CONNECT WITH US  

ಸಾಲದ ಹೊರೆ, ತೆರಿಗೆ ಬರೆ : ಧನಸಂಗ್ರಹಕ್ಕೆ ಸಿದ್ದು ಒತ್ತು

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2016-17ನೇ ಸಾಲಿನ ಬಜೆಟ್‌ ಅಕ್ಷರಶಃ ದೂರದೃಷ್ಟಿಯ ಬಜೆಟ್‌! ಮುಂದಿನ ವರ್ಷ ಚುನಾವಣಾ ಬಜೆಟ್‌ ನೀಡುವ ಅನಿವಾರ್ಯತೆ ಸರಕಾರಕ್ಕಿರುತ್ತದೆ. ಆಗ ತೆರಿಗೆ ಏರಿಸುವುದು ಕಷ್ಟ. ಹಾಗಾಗಿ, ಈ ವರ್ಷವೇ ಧನಸಂಗ್ರಹಕ್ಕೆ ಒತ್ತು ನೀಡಿ ಮುಂದಿನ ವರ್ಷ ಜನಪ್ರಿಯ ಯೋಜನೆಗಳನ್ನು ಪ್ರಕಟಿಸುವ ದೂರದರ್ಶಿತ್ವ ಈ ಬಾರಿಯ ಬಜೆಟ್‌ನಲ್ಲಿ ಕಾಣುತ್ತದೆ. ಎಂದಿನಂತೆ ಹಲವಾರು ಹೊಸ ಯೋಜನೆಗಳ ಪಟ್ಟಿಯಿದೆ. ಮಾಮೂಲಿಯಂತೆ ವಿವಿಧ ಕ್ಷೇತ್ರಗಳಿಗೆ ಹಣದ ಹಂಚಿಕೆಯಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಆಗಾಗ ಪ್ರಕಟವಾಗುತ್ತಿದ್ದ ಕಾರ್ಯಕ್ರಮಗಳು ಈಗ ಬಜೆಟ್‌ನಲ್ಲಿ  ಸೇರಿಕೊಂಡಿವೆ. ಹಳೆಯ ಬಜೆಟ್‌ನಲ್ಲಿದ್ದ  ಕೆಲವು ಯೋಜನೆಗಳು ಈ ಬಾರಿ ಮತ್ತೆ ಮರುಮುದ್ರಣ ಕಂಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇದು ದಾಖಲೆಯ 11ನೇ ಬಜೆಟ್‌. ಜನರಿಗೆ ಇದು 10ರ ಜತೆ ಮತ್ತೂಂದು ಬಜೆಟ್‌. ವಿಶೇಷ ಕೃಷಿ ವಲಯವೊಂದೇ ಬಿಗ್‌ ಐಡಿಯಾ.

ಟಾಪ್‌ 30 ಭಾಗ್ಯಗಳು
- ಕೃಷಿ ಕ್ಷೇತ್ರಕ್ಕೆ ಎಸ್‌ಎಜೆಡ್‌:ರೈತರು ಅಳವಡಿಸಬಹುದಾದ ಪರಿಣಾಮಕಾರಿ ತಂತ್ರಜ್ಞಾನಕ್ಕೆ ಒತ್ತು ಕೊಡಲು ವಿಶೇಷ ಕೃಷಿ ವಲಯ (ಸ್ಪೆಷಲ್‌ ಅಗ್ರಿಕಲ್ಚರಲ್‌ ಜೋನ್‌) ನಿಗದಿ.

- ಸುವರ್ಣ ಕೃಷಿ ಗ್ರಾಮ: ರಾಜ್ಯದಲ್ಲಿ 100 ಮಾದರಿ ಕೃಷಿ ಗ್ರಾಮಗಳನ್ನು ಅಭಿ ವೃದ್ಧಿಪಡಿಸಲು ಸುವರ್ಣ ಕೃಷಿ ಗ್ರಾಮ ಎಂಬ ಹೊಸ ಯೋಜನೆ ಅನುಷ್ಠಾನ

- ನೀರಾವರಿಗೆ ಭಾರೀ ಸಬ್ಸಿಡಿ: ತುಂತುರು, ಹನಿ ನೀರಾವರಿ ಘಟಕ ಸ್ಥಾಪಿಸಲು 1 ಲಕ್ಷ ರೈತರಿಗೆ ಶೇ. 90, ಹನಿ ನೀರಾವರಿಯ ಸ್ವಯಂಚಾಲಿತ ವ್ಯವಸ್ಥೆಗೆ ಶೇ. 50 ಸಹಾಯಧನ.

- ಕೃಷಿ ಸ್ಟಾರ್ಟಪ್‌ಗಳಿಗೆ ಹಣ: ಕೃಷಿ, ಕೃಷಿ ಸಂಬಂಧಿ ಚಟುವಟಿಕೆಗಳಿಗೆ ನೆರವಾಗುವ ಹೊಸ ಆವಿಷ್ಕಾರ ಅಥವಾ ತಂತ್ರಜ್ಞಾನ ಬಳಸುವ ನವ್ಯೋದ್ಯಮಕ್ಕೆ 10 ಕೋಟಿ ರೂ.

- ರೈತ ಕಲ್ಯಾಣಕ್ಕೆ ಸಿಎಂ ಸಮಿತಿ: ಸಂಕಷ್ಟಕ್ಕೆ ಸಿಲುಕಿರುವ ಕೃಷಿ, ಆತ್ಮಹತ್ಯೆ ಹಾದಿ ಹಿಡಿದಿರುವ ರೈತರ ನೆರವಿಗಾಗಿ ಸಿಎಂ ಅಧ್ಯಕ್ಷತೆಯಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಮಿತಿ ರಚನೆ

- ತೋಟ ಬೆಳೆ ತೆರಿಗೆ ರದ್ದು: 2016ರ ಎ.1ರಿಂದ ಎಲ್ಲ ತೋಟದ ಬೆಳೆಗಳ ಮೇಲಿನ ಕೃಷಿ ವರಮಾನ ತೆರಿಗೆ ರದ್ದು. ವೃತ್ತಿ ತೆರಿಗೆ ಕಾನೂನು ಸರಳಗೊಳಿಸಲು ಹೊಸ ಸಮಿತಿ.

- ಪಶು ವೀರ್ಯ ಬ್ಯಾಂಕ್‌: ದೇಸೀ ಪಶು, ಕುರಿ, ಮೇಕೆ ತಳಿ ರಕ್ಷಣೆಗೆ ವೀರ್ಯ ಬ್ಯಾಂಕ್‌. ವಿಧವೆಯರು, ನಿರಾಶ್ರಿತರು 3 ಕುರಿ ಅಥವಾ ಮೇಕೆ ಖರೀದಿಸಲು ಶೇ. 75 ಸಬ್ಸಿಡಿ

- ಕುರಿ, ಮೇಕೆ ಸಾಕಲು ಒತ್ತು: ಕುರಿ ಹಾಗೂ ಮೇಕೆ ಸಾಕಣೆಗೆ ಭಾರೀ ಒತ್ತು. ತಳಿ ಅಭಿವೃದ್ಧಿ ಜತೆಗೆ ಸಾಕಾಣಿಕೆದಾರರ ಸಹಕಾರ ಮಹಾಮಂಡಳ ಸ್ಥಾಪನೆಗೆ 5 ಕೋಟಿ ರೂ.

- ರೇಷ್ಮೆ ಗೂಡುಗಳ ಬ್ಯಾಂಕ್‌: ರೇಷ್ಮೆ ಆಮದು ಸುಂಕ ಇಳಿಕೆಯಿಂದಾಗಿ ಕಂಗಾ ಲಾದ ಬೆಳೆಗಾರರ ರಕ್ಷಣೆಗೆ ರೇಷ್ಮೆ ಗೂಡು ಬ್ಯಾಂಕ್‌ ಸ್ಥಾಪನೆ ಸಹಿತ ಹಲವು ಕ್ರಮ.

- ಒಳನಾಡು ಮೀನುಗಾರಿಕೆ: ಉತ್ತರ ಕರ್ನಾಟಕದಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ 'ಒಳನಾಡು ಮೀನುಗಾರಿಕೆ ಅಭಿವೃದ್ಧಿ ಕೇಂದ್ರ' ಸ್ಥಾಪಿಸಲು 2 ಕೋ. ರೂ.

- ಅಗ್ಗದ ಕೃಷಿ ಸಾಲ: 3 ಲಕ್ಷವರೆಗೆ ಶೂನ್ಯ ಬಡ್ಡಿಗೆ ಬೆಳೆ ಸಾಲ, ಶೇ. 3 ಬಡ್ಡಿಗೆ 10 ಲಕ್ಷ ಕೃಷಿ ಸಾಲ ಮುಂದುವರಿಕೆ. ಈ ವರ್ಷ 23 ಲಕ್ಷ ರೈತರಿಗೆ 11 ಸಾವಿರ ಕೋ.ರೂ. ಸಾಲ.

- ಗೋಡೌನಲ್ಲಿ ಸೌರವಿದ್ಯುತ್‌: ರಾಜ್ಯ ಉಗ್ರಾಣ ನಿಗಮದ ಗೋದಾಮುಗಳ ಮೇಲ್ಛಾವಣಿಗಳಲ್ಲಿ ಖಾಸಗಿ ಸಹಕಾರದೊಂದಿಗೆ ಸೌರಫ‌ಲಕ ಅಳವಡಿಸಿ ವಿದ್ಯುತ್‌ ಉತ್ಪಾದನೆ.

- ಎತ್ತಿನಹೊಳೆ, ಭದ್ರಾಗೆ ನಿಗಮ: ಹಿಂದೆ ಭರವಸೆ ನೀಡಿದ್ದಂತೆ ಎತ್ತಿನಹೊಳೆ, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆಂದೇ ಪ್ರತ್ಯೇಕ ನಿಗಮ ಸ್ಥಾಪನೆ

- ಅರಣ್ಯಕ್ಕೆ ಕೋಟಿ ಸಸಿ: ಅರಣ್ಯ ಇಲಾಖೆ ಯಿಂದ 5.5 ಕೋಟಿ ಸಸಿಗಳನ್ನು ನೆಡುವ ಜತೆಗೆ, ಸಾರ್ವಜನಿಕರಿಗೆ 2.5 ಕೋಟಿ ಸಸಿಗಳ ವಿತರಿಸಿ ವನ ಸಂರಕ್ಷಣೆಗೆ ಒತ್ತು

- ಐಟಿ ಅಟ್‌ ಸ್ಕೂಲ್‌: ಶಾಲೆಗಳ ನೋಂದಣಿ, ಮಾನ್ಯತೆ ನವೀಕರಣ, ನಿರಾಕ್ಷೇಪಣಾ ಪತ್ರ ನೀಡಿಕೆ ಮತ್ತಿತರ ಕೆಲಸಗಳಿಗೆಂದೇ 'ಐಟಿ ಎಟ್‌ ಸ್ಕೂಲ್ಸ್‌' ಕಾರ್ಯಕ್ರಮ ಜಾರಿ.

- ಕರ್ನಾಟಕ ಶಿಕ್ಷಣ ನೀತಿ: ರಾಜ್ಯದಲ್ಲಿ ಜ್ಞಾನ ಮತ್ತು ಆರ್ಥಿಕ ಅಗತ್ಯಗಳಿಗೆ ಒತ್ತು ನೀಡುವ ಮಾನವ ಸಂಪನ್ಮೂಲ ಕೇಂದ್ರಿತ ಶಿಕ್ಷಣ ನೀತಿ ಜಾರಿಗೆ ಸರಕಾರದ ನಿರ್ಧಾರ

- ಕಲಬುರ್ಗಿ ಹೆಸರಲ್ಲಿ ಪ್ರಶಸ್ತಿ: ಕಳೆದ ವರ್ಷ ಹತ್ಯೆಯಾದ ಕಲಬುರ್ಗಿ ಹೆಸರಲ್ಲಿ ಧಾರವಾಡದ ಕರ್ನಾಟಕ ವಿವಿಯಲ್ಲಿ ಸಂಶೋಧನ ಕೇಂದ್ರ, ಪ್ರಶಸ್ತಿ ಸ್ಥಾಪನೆ

- ರೈತರಿಗೆ ಇಂದಿರಾ ಸುರಕ್ಷೆ: ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದ ಸದಸ್ಯರಿಗೆ ಸಮಗ್ರ ಆರೋಗ್ಯ ಸೇವೆಯನ್ನು ಒದಗಿಸಲು 'ಇಂದಿರಾ ಸುರಕ್ಷಾ' ಯೋಜನೆ

- ಹೈವೇಯಲ್ಲಿ ಆಪತ್ಭಾಂಧವ: ಹೆದ್ದಾರಿಗಳಲ್ಲಿ ಅಪಘಾತಕ್ಕೆ ಒಳಗಾದವರಿಗೆ ತುರ್ತು ಚಿಕಿತ್ಸೆ ನೀಡಲು ರಾಜ್ಯದ 5 ಕಡೆ 'ಆಪತ್ಭಾಂಧವ' ಚಿಕಿತ್ಸಾ ಕೇಂದ್ರ ಸ್ಥಾಪನೆ.

- ಹಳ್ಳಿಗೆ ಮೊಬೈಲ್‌ ಆಸ್ಪತ್ರೆ: ಚಿಕಿತ್ಸೆ, ಆಸ್ಪತ್ರೆ ವ್ಯವಸ್ಥೆ ಇಲ್ಲದ ಹಳ್ಳಿಗಳಲ್ಲಿ ಸಂಚಾರಿ ಆರೋಗ್ಯ ಹಾಗೂ ಮೊಬೈಲ್‌ ಕ್ಲಿನಿಕ್‌ ಸೇವೆ. ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಡಯಾಗ್ನಾಸ್ಟಿಕ್‌ ಕೇಂದ್ರ

- ಧಾರವಾಡದಲ್ಲೂ 'ನಿಮ್ಹಾನ್ಸ್‌': ಧಾರವಾಡದ ಮಾನಸಿಕ ಆರೋಗ್ಯ ಆಸ್ಪತ್ರೆ ಬೆಂಗಳೂರಿನ ನಿಮ್ಹಾನ್ಸ್‌ ಮಟ್ಟಕ್ಕೆ ಅಭಿವೃದ್ಧಿ. ಕಲಬುರಗಿಯಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪನೆ

- ಅಮ್ಮ, ಮಕ್ಕಳಿಗೆ ಬಲ: ಗರ್ಭಿಣಿ, ಬಾಣಂತಿ, ಮಕ್ಕಳಿಗೆ ಪೌಷ್ಟಿಕ ಆಹಾರ, ಗರ್ಭಿಣಿಯರಿಗೆ ಸೊಳ್ಳೆ ಪರದೆ ಮತ್ತು ಸೊಳ್ಳೆ ನಿರೋಧಕ ಕ್ರೀಂ, ಕ್ಷೀರಭಾಗ್ಯದಡಿ ಮಕ್ಕಳಿಗೆ ಕೆನೆಸಹಿತ ಹಾಲು 

- ಅದ್ಧೂರಿ ಅಂಬೇಡ್ಕರ್‌ 125: ಸಂವಿಧಾನಶಿಲ್ಪಿ ಡಾ|ಬಿ.ಆರ್‌.ಅಂಬೇಡ್ಕರ್‌ ಅವರ 125ನೇ ಜನ್ಮದಿನಾಚರಣೆ ರಾಜ್ಯಾದ್ಯಂತ ದೊಟ್ಟಮಟ್ಟದಲ್ಲಿ ಆಚರಿಸಲು ತೀರ್ಮಾನ.

- ಎಸ್ಸಿ, ಎಸ್ಟಿಗೆ ಬಂಪರ್‌: ಪರಿಶಿಷ್ಟರಿಗೆ ಇನ್ನಷ್ಟು ವಸತಿ ಶಾಲೆ, ವಿದ್ಯಾರ್ಥಿ ವೇತನ, ಉನ್ನತ ಶಿಕ್ಷಣಕ್ಕೆ ನೆರವು. ಪರಿಶಿಷ್ಟ ಪಂಗಡದ ಅಧ್ಯಯನಕ್ಕೆ ಹಂಪಿ ವಿವಿಯಲ್ಲಿ ಪ್ರತ್ಯೇಕ ಪೀಠ

- ಸಿದ್ದು ಅಹಿಂದ ಮಂತ್ರ: ಅಲ್ಪಸಂಖ್ಯಾತ, ದಲಿತ, ಹಿಂದುಳಿದ ವರ್ಗದವರಿಗೆ ಭರಪೂರ ನೆರವು. ವಸತಿ, ಪ್ರಾಥಮಿಕ-ಪ್ರೌಢ, ಉನ್ನತ ಶಿಕ್ಷಣ, ವಿವಾಹಗಳಿಗೆ ಭಾರೀ ಅನುದಾನ

- 6 ಲಕ್ಷ ಜನರಿಗೆ ಮನೆ: ಇನ್ನೆರಡು ವರ್ಷದಲ್ಲಿ ವಿವಿಧ ವಸತಿ ಯೋಜನೆಗಳ ಅಡಿ ಆರು ಲಕ್ಷ ಫ‌ಲಾನುಭವಿಗಳಿಗೆ ಸೂರು. ಈ ವರ್ಷ 3 ಲಕ್ಷ ಮನೆಗಳ ನಿರ್ಮಾಣ ಪೂರ್ಣ

- ವಿಶ್ವ ಕನ್ನಡ ಸಮ್ಮೇಳನ: ಕನ್ನಡ ಏಕೀಕರಣದ 60ನೇ ವರ್ಷಾಚರಣೆ ಅಂಗವಾಗಿ ಅದ್ಧೂರಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲು 30 ಕೋಟಿ ರೂ. ಅನುದಾನ ನಿಗದಿ.

- ಕರ್ನಾಟಕಕ್ಕೆ ಧ್ಯೇಯಗೀತೆ: ಏಕೀಕರಣದ 60ನೇ ವರ್ಷಾಚರಣೆ ನಿಮಿತ್ತ ನಾಡು-ನುಡಿ ಬಗ್ಗೆ ಅಭಿಮಾನ ಮೂಡಿಸುವ ಧ್ಯೇಯಗೀತೆ ರಚನೆ. ಪ್ರತಿ ಜಿಲ್ಲೆಯಲ್ಲೂ ಗಾಂಧಿಭವನ.

- ಗ್ರಾಮೀಣ ಕ್ರೀಡೆಗೆ ಜೈ: ಪ್ರತಿ ಜಿಲ್ಲೆಯಲ್ಲಿ 2 ಕಬಡ್ಡಿ ಮ್ಯಾಟ್‌. ಖೋಖೋ, ಥ್ರೋಬಾಲ್‌, ವಾಲಿಬಾಲ್‌ಗೆ ಅಂಗಣ. ಸಾಧಕ ಕ್ರೀಡಾಪಟುಗಳಿಗೆ ಉಚಿತ ಕೆಎಸ್ಸಾರ್ಟಿಸಿ ಪಾಸ್‌.

- ಈಗ ಪಾರಂಪರಿಕ ಗ್ರಾಮ: ಕರ್ನಾಟಕದ ಗತವೈಭವ ಸಾರುವ ಪರಂಪರಾಗತ ಗ್ರಾಮಗಳನ್ನು ಆಕರ್ಷಣೀಯ ಕೇಂದ್ರಗಳನ್ನಾಗಿಸಲು 10 ಕೋಟಿ ರೂ. ವೆಚ್ಚದ ಯೋಜನೆ

- ಕಾಗದರಹಿತ ಕಚೇರಿ: ಗ್ರಾಮೀಣಾಭಿವೃದ್ಧಿ ಇಲಾಖೆಯ ಕಚೇರಿಗಳು ಮತ್ತು 30 ಜಿಪಂ ಕಚೇರಿಗಳನ್ನು ಕಾಗದರಹಿತ ಕಚೇರಿಗಳನ್ನಾಗಿ ಮಾಡಲು 10 ಕೋಟಿ ರೂ.

- 500 ಹಳ್ಳಿ ಸಂತೆ: ವಿಲೇಜ್‌ ಹಾಟ್‌ ಮಾದರಿಯಲ್ಲಿ ರಾಜ್ಯದ 500 ಗ್ರಾಮ ಪಂಚಾಯ್ತಿಗಳಲ್ಲಿ ಹಳ್ಳಿ ಸಂತೆ ಆಯೋಜನೆಗೆ ಮೂಲಸೌಕರ್ಯ ಒದಗಿಸಲು 25 ಕೋಟಿ ರೂ.

- ಮೆಟ್ರೋ-1 ಈ ವರ್ಷ: ಬೆಂಗಳೂರಿನ ಮೆಟ್ರೋ ಮೊದಲನೇ ಹಂತ ಈ ವರ್ಷದ ಮಧ್ಯಭಾಗದಲ್ಲೇ ಪೂರ್ಣ. 2ನೇ ಹಂತದ 2 ರೀಚ್‌ 2020ಕ್ಕೆ ಮುಗಿಸುವ ಗುರಿ

- ಇನ್‌ವೆಸ್ಟ್‌ಗೂ ಕಂಪನಿ: ಕೈಗಾರಿಕೆ ಉತ್ತೇಜನಕ್ಕೆ 'ಇನ್‌ವೆಸ್ಟ್‌ ಕರ್ನಾಟಕ' ಲಾಭರಹಿತ ಕಂಪನಿ ಸ್ಥಾಪನೆ. ಮಂಗಳೂರು, ಬಳ್ಳಾರಿ, ಧಾರವಾಡ, ಮೈಸೂರಲ್ಲಿ ಮಹಿಳಾ ಉದ್ಯೋಗ ಪಾರ್ಕ್‌

- ಪ್ರವಾಸಿ ಭಾರತೀಯ ದಿವಸ್‌: ಬೆಂಗಳೂರಿನಲ್ಲಿ ಮುಂದಿನ ವರ್ಷ ಪ್ರತಿಷ್ಠಿತ 'ಪ್ರವಾಸಿ ಭಾರತೀಯ ದಿವಸ್‌' ಸಮ್ಮೇಳನದ ಆತಿಥ್ಯ ವಹಿಸಲು ರಾಜ್ಯ ಸರ್ಕಾರದ ಸಹಕಾರ

- ಆಟೋಮೇಟೆಡ್‌ ಲೈಸೆನ್ಸ್‌: ಎಲ್ಲ ಆರ್‌ಟಿಒಗಳಲ್ಲಿ ಪರೀಕ್ಷಾ ಪ್ರಕ್ರಿಯೆ, ಕಲಿಕಾದಾರರ ಲೈಸೆನ್ಸ್‌ (ಎಲ್‌ಎಲ್‌), ಚಾಲನಾ ಲೈಸೆನ್ಸ್‌ (ಡಿಎಲ್‌) ವಿತರಣೆ ಸಂಪೂರ್ಣ ಸ್ವಯಂಚಾಲಿತ

- 22 'ಕುಟುಂಬ ಕೋರ್ಟ್‌': ರಾಜ್ಯದಲ್ಲಿ 22 ಹೊಸ ಕುಟುಂಬ ನ್ಯಾಯಾಲಯ ಸ್ಥಾಪನೆ. ತಾಲೂಕು ವಕೀಲರ ಸಂಘಗಳ ವಾರ್ಷಿಕ ಅನುದಾನ 20 ಸಾವಿರದಿಂದ 40 ಸಾವಿರಕ್ಕೆ ಹೆಚ್ಚಳ

ಕೃಷಿ ವಲಯದ ಕೊಡುಗೆ ಇಳಿಕೆ: ಸಿಎಂ ಆತಂಕ
ಒಟ್ಟಾರೆ ಆಂತರಿಕ ಉತ್ಪನ್ನಕ್ಕೆ ಕೃಷಿ ವಲಯದ ಕೊಡುಗೆ ಇಳಿಕೆಯಾಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. ದೇಶದ ಒಟ್ಟಾರೆ ಆಂತರಿಕ ಉತ್ಪನ್ನಕ್ಕೆ ರಾಜ್ಯದ ಕೊಡುಗೆ ಶೇ. 5.5ರಿಂದ ಶೇ. 7ಕ್ಕೆ ಹೆಚ್ಚಿದ್ದು, ಇದು ರಾಷ್ಟ್ರೀಯ ಒಟ್ಟಾರೆ ಆಂತರಿಕ ಉತ್ಪನ್ನಕ್ಕೆ ನಮ್ಮ ರಾಜ್ಯದ ವಾಸ್ತವಿಕ ಕೊಡುಗೆಯನ್ನು ಪ್ರತಿಬಿಂಬಿಸುತ್ತಿದೆ. ಐಟಿ ವಲಯದ ಕೊಡುಗೆ ಶೇ. 9ರಿಂದ ಶೇ. 18ಕ್ಕೆ ಏರಿಕೆಯಾಗಿದೆ. ಸೇವಾವಲಯದ ಒಟ್ಟಾರೆ ಕೊಡುಗೆಯು ಶೇ. 59ರಿಂದ ಶೇ. 64ಕ್ಕೆ ಹೆಚ್ಚಳವಾಗಿದೆ. ಉತ್ಪಾದನಾ ವಲಯದ ಕೊಡುಗೆ ಶೇ.12ರಿಂದ ಶೇ.15ಕ್ಕೆ ಏರಿದೆ. ಆದರೆ, ಕೃಷಿ ವಲಯದ ಕೊಡುಗೆಯು ಶೇ.14ರಿಂದ ಶೇ.8ಕ್ಕೆ ಇಳಿಕೆಯಾಗಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಅವರು ತಮ್ಮ ಬಜೆಟ್‌ನಲ್ಲಿ ಪ್ರಸ್ತಾವಿಸಿದ್ದಾರೆ.

11ನೇ ಬಜೆಟ್‌ 
ಇನ್ನೆರಡು ಬಜೆಟ್‌ ಮಂಡಿಸಿದರೆ ರಾಮಕೃಷ್ಣ ಹೆಗಡೆ ಅವರ 13 ಬಜೆಟ್‌ ದಾಖಲೆಗೆ ಸಮ. ಸಿಎಂ ಆಗಿ ಇದು ಸಿದ್ದು ಅವರ 4ನೇ ಬಜೆಟ್‌

1.63 ಲಕ್ಷ ಕೋ.ರೂ. 
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2016-17ರ ರಾಜ್ಯ ಆಯವ್ಯಯದ ಗಾತ್ರ. ಕಳೆದ ವರ್ಷ ಇದು 1.43 ಲಕ್ಷ ಕೋಟಿ ರೂ. ಇತ್ತು.

ಏರಿಕೆ
ಪೆಟ್ರೋಲ್‌, ಡೀಸೆಲ್‌, ಪೆಪ್ಸಿ, ಕೋಕ್‌ ರೀತಿಯ ಪಾನೀಯ, ಬಿಯರ್‌, ಮದ್ಯ, ಕೇಬಲ್‌, ಡಿಟಿಎಚ್‌ ಟೀವಿ ಸೇವೆ, ಟ್ಯಾಕ್ಸಿ, ಕ್ಯಾಬ್‌ ಮತ್ತಿತರ ಗುತ್ತಿಗೆ ಸಾರಿಗೆ, ಆಸ್ತಿ ಮಾರಾಟ ಮುದ್ರಾಂಕ ಶುಲ್ಕ,  ಕುಟುಂಬ ದೊಳಗೆ ಭೂದಾನ, ಭೂಗುತ್ತಿಗೆ, ಕುಟುಂಬದೊಳಗೆ ಭೂಹಕ್ಕು ಬಿಡುಗಡೆ, ಭೂ ಇತ್ಯರ್ಥ

ಇಳಿಕೆ
ಹೆಲ್ಮೆಟ್‌, ಎಲ್‌ಇಡಿ ಬಲ್ಬ್, ರಾಗಿ ರೈಸ್‌ (ಸಂಸ್ಕರಿತ ರಾಗಿ), ಜೋಳ, ರಾಗಿ ರೊಟ್ಟಿ, ಪ್ರಷರ್‌ ಕುಕ್ಕರ್‌ ಮತ್ತಿತರ ಅಲ್ಯುಮಿನಿಯಂ ಪಾತ್ರೆ, ಹತ್ತಿ, ಮಾನ್ಯತೆ ಇರುವ ತಯಾರಕರ ಕಾಗದೋತ್ಪನ್ನ, ಶೇಂಗಾ, ಗುರೆಳ್ಳು (ಹುಚ್ಚೆಳ್ಳು), ಕೊಬ್ಬರಿ, ಕಡಲೇಬೇಳೆ, ಬೆಳ್ಳುಳ್ಳಿ, ಅಗಸಿ, ಪುಟಾಣಿ (ಹುರಿಗಡಲೆ)ಯಿಂದ ತಯಾರಿಸಿದ ಚಟ್ನಿಪುಡಿ, ಕಾಗದ ಆಧರಿತ ಆಫೀಸ್‌ ಫೈಲ್‌, ದೊಡ್ಡವರ ಡೈಪರ್‌, ನಿಕ್ಕೆಲ್‌, ಟೈಟಾನಿಯಂ ವಸ್ತು. ರಬ್ಬರ್‌ಶೀಟ್‌ ಮಾಡುವ ಹಸ್ತಚಾಲಿತ ಯಂತ್ರ, ಸೆಟ್‌ಟಾಪ್‌ ಬಾಕ್ಸ್‌, ಮಲ್ಟಿ ಮೀಡಿಯಾ ಸ್ಪೀಕರ್‌, ಕೆಲ ಶಸ್ತ್ರಚಿಕಿತ್ಸೆ ಗೌನ್‌, ಕೋಟ್‌, ಮಾಸ್ಕ್, ಕ್ಯಾಪ್‌, ಡ್ರೇಪ್‌, ವಿದ್ಯುತ್‌ ಚಾಲಿತ ವಾಹನ, ದಸ್ತಾವೇಜುಗಳ ಮುದ್ರಾಂಕ ಶುಲ್ಕ

Trending videos

Back to Top