ಲೀ ಚೋಂಗ್ ವೀಯನ್ನು ಸಂಪರ್ಕಿಸಿದ ಬುಕ್ಕಿಗಳು!
Team Udayavani, Feb 22, 2018, 6:05 AM IST
ಕೌಲಾಲಂಪುರ: ಮ್ಯಾಚ್ ಫಿಕ್ಸಿಂಗ್ ಆರೋಪದಡಿ ಇಬ್ಬರು ಮಲೇಶ್ಯನ್ ಆಟಗಾರು ತನಿಖೆಗೊಳಗಾಗಿರುವ ಬೆನ್ನಲ್ಲೇ ಮಲೇಶ್ಯನ್ ಸ್ಟಾರ್ ಆಟಗಾರ ಲೀ ಚೋಂಗ್ ವೀ ಅವರನ್ನು ಬುಕ್ಕಿಗಳು ಸಂಪರ್ಕಿಸಿರುವ ಸಂಗತಿಯೊಂದು ಬಹಿರಂಗಗೊಂಡಿದೆ. ಸ್ವತಃ ಲೀ ಇದನ್ನು ತಿಳಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ತನ್ನನ್ನು ಬುಕ್ಕಿಗಳು ಸಂಪರ್ಕಿಸಿದ್ದರು ಎಂದಿರುವ ವಿಶ್ವ ನಂ. 2 ಆಟಗಾರ ಲೀ ಚೋಂಗ್ ವೀ, “ನನ್ನ ಪಾಲಿಗೆ ಹಣವೇ ಮುಖ್ಯವಲ್ಲ. ರಾಷ್ಟ್ರದ ಹೆಮ್ಮೆಯನ್ನು ಕಾಯುವುದೇ ನನ್ನ ಮೊದಲ ಜವಾಬ್ದಾರಿ ಎಂದು ನಾನು ಭಾವಿಸಿದ್ದೇನೆ. ಒಬ್ಬ ಖ್ಯಾತ ಆಟಗಾರನಾಗಿ ಮ್ಯಾಚ್ ಫಿಕ್ಸಿಂಗ್ನಂತ ವಿಚಾರಗಳು ನನಗೆ ನಾಚಿಕೆ ಹುಟ್ಟಿಸುತ್ತದೆ. ಅದಷ್ಟು ಬೇಗ ಕೇಸ್ ಅಂತ್ಯ ಕಾಣಲಿ’ ಎಂದಿದ್ದಾರೆ.
ಕಳೆದ ವಾರ ಇಬ್ಬರು ಮಲೇಶ್ಯನ್ ಆಟಗಾರರು ಮ್ಯಾಚ್ ಫಿಕ್ಸಿಂಗ್ ಆರೋಪದಡಿ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ನಿಂದ ತನಿಖೆಗೊಳಗಾಗಿದ್ದರು. ಈ ಸಂದರ್ಭ ತನ್ನ ಸಂಗತಿಯೊಂದನ್ನು ನೆನಪಿಸಿಕೊಂಡಿರುವ ಲೀ ಚೋಂಗ್ ವೀ, ಮಲೇಶ್ಯದ “ನ್ಯೂ ಸ್ಟ್ರೇಟ್ಸ್ ಟೈಮ್ಸ್’ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.