CONNECT WITH US  

ಮಾಧ್ಯಮ V/S ಯಶ್‌ ವಿವಾದ ಸುಖಾಂತ್ಯ

ಬೆಂಗಳೂರು: ಮಾಧ್ಯಮಗಳ ಜೊತೆ ಸಂವಾದ ನಡೆಸುತ್ತೇನೆ ಎಂದು ಕಳೆದ ನಾಲ್ಕು ವಾರಗಳಿಂದ ಹೇಳಿಕೊಂಡು ಬರುತ್ತಲೇ ಇದ್ದ ಯಶ್‌, ಶುಕ್ರವಾರ ಪತ್ರಿಕಾಗೋಷ್ಠಿಗೆ ಹಾಜರಾಗಿದ್ದರು. ಈ ಮುಖಾಮುಖೀಯಲ್ಲಿ ಯಶ್‌ ಮಾಧ್ಯಮದ ಪ್ರಶ್ನೆಗಳಿಗೆ ನೇರಾನೇರ ಉತ್ತರಿಸಿದ್ದಾರೆ. ಕಳೆದ ನಾಲ್ಕೂ ಸಿನಿಮಾಗಳ ಬಿಡುಗಡೆಯ ಸಂದರ್ಭದಲ್ಲೂ ಪತ್ರಿಕೆಗಳ ಮುಂದೆ ಹಾಜರಾಗದ ಯಶ್‌, ತಮ್ಮ ಕುರಿತ ಆರೋಪ, ಆಕ್ಷೇಪ ಮತ್ತು ತಕರಾರುಗಳಿಗೆ ಉತ್ತರಿಸಿದ್ದಾರೆ.

ಯಶ್‌ಗೆ ಮಾಧ್ಯಮದ ಅವಶ್ಯಕತೆ ಇಲ್ಲ ಎಂದು ಹೇಳುತ್ತಲೇ ಬಂದಿದ್ದೀರಿ?
           ಡ್ರಾಮಾ  ಆಡಿಯೋನೇ ಕೊನೆ. ಆ ನಂತರ ನಾನು ಸ್ವಲ್ಪ ದೂರವೇ ಇದ್ದೆ. ಕಾರಣ ಎರಡು ವಿಷಯಗಳು ನಡೆದವು. ಚೀಟಿ ವ್ಯವಹಾರ ಮತ್ತು ಮನೆ ಬಾಡಿಗೆ ವಿಚಾರದಲ್ಲಿ ನನ್ನ ಪಾತ್ರವಿರಲಿಲ್ಲ. ಆದರೂ ನನ್ನನ್ನು ಸುಮ್ಮನೆ ಎಳೆದು ತರಲಾಯಿತು. ಈ ಎರಡು ವಿಷಯಗಳಿಂದ ಬಹಳ ಕುಗ್ಗಿ ಹೋದೆ. ಹಾಗಾಗಿ ಎಲ್ಲರೂ ಸೇರುವ ಪತ್ರಿಕಾಗೋಷ್ಠಿಗಳಿಗೆ ಹೋಗುವುದನ್ನು ಕಡಿಮೆ ಮಾಡಿದೆ. ಮಿಕ್ಕಂತೆ ನಾನು ಮಾಧ್ಯಮದವರ ಸಂಪರ್ಕ ಕಳೆದುಕೊಂಡಿಲ್ಲ. ನಾನು ಈ ಲೆವೆಲ್‌ಗೆ ಬಂದಿದ್ದೇನೆ ಎಂದರೆ ಅದರಲ್ಲಿ ಮಾಧುಮದವರ ಪಾತ್ರ ದೊಡ್ಡದಿದೆ. ಹಾಗಾಗಿ ಅವರಿಂದ ದೂರವಾಗುವ ಮಾತೇ ಇಲ್ಲ. ಆದರೆ, ಕೆಲವು ವಿಚಾರಗಳಲ್ಲಿ ನೋವಾಯಿತು. ಯಾವುದೋ ವಿಷಯಕ್ಕೆ ಅರ್ಜೆಂಟ್‌ ಆಗಿ ಪ್ರತಿಕ್ರಿಯಿಸಿ ಅಂತ ಫೋನ್‌ ಮಾಡೋರು. ಈಗಲೇ ಉತ್ತರ ಕೊಡಲಿಲ್ಲ ಅಂದರೆ ನಿಮ್ಮ ಬಗ್ಗೆ ನೆಗೆಟಿವ್‌ ವಿಚಾರ ಬರುತ್ತೆ ಅನ್ನೋರು. ಎಷ್ಟು ಕಾಲ್‌ಗ‌ಳನ್ನು ನಾನು ಸ್ವೀಕರಿಸಲಿ? ಪ್ರತಿಕ್ರಿಯೆ ನೀಡಿ ನೀಡಿ ಸಾಕಾಗಿ ಹೋಗುತಿತ್ತು. ಹಾಗಾಗಿ ನಾನು ಎಷ್ಟೋ ವಿಷಯಗಳೆಲ್ಲಾ ಪ್ರತಿಕ್ರಿಯೆ ಕೊಡುವುದಕ್ಕೇ ಹೋಗುತ್ತಿರಲಿಲ್ಲ. ಇದೆಲ್ಲ ಆದ ನಂತರವೂ ಬಹಳಷ್ಟು ಸಂದರ್ಶನಗಳನ್ನ ಕೊಟ್ಟಿದ್ದೇನೆ, ಮಾಧ್ಯಮದವರ ಸಂಪರ್ಕದಲ್ಲಿದ್ದೇನೆ. ಸಂತು ಸ್ಟ್ರೇಟ್‌ ಫಾರ್ವರ್ಡ್‌ ಚಿತ್ರದ ಬಗ್ಗೆ ಮಾತ್ರ ನಾನು ಯಾರ ಜೊತೆಗೆ ಮಾತಾಡಲಿಲ್ಲ. ಅದಕ್ಕೆ ಕಾರಣ ಇದೆ. ರೈತರನ್ನು ಬಳಸಿಕೊಂಡು, ನಾನು ಸಿನಿಮಾಗೆ ಪ್ರಚಾರ ಮಾಡುತ್ತಿದ್ದೀನಿ ಮತ್ತು ಗಿಮಿಕ್‌ ಮಾಡುತ್ತಿದ್ದೀನಿ ಎಂದು ಸುದ್ದಿಯಾಯಿತು. ಹಾಗಾಗಿ ಅದು ಗಿಮಿಕ್‌ ಅಂತ ಆಗಬಾರದು ಎಂಬ ಕಾರಣಕ್ಕೆ ನಾನು ಚಿತ್ರದ ಪ್ರಚಾರದಿಂದ ದೂರ ಇದ್ದೆ.

ರೈತರ ಸಮಸ್ಯೆ ಬಗೆಹರಿಸುವಲ್ಲಿ ನಿಜಕ್ಕೂ ನೀವೆಷ್ಟು ಬದ್ಧ?
          ಬದ್ಧತೆ ಬಾಯಲ್ಲಿ ಹೇಳಿ ತೋರಿಸೋದಲ್ಲ. ಅದನ್ನು ಮಾಡಿ ತೋರಿಸಬೇಕು. ಅದಕ್ಕೆ ಮೊದಲು ಒಂದು ವೇದಿಕೆ ಸಿದ್ಧವಾಗಬೇಕು. ಇಲ್ಲಿ ಇಗೋ ಅಡ್ಡಬರಬಾರದು. ಇಷ್ಟೆಲ್ಲಾ ಆದಮೇಲೆ, ಈ ಕ್ಷಣ ಒಂದು ನಿರ್ಧಾರ ಮಾಡಿದ್ದೀನಿ. ಅದೇನೆಂದರೆ, ನಾನೇ ವೈಯಕ್ತಿಕವಾಗಿ ಎಲ್ಲಾ ಚಾನಲ್‌ಗ‌ಳಿಗೂ ಹೋಗಿ ಬರುತ್ತೇನೆ. ಆಮೇಲೆ ಒಂದು ವೇದಿಕೆಗೆ ಎಲ್ಲರನ್ನೂ ಕರೆಯುತ್ತೀನಿ. ಸಮಸ್ಯೆ ಬಗೆಹರಿಯೋದು ದುಡ್ಡಿನಿಂದಲ್ಲ. ಮನಸ್ಥಿತಿಯಿಂದ. ಮೊದಲು ಮನಸ್ಥಿತಿ ಬದಲಾಗಬೇಕು. ಒಂದು ಜಾಗೃತಿ ಶುರುವಾಗಬೇಕು. ಆಗ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ.

ಏಕಾಏಕಿ ರೈತರ ಪರ ಕಾಳಜಿ ಬಂದಿದ್ದು ಹೇಗೆ?
         ಏಕಾಏಕಿ ಕಾಳಜಿ ಬಂದಿದ್ದಲ್ಲ. ಕಾಳಜಿ ಇತ್ತು. ಆದರೆ, ನಾನೇನು ಮಾಡುತ್ತಿಲ್ಲ ಎಂದು ಬಡಿದೆಬ್ಬಿಸಿದವರು ಮಾಧ್ಯಮದವರೇ. ಹಾಗಾಗಿ ಇನ್ನಾದರೂ ಏನಾದರೂ ಮಾಡುವ ಎಂದು ಎದ್ದೆ. ಇಳಿದ ನಂತರವೇ ಈ ಸಮಸ್ಯೆ ಎಷ್ಟು ದೊಡ್ಡದು ಎಂದು ಅರ್ಥವಾಗಿದ್ದು. ಅದೇ ಕಾರಣಕ್ಕೆ ಈ ವಿಷಯದಲ್ಲಿ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದೇನೆ. ರೈತ ಪರ ಕಾಳಜಿ ಇರುವವರನ್ನು ಭೇಟಿ ಮಾಡಿ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿದ್ದೇನೆ. ಈಗ ಅದನ್ನೆಲ್ಲಾ ಒಂದು ಕಾರ್ಯರೂಪಕ್ಕೆ ತರಬೇಕು. ಹೇಗೆ ತರಬೇಕು ಎಂದು ಬಾಯಲ್ಲಿ ಹೇಳುವುದಿಲ್ಲ. ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಅದನ್ನೆಲ್ಲಾ ನಿಮ್ಮ ಚಿತ್ರಗಳ ಮೂಲಕವೇ ಮಾಡಬಹುದಲ್ಲಾ?
          ಮಾಡಬಹುದು. ಬರೀ ಮಾಡುವುದಷ್ಟೇ ಅಲ್ಲ. ಸುಮ್ಮನೆ ಸ್ಕ್ರಿಪ್ಟ್ ಮಾಡಿದರೆ ಸಾಲದು, ಅದು ಸರಿಯಾಗಿರಬೇಕು. ಅದರಿಂದ ಒಂದು ಆಂದೋಲನವಾಗಬೇಕು. ಬಂಗಾರದ ಮನುಷ್ಯಆಯಿತಲ್ಲ. ಆ ತರಹ ಆಗಬೇಕು. ಅದಕ್ಕಿಂತ ಒಬ್ಬ ಕಲಾವಿದ ಇನ್ನೇನು ಕೊಡುಗೆ ಕೊಡುವುದಕ್ಕೆ ಸಾಧ್ಯ? ಒಂದು ಚಿತ್ರದಿಂದ ಸಮಸ್ಯೆ ಬದಲಾದರೆ ಅದಕ್ಕಿಂತ ಇನ್ನಾéವ ಕೊಡುಗೆಯೂ ಇಲ್ಲ. ಅದಾಗಬೇಕು.

ನಿಮ್ಮ ಚಿತ್ರಗಳಲ್ಲಿ ಇತ್ತೀಚೆಗೆ ವಿಪರೀತ ಬಿಲ್ಡಪ್‌ ಇರುತ್ತದಲ್ಲಾ?
          ನನ್ನ ಸಿನಿಮಾ ನೋಡೋಕೆ ಎಲ್ಲಾ ತರಹದ ಜನರೂ ಬರುತ್ತಾರೆ. ಅದರಲ್ಲಿ ಮಾಸ್‌ ಪ್ರೇಕ್ಷಕರೂ ಇರುತ್ತಾರೆ. ಅವರು ಸಿನಿಮಾಗೆ ಬರಬೇಕೆಂದರೆ ಏನು ಮಾಡಬೇಕು? ಏನು ಕೊಡಬೇಕು? ಅವರಿಗೆ ಸಂಭಾಷಣೆಗಳು, ಬಿಲ್ಡಪ್‌ಗ್ಳು ಇಷ್ಟವಾಗತ್ತೆ. ಹಾಗಾಗಿ ಕೊಡಬೇಕಾಗುತ್ತದೆ. ಯಾವತ್ತೂ ಒಂದು ಸತ್ಯ ಏನೆಂದರೆ, ಹೈವೋಲ್ಟೆàಜ್‌ ಸಿನಿಮಾನೇ ಜನ ಹೆಚ್ಚಾಗಿ ಇಷ್ಟಪಡೋದು. ಅದರಲ್ಲೂ ಹೀರೋ ವೈಭವಿಕರಿಸುವುದು ಬಹಳ ಮುಖ್ಯ. ಹಾಗಂತ ಅದೇ ಮುಖ್ಯ ಅಲ್ಲ. ಒಂದು ಇಂಟ್ರೊಡಕ್ಷನ್‌ ಹಾಡು, ಎಷ್ಟು ಚೆನ್ನಾಗಿ ಮಾಡಿದರೂ, ಅದು ಜನರ ಮನಸ್ಸಿನಲ್ಲಿ ಉಳಿಯೋದು ಒಂದೇ ತಿಂಗಳು. ಜನರ ಮನಸ್ಸಿನಲ್ಲಿ ಯಾವತ್ತೂ ಉಳಿಯೋದು ಡ್ಯುಯೆಟ್‌ ಮತ್ತು ಮೆಲೋಡಿ ಹಾಡುಗಳೇ. ಆದರೆ, ಚಿತ್ರಕ್ಕೆ ಒಂದು ಓಪನಿಂಗ್‌ ಬೇಕಲ್ವಾ? ಹಾಗಾಗಿ ಇವೆಲ್ಲಾ ಸಹಜ.

ನಿಮ್ಮ ಡೈಲಾಗ್‌ಗಳಲ್ಲಿ ಬೇರೆಯವರಿಗೆ ಸಿಕ್ಕಾಪಟ್ಟೆ ಟಾಂಗ್‌ ಕೊಡ್ತೀರಾ, ಬೇರೆಯವರನ್ನು ಯಾವಾಗಲೂ ಟಾರ್ಗೆಟ್‌ ಮಾಡ್ತಾ ಇರಿ¤àರಾ ಅಂತ ಆರೋಪ ಇದೆ?
           ಯಶ್‌ ಹೇಳಿದ ಅಂತ ಯಾಕೆ ತಲೆ ಕೆಡಿಸಿಕೊಳ್ಳಬೇಕು. ಒಬ್ಬ ನ್ಪೋರ್ಟ್ಸ್ಮ್ಯಾನ್‌ ಮ್ಯಾನ್‌ ಒಂದು ಪಂದ್ಯ ಆಡೋಕೆ ಮುಂಚೆ ಗೆಲ್ತಿàನಿ, ಹೊಡೀತೀನಿ ಅಂತನೇ ಹೋಗಿರ್ತಾನೆ. ಅಲ್ಲಿ ಅವನಿಗೆ ಯಾರಾದ್ರೂ ಸ್ಮ್ಯಾಶ್‌ ಮಾಡಿದರೆ, ಅವನು ಉತ್ತರ ಕೊಡುತ್ತಾನೋ ಅಥವಾ ಮುಂದೇನು ಮಾಡಬೇಕು ಅಂತ ಯೋಚೆನೆ ಮಾಡ್ತಾನೋ. ಇಲ್ಲಿ ಯಾವುದೇ ವೈಯಕ್ತಿಕ ಉದ್ದೇಶ ಇಲ್ಲ. ಒಬ್ಬ ವಿಲನ್‌, ಹೀರೋ ಎದುರಿಗೆ ಬಂದು ಡೈಲಾಗ್‌ ಹೊಡೆದರೆ, ಅವನು ಸುಮ್ಮನೆ ಇರೋಕ್ಕಾಗತ್ತಾ? ಅವನು ಡೈಲಾಗ್‌ ಬಿಡೋದು ಬೇಡವಾ? ಹಾಗೆ ಡೈಲಾಗ್‌ ಬಿಟ್ಟರೇ, ಹೀರೋ ಅನ್ನೋದು. ಅದು ಸನ್ನಿವೇಶಕ್ಕೆ ತಕ್ಕ ಹಾಗೆ ಇರತ್ತೇ ಹೊರತು, ಯಾರೊಬ್ಬರನ್ನೂ ಗಮನದಲ್ಲಿಟ್ಟುಕೊಂಡು ಹೇಳಿರೋದಲ್ಲ. ಅಲ್ಲಿ ಪರ್ಸನಲ್‌ ಆದಂತದ್ದು ಏನೂ ಇಲ್ಲ. 

ಇಲ್ಲಿ ಡೈಲಾಗ್‌ ಹೈಲೈಟ್‌ ಆಗುತ್ತದೆಯೇ ಹೊರತು, ಆ ಚಿತ್ರದಲ್ಲಿರುವ ಒಂದಿಷ್ಟು ಒಳ್ಳೆಯ ವಿಷಯಗಳ ಬಗ್ಗೆ ಚರ್ಚೆಯಾಗುತ್ತಿಲ್ಲ.ಮಿಸ್ಟರ್‌ ಆ್ಯಂಡ್‌ ಮಿಸಸ್‌ ರಾಮಾಚಾರಿಯಲ್ಲಿ ತಂದೆ-ಮಗನ ದೃಶ್ಯಗಳು ಹೈಲೈಟ್‌ ಆಗಲಿಲ್ಲ. ಅದರ ಬದಲು ಹವಾ ಡೈಲಾಗು ಸುದ್ದಿಯಾಯಿತು. ಸಂತು ಸ್ಟ್ರೇಟ್‌ ಫಾರ್ವರ್ಡ್‌ನಲ್ಲಿ ಫ್ಯಾಮಿಲಿ ವಿಷಯಗಳ ಕುರಿತು ಸಾಕಷ್ಟು ಒಳ್ಳೆಯ ವಿಷಯಗಳಿವೆ. ಆದರೆ, ಬರೀ ಬ್ಯಾಟು-ಬಾಲು ಸಂಭಾಷಣೆಯ ಬಗ್ಗೆಯೇ ಚರ್ಚೆಯಾಗುತ್ತಿದೆ. ಅದು ಸಿನಿಮಾದ ಪಾತ್ರವೊಂದು ಹೇಳುವ ಡೈಲಾಗು ಅಷ್ಟೇ. ಅಮಿತಾಭ್‌ ಬಚ್ಚನ್‌, ಹಮ್‌ ಜಹಾನ್‌ ಖಡೇ ಹೊ ಜಾತೇ ಹೇಂ, ಲೈನ್‌ ವಹೀ ಸೆ ಶುರು ಹೋತಾ ಹೇನ್‌ ...ಅಂತ ಅಮಿತಾಭ್‌ ಬಚ್ಚನ್‌ ಡೈಲಾಗ್‌ ಹೊಡೆದರೆ, ಅಮಿತಾಭ್‌ ಬಚ್ಚನ್‌ ಎಲ್ಲಿ ನಿಲ್ತಾರೋ ಅಲ್ಲಿಂದಲೇ ಲೈನ್‌ ಶುರುವಾಗುತ್ತೆ ಅಂತಾನಾ? ಅದು ಸಿನಿಮಾಗೆ ಹೊಡೆದ ಡೈಲಾಗು ಅಷ್ಟೇ.

ಯಶ್‌ ಬರೀ ಮಾಸ್‌ ಪಿಕ್ಚರ್‌ಗಳನ್ನು ಮಾಡ್ತಾರೆ, ಅದು ಬಿಟ್ಟರೆ ಅವರೇನು ಮಾಡಲ್ಲ ಅಂತ ಮಾತಿದೆ?
             ಮಾಸ್‌ ಪ್ರೇಕ್ಷಕರನ್ನು ಬಿಟ್ಟು ಮಾಡಬಹುದು. ಮಾಡಿದರೆ ರೆವೆನ್ಯು ಕಷ್ಟ. ಹಾಗಾಗಿ ಅವರ ಟ್ರಾಕ್‌ನಲ್ಲೇ ಹೋಗಿ, ಅವರಿಗೆ ಎಜುಕೇಟ್‌ ಮಾಡುತ್ತಲೇ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ಉದಾಹರಣೆಗೆ ಮಾಸ್ಟರ್‌ಪೀಸ್‌ನಲ್ಲಿ ಅವನದ್ದು ನೆಗೆಟಿವ್‌ ಪಾತ್ರ. ಹೀಗೆ ಬದುಕಿದ್ರೆ ಹಿಂಗಾಗತ್ತೆ ಅಂತ ಹೇಳುವ ಪ್ರಯತ್ನ ಅದು. ನಾನು ಅಂತ ಹೋದರೆ ಏನೂ ಆಗಲ್ಲ ಅಂತ ಇನ್‌ಡೈರೆಕ್ಟ್ ಆಗಿ ಹೇಳುವ ಪ್ರಯತ್ನ. ಇದು ಹೊಸದೊಂದು ಕಾನ್ಸೆಪುr.

ಸಂತು ಸ್ಟ್ರೇಟ್‌ ಫಾರ್ವರ್ಡ್‌ ಚಿತ್ರ ಗೆದ್ದಿದೆ ಅನಿಸುತ್ತಾ?
           ಸಂತು  ನನಗೆ ಬಹಳ ಖುಷಿ ಕೊಟ್ಟ ಚಿತ್ರ. ಅದು ನೀಟ್‌ ಆಗಿ ಜನರಿಗೆ ತಲುಪಿದೆ. ಚಿತ್ರದಲ್ಲಿ ಸಾಕಷ್ಟು ಫ್ಯಾಮಿಲಿ ಎಲಿಮೆಂಟ್ಸ್‌ ಇದೆ. ವಿಲನ್‌ ಜೊತೆಗೆ ತಿಕ್ಕಾಟ, ಲವ್‌ ಎಲ್ಲವನ್ನೂ ಮೆಚ್ಚಿಕೊಂಡಿದ್ದಾರೆ. ನಾನು ಒಂದು ಚಿತ್ರವನ್ನು ಒಪ್ಪುವಾಗ ಎಲ್ಲಾ ತರಹ ಯೋಚಿಸುತ್ತೀನಿ. ಮಾಸ್‌ ಅಂಶಗಳು ಎಷ್ಟಿದೆ, ಫೈಟು, ಹಾಡು, ಸಂಭಾಷಣೆ ... ಎಲ್ಲದರ ಬಗ್ಗೆ ಯೋಚಿಸಿಯೇ ಮುಂದುವರೆಯುತ್ತೀನಿ. ನನ್ನ ಸಿನಿಮಾಗಳೆಂದರೆ ಅದು ಸೌಥ್‌ ಇಂಡಿಯನ್‌ ಥಾಲಿ ತರಹ. ಅಲ್ಲಿ ಎಲ್ಲಾ ತರಹದ ಪ್ಯಾಕೇಜ್‌ ಇರುತ್ತದೆ. ಹಾಗಾಗಿ ದೊಡ್ಡ ರೀಚ್‌ ಸಿಕ್ಕಿದೆ.

ಹಾಗಾದರೆ ಯಶ್‌ ಬೇರೆ ಹೊಸದೇನನ್ನೋ ಪ್ರಯತ್ನ ಮಾಡೋದೇ ಇಲ್ವಾ?
         ನನಗೂ ಬೇರೆ ಏನಾದರೂ ಮಾಡಬೇಕು ಅಂತ ತುಂಬಾ ಆಸೆ ಇದೆ. ಆದರೆ, ಕಥೆ ಬರಲ್ಲ. 10 ಕಥೆ ಬಂದರೆ, ಅದರಲ್ಲಿ ಕಡಿಮೆ ಬಿಲ್ಡಪ್‌ ಇರುವ ಕಥೆಯನ್ನು ಆಯ್ಕೆ ಮಾಡುತ್ತೇನೆ. ಬರೋದೆಲ್ಲಾ ಇದೇ ತರಹ ಆದರೆ, ಏನು ಮಾಡಲಿ? ನನ್ನ ಹೆಸರ ಮೇಲೆ ಒಬ್ಬರು ಹಾಡು ಮಾಡಿಕೊಂಡು ಬಂದಿದ್ದರು. ಅವೆಲ್ಲಾ ಬೇಡ ಅಂತ ನಾನೇ ಸುಮ್ಮನೆ ಆದೆ.

ಕೆಜಿಎಫ್ ಯಾವಾಗ ಶುರು?
         ಇಷ್ಟರಲ್ಲಾಗಲೇ ಶುರುವಾಗಬೇಕಿತ್ತು. ಸ್ವಲ್ಪ ನಿಧಾನವಾಗಿದೆ. ಈಗಲೇ ಎರಡು ವಿಷಯ ಸ್ಪಷ್ಟಪಡಿಸಿಬಿಡ್ತೀನಿ. ಅದರಲ್ಲಿ ಯಾರನ್ನೂ ಟಾರ್ಗೆಟ್‌ ಮಾಡುತ್ತಿಲ್ಲ ಮತ್ತು ಆ ಚಿತ್ರದ ಪಾತ್ರ ಸಹ ಇದೇ ತರಹ ಇರತ್ತೆ. ಆ ಚಿತ್ರದ ಬಜೆಟ್‌ ದೊಡ್ಡದು. ನಿರ್ದೇಶಕ ಪ್ರಶಾಂತ್‌ ನೀಲ್‌, ತುಂಬಾ ರಿಸರ್ಚ್‌ ಮಾಡಿದ್ದಾರೆ. ಅವರದ್ದು ಮುಗಿದ ನಂತರ, ರಾಣ ಚಿತ್ರ ಇದೆ.

ಮದುವೆ ತಯಾರಿ ಹೇಗೆ ನಡೆಯುತ್ತಿದೆ?
        ನಿಜ ಹೇಳಬೇಕೆಂದರೆ ಮನೆಯಲ್ಲಿ ಅವಸರ ಮಾಡುತ್ತಿದ್ದಾರೆ. ಹೀರೋಯಿಸಂ ಮಾಡುತ್ತಿರುವುದು ನಾನಲ್ಲ, ಮನೆಯವರು ಎಂದರೆ ತಪ್ಪಿಲ್ಲ. ಮದುವೆ ಇಟ್ಟುಕೊಂಡು, ಈ ಎಲ್ಲಾ ಸಮಸ್ಯೆ ಬೇಕಾ ಅಂತ ಕೇಳುತ್ತಿದ್ದಾರೆ. ಅವರು ಡೈಲಾಗ್‌ ಹೊಡೆಯುತ್ತಿದ್ದಾರೆ, ನಂದು ಕೌಂಟರ್‌ ಡೈಲಾಗೇ ಇಲ್ಲ.

-  ಚೇತನ್‌ ನಾಡಿಗೇರ್‌


Trending videos

Back to Top