CONNECT WITH US  

ಬರದ ಊರಲ್ಲಿ ಇನ್ನೂ ಇಲ್ಲ ಪರಿಹಾರ ಕಾರ್ಯ

ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ 112 ತಾಲೂಕು ಬರಪೀಡಿತ ಎಂದು ಘೋಷಿಸಿದ್ದರೂ ಸದ್ಯಕ್ಕೆ ರೈತರಿಗೆ ಬೆಳೆ ಪರಿಹಾರ ಸಿಗುವುದು ಅನುಮಾನ. ಕೇಂದ್ರ ಸರ್ಕಾರ ನೆರವು ಕೊಟ್ಟ ಮೇಲಷ್ಟೇ ಪರಿಹಾರ ಎಂಬಂತಾಗಿದೆ.

ಆರ್ಥಿಕ ಮುಗ್ಗಟ್ಟು ಹಿನ್ನೆಲೆಯಲ್ಲಿ ಬರ ಪರಿಹಾರ ಕಾರ್ಯಕ್ಕೆ ಹೆಚ್ಚಿನ ಹಣ ಹೊಂದಿಸುವುದು ಕಷ್ಟ ಎಂದು ಹಣಕಾಸು ಇಲಾಖೆ ಕೈ ಚೆಲ್ಲಿದ್ದು, ರಾಜ್ಯ ಸರ್ಕಾರ ಇದೀಗ ಕೇಂದ್ರ ಸರ್ಕಾರದತ್ತ ಮುಖ ಮಾಡುವಂತಾಗಿದೆ. 

ಜಿಲ್ಲಾಧಿಕಾರಿಗಳಿಂದ ಬೆಳೆ ನಷ್ಟದ ನಿಖರ ಅಂಕಿ-ಸಂಖ್ಯೆ ಇನ್ನೂ ಕಂದಾಯ ಇಲಾಖೆಗೆ ಸಲ್ಲಿಕೆಯಾಗಿಲ್ಲ. ಹೀಗಾಗಿ, ಕೇಂದ್ರದ ನೆರವು ಕೋರುವ ಪ್ರಸ್ತಾವನೆ ಸಿದ್ಧಪಡಿಸಲು ವಿಳಂಬವಾಗುತ್ತಿದೆ. 

ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ, ಕೇಂದ್ರದ ತಂಡ ಆಗಮಿಸಿ ಅಧ್ಯಯನ ನಡೆಸಿ ವರದಿ ಸಲ್ಲಿಸಿ ಅದರ ಆಧಾರದ ಮೇಲೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕಿದೆ. ಹೀಗಾಗಿ, ಅಲ್ಲಿವರೆಗೂ ರೈತರಿಗೆ ಪರಿಹಾರ ಸಿಗುವುದು ಅನುಮಾನ.

ಮತ್ತೂಂದೆಡೆ ಕುಡಿಯುವ ನೀರು, ಮೇವು ಪೂರೈಕೆ ಸೇರಿದಂತೆ 112 ತಾಲೂಕುಗಳಿಗೆ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ಖಾತೆಗೆ ಜಮೆ ಮಾಡಿರುವುದು ಕೇವಲ 75 ಕೋಟಿ ರೂ. ಇದು ಯಾವುದಕ್ಕೂ ಸಾಲುತ್ತಿಲ್ಲ. ಬರಪೀಡಿತ ಎಂದು ಘೋಷಣೆಯಾಗಿರುವ ತಾಲೂಕು ಪ್ರತಿನಿಧಿಸುವ ಶಾಸಕರು ತುರ್ತು ಕಾಮಗಾರಿ ಪಟ್ಟಿ ಮಾಡಿ ಹಣ ಬಿಡುಗಡೆಗೆ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಜತೆಗೆ ಹಣ ವೆಚ್ಚ ಮಾಡಲು ನಿಯಮಾವಳಿಯಲ್ಲಿ ಹಲವು ಅಡೆ -ತಡೆಗಳು ಎದುರಾಗಿವೆ. 

ಕುಡಿಯುವ ನೀರು ಪೂರೈಕೆಗೆ ಕೊಳವೆ ಬಾವಿ ಕೊರೆಸುವುದು ಅಥವಾ ಟ್ಯಾಂಕರ್‌ನಲ್ಲಿ ನೀರು ಪೂರೈಕೆ, ಜಾನುವಾರುಗಳಿಗೆ ಮೇವು ಪೂರೈಕೆ ಅಥವಾ ಗೋ ಶಾಲೆ ತೆರೆಯಲು ಒಂದೊಂದು ಕ್ಷೇತ್ರದಲ್ಲಿ 1 ಕೋಟಿ ರೂ.ನಿಂದ 2 ಕೋಟಿ ರೂ.ಗೂ ಹೆಚ್ಚು ಅಗತ್ಯವಿದೆ. ಇರುವ ಹಣದಲ್ಲಿ ಯಾವುದಕ್ಕೆ ಕೊಡುವುದು, ಯಾವುದಕ್ಕೆ ಬಿಡುವುದು ಎಂಬ ಸ್ಥಿತಿ ಜಿಲ್ಲಾಧಿಕಾರಿಗಳದ್ದಾಗಿದೆ. ಹೀಗಾಗಿ, ಇನ್ನೂ ಬರ ಪರಿಹಾರ ಕಾಮಗಾರಿಗಳು ಎಲ್ಲೂ ಪ್ರಾರಂಭವಾಗದಂತಾಗಿದೆ.

ಆರ್ಥಿಕ ಮುಗ್ಗಟ್ಟು ಕಾರಣದಿಂದ ಇನ್ನೂ 50 ತಾಲೂಕುಗಳಲ್ಲಿ ಪರಿಸ್ಥಿತಿ ಇದ್ದರೂ ಬರಪೀಡಿತ ಎಂದು ಘೋಷಿಸುವ ಧೈರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ. ಬರಪೀಡಿತ ಎಂದು ಘೋಷಣೆಯಾದ ತಕ್ಷಣ ಪರಿಹಾರಕ್ಕೆ ಹಣ ಕೊಡಿ ಎಂಬ ಬೇಡಿಕೆಯೊಂದಿಗೆ ಒತ್ತಡ ಹೆಚ್ಚಾಗುವುದರಿಂದ ಸಂಪುಟ ಸಮಿತಿ ಶಿಫಾರಸು ಮಾಡಿದ್ದರೂ ಘೋಷಣೆ ಮಾಡಲಾಗುತ್ತಿಲ್ಲ ಎಂದು ಹೇಳಲಾಗಿದೆ.

ಸರ್ಕಾರ ಈಗ ಬರಪೀಡಿತ ಎಂದು ಘೋಷಿಸಿರುವ 24 ಜಿಲ್ಲೆಗಳ 112 ತಾಲೂಕುಗಳ 260 ಹೋಬಳಿಗಳು ಹಾಗೂ ಬರಪೀಡಿತ ಎಂದು ಘೋಷಿಸುವ ಹಾದಿಯಲ್ಲಿರುವ 50 ತಾಲೂಕುಗಳ 100 ಹೋಬಳಿಗಳಲ್ಲಿ ಹಾಗೂ ಇತ್ತೀಚೆಗೆ ಅತಿವೃಷ್ಟಿ ಉಂಟಾಗಿರುವ ಎರಡು ಜಿಲ್ಲೆಗಳಲ್ಲಿ  ಬೆಳೆನಷ್ಟದ ಅಂದಾಜು 10 ಸಾವಿರ ಕೋಟಿ ರೂ.ಗೆ ಮುಟ್ಟುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಬರ ಮತ್ತು ಅತಿವೃಷ್ಟಿ ನಷ್ಟದ ಬಗ್ಗೆ ಪ್ರತ್ಯೇಕ ಪ್ರಸ್ತಾವನೆ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದು ಎಂದಾಗಿತ್ತಾದರೂ ಎರಡೆರಡು ಬಾರಿ ಮನವಿ ಕೊಟ್ಟರೆ ಬರ ನಷ್ಟದ ಅಧ್ಯಯನಕ್ಕೆ ಒಮ್ಮೆ, ಅತಿವೃಷ್ಟಿ ನಷ್ಟದ ಅಧ್ಯಯನಕ್ಕೆ ಮತ್ತೂಮ್ಮೆ ಕೇಂದ್ರ ತಂಡ ಬರಬೇಕಾಗುತ್ತದೆ. ಇದಕ್ಕಿಂತ ಎರಡಕ್ಕೂ ಸೇರಿ ಒಂದೇ ಪ್ರಸ್ತಾವನೆ ಸಲ್ಲಿಸಿ ಹೆಚ್ಚು ಅನುದಾನ ಕೋರುವುದು ಸೂಕ್ತ ಎಂಬ ಅಭಿಪ್ರಾಯವನ್ನೂ ಅಧಿಕಾರಿಗಳು ನೀಡಿದ್ದಾರೆ ಎನ್ನಲಾಗಿದೆ.

ಆದರೆ, ಅಂಕಿ-ಅಂಶಗಳ ಸಮೇತ ಪ್ರಸ್ತಾವನೆ ಸಲ್ಲಿಸಲು ವಿಳಂಬವಾದರೆ ರೈತರಿಗೆ ಪರಿಹಾರ ತಲುಪುವುದು ಮುಂದಿನ ವರ್ಷವಾಗುತ್ತದೆ. ತಕ್ಷಣಕ್ಕೆ ಬೆಳೆ ಪರಿಹಾರ ಮತ್ತು ಇತರೆ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಎರಡಕ್ಕೂ ಸೇರಿ ತುರ್ತಾಗಿ ಆರು ಸಾವಿರ ಕೋಟಿ ರೂ. ಬೇಡಿಕೆ ಇಟ್ಟು ಆ ನಂತರ ಅಂಕಿ-ಅಂಶಗಳ ಸಮೇತ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.

ಒಟ್ಟಾರೆ, ಕೇಂದ್ರ ಸರ್ಕಾರದ ನೆರವು ಇಲ್ಲದೆ ಬರ ಪರಿಸ್ಥಿತಿ ನಿರ್ವಹಣೆ ರಾಜ್ಯ ಸರ್ಕಾರಕ್ಕೆ ಕಷ್ಟವಾಗಿದ್ದು, ಕೇಂದ್ರ ಸರ್ಕಾರ ರಾಜ್ಯದ ಸಂಕಷ್ಟಕ್ಕೆ ಸ್ಪಂದಿಸಿ ತುರ್ತು ನೆರವು ಬಿಡುಗಡೆ ಮಾಡುವ ಔದಾರ್ಯ ತೋರಿದರೆ ಮಾತ್ರ ರೈತರು ಬಚಾವ್‌, ಇಲ್ಲದಿದ್ದರೆ ಕಷ್ಟ ಎಂಬಂತಾಗಿದೆ.
 
ಬರಪೀಡಿತ ತಾಲೂಕುಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ಅಗತ್ಯ. ರಾಜ್ಯ ಸರ್ಕಾರ ತುರ್ತು ಕಾಮಗಾರಿಗಳಿಗೆ ಅದರಲ್ಲೂ ಕುಡಿಯುವ ನೀರು ಪೂರೈಕೆಗೆ ಜಿಲ್ಲಾಧಿಕಾರಿಗಳ ಖಾತೆಗೆ ಹಣ ಜಮೆ ಮಾಡಿದೆ. ಕೇಂದ್ರ ಸರ್ಕಾರಕ್ಕೆ ನೆರವಿಗಾಗಿ ಪ್ರಸ್ತಾವನೆ ಸಲ್ಲಿಸುವ ಕೆಲಸ ಆದಷ್ಟು ಬೇಗ ಮಾಡಲಾಗುವುದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಜತೆಗೂಡಿ ಬರ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಲಾಗುವುದು.
- ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ 

- ಎಸ್‌.ಲಕ್ಷ್ಮೀನಾರಾಯಣ

Trending videos

Back to Top