CONNECT WITH US  

ಚಿತ್ರಾ ಬದುಕೀಗ ಯಶಸ್ಸಿನ ಚಿತ್ತಾರ

ಆ್ಯತ್ಲೆಟಿಕ್‌ ಫೆಡರೇಶನ್‌ ಅನ್ಯಾಯಕ್ಕೆ ಪದಕವೇ ಉತ್ತರ

"ಮೊದಲ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲೇ ಪದಕ ಗೆದ್ದೆ' ಎಂದು ವಿಪರೀತ ಸಂಭ್ರಮ ವ್ಯಕ್ತಪಡಿಸಿದವರು ಏಶ್ಯನ್‌ ಗೇಮ್ಸ್‌ 1,500 ಮೀ. ಓಟದಲ್ಲಿ ಕಂಚಿನ ಪದಕ ಗೆದ್ದ ಕೇರಳದ ಓಟಗಾರ್ತಿ ಚಿತ್ರಾ ಉಣ್ಣಿಕೃಷ್ಣನ್‌. ಇದಕ್ಕೂ ಮೊದಲೇ ಅಂತಾರಾಷ್ಟ್ರೀಯ ಕೂಟದಲ್ಲಿ ಭಾಗವಹಿಸುವ ಅರ್ಹತೆ ಈಕೆಗಿದ್ದರೂ, ಭಾರತೀಯ ಆ್ಯತ್ಲೆಟಿಕ್ಸ್‌ ಫೆಡರೇಷನ್‌ನಿಂದ (ಎಎಫ್ಐ) ತಿರಸ್ಕರಿಸಲ್ಪಟ್ಟಿದ್ದರು. ಈ ತಿರಸ್ಕಾರ, ಆರ್ಥಿಕ ಹಿನ್ನಡೆ, ಅವಮಾನವನ್ನೆಲ್ಲ ಬದಿಗಿಟ್ಟು, ಭಾರತಕ್ಕೆ ಹೆಮ್ಮೆ ತಂದಿತ್ತಿದ್ದಾರೆ 23ರ ಈ ಸಾಧಕಿ. ಗೆದ್ದದ್ದು ಕಂಚಾದರೂ ಚಿತ್ರಾಗೆ ಇದು ಚಿನ್ನ ಸಮಾನ.

ಒಂದೆಡೆ ಕೇರಳ ಭೀಕರ ಮಳೆಗೆ ತತ್ತರಿಸಿ ಹೋಗುತ್ತಿದ್ದರೆ, ಅತ್ತ ಅದೇ ರಾಜ್ಯದ ಕ್ರೀಡಾಪಟುಗಳು ಒತ್ತಡದ ನಡುವೆಯೂ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ, ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ನೋವಿನ ನಡುವೆಯೂ ಕೇರಳದ ಜನತೆಯ ತುಟಿಯಂಚಿನಲ್ಲಿ ನಗು ತರಿಸಿದ್ದಾರೆ. ಇವರಲ್ಲಿ ಚಿತ್ರಾ ಉಣ್ಣಿಕೃಷ್ಣನ್‌ ಕೂಡ ಒಬ್ಬರು. ಸಾಧಿಸಲು ಹಣ ಒಂದೇ ಅಗತ್ಯವಲ್ಲ, ಛಲ, ಉತ್ಸಾಹವಿದ್ದರೆ ಜಗತ್ತನ್ನೇ ಗೆಲ್ಲಬಹುದು ಎಂಬುದು ಚಿತ್ರಾ ನಂಬಿಕೆ.

ಒಂದು ತುತ್ತಿಗೂ ಪರದಾಟ
ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಮುಂಡೂರ್‌ ಎಂಬ ಪುಟ್ಟ ಹಳ್ಳಿಯ ಚಿತ್ರಾ ಅವರದು ಸುಖ ಜೀವನವಲ್ಲ. ಅವರ ಕುಟುಂಬ ಒಂದು ತುತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿತ್ತು. ಚಿತ್ರಾ ತಂದೆ ಉಣ್ಣಿಕೃಷ್ಣನ್‌, ತಾಯಿ ವಸಂತಾ ಕುಮಾರಿ ಇಬ್ಬರೂ ಕೂಲಿಯಾಳುಗಳು. ಒಂದು ಸಂದರ್ಭದಲ್ಲಿ ಹೆತ್ತವರಿಗೆ ಯಾವುದೇ ಕೆಲಸ ದೊರೆಯದಿದ್ದಾಗ 6 ಜನರನ್ನೊಳಗೊಂಡ ಕುಟುಂಬ ಉಳಿದ ಆಹಾರ ತಿಂದು ಬದುಕಿದ್ದಿದೆ. ಹಸಿದ ಹೊಟ್ಟೆಯಲ್ಲೇ ದಿನ ಕಳೆದದ್ದೂ ಇದೆ. ಆದರೆ ಇವೆಲ್ಲದರ ನಡುವೆಯೂ ಚಿತ್ರಾ ಬೆಳಗ್ಗೆ 5.45ಕ್ಕೆ ತರಬೇತಿಯಲ್ಲಿ ತೊಡಗಿಕೊಳ್ಳುತ್ತಿದ್ದರು. ವಿದ್ಯಾಬ್ಯಾಸಕ್ಕಾಗಿ ಕೇರಳದ ಕ್ರೀಡಾ ಕೌನ್ಸಿಲ್‌ನಿಂದ ಪ್ರತಿದಿನ 25 ರೂ.,ತರಬೇತಿಗಾಗಿ "ಸಾಯ್‌' ಮೂಲಕ ತಿಂಗಳಿಗೆ 600 ರೂ. ಸಿಗುತ್ತಿತ್ತು. ಇದರಲ್ಲೇ ತನ್ನ ಆಸೆ ಅಕ್ಷಾಂಕೆಗಳನ್ನು ಈಡೇರಿಸುವ ಕನಸು ಹೊತ್ತ ಚಿತ್ರಾ ಈಗ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.

ಕನಸನ್ನೇ ತುಳಿದ ಎಎಫ್ಐ
2017ರ ಏಶ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ 4ನಿಮಿಷ 17.92 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ಚಿನ್ನದ ಪದಕ ಗೆದ್ದ ಚಿತ್ರಾ ಮುಂದಿನ ವಿಶ್ವ ಆ್ಯತ್ಲೆಟಿಕ್‌ ಮೀಟ್‌ಗೆೆ ಆಯ್ಕೆಯಾಗುತ್ತೇನೆ ಎಂಬ ಕನಸು ಕಂಡಿದ್ದರು. ಆದರೆ ಭಾರತೀಯ ಆ್ಯತ್ಲೆಟಿಕ್ಸ್‌ ಫೆಡರೇಷನ್‌ ಚಿತ್ರಾರನ್ನು ವಿಶ್ವ ಆ್ಯತ್ಲೆಟಿಕ್‌ ಮೀಟ್‌ಗೆ ಆರಿಸದೆ ಅನ್ಯಾಯ ಮಾಡಿತು. "ಸಾಮರ್ಥ್ಯಕ್ಕೆ ತಕ್ಕ ಸಾಧನೆ' ಮಾಡಿಲ್ಲ ಎಂಬ ಸಬೂಬು ನೀಡಿತು. ಆಗ ಕೇರಳ ಸರಕಾರ, ಸಾರ್ವಜನಿಕರಿಂದ ಚಿತ್ರಾಗೆ ಸಾಕಷ್ಟು ಬೆಂಬಲ ದೊರಕಿತು. ನ್ಯಾಯಲಯ ಮೆಟ್ಟಿಲೇರಿದ ಚಿತ್ರಾಗೆ ನ್ಯಾಯವೇನೋ ದೊರಕಿತು. ಆದರೆ ಆಗಲೇ ಸಮಯ ಮೀರಿದ್ದರಿಂದ ಸ್ಪರ್ಧಿಸುವ ಅವಕಾಶ ಕೈತಪ್ಪಿತು. ಇದೇ ವೇಳೆ ಕೇರಳದವರೇ ಆದ ಪಿ.ಟಿ ಉಷಾ ಚಿತ್ರಾಗೆ ಸಹಾಯ ಮಾಡುತ್ತಿಲ್ಲ ಎಂಬ ಕಾರಣಕ್ಕೆ ವ್ಯಾಪಕ ಟೀಕೆಗೂ ಗುರಿಯಾಗಿದರು. ಸಾಮಾಜಿಕ ಜಾಲತಾಣಗಳೂ "ಐ ಸಪೋರ್ಟ್‌ ಚಿತ್ರಾ' ಅಭಿಯಾನ ಆರಂಭಿಸಿದವು. ಚಿತ್ರಾ ಏಶ್ಯಾಡ್‌ನ‌ಲ್ಲಿ ಪದಕ ಗೆಲ್ಲುತ್ತಿದ್ದಂತೆಯೇ "ಭಾರತೀಯ ಆ್ಯತ್ಲೆಟಿಕ್ಸ್‌ ಫೆಡರೇಷನ್‌ಗೆ ಇದು ಸರಿಯಾದ ಉತ್ತರ' ಎಂದು ಸಾಮಾಜಿಕ ಜಾಲತಾಣಗಳು ಬೆಂಬಲಕ್ಕೆ ನಿಂತವು.

ಚಿತ್ರಾ ಚಿನ್ನದ ಸಾಧನೆ 
2016ರ ದಕ್ಷಿಣ ಏಶ್ಯನ್‌ ಗೇಮ್ಸ್‌ 1,500 ಮೀ. ಓಟದಲ್ಲಿ ಚಿನ್ನ, 2017ರ ಏಶ್ಯನ್‌ ಇಂಡೋರ್‌ ಮತ್ತು ಮಾರ್ಷಿಯಲ್‌ ಆರ್ಟ್ಸ್ ಗೇಮ್ಸ್‌ನಲ್ಲಿ ಚಿನ್ನ, ಏಶ್ಯನ್‌ ಆ್ಯತ್ಲಿಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, ರಾಜ್ಯ-ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಹಲವು ಚಿನ್ನದ ಪದಕ ಗೆದ್ದಿದ್ದಾರೆ. ಚಿತ್ರಾ ಮುಟ್ಟಿದ್ದೆಲ್ಲ ಚಿನ್ನ!  ಚಿತ್ರಾ ಸಾಧನೆಗೆ ನೀರೆರೆದು ಪೋಷಿಸಿದವರು ತರಬೇತುಗಾರ ಸಿಜಿನ್‌ ಎನ್‌.ಎಸ್‌.

"ಮಗಳ ಈ ಸಾಧನೆ ಸಂಭ್ರಮ ತಂದಿದೆ. ಆದರೆ ನಾವು ಶ್ರೀಮಂತರಾಗಿದ್ದರೆ ಮಗಳನ್ನು ಈ ರೀತಿ ನಡೆಸಿಕೊಳ್ಳುತ್ತಿದ್ದರೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಲೇ ಇರುತ್ತದೆ'
- ಉಣ್ಣಿಕೃಷ್ಣನ್‌,ಚಿತ್ರಾ ತಂದೆ

"ನಾನು ತಿರಸ್ಕರಿಸಲ್ಪಟ್ಟು 12 ತಿಂಗಳು ಕಳೆದಿದೆ. ವಿಶ್ವ ಆ್ಯತ್ಲಿಟಿಕ್‌ ಮೀಟ್‌ಗೆ ಕಳುಹಿಸಿಲ್ಲ ಎಂಬುದಕ್ಕೆ ಬೇಸರವಿಲ್ಲ. ಕಳೆದ ಒಂದು ವರ್ಷಗಳಿಂದ ಏಶ್ಯಾಡ್‌ನ‌ಲ್ಲಿ ಪಾಲ್ಗೊಳ್ಳಲು ಸಾಕಷ್ಟು ಶ್ರಮವಹಿಸಿ ತರಬೇತಿ ಪಡೆದೆ. 1,500 ಮೀ. ಓಟ ನನಗೆ ಇಷ್ಟವಾದ ಕ್ರೀಡೆ. ಆದರೆ ನನ್ನಲ್ಲಿದ್ದ ಅನುಭವದ ಕೊರತೆ ಈ ಪ್ರದರ್ಶನದಲ್ಲಿ ಕಾಣುತ್ತಿತ್ತು. ಕಂಚಿನಿಂದ ದೊಡ್ಡ ಪದಕಕ್ಕೆ ಏರಬೇಕು'
- ಚಿತ್ರಾ ಉಣ್ಣಿಕೃಷ್ಣನ್‌

- ರಮ್ಯಾ ಕೆದಿಲಾಯ


Trending videos

Back to Top