CONNECT WITH US  

ಸದ್ದಿಲ್ಲದೇ ಕ್ರಿಕೆಟ್ ಬದುಕಿಗೆ ಗುಡಬೈ ಹೇಳಿದ ಆರ್.ಪಿ.ಸಿಂಗ್

ಉತ್ತರ ಪ್ರದೇಶದ ಸಣ್ಣ ಹಳ್ಳಿಯ ಒಬ್ಬ ಹುಡುಗ ತನ್ನ ಅದ್ಭುತ ಸ್ವಿಂಗ್ ಬೌಲಿಂಗ್ ನಿಂದಲೇ 2005ರ ಸೆಪ್ಟೆಂಬರ್ 4ರಂದು ಭಾರತ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡುತ್ತಾರೆ. ಮುಂದೇ ಆತ ಚೊಚ್ಚಲ ಟಿ20 ವಿಶ್ವ ಕಪ್ ಭಾರತಕ್ಕೆ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತನ್ನ ಸ್ವಿಂಗ್ ಬೌಲಿಂಗ್ ನಿಂದಲೇ ಬ್ಯಾಟ್ಸ್ ಮನ್ ಗಳಿಗೆ ಸಿಂಹ ಸ್ವಪ್ನ ವಾಗಿದ್ದ ಈ ಎಡಗೈ ಬೌಲರ್  2018ರ ಅದೇ ಸೆಪ್ಟೆಂಬರ್ 4 ರಂದು ತನ್ನ ಕ್ರಿಕೆಟ್ ಬದುಕಿಗೆ ವಿದಾಯ ಹೇಳುತ್ತಾರೆ. ಇಷ್ಟೆಲ್ಲಾ ಹೇಳುವಾಗ ಆ ಆಟಗಾರ ಯಾರೆಂದು ಗೊತ್ತಾಗಿರಬಹುದು.  ಅವರೇ ಭಾರತದ ಸ್ವಿಂಗ್ ಬೌಲಿಂಗ್ ಸೆನ್ಸೇಷನ್ ರುದ್ರ ಪ್ರತಾಪ್ ಸಿಂಗ್. 

ಟೀಂ ಇಂಡಿಯಾದಲ್ಲಿ ಆರ್.ಪಿ.ಸಿಂಗ್ ಎಂದೇ ಪ್ರಸಿದ್ದರಾಗಿದ್ದ ಉತ್ತರಪ್ರದೇಶದ ಆಟಗಾರ ಹುಟ್ಟಿದ್ದು 1985ರ ಡಿಸೆಂಬರ್ 6 ರಂದು. ಗುರು ಗೋವಿಂದ್ ಸಿಂಗ್  ಸ್ಪೋರ್ಟ್ಸ್  ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದಾರೆ. 

2004ರಲ್ಲಿ ಬಾಂಗ್ಲಾ ದೇಶದಲ್ಲಿ ನಡೆದ ಅಂಡರ್ 19 ವಿಶ್ವಕಪ್ ನಲ್ಲಿ 8 ವಿಕೆಟ್ ಪಡೆದು ಗಮನ ಸೆಳೆದಿದ್ದ ರುದ್ರ ಪ್ರತಾಪ್ ಸಿಂಗ್ ನಂತರ ಉತ್ತರ ಪ್ರದೇಶ ರಣಜಿ ತಂಡವನ್ನು ಪ್ರತಿನಿಧಿಸಿದ್ದರು.

ಜಿಂಬಾಬ್ವೆ ವಿರುದ್ದ2005 ಸೆಪ್ಟೆಂಬರ್ 4 ರಂದು ಏಕದಿನ ಪಂದ್ಯದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಂಡ ಆರ್.ಪಿ.ಸಿಂಗ್ ಮುಂದೆ ತನ್ನ ಪ್ರತಿಭೆಯಿಂದಲೇ ತಂಡದ ಖಾಯಂ ಸದಸ್ಯರಾದರು. ತಾನಾಡಿದ ಮೂರನೇ ಏಕದಿನ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವುದು ಆರ್.ಪಿ.ಸಿಂಗ್ ಪ್ರತಿಭೆಗೆ ಸಾಕ್ಷಿ. 

2006ರ ಜನವರಿಯಲ್ಲಿ ಟೆಸ್ಟ್ ಕ್ರಿಕಟ್ ಗೆ ಪಾದಾರ್ಪಣೆ ಮಾಡಿದ ಈ ಎಡಗೈ ಸೀಮರ್ ಒಟ್ಟು 14 ಪಂದ್ಯಗಳಿಂದ 40 ವಿಕೆಟ್ ಕಬಳಿಸಿದ್ದಾರೆ. ಪಾಕಿಸ್ತಾನದ ವಿರುದ್ದ ಪ್ರಥಮ ಪಂದ್ಯದಲ್ಲೇ  5 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು. 58 ಏಕದಿನ  ಪಂದ್ಯಗಳಲ್ಲಿ 69 ವಿಕಟ್ ಗಳು ಆರ್.ಪಿ.ಸಿಂಗ್ ಹೆಸರಲ್ಲಿದೆ. ತನ್ನ ಏಕದಿನ ಕ್ರಿಕೆಟ್ ಬಾಳ್ವೆಯ ಮೊದಲ 11 ಪಂದ್ಯಗಳಲ್ಲಿ ಮೂರು ಸಲ ಪಂದ್ಯಶೇಷ್ಠ ಪ್ರಶಸ್ತಿ ಪಡೆದಿರುವುದು ಆರ್.ಪಿ.ಸಿಂಗ್ ಹಿರಿಮೆ.

ಚುಟುಕು ಕ್ರಿಕೆಟ್ ಟಿ 20ಯಲ್ಲಿ10 ಪಂದ್ಯಗಳಲ್ಲಿ 15 ವಿಕೆಟ್ ಪಡೆದಿದ್ದಾರೆ. 2007ರ ಮೊದಲ ಟಿ 20 ವಿಶ್ವಕಪ್ ನಲ್ಲಿ ರುದ್ರ ಪ್ರತಾಪ್ ಸಿಂಗ್ ಭಾರತದ ಬೌಲಿಂಗ್ ಹೀರೋ ಆಗಿದ್ದರು. ಕೂಟದಲ್ಲಿ 7 ಪಂದ್ಯಗಳಿಂದ 12 ವಿಕೆಟ್ ಪಡೆದು ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರು. ಭಾರತ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

 ಗಾಯದ ಸಮಸ್ಯೆ ಮತ್ತ ಕಳಪೆ ಫಾರ್ಮ್ ನಿಂದಾಗಿ  ತಂಡದಿಂದ ಹೊರಬಿದ್ದ ಈ ಎಡಗೈ ವೇಗಿ ನಂತರ ಕೇವಲ ರಣಜಿ ಮತ್ತು ಐಪಿಎಲ್ ಗಷ್ಟೇ  ಸೀಮಿರಾದರು. ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್, ಕೊಚ್ಚಿ ಟಸ್ಕರ್ಸ್ ಕೇರಳ, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಐಪಿಎಲ್ ಪಂದ್ಯಗಳನ್ನಾಡಿದ್ದಾರೆ.  2011ರಲ್ಲಿ ಟಿಂ ಇಂಡಿಯಾ ತಂಡಕ್ಕೆ ಪುನರಾಯ್ಕೆಯಾದರೂ ತಮ್ಮ ಆಯ್ಕೆಯನ್ನು ಸಮರ್ಥಿಕೊಳ್ಳಲು ವಿಫಲರಾಗಿದ್ದರು. ಹೀಗಾಗಿ ಇದೇ ಸರಣಿ ಇವರ ಕೊನೆಯ ಅಂತಾರಾಷ್ಟ್ರೀಯ  ಸರಣಿಯಾಯಿತು. 

ಆರ್.ಪಿ.ಸಿಂಗ್ 2015ರ ರಣಜಿ ಋತುವಿನಲ್ಲಿ ಉತ್ತರ ಪ್ರದೇಶ ತಂಡವನ್ನು ತೊರೆದು ಗುಜರಾತ್ ಪರವಾಗಿ ಆಡಲಾರಂಭಿಸಿದರು. 2009ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಕೊನೆಯ ಅಂತಾರಾಷ್ಟ್ರೀಯ ಟಿ 20 ಪಂದ್ಯವಾಡಿದ ಇವರು 2011ರ ಇಂಗ್ಲೆಂಡ್ ಸರಣಿಯ ನಂತರ ಟೀಂ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ. 

ರಣಜಿ ಪಂದ್ಯಗಳು, ಐಪಿಎಲ್ ಪಂದ್ಯಗಳನ್ನಾಡುತ್ತಾ ವೀಕ್ಷಕ ವಿವರಣೆಗಾರರಾಗಿಯೂ ಆರ್.ಪಿ.ಸಿಂಗ್ ಗುರುತಿಸಿ ಕೊಂಡಿದ್ದಾರೆ. ಆಡಿದ ಕಡಿಮೆ ಪಂದ್ಯಗಳಲ್ಲೇ ತಮ್ಮ ವಿಭಿನ್ನ ಶೈಲಿಯಿಂದ, ಸ್ವಿಂಗ್ ಬೌಲಿಂಗ್ ನಿಂದ ಅಪಾರ ಖ್ಯಾತಿ ಗಳಿಸಿ ಭಾರತಕ್ಕೆ ಜಯ ತಂದುಕೊಡುತ್ತಿದ್ದ  ರುದ್ರ ಪ್ರತಾಪ ಸಿಂಗ್ ಸೆಪ್ಟೆಂಬರ್ 4 ರಂದು ತಮ್ಮ ಕ್ರಿಕಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ.  ಆರ್.ಪಿ.ಸಿಂಗ್ ಬದುಕಿನ ಸೆಕೆಂಡ್ ಇನ್ನಿಂಗ್ಸ್ ಗೆ ಆಲ್ ದಿ ಬೆಸ್ಟ್. 

Trending videos

Back to Top