CONNECT WITH US  

ಸೆಮಿಫೈನಲ್‌ನಲ್ಲಿ ರಫೆಲ್‌ ನಡಾಲ್‌ - ಜೊಕೋವಿಕ್‌ ಮುಖಾಮುಖೀ ಸಾಧ್ಯತೆ

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌ ಕೂಟದ ಡ್ರಾ ಪ್ರಕಟವಾಗಿದ್ದು ಹಾಲಿ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ ಮತ್ತು 9 ಬಾರಿಯ ಪ್ರಶಸ್ತಿ ವಿಜೇತ ರಫೆಲ್‌ ನಡಾಲ್‌ ಸೆಮಿಫೈನಲ್‌ನಲ್ಲಿ ಮುಖಾಮುಖೀಯಾಗುವ ಸಾಧ್ಯತೆಯಿದೆ.

ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ನಡಾಲ್‌ 10ನೇ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಯಲ್ಲಿದ್ದರೆ ಹೊಸ ಕೋಚ್‌ ಆಂದ್ರೆ ಅಗಾಸ್ಸಿ ಅವರ ಮಾರ್ಗದರ್ಶನ ಪಡೆ ಯುತ್ತಿರುವ ಜೊಕೋವಿಕ್‌ ಪ್ರಶಸ್ತಿ ಉಳಿಸಿಕೊಳ್ಳಲು ಪ್ರಯತ್ನಿಸಲಿದ್ದಾರೆ. ವಿಶ್ವದ ನಂಬರ್‌ ವನ್‌ ಆ್ಯಂಡಿ ಮರ್ರೆ ಅವರು 2015ರ ಚಾಂಪಿಯನ್‌ ಸ್ಟಾನ್‌ ವಾವ್ರಿಂಕ ಅವರನ್ನು ಸೆಮಿಫೈನಲ್‌ನಲ್ಲಿ ಎದುರಿಸುವ ಸಂಭವವಿದೆ.

ರಶ್ಯದ ಆಂದ್ರೆ ಕುಜ್ನೆತ್ಸೋವ್‌ ಅವರನ್ನು ಎದುರಿಸುವ ಮೂಲಕ ಮರ್ರೆ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಜೊಕೋವಿಕ್‌ ಮೊದಲ ಸುತ್ತಿನಲ್ಲಿ ಸ್ಪೇನ್‌ನ ಮಾರ್ಸೆಲ್‌ ಗ್ರ್ಯಾನೋಲ್ಲರ್ ಅವರನ್ನು ಎದುರಿಸಲಿದ್ದಾರೆ. ನಡಾಲ್‌ ಅವರ ಮೊದಲ ಸುತ್ತಿನ ಎದುರಾಳಿ ಫ್ರಾನ್ಸ್‌ನ ಬೆನಾಯ್‌r ಪೇರ್‌ ಆಗಿದ್ದಾರೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಮರ್ರೆ ಅಂತಿಮ ಎಂಟರ ಸುತ್ತಿನಲ್ಲಿ ಜಪಾನಿನ ಕೆಯಿ ನಿಶಿಕೋರಿ ಅವರನ್ನು ಎದುರಿಸುವ ಸಾಧ್ಯತೆಯಿದೆ. ಇನ್ನುಳಿದ ಕ್ವಾರ್ಟರ್‌ಫೈನಲ್‌ ಪಂದ್ಯಗಳು ವಾವ್ರಿಂಕ-ಮರಿನ್‌ ಸಿಲಿಕ್‌, ನಡಾಲ್‌-ಕೆನಡದ ಮಿಲೋಸ್‌ ರೋನಿಕ್‌ ಮತ್ತು ಜೊಕೋವಿಕ್‌-ಡೊಮಿನಿಕ್‌ ಥೀಮ್‌ ಜತೆ ನಡೆಯುವ ಸಂಭವವಿದೆ.
 
ಆವೇ ಅಂಗಣದಲ್ಲಿ ಅಮೋಘ ನಿರ್ವಹಣೆ ನೀಡುತ್ತಿರುವ 30ರ ಹರೆಯದ ನಡಾಲ್‌ ಈಗಾಗಲೇ ಮಾಂಟೆ ಕಾರ್ಲೋ ಮತ್ತು ಬಾರ್ಸಲೋನದಲ್ಲಿ 10 ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ರೋಲ್ಯಾಂಡ್‌ ಗ್ಯಾರೋಸ್‌ನಲ್ಲೂ 10 ಪ್ರಶಸ್ತಿ ಗೆಲ್ಲುವುದು ಅವರ ಗುರಿಯಾಗಿದೆ. ಮ್ಯಾಡ್ರಿಡ್‌ನ‌ಲ್ಲಿ ಅವರು ಐದನೇ ಬಾರಿ ಪ್ರಶಸ್ತಿ ಜಯಿಸಿದ್ದು ಏಳು ಪಂದ್ಯಗಳ ಸೋಲಿಗೆ ಅಂತ್ಯ ಹಾಡಿದ್ದಾರೆ. ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ನಡಾಲ್‌ 72 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ ಕೇವಲ ಎರಡು ಬಾರಿ ಸೋತಿದ್ದಾರೆ. 2015ರಲ್ಲಿ ಜೊಕೋವಿಕ್‌ ಮತ್ತು ಗಾಯದ ಸಮಸ್ಯೆಯಿಂದಾಗಿ 2009ರಲ್ಲಿ ರಾಬಿನ್‌ ಸೋಡರ್‌ಲಿಂಗ್‌ಗೆ ಆಘಾತಕಾರಿಯಾಗಿ ಶರಣಾಗಿದ್ದರು.

ಜೊಕೋವಿಕ್‌ ಉತ್ತಮ ನಿರ್ವಹಣೆ
ಆವೇ ಅಂಗಣದಲ್ಲಿ ಈ ವರ್ಷ ಜೊಕೋವಿಕ್‌ ಉತ್ತಮ ನಿರ್ವಹಣೆ ನೀಡಿದ್ದಾರೆ. ಮಾಂಟೆ ಕಾರ್ಲೋದಲ್ಲಿ ಕ್ವಾರ್ಟರ್‌ಫೈನಲ್‌, ಮ್ಯಾಡ್ರಿಡ್‌ನ‌ಲ್ಲಿ ಸೆಮಿಫೈನಲ್‌ ತಲುಪಿದ್ದರೆ ರೋಮ್‌ನಲ್ಲಿ ರನ್ನರ್‌ ಅಪ್‌ ಸ್ಥಾನ ಪಡೆದಿದ್ದರು. ರೋಮ್‌ನಲ್ಲಿ ಅವರು ಅಲೆಕ್ಸಾಂಡರ್‌ ಜ್ವರೇವ್‌ ಕೈಯಲ್ಲಿ ಸೋತಿದ್ದರು. ಇಲ್ಲಿ ಪ್ರಶಸ್ತಿ ಗೆಲ್ಲುವುದು ನನ್ನ ಕನಸು ಆಗಿದೆ ಎಂದು ಡ್ರಾ ನಡೆದ ಸಂದರ್ಭದಲ್ಲಿ ಜೊಕೋವಿಕ್‌ ಹೇಳಿದ್ದರು.

ಕೆರ್ಬರ್‌-ಮುಗುರುಜಾ ನಡುವೆ ಸೆಮಿಫೈನಲ್‌
ವನಿತೆಯರ ಡ್ರಾನಲ್ಲಿ ಅಗ್ರ ಶ್ರೇಯಾಂಕದ ಆ್ಯಂಜೆಲಿಕ್‌ ಕೆರ್ಬರ್‌ ಅವರು ಮೊದಲ ಸುತ್ತಿನಲ್ಲಿ ರಶ್ಯದ ಏಕ್ತರೀನಾ ಮಕರೋವಾ ಅವರನ್ನು ಎದುರಿಸಲಿದ್ದಾರೆ. ಸೆಮಿಫೈನಲ್‌ನಲ್ಲಿ ಅವರು ಹಾಲಿ ಚಾಂಪಿಯನ್‌ ಗಾರ್ಬಿನ್‌ ಮುಗುರುಜಾ ಅವರನ್ನು ಎದುರಿಸುವ ಸಾಧ್ಯತೆಯಿದೆ.

ಇಲ್ಲಿ ಆಡಲು ನನಗೆ ಅತೀವ ಆನಂದವಾಗುತ್ತಿದೆ. ಶ್ರೇಷ್ಠ ನಿರ್ವಹಣೆ ನೀಡಲು ಸಿದ್ಧತೆ ನಡೆಸುತ್ತಿದ್ದೇನೆ ಎಂದು ಮುಗುರುಜಾ ಹೇಳಿದ್ದಾರೆ. ಕಳೆದ ವಾರ ರೋಮ್‌ನಲ್ಲಿ ಆಡುತ್ತಿರುವ ವೇಳೆ ಅವರ ಕುತ್ತಿಗೆಗೆ ಗಾಯವಾಗಿತ್ತು. ಆದರೆ ಇದೀಗ ಚೇತರಿಸಿಕೊಂಡಿದ್ದಾರೆ.  ಮುಗುರುಜಾ ಅವರಿಗೆ ಮೊದಲ ಸುತ್ತಿನಲ್ಲಿ ಕಠಿನ ಎದುರಾಳಿ ಸಿಕ್ಕಿದ್ದಾರೆ. ಮಾಜಿ ಚಾಂಪಿಯನ್‌ ಫ್ರಾನ್ಸಿಸ್ಕಾ ಶಿಯಾವೋನ್‌ ಅವರ ಸವಾಲನ್ನು ಮುಗುರುಜಾ ಎದುರಿಸಬೇಕಾಗಿದೆ. 

ದ್ವಿತೀಯ ಶ್ರೇಯಾಂಕದ ಕರೋಲಿನಾ ಪ್ಲಿಸ್ಕೋವಾ ಸೆಮಿಫೈನಲ್‌ನಲ್ಲಿ 2014ರ ರನ್ನರ್‌ ಅಪ್‌ ಸಿಮೋನಾ ಹಾಲೆಪ್‌ ಅವರನ್ನು ಎದುರಿಸುವ ಸಾಧ್ಯತೆಯಿದೆ. ಪ್ಲಿಸ್ಕೋವಾ ಮೊದಲ ಸುತ್ತಿನಲ್ಲಿ ಚೀನದ ಝೆಂಗ್‌ ಸಾಯ್‌ಸಾಯ್‌ ಅವರನ್ನು ಎದುರಿಸಲಿದ್ದಾರೆ. ಗಾಯಗೊಂಡಿರುವ ಹಾಲೆಪ್‌ ಇಲ್ಲಿ ಆಡುವುದು ಅನುಮಾನವಾಗಿದೆ. 

ಸೆರೆನಾ ವಿಲಿಯಮ್ಸ್‌, ಮರಿಯಾ ಶರಪೋವಾ ಮತ್ತು ವಿಕ್ಟೋರಿಯಾ ಅಜರೆಂಕಾ ಅವರ ಅನುಪಸ್ಥಿತಿಯಿಂದ ವನಿತಾ ವಿಭಾಗದಲ್ಲಿ ಹೊಸ ತಾರೆಗಳಿಗೆ ಮಿಂಚುವ ಅವಕಾಶ ಲಭಿಸಿದೆ. ಎಲ್ಲವೂ     ನಿರೀಕ್ಷೆಯಂತೆ ನಡೆದರೆ ಕೆರ್ಬರ್‌ ಸೆಮಿಫೈನಲ್‌ನಲ್ಲಿ ಸ್ವೆತ್ಲಾನಾ ಕುಜ್ನೆತ್ಸೋವಾ ಅವರನ್ನು ಎದುರಿಸಲಿದ್ದರೆ ಮುಗುರುಜಾ ಅವರು ಡೊಮಿನಿಕಾ ಸಿಬುಲ್ಕೋವಾ ಅವರನ್ನು ಸೆಣಸುವ ಸಾಧ್ಯತೆಯಿದೆ. 


Trending videos

Back to Top