CONNECT WITH US  

ಉತ್ತರ ಕರ್ನಾಟಕದಲ್ಲಿ ಬಂದ್; ಮಹದಾಯಿ ಹೋರಾಟ ಮತ್ತಷ್ಟು ಉದ್ವಿಗ್ನ

ಹುಬ್ಬಳ್ಳಿ/ಧಾರವಾಡ/ಬೆಳಗಾವಿ: ಮಹದಾಯಿ ನದಿಯಿಂದ ಮಲಪ್ರಭಾಕ್ಕೆ(ಕಳಸಾ ಬಂಡೂರಿ ಯೋಜನೆ) ನೀರು ಹರಿಸುವಂತೆ ರಾಜ್ಯ ಕೋರಿದ್ದ ಮನವಿಯನ್ನು ನ್ಯಾಯಾಧಿಕರಣ ತಿರಸ್ಕರಿಸಿದ್ದನ್ನು ವಿರೋಧಿಸಿ ಹುಬ್ಬಳ್ಳ, ಧಾರವಾಡ, ಬೆಳಗಾವಿ, ಗದಗ ಸೇರಿದಂತೆ ಉತ್ತರ ಕರ್ನಾಟಕದಾದ್ಯಂತ ರೈತರು ಹಾಗೂ ಕನ್ನಡಪರ ಸಂಘಟನೆಗಳ ಪ್ರತಿಭಟನೆ ಗುರುವಾರ ತೀವ್ರ ಸ್ವರೂಪ ಪಡೆದುಕೊಂಡಿದೆ.

ಬಂದ್...ಬಂದ್...ಬಂದ್
ಹುಬ್ಬಳ್ಳಿಯಲ್ಲಿ ಮಹದಾಯಿ ಹೋರಾಟ ತೀವ್ರಗೊಂಡಿದ್ದು, ಗೋವಾ ಸರ್ಕಾರದ ವಿರುದ್ಧ ರೈತ ಸಂಘಟನೆಗಳು, ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಗಬ್ಬೂರ್ ಬೈಪಾಸ್ ನಲ್ಲಿ ಟಯರ್ ಗೆ ಬೆಂಕಿಹಚ್ಚಿ ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿಯಲ್ಲಿ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಧಾರವಾಡದಲ್ಲಿಯೂ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ ಬಂದ್ ಗೆ ಬೆಂಬಲ ನೀಡುವ ಮೂಲಕ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಮತ್ತು ಖಾಸಗಿ  ಬಸ್ ಗಳು ಬೀದಿಗಿಳಿಯಲಿಲ್ಲ. ಸಿಎಂ ಸಿದ್ದರಾಮಯ್ಯ, ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಪ್ರತಿಭಟನಾಕಾರರು ಕಿಡಿಕಾರಿದರು. ಬಂದ್ ನಿಂದಾಗಿ ಧಾರವಾಡ ಜಿಲ್ಲೆಯಲ್ಲಿ ಜನಜೀವನ ಸ್ತಬ್ಧವಾಗಿದೆ. ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ನವಲಗುಂದದಲ್ಲಿ ಶಾಂತಿಯುತ ಬಂದ್ ನಡೆಸಲಾಗುತ್ತಿದೆ. ಧಾರವಾಡದ ಕೆಸಿಡಿ ವೃತ್ತದ ಸಮೀಪ ಇರುವ ಆಕಾಶವಾಣಿ ಕಚೇರಿಗೆ ನುಗ್ಗಿ ಕನ್ನಡ ಪರ ಸಂಘಟನೆಗಳು ದಾಂಧಲೆ ನಡೆಸಿದ ಘಟನೆ ವರದಿಯಾಗಿದೆ.

ಬೆಳಗಾವಿಯಲ್ಲಿ ಧರಣಿ ನಿರತರು ಕತ್ತೆಗಳ ಮೆರವಣಿಗೆ ಮಾಡಿ ರಾಜ್ಯದ ಸಂಸದರ ಅಣಕು ಪ್ರದರ್ಶನ ನಡೆಸಿದರು. ರಾಜ್ಯದ ಸಂಸದರು ಕೇಂದ್ರ ಮೇಲೆ ಒತ್ತಡ ಹೇರಲಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 

ಬೆಂಗಳೂರಲ್ಲಿ ಕನ್ನಡ ಪರ ಸಂಘಟನೆ
ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಮಹದಾಯಿ ನ್ಯಾಯಾಧಿಕರಣದ ತೀರ್ಪಿ ನ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸಾಹಿತಿ ಚಂಪಾ, ರೈತ ಸಂಘದ ಕಾರ್ಯಕರ್ತರು ಸಾಥ್ ನೀಡಿದರು.

ಕೋಲಾರ, ಯಾದಗಿರಿ, ರಾಮನಗರದಲ್ಲೂ ಪ್ರತಿಭಟನೆ
ಮಹದಾಯಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕೋಲಾರ, ಯಾದಗಿರಿ, ಮಂಡ್ಯ, ರಾಮನಗರದಲ್ಲೂ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

Trending videos

Back to Top