CONNECT WITH US  

ಯುಎಸ್‌ ಓಪನ್‌ : ವ್ಹಾರೆ ವಾವ್‌... ವಾವ್ರಿಂಕ!

ನ್ಯೂಯಾರ್ಕ್‌: ಸ್ವಿಸ್‌ ತಾರೆ ಸ್ಟಾನಿಸ್ಲಾಸ್‌ ವಾವ್ರಿಂಕ 2016ನೇ ಸಾಲಿನ ಯುಎಸ್‌ ಓಪನ್‌ ಪುರುಷರ ಸಿಂಗಲ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ರವಿವಾರ ರಾತ್ರಿಯ ರೋಚಕ ಫೈನಲ್‌ನಲ್ಲಿ ವಾವ್ರಿಂಕ ಹಾಲಿ ಚಾಂಪಿಯನ್‌, ವಿಶ್ವದ ನಂಬರ್‌ ವನ್‌ ಖ್ಯಾತಿಯ, 12 ಗ್ರಾನ್‌ಸ್ಲಾಮ್‌ ಪ್ರಶಸ್ತಿ ವಿಜೇತ ನೊವಾಕ್‌ ಜೊಕೋವಿಕ್‌ ಅವರಿಗೆ 6-7 (1-7), 6-4, 7-5, 6-3 ಅಂತರದ ಸೋಲುಣಿಸಿದರು.

ಇದು ವಾವ್ರಿಂಕ ಗೆದ್ದ 3ನೇ ಗ್ರಾನ್‌ಸ್ಲಾಮ್‌ ಪ್ರಶಸ್ತಿ. ಮೊದಲ ಯುಎಸ್‌ ಓಪನ್‌ ಕಿರೀಟ. ಈ ಸಾಧನೆಯೊಂದಿಗೆ ವಾವ್ರಿಂಕ ವರ್ಷಕ್ಕೊಂದರಂತೆ ಗ್ರಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದಂತಾಯಿತು. 2014ರಲ್ಲಿ ಆಸ್ಟ್ರೇಲಿಯನ್‌ ಓಪನ್‌ ಹಾಗೂ 2015ರಲ್ಲಿ ಫ್ರೆಂಚ್‌ ಓಪನ್‌ ಚಾಂಪಿಯನ್‌ ಆಗಿ ಮೂಡಿಬಂದಿದ್ದರು.

2014ರ ಆಸ್ಟ್ರೇಲಿಯನ್‌ ಓಪನ್‌ ವೇಳೆ ಜೊಕೋವಿಕ್‌ ಅವರನ್ನು ಕ್ವಾರ್ಟರ್‌ ಫೈನಲ್‌ನಲ್ಲೇ ಮಣಿಸಿದ ವಾವ್ರಿಂಕ, 2015ರ ಫ್ರೆಂಚ್‌ ಓಪನ್‌ ಫೈನಲ್‌ನಲ್ಲಿ ಜೊಕೋವಿಕ್‌ ಅವರನ್ನು ಸೋಲಿಸಿಯೇ ಪ್ರಶಸ್ತಿ ಎತ್ತಿದ್ದರು. ಅದು ಕೂಡ 4 ಸೆಟ್‌ಗಳ ಸ್ಪರ್ಧೆಯಾಗಿತ್ತು ಹಾಗೂ ವಾವ್ರಿಂಕ ಮೊದಲ ಸೆಟ್‌ ಕಳೆದುಕೊಂಡ ಬಳಿಕವೇ ಗೆಲುವಿನ ಲಯಕ್ಕೆ ಮರಳಿದ್ದರು. ಜೊಕೋವಿಕ್‌ ವಿರುದ್ಧ ಆಡಿದ 24 ಪಂದ್ಯಗಳಲ್ಲಿ ವಾವ್ರಿಂಕ ಸಾಧಿಸಿದ ಕೇವಲ 5ನೇ ಜಯ ಇದಾಗಿದೆ.

31ರ ಹರೆಯದ ವಾವ್ರಿಂಕ 1970ರ ಬಳಿಕ ಯುಎಸ್‌ ಓಪನ್‌ ಚಾಂಪಿಯನ್‌ ಎನಿಸಿಕೊಂಡ ಅತೀ ಹಿರಿಯ ಟೆನಿಸಿಗ. ಅಂದು 35ರ ಹರೆಯದ ಕೆನ್‌ ರೋಸ್‌ವಾಲ್‌ ಪ್ರಶಸ್ತಿ ಜಯಿಸಿದ್ದರು.

ಆರಂಭದಿಂದಲೇ ಜೊಕೋವಿಕ್‌-ವಾವ್ರಿಂಕ ರ್ಯಾಕೆಟ್‌ ಸಮರ ತೀವ್ರತೆ ಕಂಡುಕೊಂಡಿತ್ತು. ಇದು ಟೈ-ಬ್ರೇಕರ್‌ಗೆ ಎಳೆಯಲ್ಪಟ್ಟಾಗಲೇ ಪ್ರಶಸ್ತಿ ಉಳಿಸಿಕೊಳ್ಳುವುದು ಸುಲಭವಲ್ಲ ಎಂಬುದು ಜೊಕೋಗೆ ಅರಿವಾಗತೊಡಗಿತು. 2ನೇ ಹಾಗೂ 3ನೇ ಸೆಟ್‌ನ ಫೈನಲ್‌ ಗೇಮ್‌ ಬ್ರೇಕ್‌ ಮಾಡಿದ್ದು, 17ರಲ್ಲಿ 14 ಬ್ರೇಕ್‌ ಪಾಯಿಂಟ್‌ ಉಳಿಸಿಕೊಂಡದ್ದೆಲ್ಲ ವಾವ್ರಿಂಕ ಮೇಲುಗೈಯಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಹೆಚ್ಚು-ಕಡಿಮೆ 4 ಗಂಟೆಗಳ ಕಾಲ ಇವರ ಕಾದಾಟ ಸಾಗಿತು. ಗ್ರಾನ್‌ಸ್ಲಾಮ್‌ ಫೈನಲ್‌ ಒಂದರ ರೋಚಕತೆ, ತೀವ್ರತೆ, ಜಿದ್ದಾಜಿದ್ದಿಗಳೆಲ್ಲವೂ ಈ ಸಂದರ್ಭದಲ್ಲಿ ಕಂಡುಬಂದವು.

"ನಿಮ್ಮಿಂದಾಗಿ ನಾನಿಂದು ಇಲ್ಲಿದ್ದೇನೆ'
"ನೊವಾಕ್‌, ನೀವೋರ್ವ ಗ್ರೇಟ್‌ ಚಾಂಪಿಯನ್‌. ಮಹಾನ್‌ ವ್ಯಕ್ತಿ. ನಿಮ್ಮಿಂದಾಗಿ ನಾನಿಂದು ಇಲ್ಲಿ ನಿಂತಿದ್ದೇನೆ. ನಿಮ್ಮೆಲ್ಲ ಟೆನಿಸ್‌ ಸಾಧನೆಗೆ ಅಭಿನಂದನೆ ಸಲ್ಲಿಸಲೇಬೇಕಿದೆ. ಅದಕ್ಕಾಗಿ ಈ ಕ್ಷಣವನ್ನು ಉಪಯೋಗಿಸಿಕೊಳ್ಳುತ್ತಿದ್ದೇನೆ...' ಹೀಗೆಂದು ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ ನೂತನ ಯುಎಸ್‌ ಓಪನ್‌ ಚಾಂಪಿಯನ್‌ ಸ್ಟಾನಿಸ್ಲಾಸ್‌ ವಾವ್ರಿಂಕ. ಪ್ರಶಸ್ತಿ ಸಮಾರಂಭದ ವೇಳೆ ಸ್ವಿಸ್‌ ಆಟಗಾರನಿಂದ ಇಂಥ ಭಾವುಕ ನುಡಿಗಳು ಹೊರಹೊಮ್ಮಿದಾಗ ಒಮ್ಮೆಲೇ ಸ್ತಬ್ಧಗೊಂಡ ಕ್ರೀಡಾಂಗಣ, ಅಷ್ಟೇ ಬೇಗ ಚಪ್ಪಾಳೆ ಸದ್ದಿನಿಂದ ಭೋರ್ಗರೆಯಿತು.

"ನಿಜ ಹೇಳಬೇಕೆಂದರೆ, ನಾನು ಫೈನಲ್‌ ತಲುಪುತ್ತೇನೆ, ಟ್ರೋಫಿ ಗೆಲ್ಲುತ್ತೇನೆಂಬ ನಿರೀಕ್ಷೆಯನ್ನೇ ಹೊಂದಿರಲಿಲ್ಲ. ಇಂಥ ಯಾವುದೇ ಗುರಿಯನ್ನೂ ಹಾಕಿಕೊಂಡವನಲ್ಲ. ಗೆಲ್ಲುವ ಪ್ರಯತ್ನವಷ್ಟೇ ನನ್ನದಾಗಿತ್ತು. ಟ್ರೋಫಿ ಜಯಿಸಿದ್ದೊಂದು ಅದ್ಭುತ ಸಾಧನೆ. ಈಗಾಗಲೇ ಸಾಕಷ್ಟು ಟೆನಿಸ್‌ ಆಡಿದ್ದೇನೆ. ಪೂರ್ತಿಯಾಗಿ ಬರಿದಾಗಿದ್ದೇನೆ...' ಎಂದು ವಾವ್ರಿಂಕ ನುಡಿದರು.

"ಇಂದು ಟೆನಿಸ್‌ ಅಂಗಳದಲ್ಲಿ ದೊಡ್ಡ ಕಾಳಗವೇ ನಡೆಯಿತು. ಆದರೆ ಕೊನೆಯದಾಗಿ, 15 ವರ್ಷಗಳ ಹಿಂದೆ ಇಲ್ಲಿ ಏನಾಗಿತ್ತು ಎಂಬುದನ್ನೊಮ್ಮೆ ನೆನೆಯದಿದ್ದರೆ ದೊಡ್ಡ ಅಪಚಾರವಾಗುತ್ತದೆ. ಅಂದಿನ ದಾಳಿಗೆ ಸಿಲುಕಿ ಅಗಲಿದ ಜೀವಗಳನ್ನು ಸ್ಮರಿಸಿಕೊಳ್ಳುತ್ತಿದ್ದೇನೆ...' ಎಂದರು.

ಸ್ಟಾನಿಸ್ಲಾಸ್‌ ವಾವ್ರಿಂಕ ಈ ಗೆಲುವಿಗೆ ಅರ್ಹರಾಗಿದ್ದರು ಎಂಬುದು ಪರಾಜಿತ ಜೊಕೋವಿಕ್‌ ಪ್ರತಿಕ್ರಿಯೆ.

ಪ್ರಶಸ್ತಿ ಉಳಿಸಿಕೊಳ್ಳದ ಜೊಕೋವಿಕ್‌
ನೊವಾಕ್‌ ಜೊಕೋವಿಕ್‌ ಈವರೆಗೆ ನಾಲ್ಕೂ ಗ್ರಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ವರ್ಷ ಫ್ರೆಂಚ್‌ ಓಪನ್‌ ಚಾಂಪಿಯನ್‌ ಎನಿಸಿಕೊಳ್ಳುವ ಮೂಲಕ ಅವರ ಗ್ರಾನ್‌ಸ್ಲಾಮ್‌ ಆವೃತ್ತ ಪರಿಪೂರ್ಣಗೊಂಡಿತ್ತು.

ಅತೀ ಹೆಚ್ಚು 6 ಸಲ ಆಸ್ಟ್ರೇಲಿಯನ್‌ ಓಪನ್‌ ಜಯಿಸಿದ್ದು ಜೊಕೋ ಸಾಧನೆ. 2011ರಿಂದ ಇಲ್ಲಿ ಹ್ಯಾಟ್ರಿಕ್‌ ಸಾಧನೆಗೈದರೆ, ಈ ವರ್ಷ ಮತ್ತೆ ಪ್ರಶಸ್ತಿ ಉಳಿಸಿಕೊಂಡು ಮೆರೆದಿದ್ದರು.

3 ಸಲ ವಿಂಬಲ್ಡನ್‌ ಗೆದ್ದ ಜೊಕೋವಿಕ್‌ ಕಳೆದ ವರ್ಷ ಪ್ರಶಸ್ತಿ ತಮ್ಮಲ್ಲೇ ಇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಸಲ ಯುಎಸ್‌ ಓಪನ್‌ನಲ್ಲೂ ನೆಚ್ಚಿನ ಆಟಗಾರನಾಗಿ ಹೊರಹೊಮ್ಮಿದ್ದರು. ಪ್ರಶಸ್ತಿ ಉಳಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚಿತ್ತು. ಆದರೆ ಈ ಪ್ರಯತ್ನದಲ್ಲಿ ಅವರು ವಿಫ‌ಲರಾಗಿದ್ದಾರೆ. ಅವರ 3ನೇ ಯುಎಸ್‌ ಓಪನ್‌ ಪ್ರಶಸ್ತಿಗೆ ವಾವ್ರಿಂಕ ಅಡ್ಡಿಯಾಗಿ ನಿಂತರು.

Trending videos

Back to Top