಬಾರಿಗೆ ಅವಕಾಶ ನೀಡಲಾಯಿತು.

ರಿಯೋ ಕ್ರೀಡಾ ಪರಿಚಯ
ಕೆನೋಯ್‌ ಸ್ಪ್ರಿಂಟ್‌ (ದೋಣಿ ಸ್ಪರ್ಧೆ)

1936ರ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ದೋಣಿ ಸ್ಪರ್ಧೆಯನ್ನು ಸೇರ್ಪಡೆ ಮಾಡಲಾಯಿತು. ಶಾಂತವಾಗಿರುವ ನೀರಿನಲ್ಲಿ ನಡೆಯುವ ದೋಣಿ  ಸ್ಪರ್ಧೆಯಿದು. ಒಬ್ಬರು, ಇಬ್ಬರು, ನಾಲ್ವರ ಪ್ರತ್ಯೇಕ ದೋಣಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಒಟ್ಟು ಈ ಕ್ರೀಡೆಯಲ್ಲಿ 12 ಚಿನ್ನದ ಪದಕಗಳಿದ್ದು, ಪುರುಷರಿಗೆ 8 ಮತ್ತು ಮಹಿಳೆಯರಿಗೆ 4 ಚಿನ್ನದ ಪದಕಗಳಿರುತ್ತವೆ. 200 ಮೀ., 500 ಮೀ. ಮತ್ತು 1ಕಿ.ಮೀ. ದೂರಕ್ಕೆ ಸ್ಪರ್ಧೆಗಳಿರುತ್ತವೆ. ಸ್ಪರ್ಧಾಳುಗಳು ತಮಗೆ ನಿಗದಿ ಪಡಿಸಿದ ಟ್ರ್ಯಾಕ್‌ನಲ್ಲಿಯೇ ಸಾಗಬೇಕು. ಅತಿ ಕಡಿಮೆ ಸಮಯದಲ್ಲಿ ಗುರಿಮುಟ್ಟಿದವರು ವಿಜೇತರಾಗುತ್ತಾರೆ.
ಭಾರತದ ಸ್ಪರ್ಧೆ: ಈ ಕ್ರೀಡೆಯಲ್ಲಿ ಭಾರತ ಸ್ಪರ್ಧಿಸುತ್ತಿಲ್ಲ.

ಸೈಕ್ಲಿಂಗ್‌ ಬಿಎಂಎಕ್ಸ್‌
ಸೈಕ್ಲಿಂಗ್‌ ಬಿಎಂಎಕ್ಸ್‌ ಸಾಮಾನ್ಯ ಸೈಕ್ಲಿಂಗ್‌ನಂತೆ ಅಲ್ಲ. ಹಲವಾರು ಅಡೆತಡೆಗಳು, ಏರುತಗ್ಗುಗಳನ್ನು ದಾಟಿ ಮುಂದೆ ಸಾಗಬೇಕು. ಈ ಕ್ರೀಡೆಗೆ ಬಿಎಂಎಕ್ಸ್‌ ಬೈಕ್‌ಗಳನ್ನು ಬಳಸಲಾಗುತ್ತದೆ. 2008ರ ಬೀಜಿಂಗ್‌ ಒಲಿಂಪಿಕ್ಸ್‌ನಿಂದ ಈ ಕ್ರೀಡೆ ಸೇರ್ಪಡೆಗೊಂಡಿದೆ. ಪುರುಷರ ಮತ್ತು ಮಹಿಳೆಯರ ವೈಯಕ್ತಿಕ ಸ್ಪರ್ಧೆಗಳು ನಡೆಯಲಿವೆ. 300ರಿಂದ 400 ಮೀಟರ್‌ನ ಟ್ರ್ಯಾಕ್‌ ಇದ್ದು, ಉಬ್ಬು ದಿಣ್ಣೆಗಳು ಮತ್ತು ತಿರುವುಗಳನ್ನು ಮಾಡಲಾಗಿರುತ್ತದೆ. ಜಿಗಿಯುತ್ತಾ, ಇಳಿಯುತ್ತಾ ಗುರಿಯನ್ನು ಮಟ್ಟಬೇಕು.
ಭಾರತದ ಸ್ಪರ್ಧೆ: ಈ ಕ್ರೀಡೆಯಲ್ಲಿ ಭಾರತ ಭಾಗವಹಿಸುತ್ತಿಲ್ಲ.

ಸೈಕ್ಲಿಂಗ್‌ ಮೌಂಟೇನ್‌ ಬೈಕ್‌
ಸೈಕಲ್‌ ಸವಾರರು ಕಡಿದಾದ ಬೆಟ್ಟಗುಡ್ಡಗಳನ್ನು ಹತ್ತಿ, ನೈಸರ್ಗಿಕ ಅಡೆತಡೆಗಳನ್ನು ನಿವಾರಿಸಿಕೊಂಡು ಸಾಗುವ ಸಾಹಸಮಯ ಕ್ರೀಡೆಯೇ ಸೈಕ್ಲಿಂಗ್‌ ಮೌಂಟೇನ್‌ ಬೈಕ್‌. 1996ರಲ್ಲಿ ಒಲಿಂಪಿಕ್ಸ್‌ ಕ್ರೀಡೆಗೆ ಸೇರ್ಪಡೆ ಮಾಡಲಾಯಿತು. ಪುರುಷರ ಮತ್ತು ಮಹಿಳೆಯರ ವಯಕ್ತಿಕ ವಿಭಾಗದಲ್ಲಿ ಸ್ಪರ್ಧೆಗಳು ನಡೆಯುತ್ತವೆ. ವಿವಿಧ ಹಂತದಲ್ಲಿ ಸ್ಪರ್ಧೆಯನ್ನು ನಡೆಸಲಾಗುತ್ತದೆ. ಎಲ್ಲ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಅಂತಿಮ ಗೆರೆಯನ್ನು ಮುಟ್ಟುವ ಮೊದಲ ಸ್ಪರ್ಧಿ ವಿಜೇತರಾಗುತ್ತಾರೆ. ಈ ಕ್ರೀಡೆಗೆ ವಿಶೇಷಗಾಗಿ ವಿನ್ಯಾಸಗೊಳಿಸಿದ ಮೌಂಟೇನ್‌ ಬೈಕ್‌ ಅನ್ನು ಬಳಸಲಾಗುತ್ತದೆ. ಆಟಗಾರರು ಗುರಿ ತಲುಪಲು 80ರಿಂದ 100 ಕಿ.ಮೀ. ವರೆಗೆ ಕ್ರಮಿಸಬೇಕು.

ಭಾರತದ ಸ್ಪರ್ಧೆ: ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ನಲ್ಲಿ ಭಾರತ ಸ್ಪರ್ಧಿಸುತ್ತಿಲ್ಲ.

Trending videos

Back to Top