CONNECT WITH US  

ನಾನು ಸಾಯೋಕೆ ನಿರ್ಧರಿಸಿದ್ದೆ. ಆದರೆ ಪುನಃ ಬದುಕಲು ನಿಂತಿದ್ದೇನೆ

ವಿಜಯ್‌ 'ದುನಿಯಾ'ದಲ್ಲೊಂದು ಘಟನೆ ನಡೆದು ಹೋಗಿದೆ. ಅದೆಲ್ಲಾ ಹಳೇ ಕಥೆ. ಹಾಗಂತ, ದುನಿಯಾ ವಿಜಯ್‌ ಆ ಕಥೆ ಮರೆತಿಲ್ಲ. ವಿಜಯ್‌ ತನ್ನ ದುನಿಯಾದಲ್ಲಿ ನಲಿವಿಗಿಂತ ನೋವು, ಅವಮಾನ, ಕಂಡಿದ್ದೇ ಹೆಚ್ಚು. ಅವರಿಗೆ ಬೇಸರ ಆಗಿರೋದುಂಟು, ಅದರಿಂದ ಹೊರಬಂದಿದ್ದೂ ಉಂಟು. ಅವರ ಲೈಫ‌ಲ್ಲೀಗ ಎಲ್ಲವೂ ಚೆನ್ನಾಗಿದೆ. ಆದರೆ, ಅವರ ದುನಿಯಾದ ಕಹಿ ಘಟನೆಗಳ ನಡುವೆ ಅವರು ಬದುಕಿದ್ದು, ಹೇಗೆ, ಅವರು ಎದುರಿಸಿದ ಸಮಸ್ಯೆಗಳೆಷ್ಟು, 'ದುನಿಯಾ' ವಿಜಯ್‌, ನೊಂದುಕೊಂಡಿದ್ದು ಯಾಕೆ, ಇತ್ತೀಚೆಗಷ್ಟೇ ಅವರು ಸಾಯಲು ನಿರ್ಧರಿಸಿದ್ದೂ ಉಂಟು! ಹಾಗಾದರೆ, ವಿಜಿಗೆ ಈ ಲೈಫ್ ಸಾಕಾಗಿದ್ದು ಯಾಕೆ? ಈ ಎಲ್ಲಾ ಪ್ರಶ್ನೆಗಳಿಗೆ ವಿಜಯ್‌ ಉತ್ತರವಾಗಿದ್ದಾರೆ. ಗೊತ್ತಿರದ ಅದೆಷ್ಟೋ ವಿಷಯಗಳನ್ನು ಹೊರ ಹಾಕಿದ್ದಾರೆ, ಮನಸ್ಸಲ್ಲೇ ಅಡಗಿದ್ದ ಅಷ್ಟೂ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. 

ಓವರ್‌ ಟು ದುನಿಯಾ ವಿಜಯ್‌...

ಸಾಯೋಕೆ ನಿರ್ಧರಿಸಿದ್ದೆ!: ಯಾಕೋ ಇತ್ತೀಚೆಗೆ ಬೇಸರವಾಗಿ, ನಾನು ಸಾಯಲೇಬೇಕು ಅಂತ ನಿರ್ಧಾರ ಮಾಡಿದ್ದೆ. ಹೇಗೆ ಸಾಯಬೇಕು ಅಂತಾನೂ ಯೋಚಿಸಿದ್ದೆ. ಹ್ಯಾಂಗ್‌ ಮಾಡಿಕೊಂಡರೆ ಹೇಗೆ, ಅದು ನರಳಾಡಬೇಕು, ಫೈಯರ್‌ ಮಾಡಿಕೊಂಡರೆ, ಅಕಸ್ಮಾತ್‌ ಬದುಕಿಬಿಟ್ಟರೆ ಅಲ್ಲೂ ನರಳಬೇಕು, ಸೈನೆಡ್‌ ತಗೊಂಡರೆ, ಅದರ ಟೇಸ್ಟ್‌ ಗೊತ್ತಿಲ್ಲ. ಕ್ಷಣದಲ್ಲೇ ಸಾಯಬಹುದು ಅಂತೆಲ್ಲಾ ಯೋಚಿಸಿ, ಪುನಃ ಬದುಕಿನ ಹೋರಾಟಕ್ಕೆ ನಿಂತಿದ್ದೇನೆ. ಸದ್ಯ ಲೈಫ‌ು ನಡೆಯುತ್ತಿದೆ. ನೂರೆಂಟು ನೋವಿದ್ದರೂ ಯಾರಿಗೂ ಅರ್ಥವಾಗಿರಲಿಲ್ಲ. ಈಗ ಸತ್ಯ ಹೊರಹಾಕಿದ್ದೇನೆ. ಮುಂದೆ ನನ್ನನ್ನು ನೋಡುವ ಮಂದಿಯ ದೃಷ್ಟಿ ಹೇಗಿದ್ದರೂ ನಾನು ತಲೆಕೆಡಿಸಿಕೊಳ್ಳಲ್ಲ.

ಸಾವಿಗೆ ಆಕೆ ಬರದಂತೆ ಅಪ್ಪ, ಅಮ್ಮ ವಿಲ್‌!
ಇನ್ನೂ ಒಂದು ಗೊತ್ತಿರದ ವಿಷಯ ಹೇಳ್ತೀನಿ. ನನ್ನ ಅಮ್ಮ ಅಪ್ಪ ಇಬ್ಬರೂ ವಿಲ್‌ ಬರೆದಿದ್ದಾರೆ. ಏನು ಗೊತ್ತಾ? ನಮ್ಮ ಸಾವಿಗೆ ಈಕೆ ಬರಬಾರದು ಎಂಬ ವಿಲ್‌ ಅದು. ಇದು ಕೂಡ ಹೊರಗೆ ಹೇಳಬಾರದು ಎಂಬ ಮಾತು ಆಕೆಯದು. ನಾನಿರುವಾಗಲೇ ಅಪ್ಪ,ಅಮ್ಮ ಹಾಗೆ ವಿಲ್‌ ಮಾಡಿಸಿದರೆ, ಎಷ್ಟು ನೋವಾಗಲ್ಲ ಹೇಳಿ. ನನಗೆ ಯಾರ ಮೇಲೂ ಕೋಪವಿಲ್ಲ. ಆದರೆ, ಏನೇನೋ ಬರೆಯುವುದಕ್ಕಿಂತ ಸತ್ಯ ಬರೆಯಿರಿ. ಆದರೆ, ಪದೇ ಪದೇ ಕೋರ್ಟ್ಗೆ ಹೋಗ್ತೀನಿ ಅನ್ನುತ್ತಲೇ ಇದ್ದರೆ ಏನು ಮಾಡಬೇಕು ಹೇಳಿ? ಮನೆ ವಿಷಯ ಎಲ್ಲೂ ಗೊತ್ತಾಗಬಾರದು, ಇನ್ನೊಂದು ಮದ್ವೆಯಾದ ವಿಷಯ ಗೊತ್ತಾಗಬಾರದು, ಫೋಟೋ ಕೂಡ ಹೊರ ಬರಬಾರದು ಅಂದರೆ, ಅಷ್ಟೊಂದು ಕದ್ದುಮುಚ್ಚಿ ಬದುಕಬೇಕಾ ನಾನು...?

ಅಮ್ಮನಿಂದ ಸತ್ಯ ತಿಳಿಯಿರಿ
ನನ್ನ ಬಗ್ಗೆ ಕೆಲ ಆರೋಪ ಬಂದಾಗ, ಕೆಲವರು ಏನೇನೋ ಬರೆದರು. ಆಗ, ಮನಸ್ಸಿಗೆ ನೋವಾಗಿದ್ದು ನಿಜ. ಸುಳ್ಳಿನ ಮಾತುಗಳನ್ನು ಅಲಂಕಾರ ಮಾಡಿ, ವೈಭವೀಕರಿಸಿದ್ದು ಎಷ್ಟು ಸರಿ? ಯಾರೂ ಸತ್ಯ ಹುಡುಕಲಿಲ್ಲ. ಕಳೆದ 10 ವರ್ಷಗಳಿಂದಲೂ ಬಣ್ಣ ಬಳಕ್ಕೊಳ್ತಾನೇ ಇದೀನಿ. ಆದರೆ, ಆಚೆ ಬಂದಾಗ ಮಸಿ ಬಳಿತಾನೇ ಇದ್ದಾರೆ. ಯಾರಿಗೂ ಸತ್ಯ ಕೇಳುವ ತಾಳ್ಮೆ ಇಲ್ಲ. ಆ ಆರೋಪದ ಹಿಂದಿನ ಸತ್ಯ ಯಾರಿಗೂ ಗೊತ್ತಿಲ್ಲ. ನನ್ನ ತಾಯಿ ಜತೆ ಒಮ್ಮೆ ಮಾತಾಡಿ ನೋಡಿ, ಸತ್ಯಾಂಶ ಗೊತ್ತಾಗುತ್ತೆ. ಯಾರಿಗೂ ನಮ್ಮನೆ ಸತ್ಯ ಗೊತ್ತಿಲ್ಲ. ವಿನಾಕಾರಣ, ಟಾರ್ಗೆಟ್‌ ಆದೆ. ಯಾಕೆ ಅಂತ ಈಗಲೂ ಗೊತ್ತಿಲ್ಲ. ಮಾಧ್ಯಮ ಮೂಲಕ ನನ್ನ ಮನೆ ಮನೆಗೂ ಮಾರಿಬಿಟ್ಟರು. ಮಾಧ್ಯಮ ನನ್ನ ಕುಟುಂಬದಲ್ಲಾದ ವಿವಾದ ಬಗ್ಗೆ ಸುದ್ದಿ ಮಾಡುವಾಗ, ಆಕೆಯೊಬ್ಬಳು ಮಾತ್ರ ಬೇಕಿತ್ತು. ನನ್ನ ತಾಯಿ ಬೇಕಿರಲಿಲ್ಲ. ಟಿಆರ್‌ಪಿಗೆ ಏನು ಬೇಕೋ ಅದೆಲ್ಲವನ್ನೂ ಮಾಡಿತು. ಸತ್ಯ ಮುಚ್ಚಿಟ್ಟು, ತಮ್ಮ ತಮ್ಮ ನಡುವಿನ ವಾರ್‌ಗಳ ಮಧ್ಯೆ ತಾಯಿನಾ ಬಿಟ್ಟು, ಅವರೊಬ್ಬರನ್ನೇ ಕೂರಿಸಿಕೊಂಡು ಸುದ್ದಿ ಮಾಡ್ತು. ಈಗ ಪರ್ಮಿಷನ್‌ ಕೊಡ್ತೀನಿ. ನನ್ನ ತಾಯಿ ಬಳಿ ಹೋಗಿ ಕೇಳಿ, ಸತ್ಯ ಏನೂ ಅಂತ ತಿಳ್ಕೊಳ್ಳಿ. ನನ್ನ ತಪ್ಪಿದ್ದರೆ, ನೀವು ಹೆಂಗೆ ಬೇಕಾದರೂ ಹೊಡೀರಿ. ಅದು ಬಿಟ್ಟು, ಅವರು ಹೇಳಿದ್ದನ್ನೆಲ್ಲಾ ಬರೆದರೆ ಹೇಗೆ? ಸತ್ಯವನ್ನೂ ಕೇಳಬೇಕಲ್ವಾ?

ಆ ವಯಸ್ಸಲ್ಲೊಂದು ತಪ್ಪಾಗಿತ್ತು!
ಆಗ 19, 20 ವರ್ಷ. ಆ ವಯಸ್ಸಲ್ಲೊಂದು ಘಟನೆ ನಡೆಯಿತು. ಅದನ್ನು ಮರೆತಿದ್ದೂ ಆಯ್ತು. ಆಮೇಲೆ ಬಡ ಹುಡುಗಿಯನ್ನ ಮದ್ವೆಯಾದೆ. ಆ ಬಳಿಕ ನನ್ನ ಅಮ್ಮ, ಅಪ್ಪ, ಆಕ್ಕ, ತಂಗಿಯರೆಲ್ಲರನ್ನೂ ಆಕೆ ದೂರ ಮಾಡಿದಳು. ವಿನಾಕಾರಣ ಸಮಸ್ಯೆ ಶುರುಮಾಡುತ್ತಾ ಹೋದಳು. ಆಗಿನ್ನೂ ನಾನು ಹೀರೋ ಆಗಿರಲಿಲ್ಲ. ಸಮಸ್ಯೆ ಜಾಸ್ತಿ ಮಾಡಿದಾಗ, ನನಗೆ ತಡೆಯೋಕೆ ಆಗಲಿಲ್ಲ. ಆಗಲೇ ನಾನು ಡೈವೋರ್ಸ್‌ ಕೊಡ್ತೀನಿ ಅಂತ ಹೊರಟಾಗ, ಅಮ್ಮ-ಅಪ್ಪ, ಬೇಡ ಮರ್ಯಾದೆ ಪ್ರಶ್ನೆ, ಅಂತ ಗೋಗರೆದ್ರು. ನಮ್ಮನೆಯ ಬಡತನ ಕಿತ್ತೋಗಿ ಹಣ ಬರೋಕೆ ಶುರುವಾಯ್ತು. ಆಗ ಎಲ್ಲಿ ಎಲ್ಲವನ್ನೂ ಅಮ್ಮ, ಅಪ್ಪ, ಅಕ್ಕ, ತಂಗಿಯರಿಗೇ ಕೊಡ್ತಾನೋ ಅಂತ ಆಕೆಯ ಅನುಮಾನ ಜಾಸ್ತಿಯಾಯ್ತು. ನಾನೊಬ್ಬ ಹೀರೋ. ಮನೆಯೊಳಗೆ ಏನೇ ಆದರೂ ಆಚೆ ಹೇಳಲ್ಲ ಅನ್ನುವ ನಂಬಿಕೆ, ಅಲ್ಲಿಂದ ಆಕೆ ಆರ್ಭಟ ಜೋರಾಗುತ್ತಲೇ ಹೋಯ್ತು. ನಾನು ಮೊದಲೇ ಡೈವೋರ್ಸ್‌ ಮಾಡಿದ್ದರೆ, ಈಗ ಇಂತಹ ಸಮಸ್ಯೆ ಎದುರಾಗುತ್ತಿರಲಿಲ್ಲ.

ಅದೇ ವೇಳೆ ನಾನೊಬ್ಬರ ಸಹವಾಸ ಮಾಡಿದೆ, ಆಗ ಎಲ್ಲೂ ಆರೋಪ ಮಾಡಲಿಲ್ಲ ಯಾಕೆ? ಅಷ್ಟಕ್ಕೂ ನಾನು ಬೇರೆಯೊಬ್ಬರ ಸಹವಾಸ ಮಾಡಿದ್ದು ಯಾಕೆ, ನನಗೆ ಮನೆಯಲ್ಲಿ ಉತ್ಸಾಹ ಇರಲಿಲ್ಲ. ಆಕೆಗೆ ನನ್ನ ಬಗ್ಗೆ ಕಾಳಜಿಯೂ ಇರಲಿಲ್ಲ. ಯಾವಾಗ ನನ್ನೊಂದಿಗೆ ಬೇರೆಯವರು ಎಂಟ್ರಿಕೊಡುತ್ತಾರೋ, ಆಗ ಆಕೆ ವೀಕ್‌ ಆಗುತ್ತಾ ಹೋದಳು, ಯಾವಾಗ ಅವರು ಹೊರ ಹೋಗ್ತಾರೋ, ಪುನಃ ಆಕೆ ಆರ್ಭಟ ಜೋರಾಯ್ತು. ನನ್ನ ತಾಯಿ ಅನಾರೋಗ್ಯದಿಂದ ನರಳಾಡಿದರೂ ಆಕೆ ಸೈಲೆಂಟ್‌ ಆಗಿದ್ದ ಮೇಲೆ ನಾನು ಸುಮ್ಮನಿರಬೇಕಾ? ಆಗಲೇ ಡೈವೋರ್ಸ್ಗೆ ಅಪ್ಲೆ ಮಾಡಬೇಕು ಅಂತ ಡಿಸೈಡ್‌ ಮಾಡಿದೆ. ನನಗೆ ಬೇಕಾದವರೇ ಒಬ್ಬರು, ಇಲ್ಲದ್ದೆಲ್ಲ ಹೇಳಿಕೊಟ್ಟು, ಸುದ್ದಿ ಮಾಡಿಸಿದರು. ಪಬ್ಲಿಕ್‌ನಲ್ಲಿ ನನಗೆ ಗಂಡ ಬೇಕು ಅಂತ ಹೇಳಬೇಕು ಅಂತ ಹೇಳಿಸಿದರು. ಯಾಕೆಂದರೆ, ಜನ ಅಯ್ಯೋ ಪಾಪ, ಅವಳಿಗೆ ಅವನು ಬೇಕು, ಇವನಿಗೆ ಅವಳು ಬೇಡ ಎಂಬ ಫೀಲ್‌ ಆಗುತ್ತೆ ಅನ್ನೋ ಕಾರಣಕ್ಕೆ, ನಾನು ಒಂದು ಕೆಲ್ಸ ಬಿಟ್ಟು ಇನ್ನೊಂದು ಕೆಲ್ಸ ನೋಡ್ಕೋಳದು ತಪ್ಪಾ? ನಾನು ತಾಯಿ ತಂದೆ ನೋಡ್ಕೋಬೇಕು. ಇಷ್ಟು ದೊಡ್ಡ ಸ್ಟೇಟಸ್‌ನಲ್ಲಿದ್ದೇನೆ. ನಂಗೆ ಹೆತ್ತವರು ಮುಖ್ಯ.

ಮನೆ ವಿಷಯ ಆಚೆ ಹೋಗಬಾರದು
ನನಗೆ ಯಾವ ಫೀಲು ಕಾಡುತ್ತಿಲ್ಲ. ಅಂತಹ ತಪ್ಪೂ ಮಾಡಿಲ್ಲ. ಹೆಣ್ಣಿಗೆ ಕಾನೂನನ್ನು ಇನ್ನೊಂದು ರೀತಿ ಬಳಸಿಕೊಳ್ಳುವ ತಾಕತ್ತು ಇದೆ. ಎಲ್ಲೋ ಒಂದು ಕಡೆ ಆಕೆಗೆ ಅಭದ್ರತೆ ಕಾಡುತ್ತಿದೆ. ಮೊನ್ನೆ ಫೋಟೋಗಳು ಹರಿದಾಡಿ ಸುದ್ದಿಯಾಯ್ತು. ಹೌದು, ನಾನು ಅದನ್ನು ಸುಳ್ಳು ಅಂತ ಹೇಳಲ್ಲ. ಆಕೆಗೆ ಆ ಫೋಟೋ ಹೊರಬರುವುದೂ ಇಷ್ಟ ಇರಲಿಲ್ಲ. ಆಕೆ ಮನಬಂದಂಗೆ ಚೆಲ್ಲಾಡ್ಲಿ. ನನಗೆ ಸಾವು ಬಂದಾಗಲೇ ಸಾಯೋಕ್ಕಾಗೋದು. ಬದುಕೋಕೆ ಹೀರೋನೇ ಆಗಿಬೇಕಂತೇನೂ ಇಲ್ಲ. ಟಿವಿ ಮುಂದೆ ಮಾತಾಡಿದರೆ ಹೀರೋ ಪಟ್ಟ ಹೋಗಬಹುದು. ಆದರೆ, ಎರಡು, ಕೈ ಕಾಲುಗಳಿದ್ದರೆ ಸಾಕು ಬದುಕಿ ತೋರಿಸಬಹುದು. ನಾನು ಆಕೆಗೆ ಎಲ್ಲವನ್ನೂ ಮಾಡಿದ್ದೇನೆ. ಯಾರಾದ್ರೂ ಕೇಳಿದ್ರೂ ಆಪ್ಪನಿಗೆ ಹುಟ್ಟಿದ ಮಗ ಅವ್ನು ಅನ್ನಬೇಕು. ಒಂದು ವಿಷಯ ಗೊತ್ತಿರಲಿ. ಮನೆಯಲ್ಲಿ ನಡೆದ ಕೆಲ ವಿಷಯ ಯಾರಿಗೂ ಹೇಳಕೂಡದು. ಹಾಗೇನಾದರೂ ಮಾಡಿದರೆ, ಮೀಡಿಯಾ ಮುಂದೆ ಬರ್ತೀನಿ ಎಂಬ ಮತ್ತದೇ ಬ್ಲಾಕ್‌ಮೇಲ್‌ ತಂತ್ರ.

ಆಕೆ ಉದ್ದೇಶ ಡ್ಯಾಮೇಜ್‌ ಮಾಡೋದು
ನಾನು ಆಕೆಗೆ ಡೈವೋರ್ಸ್‌ ಕೊಡುವ ಮೊದಲೇ ಎಲ್ಲವನ್ನೂ ಕೊಟ್ಟಿದ್ದೆ. ಆದರೂ ವಿರುದ್ಧ ಹೇಳಿಕೆ ಕೊಟ್ಟರು. ಅಷ್ಟೇ ಅಲ್ಲ, ಇಡೀ ಫ್ಯಾಮಿಲಿ ಬಂದು ನನ್ನನ್ನು ಡ್ಯಾಮೇಜ್‌ ಮಾಡಿತು. ಕೋರ್ಟ್‌ಗೆ ಹೋದೆ. ಪುನಃ ಮಕ್ಕಳ ಭವಿಷ್ಯ ಅರಿತು ಒಂದಾದೆ. ಆದರೂ ಯಾವ ಬದಲಾವಣೆ ಕಾಣಲಿಲ್ಲ. ಅಲ್ಲಿ ನನಗೆ ಸೂಕ್ತ ಜಾಗ ಇಲ್ಲ ಅಂತ ಗೊತ್ತಾದ ಮೇಲೆ, ಒಂದು ನೀಟ್‌ ಜಾಗಕ್ಕೆ ಬಂದೆ. ಹಾಗಂತ, ಸುಮ್ಮನೆ ಬರಲಿಲ್ಲ. ಎಲ್ಲವನ್ನೂ ಅವರಿಗೆ ಸೇಫ್ ಮಾಡಿ ಬಂದೆ, ಆದರೆ ಬರೀ ಅವರು ಮಾಡಿದ ಆರೋಪ ಮಾತ್ರ ಹೈಲೈಟ್‌ ಆಯ್ತು. ಆಕೆಗೊಂದು ಧೈರ್ಯ. ನಾನು ಹೆಂಗೆ ಬೇಕಾದರೂ ಹೀನಮಾನವಾಗಿ ಅವನನ್ನು ಡ್ಯಾಮೇಜ್‌ ಮಾಡಬಹುದು ಅಂತ. ಆ ದಿನ ಬಂದಾಗ, ನಾನು ಸರಿಯಾದ ಉತ್ತರ ಕೊಡ್ತೀನಿ. ನಾನು ಓಪನ್‌ ಬುಕ್‌ ಇದ್ದಂಗೆ. ಯಾರಾದ್ರೂ ತಮ್ಮ ಮನೆಯ ಸಂಸಾರದ ಗುಟ್ಟು ಹೇಳ್ತಾರಾ? ಯಾರೂ ಹೇಳ್ಳೋದಿಲ್ಲ. ನನ್ನ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿ, ಡ್ಯಾಮೇಜ್‌ ಮಾಡಬೇಕು, ಬೀದಿಗಿಳಿಸಬೇಕು ಎಂಬುದೊಂದೇ ಆಕೆಯ ಉದ್ದೇಶ. ಇನ್ನೊಂದು ಮಾತು ನೆನಪಿರಲಿ, ಒಬ್ಬರ ವೈಫ್ ಮಾಡಿದಂತೆ, ನಿಂಗೂ ಮಾಡ್ತೀನಿ ಅಂತ ಹೇಳಿ, ಮಾಧ್ಯಮವನ್ನು ಹೇಗೆಲ್ಲಾ ದುರುಪಯೋಗಪಡಿಸಿಕೊಂಡರು ಅನ್ನೋದು ಯಾರಿಗೂ ಗೊತ್ತಿಲ್ಲ.

ಸಂದರ್ಶನ: ವಿಜಯ್‌ ಭರಮಸಾಗರ


Trending videos

Back to Top