CONNECT WITH US  

ಆರಕ್ಕೇರಿದ ಕುಕ್‌

ದುಬಾೖ: ವೆಸ್ಟ್‌ ಇಂಡೀಸ್‌ ಎದುರಿನ ಡೇ-ನೈಟ್‌ ಟೆಸ್ಟ್‌ ಪಂದ್ಯದಲ್ಲಿ ಅಮೋಘ ದ್ವಿಶತಕ ಬಾರಿಸಿದ ಇಂಗ್ಲೆಂಡ್‌ ಆರಂಭಕಾರ ಅಲಸ್ಟೇರ್‌ ಕುಕ್‌ ಒಮ್ಮೆಲೇ 6 ಸ್ಥಾನಗಳ ನೆಗೆತದೊಂದಿಗೆ ಟಾಪ್‌-10 ಯಾದಿಗೆ ಮರಳಿದ್ದಾರೆ. ಅವರೀಗ 6ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಇದು 2013ರ ಬಳಿಕ ಕುಕ್‌ ಅವರ ಅತ್ಯುತ್ತಮ ರ್‍ಯಾಂಕಿಂಗ್‌ ಆಗಿದೆ. ಅಂದು ಕುಕ್‌ 5ನೇ ಸ್ಥಾನಕ್ಕೆ ಏರಿದ್ದರು. ವೆಸ್ಟ್‌ ಇಂಡೀಸ್‌ ಸರಣಿಯಲ್ಲಿ ಇದೇ ಫಾರ್ಮ್ ಮುಂದುವರಿಸಿದರೆ ಕುಕ್‌ ರ್‍ಯಾಂಕಿಂಗ್‌ ಯಾದಿಯಲ್ಲಿ ಇನ್ನಷ್ಟು ಮೇಲೇರುವ ಸಾಧ್ಯತೆ ಇದೆ.

ಸದ್ಯ ಅಲಸ್ಟೇರ್‌ ಕುಕ್‌ ಹಾಗೂ 5ನೇ ಸ್ಥಾನದಲ್ಲಿರುವ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ನಡುವೆ ಕೇವಲ 8 ಅಂಕಗಳ ಅಂತರ ವಷ್ಟೇ ಇದೆ. ಕುಕ್‌ ಇದೇ ಓಟ ಮುಂದುವರಿಸಿದರೆ ಕೊಹ್ಲಿಯನ್ನು ಹಿಂದಿಕ್ಕುವುದು ಖಚಿತ ಎನ್ನಲಡ್ಡಿಯಿಲ್ಲ. ಸದ್ಯ ಭಾರತಕ್ಕೆ ಯಾವುದೇ ಟೆಸ್ಟ್‌ ಸರಣಿ ಇಲ್ಲದಿರುವುದರಿಂದ ಕೊಹ್ಲಿಗೆ ರ್‍ಯಾಂಕಿಂಗ್‌ ಪ್ರಗತಿ ಕಾಣಲು ಸಾಧ್ಯವಿಲ್ಲ.

ಇಂಗ್ಲೆಂಡಿನ ಮತ್ತೂಬ್ಬ ಶತಕ ವೀರ ಜೋ ರೂಟ್‌ ಒಟ್ಟು 905 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿ ದ್ದಾರೆ. ಶತಕ ಸಾಧನೆಗಾಗಿ ಅವರು 14 ಅಂಕ ಗಳಿಸಿದರು. ಆಸ್ಟ್ರೇಲಿಯ ತಂಡದ ನಾಯಕ ಸ್ಟೀವನ್‌ ಸ್ಮಿತ್‌ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಬೌಲಿಂಗ್‌ ರ್‍ಯಾಂಕಿಂಗ್‌ ಯಥಾಸ್ಥಿತಿ
ಬೌಲರ್‌ಗಳ ಟಾಪ್‌-10 ಯಾದಿ ಯಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಜೇಮ್ಸ್‌ ಆ್ಯಂಡರ್ಸನ್‌ 15 ಅಂಕ ಸಂಪಾದಿಸಿ ಅಗ್ರ 2 ಸ್ಥಾನಗಳ ನಡುವಿನ ಅಂತರವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಆ್ಯಂಡರ್ಸನ್‌ 875 ಹಾಗೂ ಅಗ್ರಸ್ಥಾನಿ ರವೀಂದ್ರ ಜಡೇಜ 884 ಆಂಕ ಹೊಂದಿದ್ದಾರೆ.

5 ವಿಕೆಟ್‌ಗಳ ಸಾಧಕ ಸ್ಟುವರ್ಟ್‌ ಬ್ರಾಡ್‌ 6 ಅಂಕ ಗಳಿಸಿದ್ದು, 7ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ ಬ್ರಾಡ್‌ ಹಾಗೂ 6ನೇ ಸ್ಥಾನಿ ಕಾಗಿಸೊ ರಬಾಡ ನಡುವಿನ ಅಂಕಗಳ ಅಂತರ 4ಕ್ಕೆ ಇಳಿದಿದೆ. ಮುಂದಿನ ಟೆಸ್ಟ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಬ್ರಾಡ್‌ ಆರಕ್ಕೇರಬಲ್ಲರು.


Trending videos

Back to Top