CONNECT WITH US  

ಪರಿಷತ್‌ ಚುನಾವಣೆಗೆ ರಜೆ ಕೊಡಿ: ಬಿಜೆಪಿ

ಬೆಂಗಳೂರು: ವಿಧಾನ ಪರಿಷತ್ತಿನ ವಾಯವ್ಯ, ಪಶ್ಚಿಮ ಮತ್ತು ದಕ್ಷಿಣ ಪದವೀಧರ ಕ್ಷೇತ್ರಗಳ ಚುನಾವಣೆ ನಡೆಯುವ ದಿನವಾದ ಗುರುವಾರ ಸಾರ್ವತ್ರಿಕ ರಜೆ ನೀಡುವಂತೆ ಬಿಜೆಪಿ ಒತ್ತಾಯಿಸಿದೆ. ಈ ಸಂಬಂಧ ರಾಜ್ಯ ಬಿಜೆಪಿ ವಕ್ತಾರ ಎಸ್‌.ಸುರೇಶ್‌ಕುಮಾರ್‌ ಅವರು ಮಂಗಳವಾರ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದು, ರಜೆ ಯಾಕೆ ನೀಡಬೇಕು ಎಂಬುದಕ್ಕೆ ಕಾರಣಗಳನ್ನೂ ನೀಡಿದ್ದಾರೆ.

ದಕ್ಷಿಣ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮೈಸೂರು ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯಗಳ ಪರೀಕ್ಷೆಗಳು ನಿಗದಿಯಾಗಿವೆ. ಪರೀಕ್ಷಾ ದಿನದಂದು ಈ ವಿಶ್ವ ವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವೀಧರರು ದಕ್ಷಿಣ ಪದವೀಧರರ ಕ್ಷೇತ್ರದ ಮತದಾನದಲ್ಲಿ ಭಾಗವಹಿಸಲಾಗುವುದಿಲ್ಲ. ಆ ಎರಡೂ ವಿಶ್ವ ವಿದ್ಯಾಲಯಗಳ ಮೌಲ್ಯಮಾಪನವು ಅಂದೇ ನಡೆಯಲಿದೆ. ಮೌಲ್ಯಮಾಪನಕ್ಕೆ ತೆರಳುವ ಪ್ರಾಚಾರ್ಯರು ಹಾಗೂ ಸಂಬಂಧಿಸಿದ ಸಿಬಂದಿ ವರ್ಗ ಮತ ಚಲಾಯಿಸುವ ಹಕ್ಕಿನಿಂದ ವಂಚಿತರಾಗಲಿದ್ದಾರೆ. ಮೇಲಾಗಿ ಚುನಾವಣೆ ಗುರುವಾರ ನಡೆಯಲಿದ್ದು, ಅದು ಕೆಲಸದ ದಿನವಾಗಿದೆ. ನಗರ ಪ್ರದೇಶದಲ್ಲಿ ವಾಸವಿರುವ ಸಾವಿರಾರು ಪದವೀಧರರು ಸರಕಾರಿ, ಅರೆ ಸರಕಾರಿ, ಖಾಸಗಿ ಹಾಗೂ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಮತದಾನದಲ್ಲಿ ಭಾಗವಹಿಸಲು ಸಾಧ್ಯವಾಗದಂತಾಗುತ್ತದೆ.

ಹೀಗಾಗಿ ಎಲ್ಲ ಪದವೀಧರರಿಗೂ ಅನುಕೂಲವಾಗುವಂತೆ ಮತದಾನದ ದಿನದಂದು ನಾಲ್ಕೂ ಚುನಾವಣಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ರಜೆಯನ್ನು ಘೋಷಿಸಲು ಸರಕಾರಕ್ಕೆ ಹಾಗೂ ಸಂಬಂಧಿಸಿದ ಎಲ್ಲರಿಗೂ ಸೂಚನೆಯನ್ನು ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.


Trending videos

Back to Top