CONNECT WITH US  

ಮೊದಲ ದಿನ ಮೊಯಿನ್‌-ರೂಟ್‌ ಮೋಡಿ

ಚೆನ್ನೈ: ಸತತ ಮೂರು ಸೋಲನುಭವಿಸಿ ಸಂಕಟದಲ್ಲಿರುವ ಇಂಗ್ಲೆಂಡ್‌ ಚೆನ್ನೈ ಟೆಸ್ಟ್‌ ಪಂದ್ಯದಲ್ಲಿ ಭರವಸೆಯ ಆರಂಭ ಮಾಡಿದೆ. ಆಲ್‌ರೌಂಡರ್‌ ಮೊಯಿನ್‌ ಅಲಿ ಬಾರಿಸಿದ ಅಜೇಯ ಶತಕ, "ಭಾವೀ ನಾಯಕ' ಜೋ ರೂಟ್‌ ಅವರ 88 ರನ್‌ ಸಾಹಸದಿಂದ 4 ವಿಕೆಟಿಗೆ 284 ರನ್‌ ಪೇರಿಸಿ ದೊಡ್ಡ ಮೊತ್ತದ ಸೂಚನೆಯೊಂದನ್ನು ನೀಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದು ಕೊಂಡ ಇಂಗ್ಲೆಂಡಿಗೆ ಭಾರತ ಆರಂಭಿಕ ಆಘಾತ ವಿಕ್ಕುವಲ್ಲಿ ಯಶಸ್ವಿಯಾಗಿತ್ತು. 21 ರನ್‌ ಆಗು ವಷ್ಟರಲ್ಲಿ ಆರಂಭಿಕರಿಬ್ಬರನ್ನೂ ಪೆವಿಲಿಯನ್ನಿಗೆ ಅಟ್ಟಿತ್ತು. ಆದರೆ ಅನಂತರದ 2 ವಿಕೆಟ್‌ ನೆರವಿನಿಂದ 263 ರನ್‌ ಪೇರಿಸಿದ್ದು ಇಂಗ್ಲೆಂಡಿನ ಅಮೋಘ ಬ್ಯಾಟಿಂಗ್‌ ಚೇತರಿಕೆಗೆ ಸಾಕ್ಷಿಯಾಯಿತು. 

ಎಡಗೈ ಬ್ಯಾಟ್ಸ್‌ಮನ್‌ ಮೊಯಿನ್‌ ಅಲಿ 120 ರನ್‌ ಪೇರಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇವರೊಂದಿಗೆ 5 ರನ್‌ ಮಾಡಿರುವ ಬೆನ್‌ ಸ್ಟೋಕ್ಸ್‌ ಇದ್ದಾರೆ. ಭಾರತ ಮೇಲುಗೈ ಸಾಧಿಸಬೇಕಾದರೆ ಶನಿವಾರ ಅಲಿ-ಸ್ಟೋಕ್ಸ್‌ ಜೋಡಿಯನ್ನು ಬೇಗ ಮುರಿಯಬೇಕಾದುದು ಅಗತ್ಯ. ಅಪಾಯಕಾರಿ ಜಾಸ್‌ ಬಟ್ಲರ್‌, ಲಿಯಮ್‌ ಡಾಸನ್‌, ಆದಿಲ್‌ ರಶೀದ್‌, ಸ್ಟುವರ್ಟ್‌ ಬ್ರಾಡ್‌ ಅವರನ್ನೂ ಬೆಳೆಯದಂತೆ ನೋಡಿಕೊಳ್ಳಬೇಕಿದೆ.

ನಾಯಕ ಕುಕ್‌ ಕೇವಲ 10 ರನ್‌ ಮಾಡಿ ನಿರ್ಗಮಿಸಿದರು. ಅಷ್ಟರಲ್ಲಿ ಅವರು 11 ಸಾವಿರ ರನ್‌ ಸಾಧನೆಯನ್ನು ಪೂರ್ತಿಗೊಳಿಸಿದ್ದರು. ಕಳೆದ ಪಂದ್ಯದ ಶತಕ ವೀರ ಕೀಟನ್‌ ಜೆನ್ನಿಂಗ್ಸ್‌ ಆಟ ಒಂದೇ ರನ್ನಿಗೆ ಮುಗಿದಿತ್ತು.

ಅಶ್ವಿ‌ನ್‌ಗೆ ಲಭಿಸದ ಯಶಸ್ಸು
ಉರುಳಿದ 4 ವಿಕೆಟ್‌ಗಳಲ್ಲಿ 3 ವಿಕೆಟ್‌ ರವೀಂದ್ರ ಜಡೇಜ ಪಾಲಾಗಿದೆ. ಒಂದನ್ನು ಇಶಾಂತ್‌ ಶರ್ಮ ಪಡೆದಿದ್ದಾರೆ. ಆದರೆ "ಲೋಕಲ್‌ ಹೀರೋ' ಅಶ್ವಿ‌ನ್‌ ಮೊದಲ ದಿನ ಮನೆಯಂಗಳದಲ್ಲಿ ಯಶಸ್ಸು ಸಾಧಿಸಲಿಲ್ಲ. 24 ಓವರ್‌ ಎಸೆದರೂ ವಿಕೆಟ್‌ ಕೀಳಲು ಸಫ‌ಲರಾಗಿಲ್ಲ. ಆದರೆ ಒಮ್ಮೆ ಅಶ್ವಿ‌ನ್‌ ಬೇಟೆಗಿಳಿದರೆ ಅನಂತರ ಅವರನ್ನು ನಿಭಾ ಯಿ ಸುವುದು ಪ್ರವಾಸಿಗರಿಗೆ ದೊಡ್ಡ ಸಮಸ್ಯೆ ಯಾಗುವುದು ಖಂಡಿತ. ಗಾಯಾಳು ಜಯಂತ್‌ ಯಾದವ್‌ ಬದಲು ಅವಕಾಶ ಪಡೆದ ಲೆಗ್‌ ಸ್ಪಿನ್ನರ್‌ ಅಮಿತ್‌ ಮಿಶ್ರಾ ಕೂಡ ಯಶಸ್ಸು ಸಾಧಿಸಿಲ್ಲ. 

ಅಲಿ: ಸರಣಿಯಲ್ಲಿ  2 ಶತಕ
ಮೊಯಿನ್‌ ಅಲಿ 120 ರನ್ನಿಗೆ 222 ಎಸೆತ ನಿಭಾ ಯಿಸಿದ್ದು, ಈ ವೇಳೆ 12 ಬೌಂಡರಿ ಸಿಡಿಯಲ್ಪಟ್ಟಿದೆ. ಇದು 37ನೇ ಟೆಸ್ಟ್‌ನಲ್ಲಿ ಅಲಿ ಬಾರಿಸಿದ 5ನೇ ಶತಕ. ಈ ಸರಣಿಯಲ್ಲಿ ಎರಡನೆಯದು. ರಾಜ್‌ಕೋಟ್‌ನ ಆರಂಭಿಕ ಟೆಸ್ಟ್‌ನಲ್ಲಿ ಅವರು 117 ರನ್‌ ಹೊಡೆದಿದ್ದರು. ಅನಂತರ ಬ್ಯಾಟಿನಿಂದ ದೊಡ್ಡ ಸದ್ದು ಮಾಡಿರಲಿಲ್ಲ. ಕ್ರಮವಾಗಿ 1, 2, 16, 5, 50 ಹಾಗೂ ಸೊನ್ನೆಗೆ ಔಟಾಗಿದ್ದರು. ಈಗ ಮತ್ತೂಮ್ಮೆ ತಂಡದ ರಕ್ಷಣೆಗೆ ನಿಂತಿದ್ದಾರೆ.

ಅಲಿ ಅವರ ಈ 5 ಶತಕಗಳಲ್ಲಿ 4 ಶತಕ ಇದೇ ವರ್ಷ ದಾಖಲಾಗಿರುವುದು ಉಲ್ಲೇಖನೀಯ. ಇದರೊಂದಿಗೆ ಅವರು ಈ ವರ್ಷ ಸಾವಿರ ರನ್‌ ಪೂರೈಸಿದ ಸಾಧನೆಯನ್ನೂ ಮಾಡಿದರು. ಅಲಿ ಕ್ಯಾಲೆಂಡರ್‌ ವರ್ಷವೊಂದರಲ್ಲಿ ಸಾವಿರ ರನ್‌ ಪೂರ್ತಿಗೊಳಿಸಿದ ಇಂಗ್ಲೆಂಡಿನ 20ನೇ ಕ್ರಿಕೆಟಿಗ.

ಭಾರತದೆದುರಿನ ಸರಣಿಯೊಂದರಲ್ಲಿ ಅವಳಿ ಶತಕ ಬಾರಿಸಿದ ಇಂಗ್ಲೆಂಡಿನ ಕೇವಲ 6ನೇ ಆಟಗಾರನೆಂಬುದು ಮೊಯಿನ್‌ ಅಲಿ ಪಾಲಿನ ಮತ್ತೂಂದು ಹೆಗ್ಗಳಿಕೆ. ಅವರೀಗ ಕೌಡ್ರಿ, ಬ್ಯಾರಿಂಗ್ಟನ್‌, ಗ್ಯಾಟಿಂಗ್‌, ಸ್ಟ್ರಾಸ್‌ ಮತ್ತು ಕುಕ್‌ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ.

ಅಲಿ-ರೂಟ್‌ 146 ರನ್‌ ಜತೆಯಾಟ
21ಕ್ಕೆ 2 ವಿಕೆಟ್‌ ಬಿದ್ದಾಗ ಇಂಗ್ಲೆಂಡನ್ನು ದೊಡ್ಡ ಗಂಡಾಂತರದಿಂದ ಪಾರು ಮಾಡಿದ ಹೆಗ್ಗಳಿಕೆ ರೂಟ್‌-ಅಲಿ ಜೋಡಿಗೆ ಸಲ್ಲುತ್ತದೆ. ಇವರಿಬ್ಬರು 40 ಓವರ್‌ಗಳ ಕಾಲ ಭಾರತದ ಬೌಲರ್‌ಗಳನ್ನು ಕಾಡಿ 3ನೇ ವಿಕೆಟಿಗೆ 146 ರನ್‌ ರಾಶಿ ಹಾಕಿದರು. ಶತಕದ ನಿರೀಕ್ಷೆ ಮೂಡಿಸಿದ್ದ ರೂಟ್‌ ಈ ಗಡಿಯಿಂದ ಕೇವಲ 12 ರನ್‌ ದೂರ ಉಳಿದರು (144 ಎಸೆತ, 10 ಬೌಂಡರಿ). ಇಲ್ಲವಾದರೆ ಅಲಿ ಅವ ರಂತೆ ರೂಟ್‌ ಕೂಡ ಈ ಸರಣಿಯಲ್ಲಿ 2ನೇ ಶತಕ ದಾಖಲಿಸುತ್ತಿದ್ದರು. ರೂಟ್‌ ರಾಜ್‌ಕೋಟ್‌ನಲ್ಲಿ 124 ರನ್‌ ಹೊಡೆದಿದ್ದರು.

ಔಟಾದ ಮತ್ತೂಬ್ಬ ಆಟಗಾರ ಜಾನಿ ಬೇರ್‌ಸ್ಟೊ. 3 ಸಿಕ್ಸರ್‌ ಸಿಡಿಸಿ ಮುನ್ನುಗ್ಗುತ್ತಿದ್ದ ಕೀಪರ್‌ ಬೇರ್‌ಸ್ಟೊ 49 ರನ್‌
ಮಾಡಿದರು.

ಕುಕ್‌ 11 ಸಾವಿರ ರನ್‌
ಇಂಗ್ಲೆಂಡ್‌ ನಾಯಕ ಅಲಸ್ಟೇರ್‌ ಕುಕ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 11 ಸಾವಿರ ರನ್‌ ಪೂರ್ತಿಗೊಳಿಸಿದ ಸಾಧಕನಾಗಿ ಮೂಡಿಬಂದರು. ಈ ಸಾಧನೆಗೈಯಲು ಅವರಿಗೆ ಕೇವಲ 2 ರನ್‌ ಅಗತ್ಯವಿತ್ತು. ಉಮೇಶ್‌ ಯಾದವ್‌ ಎಸೆದ ಪಂದ್ಯದ ಮೊದಲ ಎಸೆತದಲ್ಲೇ 2 ರನ್‌ ಗಳಿಸುವ ಮೂಲಕ ಕುಕ್‌ ಈ ಮೈಲುಗಲ್ಲು ನೆಟ್ಟರು.

ಕುಕ್‌ 11 ಸಾವಿರ ರನ್‌ ಕ್ಲಬ್‌ಗ ಸೇರ್ಪಡೆಗೊಂಡ ವಿಶ್ವದ 10ನೇ ಹಾಗೂ ಇಂಗ್ಲೆಂಡಿನ ಮೊದಲ ಬ್ಯಾಟ್ಸ್‌ಮನ್‌. ಸಮಕಾಲೀನ ಕ್ರಿಕೆಟ್‌ನಲ್ಲಿ ಕುಕ್‌ ಅವರಿಗೆ ಸಾಟಿಯಾಗಬಲ್ಲ ಮತ್ತೂಬ್ಬ ಬ್ಯಾಟ್ಸ್‌ಮನ್‌ ಇಲ್ಲ. ಇವರ ಅನಂತರದ ಸ್ಥಾನದಲ್ಲಿರುವವರು 9,679 ರನ್‌ ಗಳಿಸಿರುವ ಪಾಕಿಸ್ಥಾನ ಯೂನಿಸ್‌ ಖಾನ್‌.

ಕುಕ್‌ ತಮ್ಮ 140ನೇ ಟೆಸ್ಟ್‌ ಪಂದ್ಯದ 252ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು. ಇಂಗ್ಲೆಂಡ್‌ ಟೆಸ್ಟ್‌ ಇತಿಹಾಸಲ್ಲಿ ಕುಕ್‌ ಅನಂತರದ ಸ್ಥಾನದಲ್ಲಿ ಕಾಣಿಸಿಕೊಳ್ಳುವವರು 21 ವರ್ಷಗಳ ಹಿಂದೆಯೇ ನಿವೃತ್ತರಾಗಿರುವ ಗ್ರಹಾಂ ಗೂಚ್‌ (8,900 ರನ್‌).

ಆಡುವ ಬಳಗದಲ್ಲಿ ಇಶಾಂತ್‌, ಅಮಿತ್‌ ಮಿಶ್ರಾ ಅಂತಿಮ ಟೆಸ್ಟ್‌ ಪಂದ್ಯಕ್ಕಾಗಿ ಎರಡೂ ತಂಡಗಳಲ್ಲಿ 2 ಬದಲಾವಣೆ ಮಾಡಿಕೊಳ್ಳಲಾಗಿದೆ. ಭುವನೇಶ್ವರ್‌ ಕುಮಾರ್‌ ಮತ್ತು ಸ್ನಾಯು ಸೆಳೆತಕ್ಕೆ ಸಿಲುಕಿದ ಜಯಂತ್‌ ಯಾದವ್‌ ಅವರನ್ನು ಕೈಬಿಟ್ಟ ಭಾರತ ಇಶಾಂತ್‌ ಶರ್ಮ ಹಾಗೂ ಅಮಿತ್‌ ಮಿಶ್ರಾ ಅವರನ್ನು ಕಣಕ್ಕಿಳಿಸಿತು. ಇಶಾಂತ್‌ ಈ ಸರಣಿಯಲ್ಲಿ ಆಡುತ್ತಿರುವ ಮೊದಲ ಟೆಸ್ಟ್‌ ಇದಾಗಿದೆ. ಮಿಶ್ರಾ ರಾಜ್‌ಕೋಟ್‌ನ ಪ್ರಥಮ ಟೆಸ್ಟ್‌ ಆಡಿದ ಬಳಿಕ ತಂಡದಿಂದ ಬೇರ್ಪಟ್ಟಿದ್ದರು. 

ಜಯಂತ್‌ ಯಾದವ್‌ ಕಳೆದ ಮುಂಬಯಿ ಟೆಸ್ಟ್‌ನಲ್ಲಿ ಶತಕ ಬಾರಿಸಿ ತಮ್ಮ ಬ್ಯಾಟಿಂಗ್‌ ಪರಾಕ್ರಮ ಪ್ರದರ್ಶಿಸಿ ದ್ದರು. ಆದರೆ ಅಷ್ಟರಲ್ಲಿ ಗಾಯಾಳಾಗಿ ಹೊರಬಿದ್ದರು. ಇಂಗ್ಲೆಂಡ್‌ ತಂಡದಿಂದ ಹೊರಗುಳಿದವರೆಂದರೆ ಗಾಯಾಳು ಜೇಮ್ಸ್‌ ಆ್ಯಂಡರ್ಸನ್‌ ಮತ್ತು ಕ್ರಿಸ್‌ ವೋಕ್ಸ್‌. ಇವರ ಬದಲು ಸ್ಟುವರ್ಟ್‌ ಬ್ರಾಡ್‌ ಹಾಗೂ ಲಿಯಮ್‌ ಡಾಸನ್‌ ಅವರಿಗೆ ಬಾಗಿಲು ತೆರೆಯಿತು. ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಡಾಸನ್‌ ಅವರಿಗೆ ಇದು ಚೊಚ್ಚಲ ಟೆಸ್ಟ್‌. ಈವರೆಗೆ ಅವರು ಒಂದು ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನಷ್ಟೇ ಆಡಿದ್ದಾರೆ.

ಸ್ಕೋರ್‌ ಪಟ್ಟಿ
ಇಂಗ್ಲೆಂಡ್‌ ಪ್ರಥಮ ಇನ್ನಿಂಗ್ಸ್‌
ಅಲಸ್ಟೇರ್‌ ಕುಕ್‌    ಸಿ ಕೊಹ್ಲಿ ಬಿ ಜಡೇಜ    10
ಕೀಟನ್‌ ಜೆನ್ನಿಂಗ್ಸ್‌    ಸಿ ಪಟೇಲ್‌ ಬಿ ಇಶಾಂತ್‌    1
ಜೋ ರೂಟ್‌    ಸಿ ಪಟೇಲ್‌ ಬಿ ಜಡೇಜ    88
ಮೊಯಿನ್‌ ಅಲಿ    ಬ್ಯಾಟಿಂಗ್‌    120
ಜಾನಿ ಬೇರ್‌ಸ್ಟೊ    ಸಿ ರಾಹುಲ್‌ ಬಿ ಜಡೇಜ    49
ಬೆನ್‌ ಸ್ಟೋಕ್ಸ್‌    ಬ್ಯಾಟಿಂಗ್‌    5

ಇತರ        11
ಒಟ್ಟು  (4 ವಿಕೆಟಿಗೆ)        284
ವಿಕೆಟ್‌ ಪತನ: 1-7, 2-21, 3-167, 4-253.

ಬೌಲಿಂಗ್‌:
ಉಮೇಶ್‌ ಯಾದವ್‌    12-1-44-0
ಇಶಾಂತ್‌ ಶರ್ಮ        12-5-25-1
ರವೀಂದ್ರ ಜಡೇಜ        28-3-73-3
ಆರ್‌. ಅಶ್ವಿ‌ನ್‌        24-1-76-0
ಅಮಿತ್‌ ಮಿಶ್ರಾ        13-1-52-0
ಕರುಣ್‌ ನಾಯರ್‌        1-0-4-0


Trending videos

Back to Top