CONNECT WITH US  

ಸಾನಿಯಾ ಜೋಡಿ ಪರಾಭವ: ಜೊಕೊ, ನಡಾಲ್‌ ಮುನ್ನಡೆ

ಪ್ಯಾರಿಸ್‌: ಹಾಲಿ ಚಾಂಪಿಯನ್‌ಗಳಾದ ನೊವಾಕ್‌ ಜೊಕೋವಿಕ್‌, ಗಾರ್ಬಿನ್‌ ಮುಗುರುಜಾ ಫ್ರೆಂಚ್‌ ಓಪನ್‌ 3ನೇ ಸುತ್ತು ಮುಟ್ಟಿದ್ದಾರೆ. ಮತ್ತೂಬ್ಬ ಪ್ರಬಲ ಆಟಗಾರ ರಫೆಲ್‌ ನಡಾಲ್‌ ಕೂಡ ಮುನ್ನಡೆದಿದ್ದಾರೆ. ಆದರೆ ಎರಡು ಬಾರಿಯ ವಿಂಬಲ್ಡನ್‌ ಚಾಂಪಿಯನ್‌, ಜೆಕ್‌ ಆಟಗಾರ್ತಿ ಪೆಟ್ರಾ ಕ್ವಿಟೋವಾ ಅವರ ಟೆನಿಸ್‌ ಪುನರಾ ಗಮನ ಎನ್ನುವುದು ಫ್ರೆಂಚ್‌ ಓಪನ್‌ ದ್ವಿತೀಯ ಸುತ್ತಿನ ಆಘಾತಕಾರಿ ಸೋಲಿ ನೊಂದಿಗೆ ಕೊನೆಗೊಂಡಿದೆ. ವನಿತಾ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಜೋಡಿ ಕೂಡ ಹೊರಬಿದ್ದಿದೆ.

ಬುಧವಾರದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ನೊವಾಕ್‌ ಜೊಕೋವಿಕ್‌ ಪೋರ್ಚುಗಲ್‌ನ ಜೋ ಸೂಸ ಅವರನ್ನು 6-1, 6-4, 6-3ರಿಂದ ಮಣಿಸಿದರೆ, ಮುಗುರುಜಾ ಎಸ್ತೋನಿಯಾದ ಅನೆಟ್‌ ಕೊಂಟಾವೀಟ್‌ ಅವರನ್ನು ಬಹಳ ಕಷ್ಟದಿಂದ ಹಿಮ್ಮೆಟ್ಟಿಸಿದರು. ಮುಗುರುಜಾ ಗೆಲುವಿನ ಅಂತರ 6-7 (4-7), 6-4, 6-2. ರಫೆಲ್‌ ನಡಾಲ್‌ ಹಾಲೆಂಡಿನ ರೊಬಿನ್‌ ಹಾಸೆ ವಿರುದ್ಧ ಗೆದ್ದರು.

ವನಿತಾ ಸಿಂಗಲ್ಸ್‌ ಸೆಣಸಾಟದಲ್ಲಿ 15ನೇ ಶ್ರೇಯಾಂಕದ ಕ್ವಿಟೋವಾ ಅವರನ್ನು ಅಮೆರಿಕದ ಬೆಥನಿ ಮಾಟೆಕ್‌ ಸ್ಯಾಂಡ್ಸ್‌ ಭಾರೀ ಹೋರಾಟದ ಬಳಿಕ 7-6 (7-5), 7-6 (7-5) ಅಂತರದಿಂದ ಪರಾಭವಗೊಳಿಸಿದರು.

ವನಿತಾ ಡಬಲ್ಸ್‌ನಲ್ಲಿ ಅಗ್ರ ರ್‍ಯಾಂಕಿಂಗ್‌ ಹೊಂದಿರುವ 32ರ ಹರೆಯದ ಬೆಥನಿ, ಜೆಕ್‌ ಆಟಗಾರ್ತಿಯ ಎಲ್ಲ ರೀತಿಯ ಸವಾಲನ್ನು ಯಶಸ್ವಿಯಾಗಿ ಮೆಟ್ಟಿನಿಂತರು. ಎರಡೂ ಸೆಟ್‌ಗಳನ್ನು ಟೈ-ಬ್ರೇಕರ್‌ಗೆ ವಿಸ್ತರಿಸಿ ಅಲ್ಲಿ ಅದೃಷ್ಟದಾಟದಲ್ಲಿ ಜಯಶಾಲಿಯಾದರು. ಕಳೆದ ವರ್ಷ ಪ್ಯಾರಿಸ್‌ ಹಣಾಹಣಿಯಲ್ಲಿ 3ನೇ ಸುತ್ತಿನ ತನಕ ಮುನ್ನಡೆದಿದ್ದ ಕ್ವಿಟೋವಾ ಪಾಲಿಗೆ 2012ರಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದೇ ದೊಡ್ಡ ಸಾಧನೆಯಾಗಿದೆ.

ವೀನಸ್‌ ಸುಲಭ ಜಯ:  ಕೂಟದ ಅತೀ ಹಿರಿಯ ಆಟಗಾರ್ತಿ ವೀನಸ್‌ ವಿಲಿಯಮ್ಸ್‌ ದ್ವಿತೀಯ ಸುತ್ತಿನಲ್ಲಿ ಸುಲಭ ಜಯ ಸಾಧಿಸಿದರು. 10ನೇ ಶ್ರೇಯಾಂಕದ ಅಮೆರಿಕನ್‌ ಆಟಗಾರ್ತಿ ಜಪಾನಿನ ಕುರುಮಿ ನರಾ ಅವರನ್ನು 6-3, 6-1 ಅಂತರದ ಸೋಲುಣಿಸಿದರು.

ಆಸ್ಟ್ರೇಲಿಯದ ಸಮಂತಾ ಸ್ಟೋಸರ್‌ ಬೆಲ್ಜಿಯಂನ ಕ್ಸರ್ಟನ್‌ ಫ್ಲಿಪ್‌ಕೆನ್ಸ್‌ ವಿರುದ್ಧ ದ್ವಿತೀಯ ಸೆಟ್‌ನಲ್ಲಿ ಭಾರೀ ಸ್ಪರ್ಧೆ ಎದುರಿಸಿದರೂ ಅಂತಿಮವಾಗಿ 6-2, 7-6 (8-6) ಅಂತರದಿಂದ ಗೆದ್ದು ದ್ವಿತೀಯ ಸುತ್ತು ದಾಟಿದರು.

ನಂಬರ್‌ ವನ್‌ ಖ್ಯಾತಿಯ ಆ್ಯಂಜೆಲಿಕ್‌ ಕೆರ್ಬರ್‌ ಅವರನ್ನು ಮೊದಲ ಸುತ್ತಿನಲ್ಲೇ ಕೆಡವಿ ಸುದ್ದಿಯಾಗಿದ್ದ ರ್ಯಶದ ಎಕತೆರಿನಾ ಮಕರೋವಾ ದ್ವಿತೀಯ ಸುತ್ತಿನಲ್ಲಿ ಉರುಳಿ ಹೋಗಿದ್ದಾರೆ. ಅವರನ್ನು ಉಕ್ರೇನಿನ ಲೆಸಿಯಾ ಸುರೆಂಕೊ 6-2, 6-2ರಿಂದ ಸುಲಭದಲ್ಲಿ ಸೋಲಿಸಿದರು.

ಸೋಲನುಭವಿಸಿದ ಸೋಂಗ : ಫ್ರಾನ್ಸ್‌ನ ಬಲಾಡ್ಯ ಆಟಗಾರ, 12ನೇ ಶ್ರೇಯಾಂಕದ ಜೋ ವಿಲ್‌ಫ್ರೆಡ್‌ ಸೋಂಗ ಆರ್ಜೆಂಟೀನಾದ ಯುವ ಟೆನಿಸಿಗ ರೆಂಜೊ ಒಲಿವೊ ಕೈಯಲ್ಲಿ ದ್ವಿತೀಯ ಸುತ್ತಿನ ಸೋಲಿನ ಆಘಾತಕ್ಕೆ ಸಿಲುಕಿದ್ದು ಪುರುಷರ ಸಿಂಗಲ್ಸ್‌ ಸ್ಪರ್ಧೆಯ ಅಚ್ಚರಿಯ ಫ‌ಲಿತಾಂಶವೆನಿಸಿದೆ. ಒಲಿವೊ 7-5, 6-4, 6-7 (6-8), 6-4ರಿಂದ ಸೋಂಗಾಗೆ ಸೋಲುಣಿಸಿದರು.

ಆಸ್ಟ್ರಿಯಾದ 6ನೇ ಶ್ರೇಯಾಂಕದ ಆಟಗಾರ ಡೊಮಿನಿಕ್‌ ಥೀಮ್‌ 7-5, 6-1, 6-3ರಿಂದ ಇಟೆಲಿಯ ಸಿಮೋನ್‌ ಬೊಲೆಲ್ಲಿ ಅವರನ್ನು ಮಣಿಸಿದರು. 

ಸಾನಿಯಾ ಜೋಡಿಗೆ ಆಘಾತ
ವನಿತಾ ಡಬಲ್ಸ್‌ನಲ್ಲಿ ಭಾರತದ ಸಾನಿಯಾ ಮಿರ್ಜಾ-ಕಜಾಕ್‌ಸ್ಥಾನದ ಯೆರೋಸ್ಲಾವಾ ಶ್ವೆಡೋವಾ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದಾರೆ. ಇವರನ್ನು ಆಸ್ಟ್ರೇಲಿಯದ ಡರಿಯಾ ಗವ್ರಿಲೋವಾ-ರಶ್ಯದ ಅನಸ್ತಾಸಿಯಾ ಪಾವುÉಚೆಂಕೋವಾ ಸೇರಿಕೊಂಡು 7-6 (7-5), 1-6, 6-2ರಿಂದ ಪರಾಭವಗೊಳಿಸಿದರು.
 

Trending videos

Back to Top