ಚೊಚ್ಚಲ ವಿಶ್ವಕೂಟದಲ್ಲಿ ಮೆರೆದಾಡಿದ ಮನಿಶಾ ಮೌನ್
Team Udayavani, Nov 17, 2018, 6:00 AM IST
ನವದೆಹಲಿ: ಇಲ್ಲಿ ನಡೆಯುತ್ತಿರುವ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತದ ಎಲ್.ಸರಿತಾ ದೇವಿ ಹಾಗೂ ಮನಿಶಾ ಮೌನ್ ಜಯ ಗಳಿಸಿದ್ದಾರೆ.
ಇದೇ ಮೊದಲ ಬಾರಿಗೆ ವಿಶ್ವ ಚಾಂಪಿಯನ್ಶಿಪ್ನಲ್ಲಿ ಆಡುತ್ತಿರುವ ಹರ್ಯಾಣದ ಮನಿಶಾ, 54 ಕೆಜಿ ವಿಭಾಗದಲ್ಲಿ ಅಮೆರಿಕದ ಕ್ರಿಸ್ಟಿನಾ ಕ್ರಜ್ರನ್ನು ತಬ್ಬಿಬ್ಬುಗೊಳಿಸಿ ಗೆಲುವು ಸಾಧಿಸಿದರು. ಕ್ರಿಸ್ಟಿನಾ ವಿಶ್ವಚಾಂಪಿಯನ್ಶಿಪ್ನಲ್ಲಿ ಎರಡು ಬಾರಿ ಕಂಚು ಗೆದ್ದಿದ್ದಾರೆ. ಇಂತಹ ಹಿನ್ನೆಲೆಯುಳ್ಳ ಆಟಗಾರ್ತಿ ಎದುರಾಳಿಯಾಗಿದ್ದರೂ ಹೆದರದೇ ಸ್ಪರ್ಧಿಸಿದ ಮನಿಶಾ ಪ್ರೀಕ್ವಾರ್ಟರ್ಫೈನಲ್ಗೇರಿದರು.
ಕೇವಲ 20 ವರ್ಷದ ಮನಿಶಾ ಆಟ ಎಷ್ಟು ಪ್ರಭಾವಿಯಾಗಿತ್ತೆಂದರೆ ಐದೂ ತೀರ್ಪುಗಾರರು ಅವರನ್ನು ಒಮ್ಮತದಿಂದ ವಿಜಯೀ ಎಂದು ಘೋಷಿಸಿದರು. ಅವರ ಮುಂದಿನ ಸ್ಪರ್ಧಿ ವಿಶ್ವಚಾಂಪಿಯನ್, ಕಜಕಸ್ತಾನದ ದಿನಾ ಜೊಲಾಮನ್.
ಸರಿತಾಗೆ ಜಯ: ಭಾರತದ ಮಾಜಿ ವಿಶ್ವ ಚಾಂಪಿಯನ್, ಮಣಿಪುರದ ಎಲ್.ಸರಿತಾದೇವಿ ಕೂಡ ಅಬ್ಬರದ ಗೆಲುವು ಸಾಧಿಸಿ ಮುಂದಿನ ಸುತ್ತಿಗೇರಿದರು. 60 ಕೆಜಿ ಲೈಟ್ವೇಟ್ ವಿಭಾಗದಲ್ಲಿ ತಾವಾಡಿದ ಮೊದಲ ಪಂದ್ಯದಲ್ಲಿ ಅವರು ಸ್ವಿಜರೆಲಂಡ್ನ ಸಾಂಡ್ರಾ ಬ್ರಗರ್ರನ್ನು 4-0ಯಿಂದ ಸೋಲಿಸಿದರು. ಯಾವುದೇ ಹಂತದಲ್ಲೂ ಎದುರಾಳಿಗೆ ಚೇತರಿಸಿಕೊಳ್ಳಲು ಬಿಡದೇ ಮುನ್ನುಗ್ಗಿದ್ದು ಗಮನಾರ್ಹವಾಗಿತ್ತು.