CONNECT WITH US  

ದೈತ್ಯ ಸೆರೆನಾಗೆ ಒಸಾಕಾ ಸವಾಲು

ನ್ಯೂಯಾರ್ಕ್‌: ಯುಎಸ್‌ ಓಪನ್‌ ವನಿತಾ ಫೈನಲ್‌ ಹಣಾಹಣಿಗೆ ರಂಗ ಸಜ್ಜಾಗಿದೆ. ಆತಿಥೇಯ ನಾಡಿನ ದೈತ್ಯ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಮತ್ತು ಜಪಾನಿನ ಯುವ ತಾರೆ ನವೋಮಿ ಒಸಾಕಾ ಪರಸ್ಪರ ಎದುರಾಗಲಿದ್ದಾರೆ. ಭಾರತೀಯ ಕಾಲಮಾನ ಪ್ರಕಾರ ಶನಿವಾರ ನಡು ರಾತ್ರಿ ಬಳಿಕ 1.30ಕ್ಕೆ ಈ ಕುತೂಹಲಕಾರಿ ಸಮರ ಆರಂಭವಾಗಲಿದೆ.

ಸೆಮಿಫೈನಲ್‌ ಹಣಾಹಣಿ ಯಲ್ಲಿ ಸೆರೆನಾ ವಿಲಿಯಮ್ಸ್‌ ಲಾತ್ವಿಯಾದ ಅನಾಸ್ತಾಸಿಜಾ ಸೆವಸ್ತೋವಾ ಅವರನ್ನು 6-3, 6-0 ಅಂತರದಿಂದ ಸುಲಭದಲ್ಲಿ ಸೋಲಿಸಿದರೆ, ನವೋಮಿ ಒಸಾಕಾ ಆತಿಥೇಯ ನಾಡಿನ ಮ್ಯಾಡಿಸನ್‌ ಕೀಸ್‌ ಅವರನ್ನು 6-2, 6-4 ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿದರು. ಕೀಸ್‌ ಪರಾಭವದೊಂದಿಗೆ ಸತತ 2ನೇ ವರ್ಷ ಯುಎಸ್‌ ಓಪನ್‌ ವನಿತಾ ಸಿಂಗಲ್ಸ್‌ನಲ್ಲಿ "ಆಲ್‌ ಅಮೆರಿಕನ್‌ ಫೈನಲ್‌' ತಪ್ಪಿತು. 2017ರಲ್ಲಿ ಮ್ಯಾಡಿಸನ್‌ ಕೀಸ್‌ ಮತ್ತು ಸ್ಲೋನ್‌ ಸ್ಟೀಫ‌ನ್ಸ್‌ ಮುಖಾಮುಖಿಯಾಗಿದ್ದರು.

ಜಪಾನಿಗೆ ಮೊದಲ ಫೈನಲ್‌ ಟಿಕೆಟ್‌
ಜಪಾನಿ ಆಟಗಾರ್ತಿಯೊಬ್ಬರು ಗ್ರ್ಯಾನ್‌ಸ್ಲಾಮ್‌ ಫೈನಲ್‌ಗೆ ಲಗ್ಗೆ ಇಡುತ್ತಿರುವುದು ಇದೇ ಮೊದಲು. ಅಕಸ್ಮಾತ್‌ ಸೆರೆನಾ ಅವರನ್ನು ಮಣಿಸಿ ಒಸಾಕಾ ಚಾಂಪಿಯನ್‌ ಆದರಂತೂ ಅದು ಟೆನಿಸ್‌ ಲೋಕದ ಇತಿಹಾಸ ಹಾಗೂ ಪವಾಡಗಳೆರಡಕ್ಕೂ ಸಾಕ್ಷಿಯಾಗಲಿದೆ. 

ಕಳೆದ ಮಾರ್ಚ್‌ನಲ್ಲಿ ನಡೆದ ಮಯಾಮಿ ಟೆನಿಸ್‌ ಕೂಟದಲ್ಲಿ ಸೆರೆನಾ ಅವರನ್ನು ಸೋಲಿಸಿದ ಹೆಗ್ಗಳಿಕೆ ಒಸಾಕಾ ಪಾಲಿಗಿದೆ. ಆದರೆ ಮ್ಯಾಡಿಸನ್‌ ಕೀಸ್‌ ವಿರುದ್ಧ ಒಸಾಕಾ ದಾಖಲೆಯೇನೂ ಉತ್ತಮವಾಗಿರಲಿಲ್ಲ. ಈ ಸೆಮಿಫೈನಲ್‌ಗ‌ೂ ಮೊದಲು ಕೀಸ್‌ ವಿರುದ್ಧ ಆಡಿದ ಎಲ್ಲ 3 ಪಂದ್ಯಗಳಲ್ಲೂ ಸೋಲನುಭವಿಸಿದ್ದರು.

ಸೆಮಿಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ ಗೆಲುವು ಅಚ್ಚರಿಯೇನಲ್ಲ. ಆದರೆ ಜಪಾನಿನ ನವೋಮಿ ಒಸಾಕಾ ಗೆದ್ದು ಬಂದದ್ದು ನಿಜಕ್ಕೂ ಅಚ್ಚರಿ. ಅಮೆರಿಕನ್‌ ಆಟಗಾರ್ತಿಯನ್ನು ಅವರದೇ ನೆಲದಲ್ಲಿ ಸೋಲಿಸುವ ಮೂಲಕ ಒಸಾಕಾ ನ್ಯೂಯಾರ್ಕ್‌ನಲ್ಲಿ ನೂತನ ಸಂಚಲನವನ್ನೇ ಮೂಡಿಸಿದ್ದಾರೆ. ಎಂದೂ ಗ್ರ್ಯಾನ್‌ಸ್ಲಾಮ್‌ ನಾಕೌಟ್‌ ಹಂತ ಪ್ರವೇಶಿಸದ ಒಸಾಕಾ, ಈ ವರ್ಷದ ಆಸ್ಟ್ರೇಲಿಯನ್‌ ಓಪನ್‌ನಲ್ಲಿ 4ನೇ ಸುತ್ತು ಪ್ರವೇಶಿಸಿದ್ದೇ ಶ್ರೇಷ್ಠ ಸಾಧನೆ. ಫ್ರೆಂಚ್‌ ಓಪನ್‌ ಹಾಗೂ ವಿಂಬಲ್ಡನ್‌ನಲ್ಲಿ 3ನೇ ಸುತ್ತು ಗಡಿ ದಾಟಿದವರಲ್ಲ. ಹೀಗಿರುವಾಗ ಏಕಾಏಕಿ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಸುತ್ತಿಗೆ ನೆಗೆಯುವ ಮೂಲಕ ಒಸಾಕಾ ವಿಶ್ವ ಟೆನಿಸ್‌ನಲ್ಲಿ ಏಶ್ಯದ ಛಾಪು ಮೂಡಿಸಿದ್ದಾರೆ.

ಸೆರೆನಾಗೆ 31ನೇ ಫೈನಲ್‌
ಇತ್ತ ವೀನಸ್‌ ವಿಲಿಯಮ್ಸ್‌ಗೆ ಇದು 9ನೇ ಯುಎಸ್‌ ಓಪನ್‌ ಫೈನಲ್‌. ಒಟ್ಟಾರೆಯಾಗಿ 31ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಸಮರ. ಕಳೆದೆರಡು ಸಲವೂ ಸೆರೆನಾ ಯುಎಸ್‌ ಓಪನ್‌ ಸೆಮಿಫೈನಲ್‌ ದಾಟುವಲ್ಲಿ ವಿಫ‌ಲರಾಗಿದ್ದರು. 2015ರಲ್ಲಿ ರಾಬರ್ಟಾ ವಿನ್ಸಿಗೆ ಶರಣಾದರೆ, 2016ರಲ್ಲಿ ಕ್ಯಾರೋಲಿನಾ ಪ್ಲಿಸ್ಕೋವಾಗೆ ಸೋತಿದ್ದರು. ಮಗುವಿಗೆ ಜನ್ಮ ನೀಡಿದ್ದರಿಂದ ಕಳೆದ ವರ್ಷದ ತವರಿನ ಕೂಟದಿಂದ ದೂರ ಉಳಿದಿದ್ದರು. ಈಗ ಮತ್ತೆ ಲಯ ಕಂಡುಕೊಂಡು 24ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ಹೊಸ್ತಿಲಲ್ಲಿ ನಿಂತಿದ್ದಾರೆ. ಜಯ ಸಾಧಿಸಿದರೆ ಮಾರ್ಗರೇಟ್‌ ಕೋರ್ಟ್‌ ಅವರ ಸಾರ್ವಕಾಲಿಕ ದಾಖಲೆಯನ್ನು ಸರಿದೂಗಿಸಲಿದ್ದಾರೆ. ಇದೇ 26ರಂದು 37ನೇ ಜನ್ಮದಿನವನ್ನು ಆಚರಿಸಿಕೊಳ್ಳಲಿರುವ ಸೆರೆನಾ, ಇಲ್ಲಿ ಚಾಂಪಿಯನ್‌ ಆದರೆ ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್‌ ಗೆದ್ದ ಅತೀ ಹಿರಿಯ ಆಟಗಾರ್ತಿ ಎಂಬ ದಾಖಲೆಯನ್ನೂ ಬರೆಯಲಿದ್ದಾರೆ.


Trending videos

Back to Top