CONNECT WITH US  

ರಾಜ್ಯಸಭೆ ಚುನಾವಣೆ :ಜೈರಾಂ, ಆಸ್ಕರ್‌, ನಿರ್ಮಲಾ, ರಾಮಮೂರ್ತಿ ಗೆಲುವು

ಬೆಂಗಳೂರು: ವಿಧಾನಪರಿಷತ್‌ ಚುನಾವಣೆ ರೀತಿಯೇ ರಾಜ್ಯಸಭೆ ಚುನಾವಣೆ ಸಹ ನಿರೀಕ್ಷಿತ ಫ‌ಲಿತಾಂಶ ಕಂಡಿದ್ದು, ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ತಾನು ಸುಲಭವಾಗಿ ಗೆಲ್ಲಬಹುದಾಗಿದ್ದ ಎರಡು ಸ್ಥಾನಗಳ ಜತೆಗೆ, ಮೂರನೇ ಅಭ್ಯರ್ಥಿಯನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿಕೊಂಡಿದೆ. ಉಳಿದ ಮತ್ತೂಂದು ಸ್ಥಾನವನ್ನು ಗೆದ್ದು ಬಿಜೆಪಿ ನಗೆ ಬೀರಿದೆ. ಆದರೆ, ಸಂಖ್ಯಾ ಬಲವಿಲ್ಲದಿದ್ದರೂ ಪಕ್ಷೇತರರ ಮತ ನಂಬಿಕೊಂಡು ಅಭ್ಯರ್ಥಿ ಕಣಕ್ಕೆ ಇಳಿಸಿದ್ದ ಜೆಡಿಎಸ್‌ ತನ್ನ ಪಕ್ಷದ ಶಾಸಕರ ಮತವನ್ನು ಪಡೆಯಲಾಗದೇ ಹೀನಾಯ ಸೋಲಿನ ಮೂಲಕ ಮುಖಭಂಗ ಅನುಭವಿಸಿದೆ.

ಬಿಜೆಪಿಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ಕಾಂಗ್ರೆಸ್‌ನಿಂದ ಕೇಂದ್ರದ ಮಾಜಿ ಸಚಿವರಾದ ಜೈರಾಂ ರಮೇಶ್‌, ಆಸ್ಕರ್‌ ಫ‌ರ್ನಾಂಡಿಸ್‌ ಮತ್ತು ನಿವೃತ್ತ ಐಪಿಎಸ್‌ ಅಧಿಕಾರಿ ಕೆ.ಸಿ.ರಾಮಮೂರ್ತಿ ಗೆಲುವು ಸಾಧಿಸಿದರೆ, ಜೆಡಿಎಸ್‌ನ ಬಿ.ಎಂ.ಫಾರೂಕ್‌ ಪರಾಭವಗೊಂಡಿದ್ದಾರೆ.

ವಿಶೇಷವೆಂದರೆ, ನಾಲ್ಕನೇ ಅಭ್ಯರ್ಥಿ ಗೆಲುವು ಸಾಧಿಸಲು ಪ್ರಾಶಸ್ತ್ಯದ ಮತಗಳು ಬೇಕಾಗಬಹುದು ಎಂಬ ರಾಜಕೀಯ ಲೆಕ್ಕಾಚಾರ ಸುಳ್ಳಾಗಿ ಎಲ್ಲಾ ನಾಲ್ವರು ಅಭ್ಯರ್ಥಿಗಳು ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಗೆಲುವು ಸಾಧಿಸಿದ್ದಾರೆ. ಅದರಲ್ಲೂ ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ, ಗೆಲ್ಲಲು ಎರಡನೇ ಪ್ರಾಶಸ್ತ್ಯದ ಮತಗಳು ಬೇಕಾಗಬಹುದು ಎಂದು ಭಾವಿಸಿದ್ದ ಕೆ.ಸಿ.ರಾಮಮೂರ್ತಿ ಎಲ್ಲರಿಗಿಂತ ಅಧಿಕ ಅಂದರೆ 52 ಮತ ಪಡೆದು ಅಚ್ಚರಿ ಮೂಡಿಸಿದ್ದಾರೆ.

ಒಟ್ಟು ಚಲಾವಣೆಯಾದ 224 ಮತಗಳ ಪೈಕಿ ಕಾಂಗ್ರೆಸ್‌ನ ಕೆ.ಸಿ.ರಾಮಮೂರ್ತಿ 52 ಮತ ಗಳಿಸಿದ್ದಾರೆ. ಉಳಿದಂತೆ ಕಾಂಗ್ರೆಸ್‌ ಅಭ್ಯರ್ಥಿಗಳಾದ ಜೈರಾಂ ರಮೇಶ್‌- 47, ಆಸ್ಕರ್‌ ಫ‌ರ್ನಾಂಡಿಸ್‌- 46 ಮತ್ತು ಬಿಜೆಪಿಯ ನಿರ್ಮಲಾ ಸೀತಾರಾಮನ್‌- 46 ಮತ ಪಡೆದು ಗೆಲುವು ಸಾಧಿಸಿದರೆ, 33 ಮತ ಗಳಿಸಿದ ಜೆಡಿಎಸ್‌ನ ಬಿ.ಎಂ.ಫಾರೂಕ್‌ ಸೋಲಿನ ಕಹಿ ಉಂಡಿದ್ದಾರೆ.

ವಿಳಂಬವಾದ ಎಣಿಕೆ: 
ಮತದಾನದ ವೇಳೆ ಅನಾರೋಗ್ಯದ ನಿಮಿತ್ತ ಇಬ್ಬರು ಕಾಂಗ್ರೆಸ್‌ ಸದಸ್ಯರು ಬೇರೆಯವರ ನೆರವು ಪಡೆದು ಮತದಾನ ಮಾಡಿದ್ದಾರೆ. ಜೆಡಿಎಸ್‌ನ ಎಂಟು ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್‌ ಮತದಾನ ಕೇಂದ್ರದ ಬಳಿಯೇ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಮತ ಯಾಚಿಸಿದ್ದಾರೆ. ಆದ್ದರಿಂದ ಮತಎಣಿಕೆ ಮುಂದೂಡಬೇಕು ಮತ್ತು ಹತ್ತು ಮತಗಳನ್ನು ಅಸಿಂಧು ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಜೆಡಿಎಸ್‌ ಒಟ್ಟು 11 ಪ್ರತ್ಯೇಕ ದೂರುಗಳನ್ನು ದಾಖಲಿಸಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಎರಡು ದೂರನ್ನು ಜೆಡಿಎಸ್‌ ವಿರುದ್ಧ ದಾಖಲಿಸಿತ್ತು.
ಇದರಿಂದ ಸಂಜೆ ಐದು ಗಂಟೆಗೆ ಆರಂಭವಾಗಬೇಕಿದ್ದ ಮತ ಎಣಿಕೆ ಆರು ಗಂಟೆಯ ಬಳಿಕ ಶುರುವಾಯಿತು.

ಮೊದಲು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸಲ್ಲಿಸಿದ ದೂರುಗಳನ್ನು ಇತ್ಯರ್ಥಗೊಳಿಸಿದ ಚುನಾವಣಾಧಿಕಾರಿಗಳು ಬಳಿಕ ಕೇಂದ್ರ ಚುನಾವಣಾ ಆಯೋಗದಿಂದ ಮತ ಎಣಿಕೆಗೆ ಅನುಮತಿ ಪಡೆದಿದ್ದು ಈ ವಿಳಂಬಕ್ಕೆ ಕಾರಣವಾಯಿತು.

ಜೆಡಿಎಸ್‌ನ 8 ಶಾಸಕರಿಂದ ಅಡ್ಡಮತದಾನ:
ಶುಕ್ರವಾರ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌ನ ಐವರು ಶಾಸಕರು ಪಕ್ಷದ ಅಭ್ಯರ್ಥಿಗಳಿಗೆ ಕೈಕೊಟ್ಟಿದ್ದರೆ ರಾಜ್ಯಸಭೆ ಚುನಾವಣೆಯಲ್ಲಿ ಆ ಐವರು ಶಾಸಕರ ಜತೆಗೆ ಇನ್ನೂ ಮೂರು ಮಂದಿ ಅಡ್ಡಮತದಾನ ಮಾಡಿದ್ದರು. ಇದರಿಂದಾಗಿ ಜೆಡಿಎಸ್‌ ಅಭ್ಯರ್ಥಿ ಫಾರೂಕ್‌ ಅವರಿಗೆ ಪಕ್ಷದಿಂದ ಕೇವಲ 32 ಮತ ಮಾತ್ರ ಬಿತ್ತು. ಆದರೆ, ಕಾಂಗ್ರೆಸ್‌ಗೆ ಬೀಳುತ್ತದೆ ಎಂದು ಭಾವಿಸಿದ್ದ ಪಕ್ಷೇತರ ಶಾಸಕರ ಒಂದು ಮತ ಜೆಡಿಎಸ್‌ ಪಾಲಾಗಿದ್ದರಿಂದ ಅವರು 33 ಮತ ಗಳಿಸುವಂತಾಯಿತು.

ಕಾಂಗ್ರೆಸ್‌ಗೆ ಲಾಭ: 
ವಿಧಾನಸಭೆಯಲ್ಲಿ 44 ಸದಸ್ಯ ಬಲ ಹೊಂದಿರುವ ಬಿಜೆಪಿ ಈ ಹಿಂದೆಯೇ ಇನ್ನಿಬ್ಬರನ್ನು ಬಲೆಗೆ ಹಾಕಿಕೊಂಡು ಗೆಲ್ಲಲು ಬೇಕಾದ 46 ಮತ ಸಿದ್ಧಮಾಡಿಟ್ಟುಕೊಂಡಿತ್ತು. ಕಾಂಗ್ರೆಸ್‌ ತನ್ನ ಮೊದಲ ಇಬ್ಬರು ಅಭ್ಯರ್ಥಿಗಳಿಗೆ ತಲಾ 46 ಮತ್ತು ಮೂರನೇ ಅಭ್ಯರ್ಥಿಗೆ 32 ಮತ ಹಂಚಿಕೆ ಮಾಡಿತ್ತು. ಹೀಗಾಗಿ ಮೂರನೇ ಅಭ್ಯರ್ಥಿ ಗೆಲ್ಲಲು ಜೆಡಿಎಸ್‌ನ 5 ಹಾಗೂ ಪಕ್ಷೇತರ ಮತ್ತು ಇತರೆ ಪಕ್ಷಗಳ 19 ಶಾಸಕರ ಪೈಕಿ ಕನಿಷ್ಠ 14 ಮಂದಿಯನ್ನು ಸೆಳೆದುಕೊಳ್ಳಬೇಕಾಗಿತ್ತು.

ಈ ಮಧ್ಯೆ ಮತದಾನದ ವೇಳೆ ಕಾಂಗ್ರೆಸ್‌ನ ರಾಮಕೃಷ್ಣ ಅವರ ಮತಕ್ಕೆ ಸಂಬಂಧಿಸಿದಂತೆ ಗೊಂದಲ ಉಂಟಾಗಿದ್ದರಿಂದ ಪಕ್ಷದ ಮೂರನೇ ಅಭ್ಯರ್ಥಿಗೆ ನಿಗದಿಯಾಗಿದ್ದ ಒಂದು ಮತವನ್ನು ಜೈರಾಂ ರಮೇಶ್‌ ಅವರಿಗೆ ಹಾಕಲಾಯಿತು. ಇದರಿಂದ ಅವರು 47 ಮತ ಗಳಿಸುವಂತಾಯಿತು. ಆದರೆ, ಜೆಡಿಎಸ್‌ನ ಐವರು ಸದಸ್ಯರ ಜತೆಗೆ ಇನ್ನೂ ಮೂವರು ಈ ಬಾರಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದರಿಂದ ಪಕ್ಷೇತರರು, ಇತರೆ ಪಕ್ಷಗಳು ಸೇರಿ ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿ ರಾಮಮೂರ್ತಿ 52 ಮತ ಗಳಿಸುವಂತಾಯಿತು.

ಒಟ್ಟು ಮತಗಳು- 124
ಕಾಂಗ್ರೆಸ್‌- 145
ಬಿಜೆಪಿ- 46
ಜೆಡಿಎಸ್‌- 33

--------
ಮತಗಳ ಸಂಖ್ಯೆ ಹೆಚ್ಚುಕಮ್ಮಿಯಾಗಿದ್ದು ಎಲ್ಲಿ?
- ಜೆಡಿಎಸ್‌ನ ಎಂಟು ಮತ ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿ ಪಾಲು
- ಕಾಂಗ್ರೆಸ್‌ ನಿರೀಕ್ಷಿಸಿದ್ದ ಒಂದು ಪಕ್ಷೇತರ ಮತ ಜೆಡಿಎಸ್‌ ಪಾಲು
- ಕಾಂಗ್ರೆಸ್‌ ಬೆಂಬಲಿಸಿದ ಎಂಟು ಪಕ್ಷೇತರರು ಹಾಗೂ ಇತರೆ 12 ಮಂದಿ
- ಒಂದು ಪಕ್ಷೇತರ ಮತ್ತು ಒಂದು ಬಿಎಸ್‌ಆರ್‌ ಕಾಂಗ್ರೆಸ್‌ ಮತ ಪಡೆದ ಬಿಜೆಪಿ

Trending videos

Back to Top