CONNECT WITH US  

ವಿದಾಯ ಪಂದ್ಯದಲ್ಲಿ ಕುಕ್‌ ಶತಕ

ಕುಕ್‌ 147 ರನ್‌; ಜೋ ರೂಟ್‌ 125 ; ಭಾರತಕ್ಕೆ ಎದುರಾಗಿದೆ 464 ರನ್‌ ಸವಾಲು

ಲಂಡನ್‌: ಕೊನೆಯ ಟೆಸ್ಟ್‌ ಪಂದ್ಯ ಆಡುತ್ತಿರುವ ಆರಂಭಕಾರ ಅಲಸ್ಟೇರ್‌ ಕುಕ್‌ ಮತ್ತು ನಾಯಕ ಜೋ ರೂಟ್‌ ಅವರ ಅಮೋಘ ಶತಕ ಸಾಹಸದಿಂದ ಇಂಗ್ಲೆಂಡ್‌ ತಂಡ ಓವಲ್‌ ಟೆಸ್ಟ್‌ ಪಂದ್ಯದಲ್ಲಿ ಭಾರತದ ಮೇಲೆ ಸವಾರಿ ಮಾಡಿದೆ. 

ಪಂದ್ಯದ 4ನೇ ದಿನವಾದ ಸೋಮವಾರ ಚಹಾ ವಿರಾಮದ ಬಳಿಕ 8 ವಿಕೆಟಿಗೆ 423 ರನ್‌ ಪೇರಿಸಿ ಡಿಕ್ಲೇರ್‌ ಮಾಡಿದೆ. ಕೊಹ್ಲಿ ಪಡೆಯ ಗೆಲುವಿಗೆ 464 ರನ್‌ ಗುರಿ ಲಭಿಸಿದೆ.

ಸರಣಿಯಲ್ಲಿ ಈಗಾಗಲೇ 1-3 ಹಿನ್ನಡೆಯಲ್ಲಿರುವ ಭಾರತಕ್ಕೆ ಓವಲ್‌ ಗೆಲುವು ಮರೀಚಿಕೆಯೇ ಆಗಿದೆ. ಆದರೆ ಉಳಿದ 4 ಅವಧಿಯ ಕಾಲ ಬ್ಯಾಟಿಂಗ್‌ ವಿಸ್ತರಿಸಿ ಪಂದ್ಯವನ್ನು ಡ್ರಾ ಮಾಡಿಕೊಳ್ಳಬಹುದಾದ ಅವಕಾಶವೂ ದೂರಾಗುತ್ತಿದೆ. ಭಾರತ 54ಕ್ಕೆ 3 ವಿಕೆಟ್‌ ಉದುರಿಸಿಕೊಂಡು ಪರದಾಡುತ್ತಿದೆ. 2ಕ್ಕೆ 114 ರನ್‌ ಗಳಿಸಿದಲ್ಲಿಂದ ಬ್ಯಾಟಿಂಗ್‌ ಮುಂದುವರಿಸಿದ ಕುಕ್‌ ಮತ್ತು ರೂಟ್‌ ದಿನದ ಮೊದಲ ಅವಧಿಯನ್ನು ಪೂರ್ತಿಯಾಗಿ ತಮ್ಮ ಬ್ಯಾಟಿಂಗಿಗೆ ಮೀಸಲಿಟ್ಟರು. ಭಾರತದ ಯಾವುದೇ ಬೌಲಿಂಗ್‌ ಪ್ರಯೋಗಗಳು ಈ ವೇಳೆ ನಡೆಯಲಿಲ್ಲ. ಲಂಚ್‌ ವೇಳೆ ಆಂಗ್ಲರ ಮೊತ್ತ 243ಕ್ಕೆ ಏರಿತ್ತು. ಕುಕ್‌ ಆಗಲೇ ಸ್ಮರಣೀಯ ಶತಕ ಬಾರಿಸಿದರೆ, ರೂಟ್‌ 92ರಲ್ಲಿದ್ದರು.

ಕುಕ್‌-ರೂಟ್‌ 259 ರನ್‌ ಜತೆಯಾಟ
ಅಲಸ್ಟೇರ್‌ ಕುಕ್‌ ಅವರ "ವಿದಾಯ ಶತಕ' 210 ಎಸೆತಗಳಲ್ಲಿ ಬಂತು. ಒಟ್ಟು 286 ಎಸೆತ ನಿಭಾಯಿಸಿದ ಕುಕ್‌ 14 ಬೌಂಡರಿ ನೆರವಿನಿಂದ 147 ರನ್‌ ಬಾರಿಸಿದರು. 2 ಜೀವದಾನಗಳ ಲಾಭವೆತ್ತಿದ ಕಪ್ತಾನ ಜೋ ರೂಟ್‌ 14ನೇ ಶತಕ ಸಂಭ್ರಮವನ್ನಾಚರಿಸಿದರು. ರೂಟ್‌ ಕೊಡುಗೆ 125 ರನ್‌. 190 ಎಸೆತ ಎದುರಿಸಿದ ಅವರು 12 ಬೌಂಡರಿ ಜತೆಗೆ ಒಂದು ಸಿಕ್ಸರ್‌ ಸಿಡಿಸಿದರು. ಕುಕ್‌-ರೂಟ್‌ ಅವರ 3ನೇ ವಿಕೆಟ್‌ ಜತೆಯಾಟದಲ್ಲಿ 259 ರನ್‌ ಹರಿದು ಬಂತು. ಇದು ಭಾರತಕ್ಕೆ ದುಬಾರಿಯಾಗಿ ಪರಿಣಮಿಸಿತು. ವೇಗಿ ಇಶಾಂತ್‌ ಶರ್ಮ ಗಾಯಾಳಾಗಿ ಹೊರಗುಳಿದದ್ದು ಕೂಡ ಸಮಸ್ಯೆಯಾಗಿ ಕಾಡಿತು.

ದ್ವಿತೀಯ ಅವಧಿಯಲ್ಲಿ ಭಾರತದ ಬೌಲರ್‌ಗಳು ಮೇಲುಗೈ ಸಾಧಿಸಿ 4 ವಿಕೆಟ್‌ ಕಿತ್ತರೂ ಆಗಲೇ ಇಂಗ್ಲೆಂಡ್‌ ತನ್ನ ಹಿಡಿತವನ್ನು ಬಿಗಿಗೊಳಿಸಿತ್ತು. ಶತಕವೀರರಿಬ್ಬರನ್ನೂ ಮೊದಲ ಟೆಸ್ಟ್‌ ಆಡುತ್ತಿರುವ ಹನುಮ ವಿಹಾರಿ ಸತತ 2ಎಸೆತಗಳಲ್ಲಿ ಪೆವಿಲಿಯನ್ನಿಗೆ ಅಟ್ಟಿದ್ದು ವಿಶೇಷವಾಗಿತ್ತು. 37 ರನ್‌ ಮಾಡಿದ ಬೆನ್‌ ಸ್ಟೋಕ್ಸ್‌ ಔಟಾದೊಡನೆ ರೂಟ್‌ ಡಿಕ್ಲೇರ್‌ ಮಾಡಿದರು.

ಸ್ಕೋರ್‌ಪಟ್ಟಿ
ಇಂಗ್ಲೆಂಡ್‌ ಪ್ರಥಮ ಇನ್ನಿಂಗ್ಸ್‌:    332
ಭಾರತ ಪ್ರಥಮ ಇನ್ನಿಂಗ್ಸ್‌:    292
ಇಂಗ್ಲೆಂಡ್‌ ದ್ವಿತೀಯ ಇನ್ನಿಂಗ್ಸ್‌
ಅಲಸ್ಟೇರ್‌ ಕುಕ್‌     ಸಿ ಪಂತ್‌ ಬಿ ವಿಹಾರಿ    147
ಕೀಟನ್‌ ಜೆನ್ನಿಂಗ್ಸ್‌    ಬಿ ಶಮಿ    10
ಮೊಯಿನ್‌ ಅಲಿ    ಬಿ ಜಡೇಜ    20
ಜೋ ರೂಟ್‌ ಸಿ ಪಾಂಡ್ಯ (ಸಬ್‌) ಬಿ ವಿಹಾರಿ    125
ಜಾನಿ ಬೇರ್‌ಸ್ಟೊ     ಬಿ ಶಮಿ    18
ಬೆನ್‌ ಸ್ಟೋಕ್ಸ್‌      ಸಿ ರಾಹುಲ್‌    ಬಿ ಜಡೇಜ     37
ಜಾಸ್‌ ಬಟ್ಲರ್‌     ಸಿ ಶಮಿ ಬಿ ಜಡೇಜ     0
ಸ್ಯಾಮ್‌ ಕರನ್‌     ಸಿ ಪಂತ್‌ ಬಿ ವಿಹಾರಿ     21
ಆದಿಲ್‌ ರಶೀದ್‌     ಔಟಾಗದೆ    20
ಇತರ        25
ಒಟ್ಟು  (8 ವಿಕೆಟಿಗೆ ಡಿಕ್ಲೇರ್‌)        423
ವಿಕೆಟ್‌ ಪತನ: 1-27, 2-62, 3-321, 4-321, 5-355, 6-356, 7-397, 8-423.
ಬೌಲಿಂಗ್‌
ಜಸ್‌ಪ್ರೀತ್‌ ಬುಮ್ರಾ        23-4-61-0
ಇಶಾಂತ್‌ ಶರ್ಮ        8-3-13-0
ಮೊಹಮ್ಮದ್‌ ಶಮಿ        25-3-110-2
ರವೀಂದ್ರ ಜಡೇಜ        47-3-179-3
ಹನುಮ ವಿಹಾರಿ        9.3-1-37-3

ಕುಕ್‌ ದಾಖಲೆಗಳಿಗೆ ವಿರಾಮವಿಲ್ಲ.
- ಅಲಸ್ಟೇರ್‌ ಕುಕ್‌ ಮೊದಲ ಹಾಗೂ ಅಂತಿಮ ಟೆಸ್ಟ್‌ ಪಂದ್ಯಗಳೆರಡರಲ್ಲೂ ಶತಕ ಬಾರಿಸಿದ ವಿಶ್ವದ ಕೇವಲ 5ನೇ ಆಟಗಾರ. ಅವರ ಈ ಎರಡೂ ಶತಕಗಳು ಭಾರತದೆದುರೇ ದಾಖಲಾದದ್ದು ವಿಶೇಷ. ಕುಕ್‌ 2006ರ ನಾಗ್ಪುರದಲ್ಲಿ ಟೆಸ್ಟ್‌ ಪದಾರ್ಪಣೆ ಮಾಡಿ 2ನೇ ಇನ್ನಿಂಗ್ಸ್‌ನಲ್ಲಿ ಅಜೇಯ 104 ರನ್‌ ಹೊಡೆದಿದ್ದರು. ಉಳಿದ ಸಾಧಕರೆಂದರೆ ಇಂಗ್ಲೆಂಡಿನ ರಿಜಿನಾಲ್ಡ್‌ ಡಫ್ (104 ಮತ್ತು 146), ಆಸ್ಟ್ರೇಲಿಯದ ಬಿಲ್‌ ಪೋನ್ಸ್‌ಫೋರ್ಡ್‌ (110 ಮತ್ತು 246), ಗ್ರೆಗ್‌ 
ಚಾಪೆಲ್‌ (108 ಮತ್ತು 142) ಮತ್ತು ಭಾರತದ ಮೊಹಮ್ಮದ್‌ ಅಜರುದ್ದೀನ್‌ (110 ಮತ್ತು 102).

-  ಇದು ಕುಕ್‌ ಅವರ 33ನೇ ಟೆಸ್ಟ್‌ ಶತಕ. ಇದರೊಂದಿಗೆ ಅವರು ಒಟ್ಟು ಟೆಸ್ಟ್‌ ಶತಕ ಸಾಧಕರ ಯಾದಿಯಲ್ಲಿ 10ನೇ ಸ್ಥಾನ ಅಲಂಕರಿಸಿದರು. ಸರ್ವಾಧಿಕ ಶತಕವೀರರಲ್ಲಿ ಕುಕ್‌ ಅವರಿಗೆ 7ನೇ ಸ್ಥಾನ. ಗಾವಸ್ಕರ್‌, ಲಾರಾ, ಯೂನಿಸ್‌ ಖಾನ್‌ ಮತ್ತು ಜಯವರ್ಧನ ತಲಾ 34 ಶತಕ ಹೊಡೆದಿದ್ದಾರೆ.

- ಕುಕ್‌ ಟೆಸ್ಟ್‌ ಇತಿಹಾಸದಲ್ಲಿ ಸರ್ವಾಧಿಕ ರನ್‌ ಗಳಿಸಿದ ಎಡಗೈ ಬ್ಯಾಟ್ಸ್‌ಮನ್‌ ಆಗಿ ಮೂಡಿಬಂದರು. ಈ ಸಾಧನೆಯ ವೇಳೆ ಅವರು ಸಂಗಕ್ಕರ ದಾಖಲೆ ಮುರಿದರು (12,400 ರನ್‌). 

-  ಸರ್ವಾಧಿಕ ರನ್‌ ಸಾಧಕರ ಯಾದಿಯಲ್ಲಿ ಕುಕ್‌ 5ನೇ ಸ್ಥಾನದಲ್ಲಿದ್ದಾರೆ. ಇವರಿಗಿಂತ ಮುಂದಿರುವವರೆಂದರೆ ತೆಂಡುಲ್ಕರ್‌, ಪಾಂಟಿಂಗ್‌, ಕ್ಯಾಲಿಸ್‌ ಮತ್ತು ದ್ರಾವಿಡ್‌.

- ಕುಕ್‌ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸರ್ವಾಧಿಕ 15 ಶತಕಗಳ ನೂತನ ದಾಖಲೆ ಸ್ಥಾಪಿಸಿದರು. ಸಂಗಕ್ಕರ ಅವರ 14 ಶತಕಗಳ ದಾಖಲೆ ಪತನಗೊಂಡಿತು. ಸಂಗಕ್ಕರ 13, ಯೂನಿಸ್‌ ಖಾನ್‌ 12 ಶತಕ ಹೊಡೆದಿದ್ದಾರೆ.

- ಟೆಸ್ಟ್‌ ಪಂದ್ಯವೊಂದರ ಒಟ್ಟು ಇನ್ನಿಂಗ್ಸ್‌ ಲೆಕ್ಕಾಚಾರದಲ್ಲೂ ಕುಕ್‌ ದಾಖಲೆಯೊಂದನ್ನು ನಿರ್ಮಿಸಿದರು. ಅವರು "3ನೇ ಇನ್ನಿಂಗ್ಸ್‌'ನಲ್ಲಿ 13 ಸೆಂಚುರಿ ಹೊಡೆದು ಸಂಗಕ್ಕರ ದಾಖಲೆ ಮುರಿದರು (12 ಸೆಂಚುರಿ).

-  ಕುಕ್‌ ಭಾರತದ ವಿರುದ್ಧ ಅತೀ ಹೆಚ್ಚು 7 ಶತಕ ಹೊಡೆದ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಎನಿಸಿದರು. ಕೆವಿನ್‌ ಪೀಟರ್‌ಸನ್‌ 6, ಇಯಾನ್‌ ಬೋಥಂ ಮತ್ತು ಗ್ರಹಾಂ ಗೂಚ್‌ ತಲಾ 5 ಶತಕ ಹೊಡೆದಿದ್ದರು.


Trending videos

Back to Top