ಸ್ವರ್ಣವೇ ಸಾಕ್ಷಿ ಮಲಿಕ್ ಗುರಿ
Team Udayavani, Aug 16, 2018, 6:00 AM IST
ಹೊಸದಿಲ್ಲಿ: ರಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದು ಸುದ್ದಿಯಾದ ವನಿತಾ ಕುಸ್ತಿಪಟು ಸಾಕ್ಷಿ ಮಲಿಕ್, ಕಳೆದ ಗೋಲ್ಡ್ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ನಲ್ಲೂ ಕಂಚಿಗಿಂತ ಉತ್ತಮ ಸಾಧನೆ ದಾಖಲಿಸುವಲ್ಲಿ ವಿಫಲರಾಗಿದ್ದರು. ಹೀಗಾಗಿ ಏಶ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ದಿಂದ ಸಿಂಗಾರಗೊಳ್ಳಬೇಕೆಂಬ ಯೋಜನೆ ಹಾಕಿ ಕೊಂಡಿದ್ದಾರೆ. ಅದೃಷ್ಟವಿದ್ದರೆ ಚಿನ್ನದೊಂದಿಗೆ ದೇಶಕ್ಕೆ ಮರಳುವೆ ಎಂದಿದ್ದಾರೆ.
“ಕಾಮನ್ವೆಲ್ತ್ ಗೇಮ್ಸ್ ಕಂಚಿನ ಪದಕ ನನಗೆ ತೃಪ್ತಿ ಕೊಟ್ಟಿಲ್ಲ. ಇದಕ್ಕೂ ಹಿಂದಿನ ಗೇಮ್ಸ್ನಲ್ಲಿ ನಾನು ಬೆಳ್ಳಿ ಪದಕ ಜಯಿಸಿದ್ದೆ. ಗೋಲ್ಡ್ಕೋಸ್ಟ್ ಕೂಟಕ್ಕೂ 2 ತಿಂಗಳು ಮೊದಲು ಬಂಗಾರ ಪದಕ ವಿಜೇತೆ ಅಮಿನಾತ್ ಅದೆನೆಯಿ ಅವರನ್ನು ನಾನು 10-2 ಅಂತರದಿಂದ ಸೋಲಿಸಿದ್ದೆ. ಆದರೆ ಗೋಲ್ಡ್ಕೋಸ್ಟ್ನಲ್ಲಿ ನಾನು ಆಕೆಗೆ ಶರಣಾಗಬೇಕಾಯಿತು. ಹೀಗಾಗಿ ಜಕಾರ್ತಾದಲ್ಲಿ ಜಬರ್ದಸ್ತ್ ಪ್ರದರ್ಶನ ನೀಡಲೇಬೇಕಿದೆ. ಚಿನ್ನದ ಪದಕವೇ ನನ್ನ ಗುರಿ…’ ಎಂದಿದ್ದಾರೆ ಸಾಕ್ಷಿ ಮಲಿಕ್.
62 ಕೆಜಿ ವಿಭಾಗದಲ್ಲಿ ಸ್ಪರ್ಧೆ
“ಗೋಲ್ಡ್ಕೋಸ್ಟ್ ವೈಫಲ್ಯವನ್ನು ಮರೆತು ನಾನೀಗ ಏಶ್ಯಾಡ್ ಅಖಾಡಕ್ಕೆ ಇಳಿಯಲಿದ್ದೇನೆ. ಮಾನಸಿಕವಾಗಿಯೂ ಗಟ್ಟಿಯಾಗಿದ್ದೇನೆ. ಪ್ರತಿಯೊಂದು ಕ್ರೀಡಾಕೂಟವೂ ವಿಭಿನ್ನ ವಾಗಿರುತ್ತದೆ. ಏಶ್ಯದಲ್ಲಿ ಕುಸ್ತಿ ಹೆಚ್ಚು ಪ್ರಬಲ ಕ್ರೀಡೆಯಾಗಿರುವುದರಿಂದ ಸಹಜ ವಾಗಿಯೇ ಜಕಾರ್ತಾದಲ್ಲಿ ಕಠಿನ ಸ್ಪರ್ಧೆ ಎದುರಾಗಲಿದೆ…’ ಎಂದಿರುವ ಸಾಕ್ಷಿ ಮಲಿಕ್, 62 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಈಗಾಗಲೇ ಒಲಿಂಪಿಕ್ ಕಂಚು (2016), ಕಾಮನ್ವೆಲ್ತ್ ಗೇಮ್ಸ್ ಬೆಳ್ಳಿ (2014) ಹಾಗೂ ಕಂಚು (2018) ಗೆದ್ದಿರುವ ಸಾಕ್ಷಿ ಮಲಿಕ್, ಏಶ್ಯಾಡ್ನಲ್ಲಿ ಮೊದಲ ಪದಕದ ನಿರೀಕ್ಷೆಯಲ್ಲಿದ್ದಾರೆ.
ದೈವಬಲ, ಅದೃಷ್ಟ ಅತ್ಯಗತ್ಯ
ಎಲ್ಲವೂ ನಮ್ಮ ನಿರ್ದಿಷ್ಟ ದಿನದ ಸಾಧನೆಯನ್ನು ಅವಲಂಬಿಸಿರುತ್ತದೆ. ಜತೆಗೆ ದೈವ ಬಲವೂ ಬೇಕೆಂಬುದು ನನ್ನ ನಂಬಿಕೆ. ಅದೃಷ್ಟವಂತೂ ಅತ್ಯಗತ್ಯ. ಏಶ್ಯಾಡ್ಗಾಗಿ ನಾನು ಅತ್ಯುತ್ತಮ ಅಭ್ಯಾಸವನ್ನೇ ಮಾಡಿದ್ದೇನೆ.
ಸಾಕ್ಷಿ ಮಲಿಕ್