CONNECT WITH US  

ಮೂರಕ್ಕೇರಿದ ಕ್ವಿಟೋವಾ, ಸ್ವಿಟೋಲಿನಾ

ಮೊದಲ ಸುತ್ತು ದಾಟಿದ ಸಿಮೋನಾ ಹಾಲೆಪ್‌ 

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಪಂದ್ಯಾವಳಿಯಲ್ಲಿ ದ್ವಿತೀಯ ಸುತ್ತಿನ ಹೋರಾಟ ಮೊದಲ್ಗೊಂಡಿದ್ದು, ವನಿತೆಯರ ಸಿಂಗಲ್ಸ್‌ನಲ್ಲಿ ಪೆಟ್ರಾ ಕ್ವಿಟೋವಾ, ಎಲಿನಾ ಸ್ವಿಟೋಲಿನಾ, ನವೋಮಿ ಒಸಾಕಾ, ಬಾಬೊìರಾ ಸ್ಟ್ರೈಕೋವಾ, ಅನೆಟ್‌ ಕೊಂಟವೀಟ್‌, ಕ್ಯಾಥರಿನಾ ಸಿನಿಯಕೋವಾ ಮೊದಲಾದವರೆಲ್ಲ ಮೂರನೇ ಸುತ್ತಿಗೆ ಏರಿದ್ದಾರೆ. ಇದೇ ವೇಳೆ ನಂ.1 ಆಟಗಾರ್ತಿ ಸಿಮೋನಾ ಹಾಲೆಪ್‌ ಮೊದಲ ಸುತ್ತಿನ ಪಂದ್ಯವನ್ನು ಗೆದ್ದು ಮುನ್ನಡೆದಿದ್ದಾರೆ.

8ನೇ ಶ್ರೇಯಾಂಕದ ಪೆಟ್ರಾ ಕ್ವಿಟೋವಾ ಸ್ಪೇನಿನ ಲಾರಾ ಅರೌಬರೆನಾ ವಿರುದ್ಧ 6-0, 6-4 ಅಂತರದ ಜಯ ಸಾಧಿಸಿದರು. ಮೊದಲ ಸೆಟ್‌ ವಶಪಡಿಸಿಕೊಳ್ಳಲು ಅವರಿಗೆ ಕೇವಲ 23 ನಿಮಿಷ ಸಾಕಾಯಿತು. ಇದರೊಂದಿಗೆ 2 ಬಾರಿಯ ವಿಂಬಲ್ಡನ್‌ ಚಾಂಪಿಯನ್‌ ಖ್ಯಾತಿಯ ಕ್ವಿಟೋವಾ ಕ್ಲೇ ಕೋರ್ಟ್‌ನಲ್ಲಿ ಸತತ 13 ಪಂದ್ಯಗಳನ್ನು ಗೆದ್ದಂತಾಗಿದೆ. ಇದಕ್ಕೂ ಮುನ್ನ ಪರಗ್ವೆ ಮತ್ತು ಮ್ಯಾಡ್ರಿಡ್‌ ಕೂಟಗಳಲ್ಲಿ ಅವರು ಚಾಂಪಿಯನ್‌ ಆಗಿ ಮೂಡಿಬಂದಿದ್ದರು. ಆದರೆ 2012ರ ಬಳಿಕ ಫ್ರೆಂಚ್‌ ಓಪನ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಕಾಣಲು ಕ್ವಿಟೋವಾಗೆ ಸಾಧ್ಯವಾಗಿಲ್ಲ. ಮುಂದಿನ ಸುತ್ತಿನಲ್ಲಿ ಅವರು ಎಸ್ತೋನಿಯಾದ ಅನೆಟ್‌ ಕೊಂಟವೀಟ್‌ ವಿರುದ್ಧ ಸೆಣಸಲಿದ್ದಾರೆ. 

ಸ್ವಿಟೋಲಿನಾ ಯಾನ
ಉಕ್ರೇನಿನ ಎಲಿನಾ ಸ್ವಿಟೋಲಿನಾ ಸ್ಲೊವಾಕಿ ಯಾದ ವಿಕ್ಟೋರಿಯಾ ಕುಜೊ¾àವಾ ವಿರುದ್ಧ 6-3, 6-4 ಅಂತರದಿಂದ ಗೆದ್ದು ಬಂದರು. ಇದ ರೊಂದಿಗೆ ಇದೇ ಮೊದಲ ಸಲ ರೊಲ್ಯಾಂಡ್‌ ಗ್ಯಾರೋಸ್‌ನಲ್ಲಿ ಆಡಲಿಳಿದ ಕುಜೊ¾àವಾ ಆಟ ಮುಗಿದಂತಾಯಿತು. ಕುಜೊ¾àವಾ ಮೊದಲ ಸುತ್ತಿನಲ್ಲಿ 2010ರ ಚಾಂಪಿಯನ್‌ ಫ್ರಾನ್ಸೆಸ್ಕಾ ಶಿಯವೋನ್‌ ಅವರನ್ನು ಸೋಲಿಸಿ ಸುದ್ದಿಯಾಗಿದ್ದರು. 

ಹಾಲೆಪ್‌ ಹೋರಾಟಕ್ಕೆ ಜಯ
ಬುಧವಾರ ಮೊದಲ ಸುತ್ತಿನ ಪಂದ್ಯವಾಡಿದ ಸಿಮೋನಾ ಹಾಲೆಪ್‌ ಅಮೆರಿಕದ ಅಲಿಸನ್‌ ರಿಸ್ಕೆ ವಿರುದ್ಧ  2-6, 6-1, 6-1 ಅಂತರದ ಗೆಲುವು ಸಾಧಿಸಿದರು. ದ್ವಿತೀಯ ಸುತ್ತಿನ ಮುಖಾಮುಖೀಯಲ್ಲಿ ಜಪಾನಿನ ನವೋಮಿ ಒಸಾಕಾ 6-4, 7-5 ಅಂತರದಿಂದ ಕಜಾಕ್‌ಸ್ಥಾನದ ಜರಿನಾ ದಿಯಾಸ್‌ ಅವರನ್ನು ಮಣಿಸಿದರು. 26ನೇ ಶ್ರೇಯಾಂಕದ ಜೆಕ್‌ ಆಟಗಾರ್ತಿ ಬಾಬೊìರಾ ಸ್ಟ್ರೈಕೋವಾ ರಶ್ಯದ ಎಕಟೆರಿನಾ ಮಕರೋವಾ ಅವರನ್ನು 6-4, 6-2 ಅಂತರದಿಂದ ಹಿಮ್ಮೆಟ್ಟಿಸಿದರು.

ಯೂಕಿ ಪರಾಭವ; ಬೋಪಣ್ಣ ಜೋಡಿ ಮುನ್ನಡೆ
ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಏಕೈಕ ಪ್ರತಿನಿಧಿಯಾಗಿದ್ದ ಯೂಕಿ ಭಾಂಬ್ರಿ ಮೊದಲ ಸುತ್ತಿನಲ್ಲೇ ಸೋತು ನಿರಾಸೆ ಮೂಡಿಸಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಜೋಡಿ ದ್ವಿತೀಯ ಸುತ್ತಿಗೆ ಮುನ್ನಡೆದಿದೆ. ಇದೇ ಮೊದಲ ಸಲ ಫ್ರೆಂಚ್‌ ಓಪನ್‌ನಲ್ಲಿ ಆಡುವ ಅವಕಾಶ ಪಡೆದ ಯೂಕಿ ಭಾಂಬ್ರಿ ಅವರನ್ನು ಬೆಲ್ಜಿಯಂನ ರುಬೆನ್‌ ಬಿಮೆಲ್ಮಾನ್ಸ್‌ 6-4, 6-4, 6-1 ನೇರ ಸೆಟ್‌ಗಳಲ್ಲಿ ಮಣಿಸಿದರು. ಇದು ಭಾಂಬ್ರಿ-ಬಿಮೆಲ್ಮಾನ್ಸ್‌ ನಡುವಿನ ದ್ವಿತೀಯ ಮುಖಾಮುಖೀ. 2015ರ "ಡೆಲ್ಲಿ ಓಪನ್‌'ನಲ್ಲಿ ಇವರಿಬ್ಬರ ನಡುವೆ ಮೊದಲ ಮುಖಾಮುಖೀ ಏರ್ಪಟ್ಟಿತ್ತು. ಅಂದು ಯೂಕಿ ಭಾಂಬ್ರಿ ಜಯ ಸಾಧಿಸಿದ್ದರು.

ಬೋಪಣ್ಣ 2ನೇ ಸುತ್ತಿಗೆ
ಕಳೆದ ವರ್ಷ ಇಲ್ಲಿಯೇ ಮಿಕ್ಸೆಡ್‌ ಡಬಲ್ಸ್‌ ನಲ್ಲಿ ಕೆನಡಾದ ಗ್ಯಾಬ್ರಿಯೇಲಾ ಡಾಬ್ರೋವ್‌ಸ್ಕಿ ಜತೆಗೂಡಿ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜಯಿಸಿದ ರೋಹನ್‌ ಬೋಪಣ್ಣ ಪುರುಷರ ಡಬಲ್ಸ್‌ನಲ್ಲಿ ದ್ವಿತೀಯ ಸುತ್ತು ತಲುಪಿದ್ದಾರೆ. ಬೋಪಣ್ಣ-ರೋಜರ್‌ ವೆಸಲಿನ್‌ ಜೋಡಿ ಅಮೆರಿಕದ ಟಯ್ಲರ್‌ ಫ್ರಿಟ್ಜ್-ಫ್ರಾನ್ಸೆಸ್‌ ಟಿಯಾಫೊ ಜೋಡಿಯನ್ನು ಕೇವಲ 63 ನಿಮಿಷ ಗಳಲ್ಲಿ 6-3, 6-1 ಅಂತರದಿಂದ ಮಣಿಸಿತು.

ಕ್ಯಾಟ್‌ವುಮನ್‌ ಸೆರೆನಾ!
ಅಮ್ಮನಾದ ಬಳಿಕ ಮೊದಲ ಬಾರಿಗೆ ಗ್ರ್ಯಾನ್‌ಸ್ಲಾಮ್‌ ಆಡಲಿಳಿಯುವ ಸೆರೆನಾ ವಿಲಿಯಮ್ಸ್‌ ಬಗ್ಗೆ ಎಲ್ಲರಲ್ಲೂ ವಿಶೇಷ ಕುತೂಹಲವಿತ್ತು. ಅವರ ಆಟ, ಉಡುಗೆ, ಕಿರುಚಾಟ, ಹಾವ-ಭಾವ, ಕಿರುಚಾಟ... ಎಲ್ಲವನ್ನೂ ಕಣ್ತುಂಬಿಸಿಕೊಳ್ಳಲು ಟೆನಿಸ್‌ ಅಭಿಮಾನಿಗಳು ಕಾತರರಾಗಿದ್ದರು.

ಬುಧವಾರ ರಾತ್ರಿ ಸೆರೆನಾ ವಿಲಿಯಮ್ಸ್‌ ಅಂಕಣಕ್ಕಿಳಿದಾಗ ಅಲ್ಲೊಂದು ರೀತಿಯಲ್ಲಿ ಮಿಂಚಿನ ಸಂಚಾರವಾಗಿತ್ತು. ಮತ್ತು ಅದು ಕಪ್ಪು ಮಿಂಚಾಗಿತ್ತು! ಕಾರಣ, ಸ್ಕರ್ಟ್‌ ಬದಲು ಕಪ್ಪು ಬಣ್ಣದ ಪ್ಯಾಂಟ್‌ ಧರಿಸಿಕೊಂಡು ಬಂದಿದ್ದರು. ಅವರ ಮೇಲಂಗಿ ಕೂಡ ಗಾಢ ಕಪ್ಪು ಬಣ್ಣದ್ದಾಗಿತ್ತು. ಸೊಂಟದ ಭಾಗದಲ್ಲೊಂದು ಕೆಂಪು ಪಟ್ಟಿ ಹೊರತುಪಡಿಸಿದರೆ ಸೆರೆನಾ ಹೆಸರಿಗೆ ತಕ್ಕಂತೆ ಕಪ್ಪು ಸುಂದರಿಯಾಗಿ ಗೋಚರಿಸುತ್ತಿದ್ದರು. ಸೆರೆನಾರ ಈ ವೇಷ ಕಂಡ ಮಾಧ್ಯಮದವರು "ಕ್ಯಾಟ್‌ವುಮನ್‌' ಎಂದು ಕರೆಯತೊಡಗಿದರು. ಈ ಕುರಿತು ಪ್ರತಿಕ್ರಿಯಿಸಿದ ಸೆರೆನಾ "ನನಗೀಗ ಸೂಪರ್‌ ಹೀರೋ ಇಮೇಜ್‌ ಬಂದಿದೆ' ಎಂದು ಹೇಳಿಕೊಂಡು ನಕ್ಕರು!

"ಇದೊಂದು ಫ‌ನ್‌ ಸೂಟ್‌. ಹಾಗೆಯೇ ಆರಾಮದಾಯಕವೂ ಹೌದು. ಹೀಗಾಗಿ ಈ ಉಡುಗೆಯಲ್ಲಿ ಆಡಲು ನನಗೇನೂ ಸಮಸ್ಯೆ ಆಗಲಿಲ್ಲ' ಎಂದು ಸೆರೆನಾ ಹೇಳಿದರು. ಮೊದಲ ಸುತ್ತಿನ ಪಂದ್ಯದಲ್ಲಿ ಸೆರೆನಾ ಜೆಕ್‌ ಗಣರಾಜ್ಯದ ಕ್ರಿಸ್ಟಿನಾ ಪ್ಲಿಸ್ಕೋವಾ ವಿರುದ್ಧ ಆತಂಕದ ಕ್ಷಣಗಳನ್ನು ಕಂಡು 7-6 (7-4), 6-4 ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.  

ಜೊಕೋವಿಕ್‌ ಜಯದ ಆಟ
ಬುಧವಾರದ ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ನೊವಾಕ್‌ ಜೊಕೋವಿಕ್‌ ಜಯದ ಆಟ ದಾಖಲಿಸಿದ್ದಾರೆ. 7-6 (7-1), 6-4, 6-4 ಅಂತರದಿಂದ ಸ್ಪೇನಿನ ಜೇಮ್‌ ಮುನಾರ್‌ ಅವರನ್ನು ಹಿಮ್ಮೆಟ್ಟಿಸಿದರು. 

17ನೇ ಶ್ರೇಯಾಂಕದ ಜೆಕ್‌ ಆಟಗಾರ ಥಾಮಸ್‌ ಬೆರ್ಡಿಶ್‌ ಮತ್ತು ಫ್ರಾನ್ಸ್‌ನ ಜೆರೆಮಿ ಚಾರ್ಡಿ ಮ್ಯಾರಥಾನ್‌ ಹೋರಾಟಕ್ಕೆ ಸಾಕ್ಷಿಯಾದರು. ಇದನ್ನು ಚಾರ್ಡಿ 7-6 (7-5), 7-6 (10-8), 1-6, 5-7, 6-2 ಅಂತರದಿಂದ ಗೆದ್ದರು. ಫ್ರಾನ್ಸ್‌ನ ಜೂಲಿಯನ್‌ ಬೆನೆಟೂ ಆರ್ಜೆಂಟೀನಾದ ಲಿಯೋನಾರ್ಡೊ ಮೇಯರ್‌ ವಿರುದ್ಧ 2-6, 7-6 (7-4), 6-2, 6-3 ಅಂತರದ ಗೆಲುವು ಒಲಿಸಿಕೊಂಡರು. ಸ್ಪೇನ್‌ನ ಫೆರ್ನಾಂಡೊ ವೆರ್ದೆಸ್ಕೊ ಕೂಡ 2ನೇ ಸುತ್ತು ದಾಟಿ ಮುನ್ನಡೆದಿದ್ದಾರೆ.

Trending videos

Back to Top