ಟೆನಿಸ್ ರ್ಯಾಂಕಿಂಗ್ ನಡಾಲ್ಗೆ ಹತ್ತಿರವಾದ ಜೊಕೋವಿಕ್
Team Udayavani, Oct 23, 2018, 6:00 AM IST
ಪ್ಯಾರಿಸ್: ಸೋಮವಾರ ಬಿಡುಗಡೆಗೊಂಡ ನೂತನ ಟೆನಿಸ್ ರ್ಯಾಂಕಿಂಗ್ನಲ್ಲಿ ಸರ್ಬಿಯಾದ ನೊವಾಕ್ ಜೊಕೋವಿಕ್ ಅಗ್ರಸ್ಥಾನಿ ರಫೆಲ್ ನಡಾಲ್ ಅವರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಮೊದಲೆರಡು ಸ್ಥಾನದಲ್ಲಿ ರುವ ಇವರಿಬ್ಬರ ನಡುವಿನ ಅಂಕಗಳ ಅಂತರವೀಗ 215ಕ್ಕೆ ಇಳಿದಿದೆ. ಜೊಕೋ ತಮ್ಮ ಪ್ರಚಂಡ ಫಾರ್ಮ್ ಮುಂದುವರಿಸಿದರೆ ವರ್ಷಾರಂಭದಲ್ಲಿ ನಂಬರ್ ವನ್ ಎನಿಸಿಕೊಳ್ಳುವ ಸಾಧ್ಯತೆಯೊಂದು ಗೋಚರಿಸುತ್ತಿದೆ.
ನಡಾಲ್ 7,660 ಅಂಕ ಹಾಗೂ ಜೊಕೋವಿಕ್ 7,445 ಅಂಕ ಹೊಂದಿದ್ದಾರೆ. ಸ್ವಿಜರ್ಲ್ಯಾಂಡಿನ ರೋಜರ್ ಫೆಡರರ್ ಸತತ 2ನೇ ವಾರವೂ 3ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಹಾಗೂ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಅನಂತರದ ಸ್ಥಾನದಲ್ಲಿದ್ದಾರೆ. ಅಮೆರಿಕದ ಜಾನ್ ಇಸ್ನರ್ ಒಂದು ಸ್ಥಾನ ಮೇಲೇರಿದ್ದು, 9ಕ್ಕೆ ಬಂದಿದ್ದಾರೆ. ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್ ಹತ್ತಕ್ಕೆ ಇಳಿದಿದ್ದಾರೆ.
ಆ್ಯಂಜೆಲಿಕ್ ಕೆರ್ಬರ್ ನಂ.2
ವನಿತಾ ಸಿಂಗಲ್ಸ್ನಲ್ಲಿ ಸಿಮೋನಾ ಹಾಲೆಪ್ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ದ್ವಿತೀಯ ಸ್ಥಾನಕ್ಕೆ ನೆಗೆದಿದ್ದಾರೆ. ಕ್ಯಾರೋಲಿನ್ ವೋಜ್ನಿಯಾಕಿಗೆ ಒಂದು ಸ್ಥಾನ ನಷ್ಟವಾಗಿದೆ. ಪೆಟ್ರಾ ಕ್ವಿಟೋವಾ ಮತ್ತು ಸ್ಲೋನ್ ಸ್ಟೀಫನ್ಸ್ 2 ಸ್ಥಾನಗಳ ಪ್ರಗತಿ ಸಾಧಿಸಿದ್ದಾರೆ.