ಆರ್ಸಿಬಿಗೆ ಮಾಜಿ ವೇಗಿ ನೆಹ್ರಾ ಸಲಹೆಗಾರ
Team Udayavani, Dec 11, 2017, 6:05 AM IST
ಬೆಂಗಳೂರು: ಕಳೆದ ತಿಂಗಳಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಭಾರತದ ಮಾಜಿ ವೇಗಿ ಆಶೀಷ್ ನೆಹ್ರಾ ಮುಂದಿನ ಐಪಿಎಲ್ ಟಿ20 ಕ್ರಿಕೆಟ್ ವೇಳೆ ರಾಯಲ್ ಚಾಲೆಂಜರ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಸಲಹೆಗಾರರಾಗಿ ಆಯ್ಕೆಯಾಗಲಿದ್ದಾರೆ.
ಐಪಿಎಲ್ನಲ್ಲಿ ನೆಹ್ರಾ ಆಡುವುದಿಲ್ಲ ಎನ್ನುವುದು ಖಚಿತಗೊಂಡಿದೆ. ಆದರೆ ನೆಹ್ರಾ ತೆರೆಯ ಹಿಂದೆ ಈ ಸಲ ಆಡಲಿದ್ದಾರೆ. ಅದು ತಂಡವೊಂದರ ಸಲಹೆಗಾರರಾಗಿ ಎನ್ನುವುದು ವಿಶೇಷ. ಸ್ವತಃ ಅವರ ಆಪ್ತ ವಲಯದ ಮೂಲಗಳು ಈ ವಿಷಯವನ್ನು ಖಚಿತಪಡಿಸಿವೆ. ಆಶೀಷ್ ನೆಹ್ರಾ ತಂಡಕ್ಕೆ ಸಲಹೆಗಾರರಾಗಿ ಆಗಮಿಸುತ್ತಿರುವುದರ ಹಿಂದೆ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಕೃಪಾಕಟಾಕ್ಷ ಇದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಏನೇ ಆದರೂ ನೆಹ್ರಾ ಆಗಮನದಿಂದ ತುಕ್ಕು ಹಿಡಿದ ಆರ್ಸಿಬಿ ಬೌಲಿಂಗ್ ವಿಭಾಗ ಸದೃಢವಾಗುವುದರಲ್ಲಿ ಅನುಮಾನವೇ ಇಲ್ಲ.