CONNECT WITH US  

ಅಗಲಿದ ಚೇತನಕ್ಕೊಂದು ನುಡಿ ನಮನ : ಗೀತಪ್ರಿಯ ನಡೆದು ಬಂದ ಹಾದಿ...

ಬೆಂಗಳೂರು: ಕನ್ನಡ ಚಿತ್ರ ರಂಗದ ಹಿರಿಯ ನಿರ್ದೇಶಕ ಹಾಗೂ ಗೀತರಚನೆಕಾರ ಗೀತಪ್ರಿಯ (84) ಅವರು ನಿಧನ ಹೊಂದಿದ್ದಾರೆ. ಹಲವು ದಿನಗಳಿಂದ ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಗೀತಪ್ರಿಯ ಅವರು, ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫ‌ಲಕಾರಿಯಾಗದೇ ಅವರು ರವಿವಾರ ಕೊನೆ ಉಸಿರೆಳೆದಿದ್ದಾರೆ. ಮೃತರು ಪತ್ನಿ ಹಾಗೂ ನಾಲ್ವರು ಮಕ್ಕಳು ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಗೀತಪ್ರಿಯ ಅವರು 40 ಚಿತ್ರಗಳನ್ನು ನಿರ್ದೇಶಿಸುವುದರ ಜೊತೆಗೆ 250 ಚಿತ್ರಗಳಿಗೆ ಗೀತರಚನೆ ಕಾರರಾಗಿಯೂ ಹೆಸರು ಮಾಡಿದ್ದರು. 1954 ರಲ್ಲಿ 'ಶ್ರೀರಾಮ ಪೂಜಾ' ಚಿತ್ರಕ್ಕೆ ಗೀತೆ ರಚಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಗೀತಪ್ರಿಯ ಅವರು, ಡಾ| ರಾಜ್‌ಕುಮಾರ್‌ ಹಾಗೂ ಕಲ್ಪನಾ ಅಭಿನಯದ 'ಮಣ್ಣಿನ ಮಗ' ಚಿತ್ರದ ಮೂಲಕ ನಿರ್ದೇಶಕರಾದರು. ತಮ್ಮ ಚೊಚ್ಚಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆಯುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ಗೀತ ಪ್ರಿಯ ಅವರು, ಆ ನಂತರ 'ಕಾಡಿನ ರಹಸ್ಯ', 'ಮೌನ ಗೀತೆ', 'ಬೆಸುಗೆ', 'ಹೊಂಬಿಸಿಲು', 'ಯಾವ ಜನ್ಮದ ಮೈತ್ರಿ', 'ಮಾನಸ ವೀಣೆ', 'ಪುಟಾಣಿ ಏಜೆಂಟ್‌ 123' ಸೇರಿದಂತೆ ಸಾಕಷ್ಟು ಯಶಸ್ವಿ ಸಿನೆಮಾಗಳನ್ನು ನಿರ್ದೇಶಿಸಿದ್ದಾರೆ. ನಿರ್ದೇಶನದ ಜೊತೆಗೆ ಗೀತರಚನೆಕಾರರಾಗಿ ಹೆಸರು ಮಾಡಿದ್ದ ಗೀತಪ್ರಿಯ ಅವರ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ. 'ನೀರ ಬಿಟ್ಟು ನೆಲದ ಮೇಲೆ...', 'ಹನುಮನ ಪ್ರಾಣ ಪ್ರಭೋ ರಘುರಾಮಾ ...' 'ಹಕ್ಕಿಯು ಹಾರುತಿದೆ, ಕಾಲದ ಹಕ್ಕಿಯು ಹಾರುತಿದೆ...', 'ಹೂವಿಂದ ಹೂವಿಗೆ ಹಾರುವ ದುಂಬಿಯು ಏನನು ಹೇಳುತಿದೆ ...', 'ರಸಿಕ ರಸಿಕ ಬಲು ಮೆಲ್ಲನೆ ತೂರಾಡು ...', 'ಇದೇನು ಸಭ್ಯತೆ ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ ...' ಸೇರಿದಂತೆ ಸಾಕಷ್ಟು ಹಾಡುಗಳನ್ನು ರಚಿಸಿದ್ದಾರೆ.

ಗೀತಪ್ರಿಯ ನಡೆದು ಬಂದ ಹಾದಿ...
ಗೀತಪ್ರಿಯ ಕನ್ನಡ ಚಿತ್ರರಂಗ ಕಂಡ ಯಶಸ್ವಿ ನಿರ್ದೇಶಕ ಹಾಗೂ ಗೀತರಚನೆಕಾರ. ಅವರು ಹುಟ್ಟಿದ್ದು ಜೂನ್‌ 15, 1931. ಕನ್ನಡ ಚಿತ್ರರಂಗಕ್ಕೆ ಬರುವ ಮುನ್ನ ಅವರಿಗೆ ಇದ್ದ ಹೆಸರು ಲಕ್ಷ್ಮಣರಾವ್‌ ಮೋಹಿತೆ. ಅವರ ಮಾತೃಭಾಷೆ ಮರಾಠಿ. ಆದರೂ, ಅವರಿಗೆ ಕನ್ನಡ ಭಾಷೆಯ ಮೇಲೆ ಅಪಾರ ಪ್ರೀತಿ. ಅವರು ಓದಿದ್ದು  ಕೂಡ ಕನ್ನಡ ಮಾಧ್ಯಮದಲ್ಲೇ. ಹಿರಿಯ ಸಾಹಿತಿಗಳಾದ ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ್‌ ಐಯ್ಯಂಗಾರ್‌, ಟಿ.ಆರ್‌. ಸುಬ್ಬ ರಾವ್‌, ಎ.ಎನ್‌. ಕೃಷ್ಣರಾವ್‌ ಅವರ ಬರವಣಿಗೆಯಿಂದ ಗೀತಪ್ರಿಯ ಸ್ಫೂರ್ತಿಗೊಂಡಿದ್ದರು. ಶಾಲಾ ದಿನಗಳಲ್ಲೇ ಗೀತಪ್ರಿಯ ಸಣ್ಣ ಕಥೆಗಳನ್ನು ಬರೆಯುತ್ತಿದ್ದರು. ಅವರು ಬರೆದ 'ತಾಯಿನಾಡು' ಮತ್ತು 'ರಾಮ ರಾಜ್ಯ' ಕಥೆಗಳು ಮ್ಯಾಗಜಿನ್‌ಗಳಲ್ಲಿ ಪ್ರಕಟಗೊಂಡಿದ್ದವು.

ಅಕ್ಷರಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಗೀತಪ್ರಿಯ, ಹಲವು ಗೀತೆಗಳನ್ನು ಗೀಚಿದ್ದರು. 1954ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, 'ಶ್ರೀ ರಾಮ ಪೂಜಾ' ಚಿತ್ರಕ್ಕೆ ಗೀತೆ ಬರೆಯುವ ಮೂಲಕ ಗೀತ ರಚನಕಾರರಾದರು. 1956ರಲ್ಲಿ ಮೂಡಿ ಬಂದ ವೈ.ವಿ.ರಾವ್‌ ಅವರ ನಿರ್ದೇಶನದಲ್ಲಿ 'ಭಾಗ್ಯ ಚಕ್ರ' ಚಿತ್ರಕ್ಕೆ ಸಂಭಾಷಣೆ ಮತ್ತು ಗೀತೆಗಳನ್ನು ರಚಿಸಿದರು. 1963ರಲ್ಲಿ ಬಂದ 'ಶ್ರೀ ರಾಮಾಂಜನೇಯ ಯುದ್ಧ' ಚಿತ್ರದಲ್ಲಿ ಬರೆದ 'ಜಗದೀಶನಾಡುವ ಜಗವೇ ನಾಟಕ ರಂಗ' ಹಾಡು ಹಿಟ್‌ ಆಯಿತು.ಅಲ್ಲಿಂದ ಗೀತಪ್ರಿಯ ಹೆಸರಲ್ಲೇ ಗೀತೆಗಳನ್ನು ರಚಿಸುತ್ತಾ  ಹೋದರು. 1965ರಲ್ಲಿ  ಮೂಡಿ ಬಂದ 'ಬೆಟ್ಟದ ಹುಲಿ' ಚಿತ್ರದಲ್ಲಿ ಗೀತಪ್ರಿಯ ಬರೆದ 'ಆಡುತಿರುವ ಮೋಡಗಳೇ' ಹಾಡು ಇಂದಿಗೂ ಜನಪ್ರಿಯ. ಇನ್ನೊಂದು ವಿಶೇಷವೆಂದರೆ, 1967ರಲ್ಲಿ ಬಂದ 'ಒಂದೇ ಬಳ್ಳಿಯ ಹೂಗಳು' ಚಿತ್ರದಲ್ಲಿ ಅವರು ಬರೆದ 'ನೀನೆಲ್ಲಿ ನಡೆವೆ ದೂರ..' ಹಾಡಿಗೆ ಬಾಲಿವುಡ್‌ನ‌ ಖ್ಯಾತ ಹಿನ್ನೆಲೆ ಗಾಯಕ ಮೊಹಮ್ಮದ್‌ ರಫಿ ಧ್ವನಿ ನೀಡಿದ್ದರು. ಕನ್ನಡದಲ್ಲಿ ಅತ್ಯಂತ ಜನಪ್ರಿಯ ಗೀತೆಗಳನ್ನು ರಚಿಸಿರುವ ಗೀತಪ್ರಿಯ ಅವರ ಖಾತೆಯಲ್ಲಿ ಮರೆಯಲಾರದ 250 ಗೀತೆಗಳಿವೆ.

ಮಣ್ಣಿನ ಮಗ ಚಿತ್ರದ ಮೂಲಕ ನಿರ್ದೇಶನಕ್ಕೆ
ಅತ್ಯಂತ ಜನಪ್ರಿಯ ಗೀತೆಗಳನ್ನು ಕೊಟ್ಟ ಗೀತಪ್ರಿಯ, ನಿರ್ದೇಶಕರಾದರು. 1968ರಲ್ಲಿ ಅವರು 'ಮಣ್ಣಿನ ಮಗ' ಚಿತ್ರ ನಿರ್ದೇಶಿಸಿದರು. ಅದು ಅವರ ನಿರ್ದೇಶನದ ಮೊದಲ ಚಿತ್ರ. ಮೊದಲ ನಿರ್ದೇಶನದಲ್ಲೇ ಅವರು ಡಾ| ರಾಜ್‌ಕುಮಾರ್‌ ಅವರನ್ನು ನಿರ್ದೇಶಿಸಿದ್ದು ವಿಶೇಷ. ಡಾ| ರಾಜ್‌ಕುಮಾರ್‌ ಹಾಗೂ ಕಲ್ಪನಾ ಜೋಡಿ ಅಭಿನಯದ ಅವರ ಮೊದಲ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿತು. ತಮ್ಮ ಮೊದಲ ನಿರ್ದೇಶನದ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ಗೀತಪ್ರಿಯ, ಆ ಚಿತ್ರದ ಚಿತ್ರಕಥೆಗಾಗಿ ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡರು. 40 ಚಿತ್ರಗಳನ್ನು ನಿರ್ದೇಶಿಸಿರುವ ಗೀತಪ್ರಿಯ ಅವರ ಖಾತೆಯಲ್ಲಿ ಹಲವು ಯಶಸ್ವಿ ಚಿತ್ರಗಳೂ ಸೇರಿಕೊಂಡಿವೆ. ಇದಷ್ಟೇ ಅಲ್ಲ, ಗೀತಪ್ರಿಯ ಅವರು ತುಳು ಭಾಷೆಯ ಮೂರು ಹಾಗೂ ಹಿಂದಿ ಭಾಷೆಯ 'ಅನ್‌ಮೋಲ್‌ ಸಿತಾರೆ' ಎಂಬ ಒಂದು ಚಿತ್ರವನ್ನು ನಿರ್ದೇಶಿಸಿದ್ದರು. 2003ರಲ್ಲಿ ನಿರ್ದೇಶಿಸಿದ 'ಶ್ರಾವಣ ಸಂಭ್ರಮ' ಅವರ ಕೊನೆಯ ನಿರ್ದೇಶನದ ಚಿತ್ರ.

ಪ್ರಶಸ್ತಿ-ಪುರಸ್ಕಾರ
ಗೀತಪ್ರಿಯ ಅವರು 1968ರಲ್ಲಿ ನಿರ್ದೇಶಿಸಿದ 'ಮಣ್ಣಿನ ಮಗ' ಮೊದಲ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿತು. ಇದೇ ಚಿತ್ರದ ಚಿತ್ರಕಥೆಗಾಗಿ ಅವರಿಗೆ ರಾಜ್ಯಪ್ರಶಸ್ತಿಯೂ ಲಭಿಸಿತ್ತು. ಇದಷ್ಟೇ ಅಲ್ಲದೆ, ರಾಜ್ಯ ಸರಕಾರ ಕೊಡುವ ಪ್ರತಿಷ್ಠಿತ 'ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ'ಯನ್ನೂ ಪಡೆದುಕೊಂಡಿದ್ದರು. ಬಿ. ಸರೋಜಾದೇವಿ ಪ್ರಶಸ್ತಿಯನ್ನು ಗೀತಪ್ರಿಯ ಅವರು ಪಡೆದಿದ್ದರು. 

ಗೀತಪ್ರಿಯ ರಚನೆಯ ಜನಪ್ರಿಯ ಗೀತೆಗಳು
ನೀರ ಬಿಟ್ಟು ನೆಲದ ಮೇಲೆ (ಹೊಂಬಿಸಿಲು), ಹನುಮನ ಪ್ರಾಣ ಪ್ರಭೋ ರಘು ರಾಮಾ, ಜಗದೀಶನಾಡುವ ಜಗವೇ ನಾಟಕರಂಗ (ಶ್ರೀರಾಮಾಂಜ ನೇಯ ಯುದ್ಧ), ಹೂವಿಂದ ಹೂವಿಗೆ ಹಾರುವ ದುಂಬಿಯು ಏನನು ಹೇಳುತಿದೆ (ಹೊಂಬಿಸಿಲು),  ರಸಿಕ ರಸಿಕ ಬಲು ಮೆಲ್ಲನೆ ತೂರಾಡು (ಭೂಪತಿ ರಂಗ),  ಇದೇನು ಸಭ್ಯತೆ (ಮಣ್ಣಿನ ಮಗ), ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ (ಪುಟಾಣಿ ಏಜೆಂಟ್‌ 123), ನೀನೆಲ್ಲಿ ನಡೆವೆ ದೂರ (ಒಂದೇ ಬಳ್ಳಿಯ ಹೂಗಳು), ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ (ಬೆಳವಲದ ಮಡಿಲಲ್ಲಿ), ಇಲ್ಲೆ ಸ್ವರ್ಗ ಇಲ್ಲೆ ನರಕ, ಮೇಲೆ ಇಲ್ಲ ಸುಳ್ಳು (ನಾಗರ ಹೊಳೆ), ಗೋಪಿಲೋಲ, ಹೇ ಗೋಪಾಲ, ಈ ಜಗವೆಲ್ಲ ನಿನ್ನದೇ ಜಾಲ (ನಾರಿ ಮುನಿದರೆ ಮಾರಿ), ನಮ್ಮೊರ್ನಾಗ್‌ ನಾನೊಬ್ಬನೆ ಜಾಣ, ನನ್ನ ಹಾಡಂದ್ರೆ ಎಲ್ಲಾರ್ಗು ಪ್ರಾಣ (ನಾರಿ ಮುನಿದರೆ ಮಾರಿ), ನನ್ನ ನಿನ್ನ ಆಸೆ ನಮ್ಮ ಪ್ರೇಮ ಭಾಷೆ, ಸವಿಜೇನಿನಂತೆ, ಶ್ರುತಿ ಸೇರಿದಾಗ ಅದೇ ಆಶಾಗೀತೆ (ಮಿಡಿದ ಶೃತಿ), ಆಡುತಿರುವ ಮೋಡಗಳೆ ಹಾರುತಿರುವ ಹಕ್ಕಿಗಳೆ, ಯಾರ ತಡೆಯೂ ನಿಮಗಿಲ್ಲ ನಿಮ್ಮ ಭಾಗ್ಯ ನಮಗಿಲ್ಲ (ಬೆಟ್ಟದ ಹುಲಿ), ಪ್ರೇಮವಿದೆ ಮನದೆ ನಗುತ ನಲಿವ ಹೂವಾಗಿ, ಬಂದೆ ಇಲ್ಲಿಗೆ..ನಾ ಸಂಜೆ ಮಲ್ಲಿಗೆ..ನಾ ಸಂಜೆ ಮಲ್ಲಿಗೆ (ಅಂತ), ತಂದಾನಿ ತಂದ ನಾನ ತನ ನನನಾ, ಮಲಾ°ಡಿನ ಮೂಲೆನಾಗೆ ಇತ್ತೂಂದು ಸೋಮನ ಹಳ್ಳಿ (ಸುವರ್ಣ ಸೇತುವೆ), ಜೀವವೀಣೆ ನೀಡು ಮಿಡಿತದ ಸಂಗೀತ, ಭಾವಗೀತೆ ಬಾಳಿನೊಲುಮೆಯ ಸಂಕೇತ (ಹೊಂಬಿಸಿಲು), ಮುತ್ತುಮಳೆಗಾಗಿ ಹೊತ್ತು ಕಾದಿದೆ, ಕೆನ್ನೆಕೆಂಪಗಾಗಿ ತಂಪು ಕೋರಿದೆ (ಬೆಳುವಲದಾ ಮಡಿಲಲ್ಲಿ), ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ, ಜೀವನವೆಲ್ಲ ಸುಂದರ ಬೆಸುಗೆ (ಬೆಸುಗೆ), ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ, ಪ್ರೀತಿಯ ಸವಿಮಾತೇ ಉಪಾಸನೆ (ಅನುರಾಗ ಬಂಧನ).

ಗೀತಪ್ರಿಯ  ನಿರ್ದೇಶನದ ಜನಪ್ರಿಯ ಚಿತ್ರಗಳು : 'ಮಣ್ಣಿನ ಮಗ', 'ಯಾವ ಜನ್ಮದ ಮೈತ್ರಿ', 'ಬೆಸುಗೆ', 'ಹೊಂಬಿಸಿಲು', 'ಮಾನಸ ವೀಣೆ', 'ಪುಟಾಣಿ ಏಜೆಂಟ್‌ 123', 'ಮೌನಗೀತೆ', 'ಕಾಡಿನ ರಹಸ್ಯ' 'ಭೂಪತಿ ರಂಗ', 'ಜೀವನ ಜೋಕಾಲಿ', 'ಮದುವೆ ಮದುವೆ ಮದುವೆ', 'ನಾರಿ ಮುನಿದರೆ ಮಾರಿ', 'ಪ್ರೀತಿಸಿ ನೋಡು', 'ಕಲ್ಯಾಣಿ', 'ಬಾಳೊಂದು ಭಾವಗೀತೆ', 'ಪ್ರಚಂಡ ಪುಟಾಣಿಗಳು'.

Trending videos

Back to Top