CONNECT WITH US  

ಮಾಸ್ತಿಗುಡಿ ದುರಂತ; ಕೆರೆಗೆ ಜಿಗಿದ ಇಬ್ಬರು ಕಲಾವಿದರ ಸಾವು

ಮಾಗಡಿ: ದುನಿಯಾ ವಿಜಯ್‌ ನಾಯಕ ನಟರಾಗಿ ನಟಿ ಸುತ್ತಿರುವ ಮಾಸ್ತಿಗುಡಿ ಚಿತ್ರದ 'ಹೆಲಿಕಾಪ್ಟರ್‌ನಿಂದ ಕೆರೆಗೆ ಜಿಗಿಯುವ' ಸಾಹಸಮಯ ದೃಶ್ಯ ಚಿತ್ರೀ ಕರಿಸುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಖಳನಟರಿಬ್ಬರು ಮೃತಪಟ್ಟ ಘಟನೆ ತಾಲೂಕಿನ ತಿಪ್ಪಗೊಂಡನಹಳ್ಳಿ ಕೆರೆ ಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಸುರಕ್ಷತೆಗಾಗಿ ತಂದಿದ್ದ ಡೀಸೆಲ್‌ ಬೋಟ್‌ ಕೆರೆಯಲ್ಲೇ ಕೆಟ್ಟು ನಿಂತಿದ್ದರಿಂದ ಈ ದುರ್ಘ‌ಟನೆ ಸಂಭವಿಸಿದ್ದು, ಚಿತ್ರದ ನಾಯಕ ದುನಿಯಾ ವಿಜಯ್‌ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕನ್ನಡ ಸಿನೆಮಾ ಚಿತ್ರೀಕರಣದ ವೇಳೆ ಇಬ್ಬರನ್ನು ಬಲಿ ಪಡೆದ ಮೊದಲ ದುರ್ಘ‌ಟನೆ ಇದಾಗಿದ್ದು, 'ಜಯಮ್ಮನ ಮಗ' ಚಿತ್ರದಿಂದ ಖ್ಯಾತರಾಗಿದ್ದ ಖಳನಟ ಉದಯ್‌ ಹಾಗೂ 'ಮಿಸ್ಟರ್‌ ಆಂಡ್‌ ಮಿಸಸ್‌ ರಾಮಾಚಾರಿ'ಯಲ್ಲಿ ವಿಲನ್‌ ಆಗಿ ಮಿಂಚಿದ್ದ ಅನಿಲ್‌ ಈ ದುರ್ಘ‌ಟನೆಯಲ್ಲಿ ಮೃತರಾದ ದುರ್ದೈವಿಗಳು. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಇಬ್ಬರ ಮೃತದೇಹ ಪತ್ತೆಗಾಗಿ ಸಂಜೆ 4 ಗಂಟೆಯಿಂದ ಕೆರೆಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಸುಮಾರು 6-7 ಸಾವಿರ ಜನ ಘಟನಾ ಸ್ಥಳದಲ್ಲಿ ಜಮಾಯಿಸಿದ್ದು, ಜನರ ನಿಯಂತ್ರಣಕ್ಕಾಗಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಈ ವೇಳೆ 5-6 ಬೈಕ್‌ಗಳು ಜಖಂಗೊಂಡಿವೆ.

ಘಟನೆ ಹೇಗಾಯ್ತು?: ಬೆಂಗಳೂರು ಜಲಮಂಡಳಿಗೆ ಸೇರಿದ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಭಾನುವಾರ ಬೆಳಿಗ್ಗೆಯಿಂದ ಮಾಸ್ತಿಗುಡಿ ಚಿತ್ರತಂಡ ಚಿತ್ರದ ಕ್ಲೈಮ್ಯಾಕ್ಸ್‌ ದೃಶ್ಯ ಚಿತ್ರೀಕರಿಸುತ್ತಿತ್ತು. ಮಧ್ಯಾಹ್ನ 2.45ರವೇಳೆಗೆ ನಾಯಕ ನಟ ದುನಿಯಾ ವಿಜಯ್‌ ಹೆಲಿಕಾಫ್ಟರ್‌ನಿಂದ ಕೆರೆಗೆ ಜಿಗಿಯುವ ದೃಶ್ಯದ ಚಿತ್ರೀಕರಣವಿತ್ತು. ಸಾಹಸ ನಿರ್ದೇಶಕ ರವಿವರ್ಮಾ ನಿರ್ದೇಶನದಲ್ಲಿ ದುನಿಯಾ ವಿಜಯ್‌, ಖಳನಟರಾದ ಉದಯ್‌ ಹಾಗೂ ಅನಿಲ್‌ 30 ಅಡಿ ಎತ್ತರದಿಂದ ಕೆರೆಗೆ ಜಿಗಿದಿದ್ದಾರೆ. ದೃಶ್ಯವನ್ನು ಅತ್ಯಂತ ಸಹಜವಾಗಿಸಬೇಕೆಂಬ ಉದ್ದೇಶದಿಂದ ಈ ಮೂವರು ಲೈಫ್ಜಾಕೆಟ್‌ ಅಥವಾ ಯಾವುದೇ ಪ್ರಾಣ ರಕ್ಷಣೆ ಸಾಮಾಗ್ರಿಯನ್ನು ಧರಿಸಿರಲಿಲ್ಲ. ಹಗ್ಗವನ್ನು ಬಳಸಿರಲಿಲ್ಲ. ಪೂರ್ವನಿಗದಿತ ಯೋಜನೆಯಂತೆ ಅವರು ಕೆರೆಗೆ ಜಿಗಿದ ತಕ್ಷಣ ಕೆರೆಯಲ್ಲೇ ಇದ್ದ ಡಿಸೇಲ್‌ ಬೋಟ್‌ ಅವರ ಬಳಿ ಬಂದು ಮೂವರನ್ನು ನೀರಿನಿಂದ ರಕ್ಷಿಸಬೇಕಿತ್ತು. ಆದರೆ ಇವರು ಜಿಗಿಯುವ ವೇಳೆಗೆ ಡೀಸೆಲ್‌ ಬೋಟ್‌ ಕೆಟ್ಟು ನಿಂತಿದೆ. ಘಟನೆ ಅಪಾಯ ಅರಿತು ಈ ಮೂವರು ಈಜು ಬರದಿದ್ದರೂ ಪ್ರಾಣ ಉಳಿಸಿಕೊಳ್ಳಲು ಈಜಿಕೊಂಡು ಬರುವ ಯತ್ನ ನಡೆಸಿದ್ದಾರೆ. ಈ ಮೂವರನ್ನು ಗಮನಿಸಿ ಕೆರೆಯಲ್ಲಿದ್ದ ಮೀನುಗಾರರು ತೆಪ್ಪದಲ್ಲಿ ದುರ್ಘ‌ಟನೆ ನಡೆದ ಜಾಗಕ್ಕೆ ಆಗಮಿಸಿ ದುನಿಯಾ ವಿಜಯ್‌ ಅವರನ್ನು ರಕ್ಷಿಸಿದ್ದಾರೆ. ನೋಡು ನೋಡುತ್ತಿದ್ದಂತೆ ಉದಯ್‌ ಹಾಗೂ ಅನಿಲ್‌ ನೀರು ಪಾಲಾಗಿದ್ದಾರೆ.

ಕ್ರಿಮಿನಲ್‌ ಕೇಸ್‌
ಖಳನಟರ ಸಾವಿನ ದುರಂತವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಆ ಚಿತ್ರ ತಂಡದ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ನಿರ್ಧರಿಸಿದ್ದಾರೆ. ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿನ ದುರ್ಘ‌ಟನೆಗೆ ಚಿತ್ರತಂಡದ ನಿರ್ಲಕ್ಷ್ಯ ಧೋರಣೆ  ಕಾರಣವಾಗಿದೆ. ನಿರ್ಲಕ್ಷ್ಯದ ಆರೋಪ (304-ಎ)ದಡಿ ತಾವರೆಕೆರೆ ಠಾಣೆಯಲ್ಲಿ ಎಫ್ಐಆರ್‌ ದಾಖಲಿಸುವಂತೆ ರಾಮನಗರ ಎಸ್ಪಿಗೆ ಸೂಚಿಸಿರುವುದಾಗಿ ಕೇಂದ್ರ ವಲಯ ಐಜಿಪಿ ಸೀಮಂತ್‌ ಕುಮಾರ್‌ ಸಿಂಗ್‌ ತಿಳಿಸಿದರು.

ಹೂಳು ತುಂಬಿದ್ದ ಕೆರೆ: ಜಲಾಶಯದಲ್ಲಿ 42 ಅಡಿಯಷ್ಟು ನೀರಿದ್ದು, 25 ಅಡಿಗಳಷ್ಟು ಹೂಳಿದೆ ಎನ್ನಲಾಗಿದೆ. ನೆರವಿಗೆ ಯಾರೂ ಧಾವಿಸದೆ ಇಬ್ಬರು ಕೆರೆಯಲ್ಲಿ ಮುಳುಗಿ ಹೂಳು ಪಾಲಾಗಿರುವ ಶಂಕೆಯಿದ್ದು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮೃತದೇಹ ಪತ್ತೆಗಾಗಿ ನಿರಂತರ ಹುಡುಕಾಟ ನಡೆಸಿದ್ದಾರೆ. ರಾತ್ರಿ ಚಿತ್ರೀಕರಣದ ಲೈಟ್‌ಗಳನ್ನು ಬಳಸಿಕೊಂಡು 2 ಬೋಟ್‌ಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ಹುಡುಕಾಟ ಮುಂದುವರಿಸಿದ್ದಾರೆ. ಇಬ್ಬರು ಈಜುಗಾರರು, 25ಕ್ಕೂ ಹೆಚ್ಚು ಸಿಬ್ಬಂದಿಯಿಂದ ಶೋಧಕಾರ್ಯ ಮುಂದುವರೆದಿದೆ.

ಅನುಮತಿ ಇರಲಿಲ್ಲ: ತಿಪ್ಪಗೊಂಡನಹಳ್ಳಿ ಜಲಾಶಯ ಜನ ನಿಷಿದ್ಧ ಪ್ರದೇಶವಾಗಿದ್ದು, ಜಲಾಶಯದ ನಡು ನೀರಿನ ಭಾಗದ ಬಳಿ ಸಾಹಸ ದೃಶ್ಯ ಚಿತ್ರೀಕರಣಕ್ಕೆ ಅನುಮತಿ ಇರಲಿಲ್ಲ. ಜಲಾಶಯದ ಹಿನ್ನೀರಿನ ಭಾಗದಲ್ಲಿ ಮಾತ್ರ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿತ್ತು. ಆದರೂ ಕಾನೂನು ಉಲ್ಲಂಘಿಸಿ, ಜಲಾಶಯದ ಎಇಇ ಅನುಸೂಯಮ್ಮ ಎಂಬವರು ಸ್ಥಳದಿಂದ ಹೊರ ಹೋದ ಮೇಲೆ ಅಕ್ರಮವಾಗಿ ಹೆಲಿಕಾಪ್ಟರ್‌ನಿಂದ ಜಿಗಿಯುವ ದೃಶದ ಚಿತ್ರೀಕರಣ ನಡೆಸಿದ್ದಾರೆ ಎನ್ನಲಾಗಿದೆ.

ಸ್ಥಳದಲ್ಲಿ ಗಣ್ಯರು: ನಿರ್ದೇಶಕ ಯೋಗರಾಜ್‌ಭಟ್‌, ನಟ ಬುಲೆಟ್‌ ಪ್ರಕಾಶ್‌, ನಿರ್ದೇಶಕ ನಾಗಾಭರಣ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ರಾಮನಗರ ಎಸ್ಪಿ ಚಂದ್ರಗುಪ್ತ, ಮಾಗಡಿ ಸಿಪಿಐ ಎಚ್‌.ಎಲ್‌.ನಂದೀಶ್‌, ತಾವರೆಕೆರೆ ಪಿಎಸ್‌ಐ ರವಿ, ಮಾಗಡಿ ಪಿಎಸ್‌ಐ ಮಂಜುನಾಥ್‌ ಸೇರಿ ಪೊಲೀಸ್‌ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.

ಬೋಟ್‌ ಮಾಲೀಕ ವಶಕ್ಕೆ: ಇಬ್ಬರು ಕಲಾವಿದರು ಮೃತಪಡಲು ಕಾರಣ ಎನ್ನಲಾದ ಕೆಟ್ಟು ನಿಂತ ಡೀಸೆಲ್‌ ಬೋಟ್‌ ರಾಮನಗರ ತಾಲೂಕಿನ ರಂಗರಾಯರ ದೊಡ್ಡಿ ಕೆರೆಗೆ ಸೇರಿದ್ದು, ಇದರ ಮಾಲೀಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಚಿತ್ರೀಕರಣಕ್ಕೆ ಬಳಸಿದ ಹೆಲಿಕಾಫ್ಟರ್‌ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪಅವರ ಪುತ್ರ ಗಣೇಶ್‌ ಅವರಿಗೆ ಸೇರಿದ್ದು ಎನ್ನಲಾಗಿದೆ.

ದುರಂತಕ್ಕೆ ಟಾಪ್‌ 10 ಕಾರಣ
1 ಖಳನಟರಾದ ಉದಯ್‌ ಮತ್ತು ಅನಿಲ್‌ಗೆ ಸರಿಯಾಗಿ ಈಜು ಬರುತ್ತಿರಲಿಲ್ಲ.

2 ಹೆಲಿಕಾಪ್ಟರಿನಿಂದ ನೀರಿಗೆ ಜಿಗಿಯುವ ವೇಳೆ ಲೈಫ್ಜಾ ಕೆಟ್‌ ಹಾಕಿರಲಿಲ್ಲ.

3 ಸಾಹಸ ಸನ್ನಿವೇಶಗಳಲ್ಲಿ ಹಗ್ಗ ಬಳಸಿ ಚಿತ್ರೀಕರಣ ನಡೆಸಿ, ನಂತರ ಅದನ್ನು ಕಂಪ್ಯೂಟರ್‌ ಬಳಸಿ ಅಳಿಸಿಹಾಕುತ್ತಾರೆ. ಇಲ್ಲಿ ಹಗ್ಗ ಬಳಸಿರಲಿಲ್ಲ.

4 ನೀರಿಗೆ ಬಿದ್ದವರನ್ನು ರಕ್ಷಿಸಲಿಕ್ಕಾಗಿ ಸುಸಜ್ಜಿತವಾದ ಲೈಫ್ಬೋ ಟ್‌ ಇರಲಿಲ್ಲ.

5 ನೀರಿಗೆ ಬಿದ್ದ ಜಾಗಕ್ಕೆ ಕ್ಷಣಾರ್ಧದಲ್ಲಿ ಹೋಗಬಹುದಾದ ವೇಗವಾಗಿ ಮೋಟರ್‌ ಬೋಟು ಬಳಸಿರಲಿಲ್ಲ.

6 ನೀರಿನ ಮೇಲೆ ಹೆಲಿಕಾಪ್ಟರ್‌ ಚಿತ್ರೀಕರಣ ನಡೆಸುವುದಕ್ಕೆ ಅಧಿಕೃತ ಅನುಮತಿ ಪಡೆದಿರಲಿಲ್ಲ.

7 ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಚಿತ್ರೀಕರಣ ನಡೆಸುವುದಕ್ಕೂ ಪರವಾನಗಿ ಇಲ್ಲ.

8 ತಿಪ್ಪಗೊಂಡನಹಳ್ಳಿ ನಿವಾಸಿಗಳ ಪ್ರಕಾರ ಕೆರೆಯಲ್ಲಿ ಹೂಳು ತುಂಬಿಕೊಂಡಿದೆ. ಚಿತ್ರತಂಡ ಸ್ಥಳೀಯರ ಮಾತು ಕೇಳಲಿಲ್ಲ.

9 ಹೆಲಿಕಾಪ್ಟರ್‌ನಲ್ಲಿ ನೀರಿಗೆ ಬಿದ್ದವರನ್ನು ರಕ್ಷಿಸಲಿಕ್ಕೆ ಬೇಕಾದ ಹಗ್ಗವಾಗಲೀ, ನೂಲೇಣಿಯಾಗಲೀ ಇರಲಿಲ್ಲ.

10 ಅಪಾಯಕಾರಿ ಚಿತ್ರೀಕರಣದ ವೇಳೆ ಅಗ್ನಿಶಾಮಕ ದಳ, ಆ್ಯಂಬುಲೆನ್ಸ್‌ ಜೊತೆಗಿರಬೇಕಾದ್ದು ಕಡ್ಡಾಯ. ಅದ್ಯಾವುದೂ ಅಲ್ಲಿರಲಿಲ್ಲ.

Trending videos

Back to Top