CONNECT WITH US  

ಡೆಲ್‌ ಪೊಟ್ರೊ, ನಡಾಲ್‌, ಸೆರೆನಾ ಸೆಮಿ ಪ್ರವೇಶ

ಸೆರೆನಾ-ಸೆವಸ್ತೋವಾ ಸೆಮಿಫೈನಲ್‌ ಸೆಣಸಾಟ

ನ್ಯೂಯಾರ್ಕ್‌: ಅತ್ಯಂತ ಕಳಪೆಯಾಗಿ ಕ್ವಾರ್ಟರ್‌ ಫೈನಲ್‌ ಆರಂಭಿಸಿದ ರಫೆಲ್‌ ನಡಾಲ್‌, 2009ರ ಚಾಂಪಿಯನ್‌ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ, 6 ಬಾರಿಯ ಚಾಂಪಿಯನ್‌ ಸೆರೆನಾ ವಿಲಿಯಮ್ಸ್‌ ಅವರೆಲ್ಲ ಯುಎಸ್‌ ಓಪನ್‌ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಕಳೆದ ವರ್ಷದ ವನಿತಾ ಸಿಂಗಲ್ಸ್‌ ಚಾಂಪಿಯನ್‌, ಅಮೆರಿಕದವರೇ ಆದ ಸ್ಲೋನ್‌ ಸ್ಟೀಫ‌ನ್ಸ್‌ ಪರಾಭವಗೊಂಡು ಕೂಟದಿಂದ ನಿರ್ಗಮಿಸಿದ್ದಾರೆ.

ವಿಶ್ವದ ನಂ.9 ಆಟಗಾರ ಡೊಮಿನಿಕ್‌ ಥೀಮ್‌ ವಿರುದ್ಧ ಆಡಲಿಳಿದಿದ್ದ ಕಳೆದ ಬಾರಿಯ ಚಾಂಪಿಯನ್‌ ರಫೆಲ್‌ ನಡಾಲ್‌ ಒಂದೂ ಅಂಕ ಗಳಿಸದೆ ಮೊದಲ ಸೆಟ್‌ ಕಳೆದುಕೊಂಡದ್ದು ವಿಶೇಷವಾಗಿತ್ತು. ಟೆನಿಸ್‌ ಬಾಳ್ವೆಯ 282 ಗ್ರ್ಯಾನ್‌ಸ್ಲಾಮ್‌ ಪಂದ್ಯಗಳಲ್ಲಿ ನಡಾಲ್‌ 6-0 ಅಂತರದಿಂದ ಎಡವಿದ 4ನೇ ನಿದರ್ಶನ ಇದಾಗಿದೆ. ಆದರೆ ಹಿಂದಿನ ಮೂರೂ ಸಲ ನಡಾಲ್‌ ಸೋಲನುಭವಿಸಿದ್ದರು. ಆದರೆ ಈ ಬಾರಿ 4 ಗಂಟೆ, 49 ನಿಮಿಷಗಳ ಕಾಲ ಹೋರಾಟ ನಡೆಸಿ ಥೀಮ್‌ ವಿರುದ್ಧ 0-6, 6-4, 7-5, 6-7 (4), 7-6 (5) ಅಂತರದಿಂದ ಗೆದ್ದು ಬಂದರು. ಇದು ಅವರ ಸತತ 7ನೇ ಯುಎಸ್‌ ಓಪನ್‌ ಕ್ವಾರ್ಟರ್‌ ಫೈನಲ್‌ ಗೆಲುವು. ನಡಾಲ್‌ ಕೊನೆಯ ಸಲ ಇಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದ್ದು 2006ರಲ್ಲಿ. 

4ನೇ ಯುಎಸ್‌ ಓಪನ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಫೆಲ್‌ ನಡಾಲ್‌ ಇನ್ನು ಆರ್ಜೆಂಟೀನಾದ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಅವರು ಆಮೆರಿಕದ ಬಿಗ್‌ ಸರ್ವರ್‌ ಖ್ಯಾತಿಯ ಜಾನ್‌ ಇಸ್ನರ್‌ ವಿರುದ್ಧ 6-7 (5), 6-3, 7-6 (4), 6-2 ಅಂತರದ ಜಯ ಸಾಧಿಸಿದರು. ಇದರೊಂದಿಗೆ ಪುರುಷರ ಸಿಂಗಲ್ಸ್‌ನಲ್ಲಿ ಆತಿಥೇಯ ಅಮೆರಿಕನ್ನರ ಹೋರಾಟ ಕೊನೆಗೊಂಡಿದೆ. ಉಳಿದೆರಡು ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಮರಿನ್‌ ಸಿಲಿಕ್‌-ಕೀ ನಿಶಿಕೊರಿ ಹಾಗೂ ನೊವಾಕ್‌ ಜೊಕೋವಿಕ್‌-ಜಾನ್‌ ವಿಲ್‌ಮಾನ್‌ ಸೆಣಸಲಿದ್ದಾರೆ.

ಸೆರೆನಾಗೆ ಸುಲಭ ಜಯ
7ನೇ ಸಲ ತವರಿನ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸೆರೆನಾ ವಿಲಿಯಮ್ಸ್‌ 8ನೇ ಶ್ರೇಯಾಂಕದ ಕ್ಯಾರೋಲಿನಾ ಪ್ಲಿಸ್ಕೋವಾ ಅವರನ್ನು 6-4, 6-3ರಿಂದ ಪರಾಭವಗೊಳಿಸಿದರು. ಇವರ ಮುಂದಿನ ಎದುರಾಳಿ ಲಾತ್ವಿಯಾದ ಅನಾಸ್ತಾಸಿಜಾ ಸೆವಸ್ತೋವಾ. ದಿನದ ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಅವರು ಅಮೆರಿಕದ ಮತ್ತೋರ್ವ ಆಟಗಾರ್ತಿ, ಹಾಲಿ ಚಾಂಪಿಯನ್‌ ಸ್ಲೋನ್‌ ಸ್ಟೀಫ‌ನ್ಸ್‌ಗೆ 6-2, 6-3 ಅಂತರದಿಂದ ಆಘಾತವಿಕ್ಕಿದರು.

ಸೆರೆನಾ ವಿಲಿಯಮ್ಸ್‌ ಇಲ್ಲಿ ಚಾಂಪಿಯನ್‌ ಆಗಿ ಮೂಡಿಬಂದರೆ ಮಾರ್ಗರೇಟ್‌ ಕೋರ್ಟ್‌ ಅವರ ಸಾರ್ವಕಾಲಿಕ ಗ್ರ್ಯಾನ್‌ಸ್ಲಾಮ್‌ ಗೆಲುವಿನ ದಾಖಲೆಯನ್ನು ಸರಿದೂಗಿಸಲಿದ್ದಾರೆ (24). ಜತೆಗೆ ಅತೀ ಹೆಚ್ಚು ಯುಎಸ್‌ ಓಪನ್‌ ಪ್ರಶಸ್ತಿ ಗೆದ್ದ ಕ್ರಿಸ್‌ ಎವರ್ಟ್‌ ಸಾಲಿನಲ್ಲೂ ಕಾಣಿಸಿಕೊಳ್ಳಲಿದ್ದಾರೆ (7). ವನಿತೆಯರ ಉಳಿದೆರಡು ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ನವೊಮಿ ಒಸಾಕಾ-ಲೆಸಿಯಾ ಸುರೆಂಕೊ ಹಾಗೂ ಕಾರ್ಲಾ ಸೂರೆಜ್‌ ನವಾರೊ-ಮ್ಯಾಡಿಸನ್‌ ಕೀಸ್‌ ಮುಖಾಮುಖಿಯಾಗಲಿದ್ದಾರೆ. ಇಲ್ಲಿ ಗೆದ್ದವರು ಇನ್ನೊಂದು ಸೆಮಿಫೈನಲ್‌ನಲ್ಲಿ ಎದುರಾಗಲಿದ್ದಾರೆ.

Trending videos

Back to Top