CONNECT WITH US  

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರ ಅವಧಿಗೇ ಕತ್ತರಿ

ಬೆಂಗಳೂರು: ಆಡಳಿತ ಭಾಷೆಯಾಗಿ ಕನ್ನಡವನ್ನು ಎಲ್ಲ ಹಂತಗಳಲ್ಲಿ ಅನುಷ್ಠಾನಗೊಳಿಸುವ ಮಹತ್ತರ ಜವಾಬ್ದಾರಿ ಹೊಂದಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಅಧಿಕಾರಾವಧಿಯನ್ನು ಸರ್ಕಾರ ಮೊಟಕುಗೊಳಿಸಿದೆ. 

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 1994ರ ಪ್ರಕಾರ ಪ್ರಾಧಿಕಾರದ ಅಧ್ಯಕ್ಷರ ಅಧಿಕಾರಾವಧಿ ಒಂದು ಅವಧಿ  (3 ವರ್ಷ) ಎಂದು ಹೇಳಲಾಗಿದ್ದರೂ, ಈ ಬಾರಿ ಮಾತ್ರ ರಾಜ್ಯ ಸರ್ಕಾರ ಅದನ್ನು 21 ತಿಂಗಳಿಗೆ ಮೊಟಕುಗೊಳಿಸಿದೆ. 

ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಡಾ. ಎಲ್‌. ಹನುಮಂತಯ್ಯ ಅವರ ಅಧಿಕಾರಾವಧಿಯನ್ನು ಆ.24ರಂದು 21 ತಿಂಗಳಿಗೆ ಮೊಟಕುಗೊಳಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರನ್ನು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿದೆ. ಈ ರೀತಿ ಪ್ರಾಧಿಕಾರದ ಅಧ್ಯಕ್ಷರ ಅಧಿಕಾರಾವಧಿಯನ್ನು ಇದೇ ಮೊದಲ ಬಾರಿ ಮೊಟಕುಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಭಾಷಾವಾರು ಪ್ರಾಂತ್ಯಗಳ ರಚನೆ ಆಗಿ ಕನ್ನಡವನ್ನು ರಾಜ್ಯದ ಅಧಿಕೃತ ಆಡಳಿತ ಭಾಷೆಯನ್ನಾಗಿ ಘೋಷಿಸಿದ ಬಳಿಕ ಅದರ ಅನುಷ್ಠಾನ, ಈ ನಿಟ್ಟಿನಲ್ಲಿ ಅಗತ್ಯ ಸಲಹೆ, ಸಹಕಾರ ಮತ್ತು ಮಾರ್ಗದರ್ಶನ ನೀಡಲು ಪ್ರಾಧಿಕಾರದ ವ್ಯವಸ್ಥೆ ಜಾರಿಗೆ ಬಂತು. 1983ರಿಂದ 1992ರವರೆಗೆ ಪ್ರಾಧಿಕಾರವು ಸರ್ಕಾರದ ಕಾರ್ಯಕಾರಿ ಆದೇಶದ ಮೂಲಕ ರಚನೆ ಆಗುತ್ತಿತ್ತು. ನಂತರ 1994ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ ರಚಿಸಿ ಕಾಯ್ದೆಯ ಮೂಲಕ ಪ್ರಾಧಿಕಾರ ರಚಿಸಿ, ಅದಕ್ಕೆ ಶಾಸನಾತ್ಮಕ ಸ್ಥಾನಮಾನ ನೀಡಲಾಯಿತು. 

ಅಲ್ಲಿಂದ ಇಲ್ಲಿವರೆಗೆ ಬಂದ ಬಹುತೇಕ ಎಲ್ಲ ಅಧ್ಯಕ್ಷರು ಒಂದು ಅವಧಿಯನ್ನು (3 ವರ್ಷ) ಪೂರ್ಣಗೊಳಿಸಿದ್ದಾರೆ. ಈ ಬಾರಿ ಮಾತ್ರ 21 ತಿಂಗಳಿಗೆ ಮೊಟಕುಗೊಳಿಸಲಾಗಿದೆ. ಕಾಯ್ದೆಯಡಿ ಪ್ರಾಧಿಕಾರದ ರಚನೆ ಆಗಿದ್ದರೂ, ಈ ಬಾರಿ ಅಧ್ಯಕ್ಷರನ್ನು ನೇಮಕ ಮಾಡುವಾಗ ನಿಗಮ-ಮಂಡಳಿಗಳ ಅಧ್ಯಕ್ಷರ ಪಟ್ಟಿಯಲ್ಲಿ ಸೇರಿಸಿ ಕಾರ್ಯಕಾರಿ ಆದೇಶ ಹೊರಡಿಸಿದ್ದು, ಅಧಿಕಾರಾವಧಿ ಮೊಟಕುಗೊಳ್ಳಲು ಕಾರಣ. ಅಧ್ಯಕ್ಷರ ಅಧಿಕಾರಾವಧಿಯನ್ನು ಮೊಟಕುಗೊಳಿಸಿರುವುದು ಪ್ರಾಧಿಕಾರದ ಇತಿಹಾಸದಲ್ಲಿ ಇದೇ ಮೊದಲು ಎಂದು ಹೆಸರು ಹೇಳಲಿಚ್ಛಿಸದ ಪ್ರಾಧಿಕಾರದ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.


Trending videos

Back to Top