CONNECT WITH US  

ಆಸ್ಟ್ರೇಲಿಯನ್‌ ಓಪನ್‌ ಡ್ರಾ: ಜೊಕೋ-ವೆರ್ದಸ್ಕೊ ಮೊದಲ ಸ್ಪರ್ಧೆ

ಮೆಲ್ಬರ್ನ್: ಮುಂದಿನ ವಾರ ಆರಂಭವಾಗಲಿರುವ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ ಡ್ರಾ ನಡೆದಿದ್ದು, ಹಾಲಿ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಸ್ಪೇನಿನ ಫೆರ್ನಾಂಡೊ ವೆರ್ದಸ್ಕೊ ಸವಾಲನ್ನು ಎದುರಿಸಲಿದ್ದಾರೆ.

ಇದೊಂದು ತೀವ್ರ ಕುತೂಹಲದ ಸ್ಪರ್ಧೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಇದೇ ಕೂಟದ ಮೊದಲ ಸುತ್ತಿನಲ್ಲೇ ವೆರ್ದಸ್ಕೊ ನೆಚ್ಚಿನ ಆಟಗಾರ ರಫೆಲ್‌ ನಡಾಲ್‌ ಅವರಿಗೆ ಮನೆಯ ಹಾದಿ ತೋರಿಸಿದ್ದರು.

ನಂ.2 ಜೊಕೋವಿಕ್‌ ಆರಂಭಿಕ ಗೆಲುವು ಸಾಧಿಸಿ ಮುನ್ನಡೆದರೆ 4ನೇ ಸುತ್ತಿನಲ್ಲಿ ಬಲ್ಗೇರಿಯಾದ ಗ್ರಿಗರ್‌ ಡಿಮಿಟ್ರೋವ್‌ ಅವರನ್ನು ಎದುರಿಸುವ ಸಂಭವವಿದೆ. ಕಳೆದ ವಾರವಷ್ಟೇ ಡಿಮಿಟ್ರೋವ್‌ ಬ್ರಿಸ್ಬೇನ್‌ ಟೆನಿಸ್‌ ಪ್ರಶಸ್ತಿ ಜಯಿಸಿದ್ದರು.

ಮರ್ರೆ-ಮರ್ಚೆಂಕೊ ಮುಖಾಮುಖೀ
ವಿಶ್ವದ ನಂಬರ್‌ ವನ್‌ ಆಟಗಾರ ಆ್ಯಂಡಿ ಮರ್ರೆ ಅವರ ಮೊದಲ ಸುತ್ತಿನ ಎದುರಾಳಿ ಉಕ್ರೇನಿನ ಇಲ್ಯ ಮರ್ಚೆಂಕೊ. ಮರ್ರೆ 5 ಸಲ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ ಪ್ರವೇಶಿಸಿದರೂ ಈವರೆಗೆ ಪ್ರಶಸ್ತಿ ಮಾತ್ರ ಮರೀಚಿಕೆಯೇ ಆಗಿದೆ. ಈ ಐದರಲ್ಲಿ ಸತತ 4 ಸಲ ಅವರ ಜೊಕೋವಿಕ್‌ಗೆ ಸೋತಿದ್ದರು. 2010ರ ಮೊದಲ ಫೈನಲ್‌ನಲ್ಲಿ ರೋಜರ್‌ ಫೆಡರರ್‌ ಎದುರು ಮರ್ರೆ ಆಟ ನಡೆದಿರಲಿಲ್ಲ. ಈ ಬಾರಿ ಮರ್ರೆ ಕ್ವಾರ್ಟರ್‌ ಫೈನಲ್‌ ತನಕ ಮುಂದುವರಿದರೆ ಕೀ ನಿಶಿಕೊರಿ ಅಥವಾ ಫೆಡರರ್‌ ಎದುರಾಗುವ ಸಾಧ್ಯತೆ ಇದೆ.

18ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಾಗಿ ಕಳೆದ ಅನೇಕ ವರ್ಷಗಳಿಂದ ಪ್ರಯತ್ನಿಸುತ್ತಿರುವ ಫೆಡರರ್‌ ಮೊದಲ ಸುತ್ತಿನಲ್ಲಿ ಅರ್ಹತಾ ಆಟಗಾರನನ್ನು ಎದುರಿಸುವರು. 3ನೇ ಸುತ್ತಿನಲ್ಲಿ ಅವರಿಗೆ ಕೀ ನಿಶಿಕೊರಿ ಸವಾಲು ಎದುರಾಗಬಹುದು.

2014ರ ಚಾಂಪಿಯನ್‌ ಸ್ಟಾನಿಸ್ಲಾಸ್‌ ವಾವ್ರಿಂಕ ಸ್ಲೊವಾಕಿಯಾದ ಮಾರ್ಟಿನ್‌ ಕ್ಲಿಝಾನ್‌ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡುವರು. ಮುಂದುವರಿದರೆ 4ನೇ ಸುತ್ತಿನಲ್ಲಿ ಆಸ್ಟ್ರೇಲಿಯದ ಅಪಾಯಕಾರಿ ಆಟಗಾರ ನಿಕ್‌ ಕಿರ್ಗಿಯೋಸ್‌ ಜತೆ ಆಡುವ ಸಾಧ್ಯತೆ ಇದೆ.

9ನೇ ಶ್ರೇಯಾಂದಕ ರಫೆಲ್‌ ನಡಾಲ್‌ ಅವರ ಮೊದಲ ಸುತ್ತಿನ ಎದುರಾಳಿ ಜರ್ಮನಿಯ ಫ್ಲೋರಿಯಾನ್‌ ಮೇಯರ್‌. ಕ್ವಾರ್ಟರ್‌ ಫೈನಲ್‌ ತನಕ ಸಾಗಿದರೆ ಕೆನಡಾದ ಬಿಗ್‌ ಸರ್ವರ್‌ ಖ್ಯಾತಿಯ ಮಿಲೋಸ್‌ ರಾನಿಕ್‌ ಜತೆ ಮುಖಾಮುಖೀ ಆಗಬಹುದು.

ಸೆರೆನಾ-ಬೆನ್ಸಿಕ್‌ ಸೆಣಸಾಟ
ವನಿತಾ ವಿಭಾಗದಲ್ಲಿ ನೆಚ್ಚಿನ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಸ್ವಿಟ್ಸರ್‌ಲ್ಯಾಂಡಿನ ಬೆಲಿಂಡಾ ಬೆನ್ಸಿಕ್‌ ವಿರುದ್ಧ ಮೊದಲ ಪಂದ್ಯ ಆಡಲಿದ್ದಾರೆ. ದ್ವಿತೀಯ ಸುತ್ತಿನಲ್ಲಿ ಲೂಸಿ ಸಫ‌ರೋವಾ ಅವರ ಸವಾಲು ಎದುರಾಗುವ ಸಾಧ್ಯತೆ ಇದೆ.

ಹಾಲಿ ಚಾಂಪಿಯನ್‌, ವಿಶ್ವದ ನಂ.1 ಆಟಗಾರ್ತಿ, ಕಳೆದ ವರ್ಷದ ಫೈನಲ್‌ನಲ್ಲಿ ಸೆರೆನಾಗೆ ಸೋಲುಣಿಸಿದ ಆ್ಯಂಜೆಲಿಕ್‌ ಕೆರ್ಬರ್‌ ಅವರಿಗೆ ಮೊದಲ ಸುತ್ತಿನಲ್ಲಿ 61ನೇ ರ್‍ಯಾಂಕಿಂಗ್‌ನ ಉಕ್ರೇನ್‌ ಆಟಗಾರ್ತಿ ಲೆಸಿಯಾ ಸುರೆಂಕೊ ಅವರ ಸುಲಭ ಸವಾಲು ಎದುರಾಗಿದೆ.

ಫ್ರೆಂಚ್‌ ಓಪನ್‌ ಚಾಂಪಿಯನ್‌ ಗಾರ್ಬಿನ್‌ ಮುಗುರುಜಾ 109ನೇ ರ್‍ಯಾಂಕಿಂಗ್‌ ಆಟಗಾರ್ತಿ, ನ್ಯೂಜಿಲ್ಯಾಂಡಿನ ಮರಿನಾ ಎರಕೋವಿಕ್‌ ವಿರುದ್ಧ; 3ನೇ ಶ್ರೇಯಾಂಕದ ಅಗ್ನಿàಸ್ಕಾ ರಾದ್ವಂಸ್ಕಾ ಬಲ್ಗೇರಿಯಾದ ಸ್ವೆತಾನಾ ಪಿರೊಂಕೋವಾ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡುವರು.

Trending videos

Back to Top