CONNECT WITH US  

ಯುಎಸ್‌ ಓಪನ್‌: ಜೊಕೋವಿಕ್‌-ವಾವ್ರಿಂಕ ಫೈನಲ್‌ ವಾರ್‌

ನ್ಯೂಯಾರ್ಕ್‌: ಹಾಲಿ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ ಯುಎಸ್‌ ಓಪನ್‌ ಕಿರೀಟ ಉಳಿಸಿಕೊಳ್ಳುವ ಹಾದಿಯಲ್ಲಿ ಅಂತಿಮ ನಿಲ್ದಾಣ ತಲುಪಿದ್ದಾರೆ. ಪ್ರಶಸ್ತಿ ಕಾಳಗದಲ್ಲಿ ಸ್ವಿಟ್ಸರ್‌ಲ್ಯಾಂಡಿನ ಸ್ಟಾನಿಸ್ಲಾಸ್‌ ವಾವ್ರಿಂಕ ಈ ನಂ.1 ಸರ್ಬಿಯನ್‌ಗೆ ಸವಾಲಿಕ್ಕಲಿದ್ದಾರೆ. ಭಾರತೀಯ ಕಾಲಮಾನ ಪ್ರಕಾರ ಈ ಸ್ಪರ್ಧೆ ರವಿವಾರ ಮಧ್ಯರಾತ್ರಿ ಬಳಿಕ, 1.30ಕ್ಕೆ ಆರಂಭಗೊಳ್ಳಲಿದೆ.

ಜೊಕೋವಿಕ್‌ ಮತ್ತು ವಾವ್ರಿಂಕ ಇಬ್ಬರೂ 4 ಸೆಟ್‌ಗಳ ಸೆಮಿಫೈನಲ್‌ ಸೆಣಸಾಟದಲ್ಲಿ ಗೆಲುವು ಒಲಿಸಿಕೊಂಡರು. ನಂ.1 ಜೊಕೋ 6-3, 6-2, 3-6, 6-2 ಅಂತರದಿಂದ ಫ್ರಾನ್ಸ್‌ನ ಗೇಲ್‌ ಮಾನ್‌ಫಿಲ್ಸ್‌ ಅವರಿಗೆ ಸೋಲುಣಿಸಿದರು. ಇನ್ನೊಂದು ಸೆಮಿ ಸಮರದಲ್ಲಿ 3ನೇ ಶ್ರೇಯಾಂಕದ ವಾವ್ರಿಂಕ 4-6, 7-5, 6-4, 6-2 ಅಂತರದಿಂದ ಜಪಾನಿನ ಕೀ ನಿಶಿಕೊರಿ ಆಟ ಮುಗಿಸಿದರು. ಆ್ಯಂಡಿ ಮರ್ರೆ ಅವರನ್ನು ಬೇಟೆಯಾಡುವ ಮೂಲಕ ನಿಶಿಕೊರಿ ಸುದ್ದಿಯಾಗಿದ್ದರು.

ಜೊಕೋ 21ನೇ ಫೈನಲ್‌
ಇದು ನೊವಾಕ್‌ ಜೊಕೋವಿಕ್‌ ಕಾಣುತ್ತಿರುವ 21ನೇ ಗ್ರಾನ್‌ಸ್ಲಾಮ್‌ ಹಾಗೂ 7ನೇ ಯುಎಸ್‌ ಓಪನ್‌ ಫೈನಲ್‌. ಈವರೆಗೆ 12 ಗ್ರಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದ ಹಿರಿಮೆ ಸರ್ಬಿಯನ್‌ ಟೆನಿಸಿಗನದ್ದು. ಇದರಲ್ಲಿ 2 ಯುಎಸ್‌ ಓಪನ್‌ ಪ್ರಶಸ್ತಿ ಒಳಗೊಂಡಿದೆ. 2011 ಹಾಗೂ 2015ರಲ್ಲಿ ಅವರು "ಅಮೆರಿಕನ್‌ ಕಿಂಗ್‌' ಎನಿಸಿದ್ದರು. ಕಳೆದ ವರ್ಷ ಸ್ವಿಟ್ಸರ್‌ಲ್ಯಾಂಡಿನ ಸ್ಟಾರ್‌ ಆಟಗಾರ ರೋಜರ್‌ ಫೆಡರರ್‌ ಅವರನ್ನು 6-4, 5-7, 6-4, 6-4 ಅಂತರದಿಂದ ಹಿಮ್ಮೆಟ್ಟಿಸಿ ಪ್ರಶಸ್ತಿ ಜಯಿಸಿದ್ದರು.

ಈ ಬಾರಿ ಜೊಕೋ ಎದುರಾಳಿಯಾಗಿ ಮತ್ತೂಬ್ಬ ಸ್ವಿಸ್‌ ಆಟಗಾರ ಸ್ಟಾನಿಸ್ಲಾಸ್‌ ವಾವ್ರಿಂಕ ಪ್ರತ್ಯಕ್ಷರಾಗಿದ್ದಾರೆ. 2 ಗ್ರಾನ್‌ಸ್ಲಾಮ್‌ ಗೆದ್ದಿರುವ ವಾವ್ರಿಂಕ ಅವರಿಗೆ ಇದು ಮೊದಲ ಯುಎಸ್‌ ಓಪನ್‌ ಫೈನಲ್‌. 2014ರಲ್ಲಿ ಆಸ್ಟ್ರೇಲಿಯನ್‌ ಓಪನ್‌, 2015ರಲ್ಲಿ ಫ್ರೆಂಚ್‌ ಓಪನ್‌ ಪ್ರಶಸ್ತಿ ಗೆದ್ದಿರುವ ವಾವ್ರಿಂಕ 2016ರಲ್ಲಿ ಯುಎಸ್‌ ಓಪನ್‌ ಚಾಂಪಿಯನ್‌ ಆಗಿ ಹೊರಹೊಮ್ಮಬಹುದೇ ಎಂಬುದೊಂದು ಕುತೂಹಲ. ಅಂದಿನ ಗ್ರಾನ್‌ಸ್ಲಾಮ್‌ ಫೈನಲ್‌ಗ‌ಳಲ್ಲಿ ಕ್ರಮವಾಗಿ ರಫೆಲ್‌ ನಡಾಲ್‌ ಮತ್ತು ನೊವಾಕ್‌ ಜೊಕೋವಿಕ್‌ ಅವರನ್ನು ಮಣಿಸಿದ ಸಾಹಸ ವಾವ್ರಿಂಕ ಅವರದು. ಈ ಬಾರಿ ಮತ್ತೆ ಜೊಕೋವಿಕ್‌ ಎದುರಾಗಿದ್ದಾರೆ. ರ್ಯಾಕೆಟ್‌ ಸಮರ ತೀವ್ರಗೊಳ್ಳುವುದರಲ್ಲಿ ಅನುಮಾನವಿಲ್ಲ.

ಆದರೆ ಬಲಾಬಲ, ಅಂಕಿಅಂಶ, ಅನುಭವ ಹಾಗೂ ಸಾಧನೆಯ ಲೆಕ್ಕಾಚಾರದಲ್ಲಿ ಜೊಕೋವಿಕ್‌ ಅವರೇ ಮುಂದಿದ್ದಾರೆ. ವಾವ್ರಿಂಕ ವಿರುದ್ಧ ಈವರೆಗೆ 23 ಪಂದ್ಯ ಆಡಿರುವ ಜೊಕೋ, ಇದರಲ್ಲಿ 19 ಗೆಲುವು ಒಲಿಸಿಕೊಂಡಿದ್ದಾರೆ. ಅಲ್ಲದೇ ಜೊಕೋವಿಕ್‌ ಈ ವರ್ಷ ಆಸ್ಟ್ರೇಲಿಯನ್‌ ಓಪನ್‌ ಹಾಗೂ ಫ್ರೆಂಚ್‌ ಓಪನ್‌ ಪ್ರಶಸ್ತಿ ಗೆದ್ದ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ.
ಮಾನ್‌ಫಿಲ್ಸ್‌ ವಿರುದ್ಧ ಒಂದು ಸೆಟ್‌ ಕಳೆದುಕೊಂಡದ್ದನ್ನು ಹೊರತುಪಡಿಸಿದರೆ ಜೊಕೋವಿಕ್‌ ಅವರ ಒಟ್ಟಾರೆ ಪ್ರದರ್ಶನ ಚೇತೋಹಾರಿಯಾಗಿತ್ತು. ಕಳೆದುಕೊಂಡ ಆ ತೃತೀಯ ಸೆಟ್‌ ವೇಳೆ ಒಂದು ಹಂತದಲ್ಲಿ ಜೊಕೋ 2-0 ಮುನ್ನಡೆಯಲ್ಲಿದ್ದರು.

ಭಾರೀ ಸವಾಲೊಡ್ಡಿದ ನಿಶಿಕೊರಿ
ಮಾನ್‌ಫಿಲ್ಸ್‌ಗೆ ಹೋಲಿಸಿದರೆ ಮತ್ತೂಬ್ಬ "ಸೆಮಿ ಪರಾಜಿತ' ಆಟಗಾರ ಕೀ ನಿಶಿಕೊರಿ ಆಟ ಭಾರೀ ಸವಾಲಿನಿಂದ ಕೂಡಿತ್ತು. ಮೊದಲ ಸೆಟ್‌ ಗೆದ್ದ ನಿಶಿಕೊರಿ, 2ನೇ ಸೆಟ್‌ ಇನ್ನೇನು ವಶಪಡಿಸಿಕೊಳ್ಳುವ ಹಂತದಲ್ಲಿರುವಾಗಲೇ ಎಡವಬೇಕಾಯಿತು. ಇಲ್ಲಿಂದಾಚೆ ವಾವ್ರಿಂಕ ಲಯ ಕಂಡುಕೊಂಡರು. 2014ರಲ್ಲಿ ಯುಎಸ್‌ ಓಪನ್‌ ಫೈನಲ್‌ ತಲುಪಿದ್ದ ಈ ಜಪಾನೀ ಟೆನಿಸಿಗ ಅಲ್ಲಿ ಮರಿನ್‌ ಸಿಲಿಕ್‌ ಅವರಿಕೆ ಶರಣಾಗಿದ್ದರು.

ವಾವ್ರಿಂಕ ಅವರ ಬ್ಯಾಕ್‌ಹ್ಯಾಂಡ್‌ ಹೊಡೆತಗಳಿಗೆ ಸಮರ್ಥ ಜವಾಬು ನೀಡಲಾಗದಿದ್ದುದೇ ತನ್ನ ಸೋಲಿಗೆ ಕಾರಣ ಎಂದಿದ್ದಾರೆ ನಿಶಿಕೊರಿ. "ಗ್ರಾನ್‌ಸ್ಲಾಮ್‌ಗಳಲ್ಲಿ ನಂ.2, ನಂ.3 ಆಟಗಾರರನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಹಿಂದಿನ ಪಂದ್ಯಗಳನ್ನು ತುಸು ಸುಲಭದಲ್ಲಿ ಜಯಿಸಿದ್ದರೆ ಸೆಮಿಫೈನಲ್‌ ನನಗೆ ಒಲಿಯುವ ಸಾಧ್ಯತೆ ಇತ್ತು. ಒಟ್ಟಾರೆ ನನ್ನ ಪಾಲಿಗೆ ಇದೊಂದು ಅತ್ಯುತ್ತಮ ಟೆನಿಸ್‌ ಋತು ಆಗಿತ್ತು' ಎಂದು ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ನಿಶಿಕೊರಿ ಹೇಳಿದರು.

Trending videos

Back to Top