CONNECT WITH US  

ಬೆಳೆ ಬಿಡಿ, ಕುಡಿಯೋಕೂ ಕಾವೇರಿ ಸಾಕಾಗಲ್ಲ!

ಬೆಂಗಳೂರು: ರಾಜ್ಯದ ಜಲಾಶಯಗಳಲ್ಲಿದ್ದ ನೀರನ್ನು ತಮಿಳುನಾಡು ಬಸಿದುಕೊಳ್ಳುತ್ತಿರುವುದರ ಪರಿಣಾಮವಾಗಿ ನಮ್ಮ ರೈತರು ಈಗಾಗಲೇ ಬೆಳೆದು ನಿಂತ ಬೆಳೆಯನ್ನು (ಈ ಬೆಳೆಗೆ ಸುಮಾರು 10 ಟಿಎಂಸಿ ನೀರು ಬೇಕಿತ್ತು) ಕಳೆದುಕೊಂಡಿದ್ದಾರೆ. ಈಗ ಕುಡಿಯುವ ನೀರನ್ನೂ ತಮಿಳುನಾಡಿಗೆ ಕೊಡಬೇಕಾದ ಅನಿವಾರ್ಯತೆಗೆ ಕರ್ನಾಟಕ ಸಿಲುಕಿದೆ. ಇದರಿಂದ ಬೇಸಿಗೆವರೆಗೆ ಕುಡಿಯಲು ಬೇಕಾಗುವ ನೀರಿನ ಪ್ರಮಾಣದಲ್ಲೂ ಖೋತಾ ಆಗಲಿದೆ. 

- ಇದು ಸೋಮವಾರ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಹೊರಬಿದ್ದ ತೀರ್ಮಾನದ ಎಫೆಕ್ಟ್. ಕಾವೇರಿ ಕೊಳ್ಳದ ಎಲ್ಲಾ ಜಲಾಶಯಗಳಲ್ಲಿ ಹಾಲಿ ಇರುವ ನೀರಿನ ಸಂಗ್ರಹ ನೀರು ಬರೀ 26 ಟಿಎಂಸಿ. ಇದರಲ್ಲೇ ಇನ್ನೂ ಎರಡೂವರೆ ಟಿಎಂಸಿ ನೀರು ತಮಿಳುನಾಡಿಗೆ ಹರಿಸಲು ಮೇಲುಸ್ತುವಾರಿ ಸಮಿತಿ ಸೂಚಿಸಿದೆ. ಅದನ್ನು ಪಾಲಿಸಿದರೆ ಉಳಿಯುವುದು 23.5 ಟಿಎಂಸಿ! ಆದರೆ, ಬೆಂಗಳೂರು, ಮೈಸೂರು ಸೇರಿದಂತೆ ಕಾವೇರಿ ಕಣಿವೆಯ ಜನರಿಗೆ ಬೇಸಿಗೆವರೆಗೆ ಕುಡಿಯಲಿಕ್ಕಾಗಿಯೇ ಅಂದಾಜು 25 ಟಿಎಂಸಿ ನೀರು ಬೇಕು. ಅಂದರೆ, ಕುಡಿಯುವ ನೀರಿಗೂ ತತ್ವಾರ ಗ್ಯಾರಂಟಿ.

ಈಗಾಗಲೇ ನೀರಿನ ತೀವ್ರ ಕೊರತೆ ಎದುರಿಸುತ್ತಿರುವುದರಿಂದ ನಿಂತ ಬೆಳೆಗಳಿಗೆ ನೀರು ಸಿಗುವುದಂತೂ ಕನಸಿನ ಮಾತು. ಹಿಂಗಾರು ಕೈಕೊಟ್ಟರೆ ಮುಂದೆಯೂ ಬೆಳೆಯುವಂತಿಲ್ಲ. ಮನುಷ್ಯರಿಗೆ ಮಾತ್ರವಲ್ಲ ಈ ಆದೇಶ ಕರುನಾಡಿನ ವನ್ಯಜೀವಿಗಳಿಗೂ ಮಾರಕ. ಏಕೆಂದರೆ, ಬೇಸಿಗೆಯಲ್ಲಿ ನಮ್ಮ ನಾಡಿನ ವನ್ಯಜೀವಿ ಧಾಮಗಳಾದ ಬಂಡೀಪುರ ಹಾಗೂ ಇತರೆ ಧಾಮಗಳ ಹಳ್ಳ ಕೊಳ್ಳಗಳಿಗೆ ಕಾವೇರಿ ನೀರು ಪೂರೈಸಲಾಗುತ್ತಿದೆ. ಈಗ ಕೊರತೆ ಉಂಟಾದರೆ, ವನ್ಯಜೀವಿಗಳಿಗೂ ನೀರಿಲ್ಲ. ಆ ಮೂಲಕ ಪ್ರವಾಸೋದ್ಯಮಕ್ಕೂ ಪೆಟ್ಟುಬೀಳಲಿದೆ. ಇನ್ನು ಬಾಕಿ ಇರುವುದು ಬೆಂಗಳೂರು, ಮೈಸೂರು ಒಳಗೊಂಡಂತೆ 38 ನಗರ-ಪಟ್ಟಣಗಳಲ್ಲಿರುವ ಜನ-ಜಾನುವಾರುಗಳು ಮಾತ್ರ. ಸದ್ಯದ ಸ್ಥಿತಿ ನೋಡಿದರೆ, ಅದಕ್ಕೂ ಹಾಹಾಕಾರ ಉಂಟಾಗುವುದು ಬಹುತೇಕ ಖಚಿತ. 
ನೀರು ಬಿಟ್ಟರೆ ಉದ್ದೇಶಿತ 38 ನಗರ-ಪಟ್ಟಣಗಳಿಗೆ ಕಾವೇರಿಗೆ ಪರ್ಯಾಯ ಇಲ್ಲ. ಆದರೆ, ಕಾವೇರಿ ನೀರು ಹರಿಸದೆ ಅನ್ಯಮಾರ್ಗವೂ ಸರ್ಕಾರದ ಮುಂದೆ ಕಾಣುತ್ತಿಲ್ಲ. ಪರಿಣಾಮ ಮುಂದಿನ ದಿನಗಳು ಭೀಕರವಾಗಲಿದ್ದು, ಸಮಸ್ಯೆ ಉಲ್ಬಣಗೊಳ್ಳುವ ಸ್ಪಷ್ಟ ಸೂಚನೆಗಳಿವೆ. 

ಲೆಕ್ಕಾಚಾರ ಹೀಗೆ:
ಮೂಲಗಳ ಪ್ರಕಾರ ಒಂದು ತಿಂಗಳಿಗೆ ಕಾವೇರಿ ಕಣಿವೆ ಪ್ರದೇಶಗಳಲ್ಲಿರುವ ರಾಜ್ಯದ ನಗರ-ಪಟ್ಟಣಗಳಿಗೆ ಕುಡಿಯಲು 3 ಟಿಎಂಸಿ ನೀರು ಬೇಕಾಗುತ್ತದೆ. ಸೆಪ್ಟೆಂಬರ್‌ನಿಂದ ಮೇವರೆಗೆ ಲೆಕ್ಕ ಹಾಕಿದರೆ, 24 ಟಿಎಂಸಿ ನೀರು ಬೇಕಾಗುತ್ತದೆ. ಈ ಮಧ್ಯೆ ವರ್ಷದಲ್ಲಿ ಆವಿಯಾಗುವ ನೀರಿನ ಪ್ರಮಾಣ ಸರಾಸರಿ 3 ಟಿಎಂಸಿ. ಅಂದರೆ ಅಲ್ಲಿಗೆ 27 ಟಿಎಂಸಿ ನೀರಿನ ಅವಶ್ಯಕತೆ ಇದೆ. ಈ ಪೈಕಿ ಪ್ರಸ್ತುತ ಕೆಆರ್‌ಎಸ್‌ನಲ್ಲಿ 8.31 ಟಿಎಂಸಿ ಸೇರಿ ನಾಲ್ಕೂ ಜಲಾಶಯಗಳಲ್ಲಿ ಸಂಗ್ರಹ ಇರುವ ನೀರಿನ ಪ್ರಮಾಣ 26 ಟಿಎಂಸಿ. ಅದರಲ್ಲೂ ಮುಂದಿನ 10 ದಿನಗಳಲ್ಲಿ 2.59 ಟಿಎಂಸಿ ನೀರು ತಮಿಳುನಾಡು ಪಾಲಾಗಲಿದೆ. ಅಂದರೆ 23.5 ಟಿಎಂಸಿ ನೀರು ಮಾತ್ರ ನಮಗೆ ಉಳಿಯಲಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ಹಾಗೂ ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಮೂಲಗಳು ತಿಳಿಸಿವೆ.

ವಿಚಿತ್ರವೆಂದರೆ ನಮ್ಮಲ್ಲಿ ನಾಲ್ಕೂ ಜಲಾಶಯಗಳು ಸೇರಿ 26 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೆ, ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಸೋಮವಾರಕ್ಕೆ 54 ಟಿಎಂಸಿ ಇದೆ. ಆದಾಗ್ಯೂ ಕರ್ನಾಟಕದಿಂದ ಬರಬೇಕಾದ ನೀರು ಬಂದಿಲ್ಲ ಎಂದು ಆ ರಾಜ್ಯ ಕೋರ್ಟ್‌ ಮೊರೆ ಹೋಗಿದೆ. 

ಶೇ.23ರಷ್ಟು ಮಳೆ ಕೊರತೆ
ಕಾವೇರಿ ಜಲಾನಯನ ಪ್ರದೇಶದಲ್ಲಿ ಜೂನ್‌ 1ರಿಂದ ಸೆಪ್ಟೆಂಬರ್‌ 19ರವರೆಗೆ ವಾಡಿಕೆಗಿಂತ ಶೇ. 15ರಷ್ಟು ಮಳೆ ಕೊರತೆ ಇದೆ. ಅದೇ ರೀತಿ, ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಶೇ. 23ರಷ್ಟು ಮಳೆ ಅಭಾವ ಇದೆ. 

ಕಾವೇರಿಗೆ ಯಾವ ರಾಜ್ಯದಲ್ಲಿ ಎಷ್ಟು ಕೊಡುಗೆ?
ಕರ್ನಾಟಕ- 425 ಟಿಎಂಸಿ
ತಮಿಳುನಾಡು- 252 ಟಿಎಂಸಿ 
ಕೇರಳ- 113 ಟಿಎಂಸಿ 
ಒಟ್ಟು- 790 ಟಿಎಂಸಿ 

* ವರ್ಷಕ್ಕೆ ಕರ್ನಾಟಕದಿಂದ ತಮಿಳುನಾಡಿಗೆ ಹರಿಸಬೇಕಾದ ನೀರು- 192 ಟಿಎಂಸಿ
* ಜೂನ್‌ 1ರಿಂದ ಆಗಸ್ಟ್‌ 31ರವರೆಗೆ ರಾಜ್ಯದಿಂದ ತಮಿಳುನಾಡಿಗೆ ಹರಿದ ನೀರು- 36 ಟಿಎಂಸಿ
* ಬೆಂಗಳೂರಿಗೆ ಕಾವೇರಿಯಿಂದ ಬರುವ ನೀರು ತಿಂಗಳಿಗೆ- 1.50 ಟಿಎಂಸಿ
* ಕಾವೇರಿ ವ್ಯಾಪ್ತಿಯ ಉಳಿದ ನಗರ-ಪಟ್ಟಣಗಳಿಗೆ ತಿಂಗಳಿಗೆ- 1.50 ಟಿಎಂಸಿ 
* ವರ್ಷದಲ್ಲಿ ನಾಲ್ಕೂ ಜಲಾಶಯಗಳಿಂದ ಆವಿಯಾಗಿ ಹೋಗುವ ನೀರು- 3 ಟಿಎಂಸಿ
* ಬಂಡಿಪುರ, ನಾಗರಹೊಳೆ ಮತ್ತಿತರ ಧಾಮಗಳಿಗೆ (ವಾರ್ಷಿಕ)- 3 ಟಿಎಂಸಿ

ಜಲಾಶಯಗಳ ನೀರಿನಮಟ್ಟ
ಜಲಾಶಯ    ನೀರಿನಮಟ್ಟ (ಟಿಎಂಸಿನಲ್ಲಿ)    ಒಳಹರಿವು    ಹೊರಹರಿವು (ಕ್ಯೂಸೆಕ್‌ಗಳಲ್ಲಿ)
ಕೆಆರ್‌ಎಸ್‌    8.31    6,669    252
ಕಬಿನಿ    7.59    2,000    2,500
ಹಾರಂಗಿ    3.95    3008    3,900
ಹೇಮಾವತಿ    6.32    1233    3000    
 

Trending videos

Back to Top