ವಿಮಾನ ಯಾನ: ಬಾರ್ಸಿಲೋನಾ ಕ್ಲಬ್ನಿಂದ ವನಿತೆಯರಿಗೆ ಅನ್ಯಾಯ
Team Udayavani, Jul 29, 2018, 12:17 PM IST
ಮ್ಯಾಡ್ರಿಡ್: ಲಯೋನೆಲ್ ಮೆಸ್ಸಿ ಅವರಂಥ ವಿಶ್ವದ ಖ್ಯಾತ ಫುಟ್ಬಾಲಿಗ ಆಡುತ್ತಿರುವ ಬಾರ್ಸಿಲೋನಾ ಕ್ಲಬ್ ಈಗ ವಿವಾದಕ್ಕೆ ಸಿಲುಕಿದೆ. ತಂಡದ ಆಟಗಾರರು ಪ್ರಯಾಣಿಸಿದ್ದ ವಿಮಾನದಲ್ಲಿ ಪುರುಷರ ತಂಡಕ್ಕೆ ಬ್ಯುಸಿನೆಸ್ ಕ್ಲಾಸ್ ಹಾಗೂ ಮಹಿಳಾ ತಂಡಕ್ಕೆ ಎಕಾನಮಿ ಕ್ಲಾಸ್ ಪ್ರಯಾಣ ಮಾಡಿಸಿದ ಘಟನೆ ನಡೆದಿದೆ. ಬಾರ್ಸಿಲೋನಾ ತಂಡ ತಾರತಮ್ಯ ನೀತಿ ಅನುಸರಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಏನಿದು ಘಟನೆ?
ಯುಎಸ್ನಲ್ಲಿ ಫುಟ್ಬಾಲ್ ಕೂಟವೊಂದಕ್ಕಾಗಿ ಬಾರ್ಸಿಲೋನಾ ಪುರುಷರ ಮತ್ತು ಮಹಿಳಾ ತಂಡ ಹೊರಟು ನಿಂತಿತ್ತು. ವಿಶೇಷವೆಂದರೆ ಇದೇ ಮೊದಲ ಸಲ ಮಹಿಳಾ ತಂಡ ಪುರುಷರ ತಂಡದ ಜತೆಗೆ ಪ್ರಯಾಣ ಬೆಳೆಸಿತ್ತು. ಇದೇ ವೇಳೆ ಪುರುಷರ ತಂಡ ಬ್ಯುಸಿನೆಸ್ ಕ್ಲಾಸ್ನಲ್ಲಿ ಪ್ರಯಾಣ ಬೆಳೆಸಿದೆ. ಮಹಿಳಾ ತಂಡಕ್ಕೆ ಎಕಾನಮಿ ಕ್ಲಾಸ್ ನೀಡಲಾಗಿದೆ. ಈ ವೇಳೆ ತಾರತಮ್ಯ ಎಸಗಲಾಗಿದೆ ಎನ್ನುವ ದೂರುಗಳು ಕೇಳಿಬಂದಿವೆ. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ವಿವಾದದ ಬೆನ್ನಲ್ಲೇ ಬಾರ್ಸಿಲೋನಾ ಮಾಧ್ಯಮ ವಕ್ತಾರ ಜೋಸೆಫ್ ಪ್ರತಿಕ್ರಿಯಿಸಿದ್ದಾರೆ. “ವಿಮಾನದಲ್ಲಿ ಮಹಿಳಾ ಸ್ಪರ್ಧಿಗಳಿಗೆ ಕೂರುವಷ್ಟು ಸೀಟುಗಳ ಲಭ್ಯತೆ ಇರಲಿಲ್ಲ. ಹೀಗಾಗಿ ಅವರು ಎಕಾನಮಿ ಕ್ಲಾಸ್ನಲ್ಲಿ ಪ್ರಯಾಣಿಸಬೇಕಾಯಿತು. ಪುರುಷರ ತಂಡದ ಜತೆಗೆಯೇ ಮಹಿಳಾ ತಂಡ ಕೂಟ ಪ್ರಯಾಣಿಸುವುದು ಅಂತಿಮ ಕ್ಷಣದಲ್ಲಿ ನಿರ್ಧಾರವಾಗಿದ್ದರಿಂದ ಇಂಥದೊಂದು ಘಟನೆ ನಡೆದಿದೆ. ಇದಕ್ಕೆ ಕ್ಷಮೆ ಯಾಚಿಸುತ್ತೇವೆ’ ಎಂದಿದ್ದಾರೆ.