ವಿಶ್ವಕಪ್ ಹಾಕಿ: ಕಾಂಗರೂಗಳಿಗೆ ಕಠಿನ ಗೆಲುವು
Team Udayavani, Dec 1, 2018, 6:15 AM IST
ಭುವನೇಶ್ವರ: ಕಳೆದೆರಡು ಬಾರಿಯ ಚಾಂಪಿಯನ್ ಖ್ಯಾತಿಯ ಆಸ್ಟ್ರೇಲಿಯ, 2018ರ ವಿಶ್ವಕಪ್ ಹಾಕಿ ಅಭಿಯಾನವನ್ನು ತುಸು ಕಷ್ಟದಿಂದಲೇ ಆರಂಭಿಸಿದೆ. “ಡಿ’ ವಿಭಾಗದ ಶುಕ್ರವಾರದ ಪಂದ್ಯದಲ್ಲಿ ಅದು ಐರ್ಲೆಂಡ್ ವಿರುದ್ಧ ಪರದಾಟ ನಡೆಸಿ 2-1 ಅಂತರದ ಗೆಲುವು ಸಾಧಿಸಿತು.
ವಿಶ್ವದ ನಂಬರ್ ವನ್ ತಂಡವೆಂಬ ಹಿರಿಮೆ ಹೊಂದಿರುವ ಆಸ್ಟ್ರೇಲಿಯ ಈ ಛಾತಿಗೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ನಂ. 10 ಐರ್ಲೆಂಡ್ ಅಡಿಗಡಿಗೂ ಕಾಂಗರೂಗಳಿಗೆ ಅಗ್ನಿಪರೀಕ್ಷೆಯೊಡ್ಡುತ್ತ ಹೋಯಿತು. ಮೊದಲೆರಡು ಕ್ವಾರ್ಟರ್ಗಳ ಆಟವಂತೂ “ಸ್ಟಿಕ್ ಫಾರ್ ಸ್ಟಿಕ್’ ಎಂಬ ರೀತಿಯಲ್ಲಿತ್ತು.
ಎರಡೂ ತಂಡಗಳು ಆಕ್ರಮಣಕಾರಿಯಾಗಿಯೇ ಆಟ ಆರಂಭಿಸಿದ್ದವು. ಆಸ್ಟ್ರೇಲಿಯದ ಬ್ಲೇಕ್ ಗೋವರ್ 11ನೇ ನಿಮಿಷದಲ್ಲೇ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ದಾಖಲಿಸಿ ಮೇಲುಗೈ ಒದಗಿಸಿದರು. ಆದರೆ ಎರಡೇ ನಿಮಿಷದಲ್ಲಿ ಐರ್ಲೆಂಡಿನ ಶೇನ್ ಓ’ಡೊನೊಗ್ ತಿರುಗೇಟು ನೀಡಿದರು. ನಿಜಕ್ಕಾದರೆ ಆಸೀಸ್ಗಿಂದ ಮೊದಲೇ, 4ನೇ ನಿಮಿಷದಲ್ಲೇ ಐರ್ಲೆಂಡ್ ಖಾತೆ ತೆರೆಯಬೇಕಿತ್ತು. ಆದರೆ ಸೀನ್ ಮರ್ರೆ ಹೊಡೆತವೊಂದನ್ನು ಆಸ್ಟ್ರೇಲಿಯದ ಕೀಪರ್ ಆ್ಯಂಡ್ರೂé ಚಾರ್ಟರ್ ಯಶಸ್ವಿಯಾಗಿ ತಡೆದುದರಿಂದ ಈ ಅವಕಾಶ ತಪ್ಪಿತು.
ಸಮಬಲದ ಹೋರಾಟ 34ನೇ ನಿಮಿಷದ ತನಕ ಜಾರಿಯಲ್ಲಿತ್ತು. ಆಗ ಆಸ್ಟ್ರೇಲಿಯದ ಟಿಮ್ ಬ್ರ್ಯಾಂಡ್ ಆಕರ್ಷಕ ಫೀಲ್ಡ್ ಗೋಲ್ ಮೂಲಕ ಮೇಲುಗೈ ಒದಗಿಸಿದರು. ಇದನ್ನು ಕಾಯ್ದುಕೊಳ್ಳುವಲ್ಲಿ ಆಸೀಸ್ ಯಶಸ್ವಿಯಾಯಿತು.