CONNECT WITH US  

ರಾಜ್ಯದ ದಾರಿಗಳು, ಸುಪ್ರೀಂಕೋರ್ಟ್‌ನ ಅಸ್ತ್ರಗಳು

ಬೆಂಗಳೂರು: ಸುಪ್ರೀಂಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಹಲವು ಮಜಲಿನ ಕಾನೂನು ಗೋಜಲಿಗೆ ಸಿಲುಕಿಕೊಂಡಿದ್ದು, ಮುಂದಿನ ಹಾದಿ ಸಂಕಷ್ಟಕರವಾಗಿದೆ.

ನೀರು ಬಿಡುವಂತೆ ಸುಪ್ರೀಂಕೋರ್ಟ್‌ ನೀಡಿದ ಈ ಹಿಂದಿನ ಎರಡು ಆದೇಶಗಳನ್ನು ಉಲ್ಲಂ ಸಿರುವ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಅಂತಿಮ ಎಚ್ಚರಿಕೆ ಸ್ವರೂಪದಲ್ಲಿ ಮೂರನೇ ಬಾರಿಯೂ ನೀರು ಬಿಡುವಂತೆ ಸುಪ್ರೀಂಕೋರ್ಟ್‌ ಹೇಳುವ ಮೂಲಕ ತನ್ನ ಸಂದೇಶವನ್ನು ಸ್ಪಷವಾಗಿ ನೀಡಿದೆ. ಈ ಬಾರಿ ನೀರು ಬಿಡುಗಡೆ ಮಾಡದಿದ್ದರೆ ಕಠಿಣ ಕ್ರಮ ಎದುರಿಸಬೇಕಾದೀತು ಎಂಬ ಎಚ್ಚರಿಕೆಯೂ ಈ ಆದೇಶದಲ್ಲಿ ಅಡಕವಾಗಿದೆ. ಹೀಗಾಗಿ ನೀರು ಬಿಡುವುದೇ ಅಥವಾ ವಿಧಾನಮಂಡಲ ನಿರ್ಣಯಕ್ಕೆ ಬದ್ಧವಾಗಿ ಉಳಿಯಬೇಕೇ ಎಂಬುದಕ್ಕೆ ಮೊದಲು ಸರ್ಕಾರ ಉತ್ತರ ಕಂಡುಕೊಳ್ಳಬೇಕಿದೆ.

ಒಂದು ವೇಳೆ ನೀರು ಬಿಡುವುದು ಎಂದು ನಿರ್ಧರಿಸಿದರೂ ಅದು ಅಷ್ಟು ಸುಲಭವಲ್ಲ. ಮೊದಲಿಗೆ  ಸರ್ವಪಕ್ಷ ಸಭೆ ಕರೆದು ಅಲ್ಲಿ ಎದುರಾಗಿರುವ ಸಂಕಷ್ಟ, ಅನಿವಾರ್ಯತೆಯನ್ನು ಒಪ್ಪಿಸಿ ವಿಧಾನಮಂಡಲ ಅಧಿವೇಶನ ಕರೆದು ಅಲ್ಲಿ ನಿರ್ಣಯ ಮಾರ್ಪಾಡು ಮಾಡುವ ತೀರ್ಮಾನ ಕೈಗೊಳ್ಳಬೇಕಿದೆ.

ಇದಕ್ಕೆ ವಿಧಾನಮಂಡಲ ನಿರ್ಣಯವೂ ಅಡ್ಡಿಯಿದೆ. ಹೀಗಾಗಿ ವಿಧಾನಮಂಡಲ ಅಧಿವೇಶನ ಕರೆದು ಅಲ್ಲಿ ಒಮ್ಮತಾಭಿಪ್ರಾಯ ರೂಪಿಸಬೇಕೆ ಅಥವಾ ನಿರ್ಣಯ ತೆಗೆದುಕೊಂಡ ಸಂದರ್ಭದಲ್ಲಿ ನಮ್ಮ ಜಲಾಶಯಗಳಲ್ಲಿ ಇದ್ದ ನೀರಿನ ಮಟ್ಟಕ್ಕಿಂತ ಈಗ ಹೆಚ್ಚಿನ ನೀರು ನಮ್ಮ ಅಣೆಕಟ್ಟಿಗಳಿಗೆ ಬಂದಿದೆ. ನಿರ್ಣಯದ ದಿನವಿದ್ದ ನೀರಿನ ಸಂಗ್ರಹಕ್ಕಿಂತ ಹೆಚ್ಚಿನ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಿ ನ್ಯಾಯಾಲಯದ ಆದೇಶ ಪಾಲನೆ ಮಾಡಬಹುದು ಎಂದು ಪ್ರತಿಪಕ್ಷಗಳ ಮನವೊಲಿಸಬೇಕಿದೆ.ಪ್ರತಿಪಕ್ಷಗಳು ಒಪ್ಪದಿದ್ದರೆ, ಸರ್ಕಾರ ತಾನೇ ನಿರ್ಣಯ ಕೈಗೊಳ್ಳಬೇಕು, ಇಲ್ಲವೇ ನ್ಯಾಯಾಂಗ ನಿಂದನೆ ಎದುರಿಸಿ ಮುಂದಾಗುವ ಯಾವುದೇ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕು.

ಇನ್ನು ಎರಡನೆಯದಾಗಿ ಕಾವೇರಿ ನಿರ್ವಹಣಾ ಮಂಡಳಿ ರಚನೆಯ ಆತಂಕ. ತಮಿಳುನಾಡಿಗೆ ನೀರು ಬಿಡುಗಡೆ ಮಾಡಿ ನ್ಯಾಯಾಲಯದ ಆದೇಶ ಪಾಲಿಸಿದ್ದೇವೆ ಎಂಬ ಸಬೂಬಿನೊಂದಿಗೆ ನಿರ್ವಹಣಾ ಮಂಡಳಿ ರಚನೆಗೆ ಆಕ್ಷೇಪ ಸಲ್ಲಿಸಬಹುದು. ಈ ಆಕ್ಷೇಪವನ್ನು ದ್ವಿಸದಸ್ಯ ಪೀಠಕ್ಕೆ ಸಲ್ಲಿಸಬಹುದು, ಇಲ್ಲವೇ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಸಲ್ಲಿಸಬಹುದು. ಅದರಲ್ಲಿ ಅಕ್ಟೋಬರ್‌ 18ರಂದು ಮೂವರು ನ್ಯಾಯಾಧೀಶರ ಪೀಠದ ಮುಂದೆ ವಿಚಾರಣೆಗೆ ಬರಲಿರುವ ಮೂಲ ಅರ್ಜಿಯ ಪ್ರಸ್ತಾಪ ಮಾಡಿ ಅಲ್ಲಿವರೆಗೆ ಮುಂದೂಡುವಂತೆ ಕೋರಬಹುದು. ಅದಕ್ಕೂ ಸರ್ವಪಕ್ಷಗಳ ಅಭಿಪ್ರಾಯ ಮುಖ್ಯ.

ಮೂರನೆಯದಾಗಿ ಈಗಿನ ದ್ವಿಸದಸ್ಯ ಪೀಠ ಪೂರ್ವಾಗ್ರಹಪೀಡಿತವಾಗಿದೆ. ತಮಿಳುನಾಡು ಪರ ಪಕ್ಷಪಾತಿ ಎಂದು ಹೇಳಿ ತಮಿಳುನಾಡು ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ಬೇರೊಂದು ಪೀಠಕ್ಕೆ ವರ್ಗಾಯಿಸಲು ಮುಖ್ಯ ನ್ಯಾಯಮೂರ್ತಿಗೆ ಮನವಿ ಸಲ್ಲಿಸಬಹುದು. ಜತೆಗೆ ಕಾವೇರಿ ವಿವಾದಕ್ಕೆ ಸಂಬಂಧಿಸಿದ ಇಡೀ ಪ್ರಕರಣದ ವಿಚಾರಣೆಗೆ ಸಾಂವಿಧಾನಿಕ ಪೀಠ ರಚಿಸುವಂತೆ ಮನವಿ ಮಾಡಬಹುದು.

ಇಷ್ಟೆಲ್ಲ ಮಾಡಿ ನ್ಯಾಯ ಸಿಗದಿದ್ದರೆ ರಾಷ್ಟ್ರಪತಿಯವ ಮೊರೆ ಹೋಗುವುದರ ಜತೆಗೆ ಪ್ರಧಾನಿಯ ಮಧ್ಯಪ್ರವೇಶಕ್ಕೆ ತೀವ್ರ ಒತ್ತಡ ಹಾಕಬಹುದು. ಇದು ನಾಲ್ಕನೇ ಹಾಗೂ ಕೊನೆಯ ಮಾರ್ಗವಾಗಿದೆ. ರಾಷ್ಟ್ರಪತಿಯವರ ಬಳಿ ಕುಡಿಯಲು ಮಾತ್ರ ನೀರು ಉಳಿಸಿಕೊಳ್ಳುವುದು ಎಂಬ ಸದನದ ಸರ್ವಾನುಮತದ ನಿರ್ಣಯ, ಕುಡಿಯುವ ನೀರಿಗೆ ಮೊದಲ ಆದ್ಯತೆ ಎಂಬ ರಾಷ್ಟ್ರೀಯ ಜಲನೀತಿಯ ಅಂಶವನ್ನು ಇರಿಸಿ, ವಾಸ್ತವ ಸ್ಥಿತಿ ಏನಿದೆ ಎಂಬ ಕರ್ನಾಟಕದ ವಾದ ಕೇಳದೇ ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ ಎಂದು ತಿಳಿಸಬಹುದು.

ನೀರು ಬಿಡಿ ಎನ್ನುತ್ತಾರೆ ತಜ್ಞರು:
ಕಾನೂನು ತಜ್ಞರ ಪ್ರಕಾರವೂ ಏನೇ ವಿರೋಧ ಇದ್ದರೂ ನೀರು ಬಿಡುಗಡೆ ಕುರಿತು ಸುಪ್ರೀಂಕೋರ್ಟ್‌ ನೀಡಿರುವ ಆದೇಶ ಪಾಲನೆ ಸೂಕ್ತ. ಇಲ್ಲದಿದ್ದಲ್ಲಿ ರಾಜ್ಯ ಸರ್ಕಾರ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ.

ನ್ಯಾಯಾಂಗ ವ್ಯವಸ್ಥೆಯಲ್ಲಿ ಮುಂದಿನ ಕಾನೂನು ಹೋರಾಟಕ್ಕೆ ಅವಕಾಶಗಳು ಅಥವಾ ಆಯ್ಕೆಗಳಿರಬಹುದು. ಆದರೆ, ಶುಕ್ರವಾರ ನಡೆದ ವಿಚಾರಣೆ ವೇಳೆ ರಾಜ್ಯ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್‌ ಬಳಸಿದ ಕಟು ಪದಗಳು ಮತ್ತು ರಾಜ್ಯದ ಪರ ವಕೀಲರು ನಡೆದುಕೊಂಡ ರೀತಿಯನ್ನು ಗಮನಿಸಿದರೆ, ಸುಪ್ರೀಂಕೋರ್ಟ್‌ ಆದೇಶ ಪಾಲನೆ ಅನಿವಾರ್ಯ.

ನ್ಯಾಯಾಲಯದ ಆದೇಶ ಪಾಲಿಸದಿದ್ದರೆ ಕಾನೂನಿನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳಲು ಕೋರ್ಟ್‌ಗೆ ಅವಕಾಶವಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ನ್ಯಾಯಾಲಯ ರಾಜ್ಯದ ನಡೆಯನ್ನು ಯಾವ ರೀತಿ ಪರಿಗಣಿಸುತ್ತದೆ ಎಂಬುದರ ಮೇಲೆ ಕ್ರಮದ ಕಠಿಣತೆ ಅವಲಂಬಿಸಿರುತ್ತದೆ ಎಂದು ನ್ಯಾಯಾಂಗ ತಜ್ಞರು ಹೇಳುತ್ತಾರೆ.

ಸುಪ್ರೀಂಕೋರ್ಟು ರಾಜ್ಯ ಸರ್ಕಾರದ ವಿರುದ್ಧ ಒಂದು ವೇಳೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಪ್ರಾರಂಭಿಸಿದರೆ, ಕಾನೂನು ಸಂಕಷ್ಟಕ್ಕೆ ಒಳಗಾಗುವ ಮೊದಲ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿ. ಸಾಮಾನ್ಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನ ಆದೇಶ ಪಾಲನೆ ಮಾಡದೇ ಇದ್ದಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿಯವರು ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಆದರೆ, ವಿಧಾನಮಂಡಲದ ಸರ್ವಾನುಮತದ ನಿರ್ಣಯದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಆದೇಶ ಪಾಲನೆ ಆಗದಿರುವ ಈಗಿನ ವಿಶೇಷ ಸಂದರ್ಭದಲ್ಲಿ ವಿಧಾನಮಂಡಲ ಮತ್ತು ಮುಖ್ಯಮಂತ್ರಿಯವರವನ್ನು ಹೊಣೆಗಾರರನ್ನಾಗಿ ಸುಪ್ರೀಂಕೋರ್ಟ್‌ ಮಾಡಬಹುದು. ಹಾಗಾದಲ್ಲಿ ಮುಖ್ಯಮಂತ್ರಿ ಸಂಕಷ್ಟ ಎದುರಿಸಬೇಕಾಗಬಹುದು ಎಂದು ಮಾಜಿ ಅಡ್ವೋಕೇಟ್‌ ಜನರಲ್‌ ಒಬ್ಬರು ಹೇಳುತ್ತಾರೆ.

ಕಾವೇರಿ ವಿಚಾರದಲ್ಲಿ ಸರ್ಕಾರ ಕೈಗೊಂಡ ಕಠಿಣ ಮತ್ತು ದಿಟ್ಟ ತೀರ್ಮಾನ ಸುಪ್ರೀಂಕೋರ್ಟ್‌ನಲ್ಲಿ ಪ್ರತಿಪಾದನೆಯೇ ಆಗಿಲ್ಲ. ರಾಜ್ಯದ ನಿಲುವನ್ನು ನಮ್ಮ ವಕೀಲರೇ ಸಮರ್ಥಿಸಿಕೊಂಡಿಲ್ಲ ಎಂದಾದರೆ, ಯಾವ ನಿರ್ಧಾರ ತೆಗೆದುಕೊಂಡರೇನು, ಯಾವ ನಿಲುವು ಇದ್ದರೇನು? ಈಗಿನ ಸನ್ನಿವೇಶದಲ್ಲಿ ಸುಪ್ರೀಂಕೋರ್ಟ್‌ ಆದೇಶ ಪಾಲನೆಯೊಂದೇ ನಮ್ಮ ಮುಂದಿರುವ ಆಯ್ಕೆ.
- ಅಶೋಕ್‌ ಹಾರನಹಳ್ಳಿ, ಮಾಜಿ ಅಡ್ವೋಕೇಟ್‌ ಜನರಲ್‌

ಈ ವಿಚಾರವನ್ನು ರಾಜ್ಯ ಸರ್ಕಾರ ಮುಖ್ಯ ನ್ಯಾಯಮೂರ್ತಿ ಪೀಠಕ್ಕೆ ತೆಗೆದುಕೊಂಡು ಹೋಗಬೇಕು. ನ್ಯಾಯಾಂಗ ನಿಂದನೆ ಎದುರಾದರೆ ಅದನ್ನು ಎದುರಿಸಲು ಕರ್ನಾಟಕ ಸನ್ನದ್ಧವಾಗಬೇಕು.
- ನ್ಯಾ.ಕೆ.ಎಲ್‌.ಮಂಜುನಾಥ್‌, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ

Trending videos

Back to Top