CONNECT WITH US  

ವಾವ್ರಿಂಕ, ಜೊಕೋವಿಕ್‌ ದ್ವಿತೀಯ ಸುತ್ತಿಗೆ

ಟೊರಂಟೊ ಮಾಸ್ಟರ್ ಟೆನಿಸ್‌

ಟೊರಂಟೊ: ಸ್ಟಾನಿಸ್ಲಾಸ್‌ ವಾವ್ರಿಂಕ, ನೊವಾಕ್‌ ಜೊಕೋವಿಕ್‌ ಟೊರಾಂಟೊ ಮಾಸ್ಟರ್ ಟೆನಿಸ್‌ ಪಂದ್ಯಾವಳಿಯ ದ್ವಿತೀಯ ಸುತ್ತು ತಲುಪಿದ್ದಾರೆ. 

ವಿಂಬಲ್ಡನ್‌ ಚಾಂಪಿಯನ್‌ ಜೊಕೋವಿಕ್‌ ಬೋಸ್ನಿಯಾದ ಮಿರ್ಜಾ ಬಾಸಿಕ್‌ ವಿರುದ್ಧ 6-3, 7-6 (7-3) ಅಂತರದ ಗೆಲುವು ಸಾಧಿಸಿದರು. ದಕ್ಷಿಣ ಕೊರಿಯಾದ ಚುಂಗ್‌ ಹಿಯೋನ್‌ ಹಿಂದೆ ಸರಿದುದರಿಂದ ಬಾಸಿಕ್‌ ಆಡುವ ಅವಕಾಶ ಪಡೆ ದಿದ್ದರು. ಆದರೆ ಅವರ ಆಟ ಮೊದಲ ಸುತ್ತಿನಲ್ಲೇ ಮುಗಿಯಿತು. ಜೊಕೋವಿಕ್‌ ಇಲ್ಲಿ 4 ಸಲ ಪ್ರಶಸ್ತಿ ಎತ್ತಿದ ಹೆಗ್ಗಳಿಕೆ ಹೊಂದಿದ್ದಾರೆ. ಇವರ ಮುಂದಿನ ಎದುರಾಳಿ ಕೆನಡದ ಪೀಟರ್‌ ಪೋಲನ್‌ಸ್ಕಿ. 

3 ಬಾರಿಯ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್‌ ಸ್ಟಾನಿಸ್ಲಾಸ್‌ ವಾವ್ರಿಂಕ ಆಸ್ಟ್ರೇಲಿಯದ 16ನೇ ಶ್ರೇಯಾಂಕಿತ ನಿಕ್‌ ಕಿರ್ಗಿಯೋಸ್‌ ಅವರನ್ನು ಭಾರೀ ಹೋರಾಟದ ಬಳಿಕ 1-6, 7-5, 7-5 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು. 2015ರ ಕೂಟದ ವೇಳೆ ಕಿರ್ಗಿಯೋಸ್‌ ವಿರುದ್ಧ ಆಡುತ್ತಿದ್ದಾಗ ಗಾಯಾಳದ ವಾವ್ರಿಂಕ ಕೂಟದಿಂದ ಹೊರಗುಳಿದಿದ್ದರು. ಅಂದು ವಾವ್ರಿಂಕ ಅವರ ಗರ್ಲ್ಫ್ರೆಂಡ್‌ ಡೋನ್ನಾ ವೆಕಿಕ್‌ ಅವರನ್ನು ಅವಮಾನಿಸಿದ ಕಾರಣಕ್ಕಾಗಿಯೂ ಕಿರ್ಗಿಯೋಸ್‌ ಸುದ್ದಿಯಾಗಿದ್ದರು. 

ಕೆನಡಾದ ಯುವ ಆಟಗಾರರಿಬ್ಬರು ತವರಿನ ಕೂಟದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇವರಲ್ಲೊಬ್ಬರು ಡೆನ್ನಿಸ್‌ ಶಪೊವಲೋವ್‌. ಅವರು ಜೆರೆಮಿ ಚಾರ್ಡಿ ವಿರುದ್ಧ 6-1, 6-4 ಅಂತರದ ಗೆಲುವು ಕಂಡರು. ಬುಧವಾರವಷ್ಟೇ 18ರ ಹರೆಯಕ್ಕೆ ಕಾಲಿಟ್ಟ ಫೆಲಿಕ್ಸ್‌ ಯುಗರ್‌ ಅಲಿಯಾಸಿಮ್‌, ಲುಕಾಸ್‌ ಪೌಲಿ ಅವರನ್ನು 6-4, 6-3ರಿಂದ ಪರಾಭವಗೊಳಿಸಿದರು.

ಕೀ ನಿಶಿಕೊರಿ ಪರಾಭವ
ಜಪಾನಿನ ನೆಚ್ಚಿನ ಆಟಗಾರ ಕೀ ನಿಶಿಕೊರಿ ಕೂಡ ಆಘಾತಕಾರಿ ಸೋಲುಂಡು ಹೊರಬಿದ್ದಿದ್ದಾರೆ. ಅವರನ್ನು ಹಾಲೆಂಡಿನ ರಾಬಿನ್‌ ಹಾಸೆ 7-5, 6-1ರಿಂದ ಮಣಿಸಿದರು. 

ರಶ್ಯದ ಕರೆನ್‌ ಕಶನೋವ್‌ ಸರ್ಬಿಯಾದ ಫಿಲಿಪ್‌ ಕ್ರಾಜಿನೋವಿಕ್‌ ಅವರನ್ನು 6-3, 6-2 ಅಂತರದಿಂದ; ಅಮೆರಿಕದ ಸ್ಯಾಮ್‌ ಕ್ವೆರ್ರಿ ಫ್ರಾನ್ಸ್‌ನ ಅಡ್ರಿಯನ್‌ ಮನ್ನಾರಿನೊ ಅವರನ್ನು 6-2, 7-5 ಅಂತರದಿಂದ; ಅಮೆರಿಕದ ಫ್ರಾನ್ಸೆಸ್‌ ತಿಯಾಫೊ ಇಟಲಿಯ ಮಾರ್ಕೊ ಸೆಶಿನಾಟೊ ಅವರನ್ನು 7-6 (7-3), 6-1 ಅಂತರದಿಂದ; ಗ್ರೀಕ್‌ನ ಉದಯೋನ್ಮುಖ ಆಟಗಾರ ಸ್ಟೆಫ‌ನಸ್‌ ಸಿಸಿಪಸ್‌ ಬೋಸ್ನಿಯಾದ ದಮಿರ್‌ ಝುಮುರ್‌ ಅವರನ್ನು 6-3, 7-6 (7-3) ಅಂತರದಿಂದ ಸೋಲಿಸಿ ಮುನ್ನಡೆದರು.

ಕಳೆದ 3 ವರ್ಷಗಳಲ್ಲಿ 2 ಸಲ ಚಾಂಪಿಯನ್‌ ಆದ ಫ್ಯಾಬಿಯೊ ಫೊಗಿನಿ ಅಮೆರಿಕದ ಸ್ಟೀವ್‌ ಜಾನ್ಸನ್‌ಗೆ 6-4, 6-4ರಿಂದ ಆಘಾತವಿಕ್ಕಿದರು.

Trending videos

Back to Top