CONNECT WITH US  

ಕೊಹ್ಲಿ ಹೊರತುಪಡಿಸಿ ಭಾರತವನ್ನು ನಿಯಂತ್ರಿಸಿದ್ದೇವೆ: ಕುಕ್‌

ಕೊಹ್ಲಿ ಅವರ ಬ್ಯಾಟಿಂಗ್‌ ಪಂದ್ಯದ ವ್ಯತ್ಯಾಸಕ್ಕೆ ಕಾರಣವಾಯಿತು ಎಂದಿದ್ದಾರೆ ಇಂಗ್ಲೆಂಡ್‌ ತಂಡದ ನಾಯಕ ಅಲಸ್ಟೇರ್‌ ಕುಕ್‌. 'ಭಾರತದ ಎರಡೂ ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಅವರ ಮೊತ್ತವೇ ಹೆಚ್ಚಿನ ಪ್ರಮಾಣದಲ್ಲಿತ್ತು. ಇದನ್ನು ಹೊರತುಪಡಿಸಿ ನೋಡುವುದಾದರೆ ನಾವು ಭಾರತದ ಬ್ಯಾಟ್ಸ್‌ಮನ್‌ಗಳ ಮೇಲೆ ಸಾಕಷ್ಟು ಒತ್ತಡ ಹೇರಿದ್ದೇವೆ ಎಂದೇ ಹೇಳಬೇಕಾಗುತ್ತದೆ...' ಎಂದಿದ್ದಾರೆ ಕುಕ್‌. 

'ಭಾರತದ ವಾತಾವರಣದಲ್ಲಿ ಈವರೆಗಿನ 10 ದಿನಗಳ ಕ್ರಿಕೆಟನ್ನು ನಾವು ಚೆನ್ನಾಗಿಯೇ ನಿಭಾಯಿಸಿದ್ದೇವೆ. ಇಲ್ಲಿ ದೊಡ್ಡ ಅಂತರದ ಸೋಲನುಭವಿಸಿದ್ದೇವೆ ನಿಜ. ಆದರೆ ಈ ಅಂತರ ಎನ್ನುವುದು ಬೇರೆ ವಿಷಯ. ನಾವು ಆಕ್ರಮಣಕಾರಿಯಾಗಿ ಆಡಿದ್ದಿದ್ದರೆ ಈ ಪಂದ್ಯವನ್ನು 150 ರನ್ನುಗಳಿಂದ ಸೋಲುತ್ತಿದ್ದೆವೋ ಏನೋ...' ಎಂಬುದಾಗಿ ಕುಕ್‌ ಹೇಳಿದರು. ಮೊಹಾಲಿಯ 3ನೇ ಟೆಸ್ಟ್‌ ಪಂದ್ಯಕ್ಕೆ ನಿಮ್ಮಲ್ಲಿ ಧನಾತ್ಮಕ ಅಂಶಗಳೇನಿವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಕ್‌, 'ಈ ಎರಡೂ ಟೆಸ್ಟ್‌ಗಳಲ್ಲಿ ಆದಿಲ್‌ ರಶೀದ್‌ ಉತ್ತಮ ಪ್ರದರ್ಶನ ನೀಡಿದ್ದಾರೆ. ತಂಡದ ಒಟ್ಟು ಬೌಲಿಂಗ್‌ ಉತ್ತಮ ಮಟ್ಟದಲ್ಲಿದೆ. ಮೊಯಿನ್‌ ಅಲಿ ಉತ್ತಮ ಲಯದಲ್ಲಿದ್ದಾರೆ. ಆ್ಯಂಡರ್ಸನ್‌ ಅವರದ್ದು ಪರ್ವಾಗಿಲ್ಲ ಎಂಬಂಥ ಪುನರಾಗಮನ. ಹೀಗೆ ಅನೇಕ ಸಕಾರಾತ್ಮಕ ಅಂಶಗಳಿವೆ. ಭಾರತವನ್ನು ಸೋಲಿಸಲು ಆಟದ ಎಲ್ಲ ಚಾಕಚಕ್ಯತೆಯನ್ನೂ ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಹೀಗಾಗಿ ನಮಗೆ ಮೊಹಾಲಿ ಪಂದ್ಯ ನಿರ್ಣಾಯಕ. ಇಲ್ಲಿ ಮೇಲುಗೈ ಸಾಧಿಸಿದರೆ ಖಂಡಿತ ಭಾರತದ ಮೇಲೆ ಒತ್ತಡ ಹೇರಬಲ್ಲೆವು...' ಎಂದರು. 'ಪಂದ್ಯ ಗೆಲ್ಲಬೇಕಾದರೆ ಟಾಸ್‌ ಗೆಲ್ಲುವುದೂ ಮುಖ್ಯ. ಇಲ್ಲಿ ಟಾಸ್‌ ಸೋತದ್ದು ಭಾರೀ ನಷ್ಟಕ್ಕೆ ಕಾರಣವಾಯಿತು. ಈ ಸರಣಿಯಲ್ಲಿ ಇನ್ನೂ 3 ಪಂದ್ಯಗಳನ್ನು ಆಡಲಿಕ್ಕಿದೆ. ಒಂದೆರಡ ರಲ್ಲಾದರೂ ಟಾಸ್‌ ಒಲಿದರೆ ಅದರಿಂದ ನಮಗೆ ಲಾಭವಿದೆ...' ಎಂಬುದು ಇಂಗ್ಲೆಂಡ್‌ ಕಪ್ತಾನನ ಅಭಿಪ್ರಾಯ.

Trending videos

Back to Top