CONNECT WITH US  

ಹೆಣ್ಣು ಹುಟ್ಟಿ ಕನಕಾಭಿಷೇಕ ತಪ್ಪಿದ್ದಕ್ಕೆ ಡಿವೋರ್ಸ್‌ ಕೇಳಿದ ಪತಿ!

ಬೆಂಗಳೂರು: ಹೆಣ್ಣು ಮಗು ಜನಿಸಿದ್ದರಿಂದ ಕನಕಾಭಿಷೇಕದ ಕನಸು ನುಚ್ಚುನೂರಾಯಿತು ಎಂಬ ಕ್ಷುಲ್ಲಕ ಕಾರಣಕ್ಕೆ ಪತಿರಾಯನೊಬ್ಬ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿರುವ ವಿಚಿತ್ರ ಘಟನೆಯೊಂದು ನಡೆದಿದೆ. 

ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ರವಿ (ಹೆಸರು ಬದಲಿಸಲಾಗಿದೆ) ವಿಚ್ಛೇದನಕ್ಕಾಗಿ ಮೊರೆ ಹೋಗಿರುವ ವ್ಯಕ್ತಿ. ಪತಿ ಮತ್ತು ಆತನ ಕುಟುಂಬದ ಸದಸ್ಯರ ಈ ವಿಚಿತ್ರ ನಿರ್ಧಾರದಿಂದ ಶೈಲಜಾ (ಹೆಸರು ಬದಲಿಸಲಾಗಿದೆ) ಸಹ ನ್ಯಾಯಾಲಯಕ್ಕೆ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ. 

ವಿವಾಹ ವಿಚ್ಛೇದನಕ್ಕಾಗಿ ಕಳೆದ ಮೂರು ವರ್ಷದಿಂದ ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗುತ್ತಿದೆ. ಕನಕಾಭಿಷೇಕ ಮಾಡಲಾಗಲಿಲ್ಲ ಎಂಬ ಕಾರಣಕ್ಕಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಪತಿರಾಯನ ಕುಟುಂಬದವರ ಕಾರಣ ಕೇಳಿ ನ್ಯಾಯಾಲಯವೂ ಆಶ್ಚರ್ಯ ವ್ಯಕ್ತಪಡಿಸಿ. ವಿಚಾರಣೆ ನಡೆಸುತ್ತಿದೆ. ಶೈಲಜಾ ಅವರು ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದು, ಮೂರು ವರ್ಷದ ಮಗಳ ಜತೆ ಜೀವನ ಸಾಗಿಸುತ್ತಿದ್ದಾರೆ. 

ಮಗು ಹುಟ್ಟಿದ ಕೂಡಲೇ ವಿಚ್ಛೇದನ ಅರ್ಜಿ:
ರವಿ ಹಾಗೂ ಶೈಲಜಾ ಅವರು ಬೆಂಗಳೂರಿನ ಒಂದೇ ಬಡಾವಣೆಯಲ್ಲಿ ನೆಲೆಸಿದ್ದರಿಂದ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಮನೆಯ ಹಿರಿಯರಿಗೆ ತಿಳಿಸಿದಾಗ, ಇಬ್ಬರದ್ದೂ ಒಂದೇ ಜಾತಿಯಾಗಿದ್ದ ಕಾರಣಕ್ಕೆ ಅವರು ಅಡ್ಡಿಪಡಿಸಲಿಲ್ಲ. 2009ರಲ್ಲಿ ಕುಟುಂಬ ಸದಸ್ಯರು, ಬಂಧುಗಳ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ನಡೆದಿತ್ತು. 2013ರವರೆಗೆ ದಾಂಪತ್ಯದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಶೈಲಜಾ ಗರ್ಭಿಣಿಯಾಗಿದ್ದ ವೇಳೆ ಪತಿರಾಯನ ಕುಟುಂಬದವರು ಗಂಡು ಮಗುವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದರಲ್ಲದೆ, ಮಗುವಿಗೆ ಕನಕಾಭಿಷೇಕ ಮಾಡಬೇಕು ಎಂದು ನಿರ್ಧರಿಸಿದ್ದರು. ಆದರೆ, ಹೆಣ್ಣು ಮಗು ಜನಿಸಿದ್ದರಿಂದ ಕನಕಾಭಿಷೇಕ ಮಾಡುವ ಆಸೆ ಫ‌ಲಿಸದಂತಾಯಿತು. ಹೆಣ್ಣು ಮಗು ಜನಿಸಿದ ವಿಷಯ ಕೇಳಿದ ರವಿ, ಮಗು ಮತ್ತು ಪತ್ನಿಯನ್ನು ನೋಡಲು ಕೂಡ ಹೋಗಲಿಲ್ಲ. ಕರೆ ಮಾಡಿ ಕರೆದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೆಣ್ಣು ಮಗುವಾಗಿದ್ದರಿಂದ ತಾನು ಬರುವುದಿಲ್ಲ ಎಂಬುದಾಗಿ ಹೇಳಿದ್ದ ಎಂದು ಹೇಳಲಾಗಿದೆ. 

ಶೈಲಜಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ ಮೂರು ತಿಂಗಳಲ್ಲಿಯೇ ಪತಿರಾಯ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ. ಇದರಿಂದ ಆಘಾತಗೊಂಡ ಶೈಲಜಾ ಕುಟುಂಬದವರು ರವಿಯ ಮನವೊಲಿಕೆ ಯತ್ನ ಮಾಡಿದರು. ಮಧ್ಯಸ್ಥಿಕೆ ಕೇಂದ್ರದ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನವೂ ವಿಫ‌ಲವಾಯಿತು. ಅಂತಿಮವಾಗಿ ಪ್ರಕರಣವೀಗ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. 

ಪತಿಯ ಮಾನಸಿಕ ಕಿರುಕುಳ ಹಾಗೂ ತಂದೆಯ ಸಾವಿನಿಂದ ಬೇಸತ್ತ ಶೈಲಜಾ ಅವರು ಮಗಳ ಭವಿಷ್ಯ ರೂಪಿಸಲು ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದು, ಸಹೋದರಿಯೊಂದಿಗೆ ನೆಲೆಸಿದ್ದಾರೆ. ರವಿ ಅವರ ತಂದೆ ಮತ್ತು ಸಹೋದರಿಯೂ ವಿಚ್ಛೇದಿತರಾಗಿದ್ದು, ಇತ್ತೀಚೆಗೆ ಸಹೋದರಿ ಮತ್ತೂಂದು ವಿವಾಹವಾಗಿದ್ದಾರೆ ಎನ್ನಲಾಗಿದೆ.

ಮಗು ನೋಡಲು ಅವಕಾಶ:
ಮಗುವಿನ ಪೋಷಣೆಗಾಗಿ 20 ಲಕ್ಷ ರೂ. ನೀಡುವಂತೆ ಶೈಲಜಾ ಪರ ವಕೀಲರು ವಾದ ಮಂಡಿಸಿದ್ದಾರೆ. ಇದಕ್ಕೆ ನಿರಾಕರಿಸಿದ ಪತಿರಾಯ 4-5 ಲಕ್ಷ ರೂ. ನೀಡುವುದಾಗಿ ಹೇಳಿದರು. ಇದಕ್ಕೆ ಒಪ್ಪದಿದ್ದಾಗ ಮಗು ನೋಡಲು ಅವಕಾಶ ನೀಡಬೇಕು ಎಂದು ಅರ್ಜಿ ಸಲ್ಲಿಸಿದ. ವಿಚಾರಣೆ ನಡೆಸಿದ ನ್ಯಾಯಾಲಯ ಮಗು ನೋಡಲು ಅವಕಾಶ ನೀಡಿದೆ. ಕೆಲವು ದಿನಗಳ ಕಾಲ ನಿಗದಿತವಾಗಿ ಮಗುವನ್ನು ನೋಡಲು ಬರುತ್ತಿದ್ದ ಪತಿ ಇದೀಗ ಕಡಿಮೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಏನಿದು ಕನಕಾಭಿಷೇಕ?
ಒಂದು ಕುಟುಂಬದ ನಾಲ್ಕನೇ ತಲೆಮಾರಿನಲ್ಲಿ ಜನಿಸುವ ಗಂಡುಮಗುವಿಗೆ ಅಂದರೆ, ಮಗುವಿನ ತಂದೆಯ ಅಜ್ಜ ತನ್ನ ಮರಿಮೊಮ್ಮಗನಿಗೆ ಚಿನ್ನದ ಹೂಗಳಿಂದ ಅಭಿಷೇಕ ಮಾಡುತ್ತಾರೆ. ಅದೇ ಕನಕಾಭಿಷೇಕ. ಇತರೆ ಹೂವುಗಳೊಂದಿಗೆ ಕೆಲವು ಚಿನ್ನದ ಹೂಗಳನ್ನು ಇಟ್ಟು ಅಭಿಷೇಕ ಮಾಡಿದ ನಂತರ ಚಿನ್ನದ ಹೂಗಳನ್ನು ಕುಟುಂಬದ ಆತ್ಮೀಯರಿಗೆ ದಾನ ನೀಡುವುದು ಸಂಪ್ರದಾಯ. ಹೆಣ್ಣು ಮಗು ಹುಟ್ಟಿದರೆ ಕನಕಾಭಿಷೇಕ ಮಾಡುವುದಿಲ್ಲ. ರವಿಗೆ ಹೆಣ್ಣು ಮಗು ಜನಿಸಿದ್ದೇ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ.

ಹೆಣ್ಣು ಮಗು ಜನಿಸಿದೆ ಎಂಬ ಕಾರಣಕ್ಕಾಗಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ. ಮಗುವಿನ ಪೋಷಣೆಗಾಗಿ ಪರಿಹಾರ ಕೋರಿ ಅರ್ಜಿ ಸಲ್ಲಿಸಲಾಗಿದೆ. ಮದುವೆ ಖರ್ಚನ್ನು ಕೇಳಲಾಗಿದೆ. ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.
- ಹರಿಪ್ರಸಾದ್‌, ಮಹಿಳೆಯ ಪರ ವಕೀಲರು

ಪ್ರಭುಸ್ವಾಮಿ ನಟೇಕರ್‌

Trending videos

Back to Top