CONNECT WITH US  

ಭಾರತ ಅಫ್ಘಾನ್ ಪಂದ್ಯ ರೋಚಕ ‘ಟೈ’ಯಲ್ಲಿ ಅಂತ್ಯ

ಅಜೇಯ ಭಾರತವನ್ನು ಕಾಡಿ ಏಷ್ಯಾ ಕಪ್ ಅಭಿಯಾನ ಅಂತ್ಯಗೊಳಿಸಿದ ಅಫ್ಘಾನ್

ದುಬೈ: ಏಷ್ಯಾ ಕಪ್ ಟೂರ್ನಿಯುದ್ದಕ್ಕೂ ಪಾಕಿಸ್ಥಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳಿಗೆ ಚಳಿ ಹುಟ್ಟಿಸಿದ್ದ ‘ಕ್ರಿಕೆಟ್ ಶಿಶು’ ಅಫ್ಘಾನ್ ತಂಡವು ಇಂದು ನಡೆದ ‘ಸೂಪರ್ 4’ ಹಣಾಹಣಿಯ ಪಂದ್ಯದಲ್ಲಿ ಈ ಕೂಟದ ಅಜೇಯ ತಂಡವಾಗಿದ್ದ ಭಾರತಕ್ಕೆ ಸೋಲಿನ ರುಚಿ ತೋರಿಸುವ ಹಂತದಲ್ಲಿ ಸ್ವಲ್ಪದರಲ್ಲೇ ಮುಗ್ಗರಿಸಿ ತನ್ನ ಏಷ್ಯಾ ಕಪ್ ಅಭಿಯಾನವನ್ನು ಸ್ಮರಣೀಯವಾಗಿ ಮುಗಿಸಿದೆ.

ಅಫ್ಘಾನ್ ನೀಡಿದ 252 ರನ್ನುಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟುವಲ್ಲಿ ಎಡವಿದ ಭಾರತವು ಇನ್ನೂ 1 ಎಸೆತ ಬಾಕಿಯಿದ್ದಂತೆ 252 ರನ್ನುಗಳಿಗೆ ಆಲೌಟ್ ಆಗುವ ಮೂಲಕ ಜಯದ ಹೊಸ್ತಿಲಲ್ಲಿ ಎಡವಿತು. ರವೀಂದ್ರ ಜಡೇಜಾ (25) ಅವರು ಅಂತಿಮ ವಿಕೆಟ್ ರೂಪದಲ್ಲಿ ಔಟಾಗುತ್ತಿದ್ದಂತೆಯೇ ಅಫ್ಘಾನ್ ಆಟಗಾರರು ಮೈದಾನದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದರು. ಈಗಾಗಲೇ ಫೈನಲ್ ಪ್ರವೇಶಿಸಿರುವ ಭಾರತಕ್ಕೆ ಹಾಗೂ ಕೂಟದಿಂದ ಹೊರಬಿದ್ದಿದ್ದ ಅಫ್ಘಾನಿಸ್ಥಾನಕ್ಕೆ ಈ ಪಂದ್ಯ ಯಾವುದೇ ರೀತಿಯಲ್ಲಿ ಮಹತ್ವದಲ್ಲವಾಗಿದ್ದರೂ ಕ್ರಿಕೆಟ್ ಶಿಶು ಅಫ್ಘಾನಿಸ್ಥಾನಕ್ಕೆ ಈ ಚೇತೋಹಾರಿ ಪ್ರದರ್ಶನ ಅದ್ಭುತವಾದ ನೈತಿಕ ಬಲವನ್ನು ತುಂಬಿರುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
 


ಅಫ್ಘಾನ್ ವಿಕೆಟ್ ಕೀಪರ್ ಮುಹಮ್ಮದ್ ಶಹಝಾದ್ (124) ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ 50 ಓವರುಗಳಲ್ಲಿ 8 ವಿಕೆಟ್ ನಷ್ಟದಲ್ಲಿ 252 ರನ್ನುಗಳನ್ನು ಕಲೆಹಾಕಿದ ಅಫ್ಘಾನ್ ಎದುರಾಳಿಯ ಗೆಲುವಿಗೆ 253 ರನ್ನುಗಳ ಗುರಿಯನ್ನು ನಿಗದಿಪಡಿಸಿತು.

ಧವನ್ ರೋಹಿತ್ ಅನುಪಸ್ಥಿತಿಯಲ್ಲಿ ಭಾರತದ ಇನ್ನಿಂಗ್ಸ್ಆರಂಭಿಸಿದ ಕೆ.ಎಲ್. ರಾಹುಲ್ (60) ಮತ್ತು ಅಂಬಟಿ ರಾಯುಡು (57) ಉತ್ತಮ ಆರಂಭವನ್ನೇ ಒದಗಿಸಿದರು. ಈ ಜೋಡಿ ಮೊದಲ ವಿಕೆಟಿಗೆ 110 ರನ್ನುಗಳನ್ನು ಕಲೆ ಹಾಕಿತು. ಇಲ್ಲಿಯವರೆಗೆ ಭಾರತದ ಗೆಲುವಿನ ಹಾದಿ ಸುಲಭವಾಗಿಯೇ ಇತ್ತು. ಆದರೆ ಇವರ ಜೊತೆಯಾಟ ಮುರಿಯುತ್ತಲೇ ಭಾರತ ಸಂಕಷ್ಟಕ್ಕೆ ಸಿಲುಕಿತು. ಒಂದು ಬದಿಯಲ್ಲಿ ದಿನೇಶ್ ಕಾರ್ತಿಕ್ (44) ತಾಳ್ಮೆಯ ಆಟದ ಮೊರೆ ಹೋದರೆ ಇನ್ನೊಂದು ಕಡೆಯಿಂದ ವಿಕೆಟ್ ಗಳು ಉದುರುತ್ತಾ ಸಾಗಿತು. ನಾಯಕ ಧೋನಿ (8), ಮನೀಶ್ ಪಾಂಡೆ (8), ಜಾಧವ್ (19) ಹೋರಾಟ ನೀಡುವಲ್ಲಿ ವಿಫಲರಾದರು. ಅಂತಿಮವಾಗಿ ಅನುಭವಿ ಆಟಗಾರ ರವೀಂದ್ರ ಜಡೇಜಾ (25) ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದರಾದರೂ ಅಂತಿಮವಾಗಿ ಕ್ಯಾಚ್ ನೀಡಿ ಔಟಾಗುವ ಮೂಲಕ ಭಾರತ ತಂಡ ಆಲೌಟ್ ಆಗುವುದರೊಂದಿಗೆ ಪಂದ್ಯ ‘ಟೈ’ಗೊಂಡಿತು. ಈ ಹಂತದಲ್ಲಿ ಭಾರತದ ಗೆಲುವಿಗೆ 2 ಎಸೆತದಲ್ಲಿ 1 ರನ್ ಬೇಕಿತ್ತು ಕೈಯಲ್ಲಿದ್ದಿದ್ದು 1 ವಿಕೆಟ್ ಮಾತ್ರ.

ಕಳೆದ ಪಂದ್ಯದ ಹೀರೋಗಳಾಗಿದ್ದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಸೇರಿದಂತೆ ಬುಮ್ರಾ, ಭುವನೇಶ್ವರ್ ಮತ್ತು ಚಾಹಲ್ ಅವರಿಲ್ಲದಿದ್ದ ಟೀಂ ಇಂಡಿಯಾವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನಡೆಸಿದರು. ಇದು ಕೂಲ್ ಕ್ಯಾಪ್ಟನ್ ಧೋನಿ ಅವರ ನಾಯಕತ್ವದ 200ನೇ ಏಕದಿನ ಪಂದ್ಯವಾಗಿತ್ತು.

Trending videos

Back to Top